
ಈಗ ನಿಮ್ಮೆದುರು ಇರುವುದು ಮಾಹಿತಿಪೂರ್ಣವಾದ ಲೇಖನ. ಹಲವರಿಗೆ ಇರುವಂಥ ಪ್ರಶ್ನೆಗೆ ಉತ್ತರವಾಗಿ ಈ ಮಾಹಿತಿ ನಿಮ್ಮೆದುರು ಇದೆ. ಮಕ್ಕಳಿಗೆ ಹೆಸರನ್ನು ಇಡುವಾಗ ಹಲವರಿಗೆ ಗೊಂದಲ ಎದುರಾಗುತ್ತದೆ. ಆ ಮಗು ಹುಟ್ಟಿದಾಗ ಇರುವ ನಕ್ಷತ್ರ ಮತ್ತು ಪಾದಕ್ಕೆ ಅನುಗುಣವಾಗಿ ಬರುವಂಥ ಅಕ್ಷರದಿಂದಲೇ ಹೆಸರಿಟ್ಟು, ಶಾಲೆಗೆ ಹಾಗೂ ದೈನಂದಿನವಾಗಿ ಆಗುವ ಎಲ್ಲ ವ್ಯವಹಾರಗಳಲ್ಲಿಯೂ ಅದೇ ಹೆಸರಿಂದಲೇ ಕರೆಯಬೇಕೇ ಎಂಬುದು ಆ ಗೊಂದಲ. ಒಬ್ಬ ವ್ಯಕ್ತಿಗೆ ಹಿಂದೂ ಧಾರ್ಮಿಕ ಪದ್ಧತಿ ಅನುಸಾರ ನಾಲ್ಕೈದು ಹೆಸರು ಇರುತ್ತವೆ. ಆಯಾ ಪ್ರಾದೇಶಿಕ ಭಾಗಕ್ಕೆ ಅನುಸಾರವಾಗಿ ಈ ಸಂಖ್ಯೆಯಲ್ಲಿ ಬದಲಾವಣೆ ಆಗಲೂ ಬಹುದು. ಆದರೂ ಸಾಮಾನ್ಯವಾಗಿ ಅನುಸರಿಸಿಕೊಂಡು ಬರುವಂಥ ಪದ್ಧತಿಯನ್ನು ಹೇಳಲಾಗುವುದು.
ಒಂದು ಮಗುವಿನ ನಾಮಕರಣದ ವೇಳೆಯಲ್ಲಿ ನಕ್ಷತ್ರ ನಾಮ ಎಂದು ಮೊದಲಿಗೆ ಇಡಲಾಗುತ್ತದೆ. ಅಂದರೆ ಆ ಮಗುವಿನ ಜನನ ಕಾಲದಲ್ಲಿ ಇರುವಂಥ ನಕ್ಷತ್ರ ಹಾಗೂ ಪಾದಕ್ಕೆ ಯಾವ ಅಕ್ಷರ ಬರುತ್ತದೋ ಅದರ ಪ್ರಕಾರ ಇಡುವುದನ್ನು “ನಕ್ಷತ್ರ ನಾಮ” ಎನ್ನಲಾಗುತ್ತದೆ. ಇನ್ನು ಶಾಲೆ ಸೇರಿದಂತೆ, ಬ್ಯಾಂಕ್ ವ್ಯವಹಾರ, ಉದ್ಯೋಗ, ಪಾಸ್ ಪೋರ್ಟ್ ಸೇರಿದಂತೆ ವ್ಯಾವಹಾರಿಕವಾಗಿ ಬಳಸುವುದಕ್ಕೆ ಇಡುವಂಥ ಹೆಸರನ್ನು ವ್ಯವಹಾರ ನಾಮ ಎನ್ನಲಾಗುತ್ತದೆ. ಮಗು ಹುಟ್ಟಿದ ಮಾಸಕ್ಕೆ ಅನುಗುಣವಾಗಿ ನಿಗದಿಯಾದಂಥ ಹೆಸರು ಇಡಬೇಕು. ಅದಕ್ಕೆ ಮಾಸನಾಮ ಎಂದು ಕರೆಯಲಾಗುತ್ತದೆ. ಆ ಮಗುವಿನ ತಂದೆಯ ಕಡೆ ಮನೆದೇವರು ಯಾವುದೋ ಆ ಹೆಸರನ್ನು ಇಡಲಾಗುವುದು. ಆ ಮೇಲೆ ಹಲವು ಕಡೆ ಇರುವ ಪರಿಪಾಠ ಏನೆಂದರೆ, ಮಗುವಿಗೆ ಅದರ ಅಜ್ಜನ, ಅಂದರೆ ತಂದೆಯ ತಂದೆ ಹೆಸರನ್ನು ಇಡಲಾಗುತ್ತದೆ.
ಹೀಗೆ ನಕ್ಷತ್ರ ನಾಮ, ವ್ಯವಹಾರ ನಾಮ, ಮಾಸ ನಾಮ, ಮನೆದೇವರ ಹೆಸರು, ಅಜ್ಜನ ಹೆಸರು (ಅಜ್ಜ ಬದುಕಿದ್ದಲ್ಲಿ ಅವರ ಹೆಸರನ್ನು ಮೊಮ್ಮಗನಿಗೆ ಇಡಬಾರದು ಎಂಬುದು ಕೆಲವು ಕಡೆ ಇದೆ) ಇಡಲಾಗುತ್ತದೆ. ಒಬ್ಬ ವ್ಯಕ್ತಿಯ ನಕ್ಷತ್ರ ನಾಮದ ಮೂಲಕದವಾಗಿ ಆತ ಅಥವಾ ಆಕೆಯ ನಕ್ಷತ್ರ ಮತ್ತು ರಾಶಿಯು ಯಾವುದು ಎಂಬುದನ್ನು ಕಂಡುಕೊಳ್ಳಬಹುದು. ಇನ್ನೊಂದು ವಿಚಾರ ಏನೆಂದರೆ, ನಕ್ಷತ್ರ ನಾಮವೇ ವ್ಯವಹಾರ ನಾಮ ಆಗಿರಬೇಕು ಎಂಬ ಯಾವ ಕಡ್ಡಾಯವೂ ಇಲ್ಲ. ಈ ಬಗ್ಗೆ ಹಲವರಲ್ಲಿ ಗೊಂದಲ ಇದೆ. ನಕ್ಷತ್ರ ನಾಮ ಅಂತ ಇಂಥದ್ದೊಂದು ಅಕ್ಷರ ಬಂದಿತ್ತು. ಅದರಿಂದ ನಾವು ವ್ಯವಹಾರ ನಾಮವನ್ನು ಇಡುವುದಕ್ಕೆ ಸಾಧ್ಯವಿರಲಿಲ್ಲ. ಆದ್ದರಿಂದ ಬೇರೆ ಅಕ್ಷರದಲ್ಲಿ ಹೆಸರಿಟ್ಟಿದ್ದೇವೆ. ಹೀಗೆ ಮಾಡುವುದರಿಂದ ಕೇಡು ಏನಾದರೂ ಸಂಭವಿಸಿ ಬಿಡುತ್ತಾ ಎಂದು ಕೇಳುತ್ತಾರೆ.
ಹೀಗೆ ಮಾಡುವುದರಿಂದ ಖಂಡಿತವಾಗಿಯೂ ಯಾವುದೇ ಸಮಸ್ಯೆ ಇಲ್ಲ. ನಾಮಕರಣದ ವೇಳೆಯಲ್ಲಿ ಪುರೋಹಿತರು ಸಹ ಈ ಬಗ್ಗೆ ಮಾಹಿತಿಯನ್ನು ನೀಡುವುದು ಉಂಟು. ಆದರೂ ತಂದೆ- ತಾಯಿಗಳಲ್ಲಿ ಅಥವಾ ಕೆಲವು ಸನ್ನಿವೇಶಗಳಲ್ಲಿ ಸ್ವತಃ ಆ ವ್ಯಕ್ತಿಗಳಲ್ಲೇ ತಮ್ಮ ಹೆಸರಿನ ಬಗ್ಗೆ ಇಂಥದ್ದೊಂದು ಪ್ರಶ್ನೆ ಇರುತ್ತದೆ.
ಇದನ್ನೂ ಓದಿ: ಹೋಳಿ ಹಬ್ಬದಂದೇ ಚಂದ್ರಗ್ರಹಣ; ಈ 4 ರಾಶಿಯವರು ಜಾಗರೂಕರಾಗಿರಿ!
ಇತ್ತೀಚಿನ ವರ್ಷಗಳಲ್ಲಿ ಸಂಖ್ಯಾಶಾಸ್ತ್ರದ ಅನ್ವಯ ವ್ಯವಹಾರ ನಾಮವನ್ನು ಇಡುವುದು ಹೆಚ್ಚಾಗುತ್ತಾ ಇದೆ. ಅದರಲ್ಲೂ ಇಂಗ್ಲಿಷ್ ನಲ್ಲಿ ಆಯಾ ಅಕ್ಷರಕ್ಕೆ ಇಂತಿಷ್ಟು ಸಂಖ್ಯೆ ಎಂದು, ಅದನ್ನು ಹೆಸರಲ್ಲಿ ಇರುವ ಪ್ರತಿ ಅಕ್ಷರಕ್ಕೆ ಬರುವ ಸಂಖ್ಯೆಯನ್ನು ಒಟ್ಟು ಮಾಡಿ, ಬರುವಂಥ ಸಂಖ್ಯೆಯ ಆಧಾರದಲ್ಲಿ ಜನ್ಮ ಸಂಖ್ಯೆ ಮತ್ತು ಜನ್ಮದಿನಾಂಕ (ದಿನ, ತಿಂಗಳು ಮತ್ತು ಇಸವಿ) ಒಗ್ಗೂಡಿಸಿ ಬರುವ ಸಂಖ್ಯೆಗೆ ಹೊಂದುವಂತೆ ಹೆಸರನ್ನು ಇಡುವುದು ಜನಪ್ರಿಯವಾಗುತ್ತಿದೆ. ಈ ವಿಚಾರವು ಆಯಾ ವ್ಯಕ್ತಿಗಳ ನಂಬಿಕೆ ಹಾಗೂ ಇಚ್ಛೆಗೆ ಬಿಟ್ಟಿರುವುದು.
ಆದರೆ, ಅರ್ಥಪೂರ್ಣವಾದ ಹಾಗೂ ಸಕಾರಾತ್ಮಕ ಎನಿಸಿದ್ದನ್ನು ಮತ್ತು ಧಾರ್ಮಿಕ ನಂಬಿಕೆ ಹಿನ್ನೆಲೆಯಲ್ಲಿ ಆ ಹೆಸರು ಕಿವಿಗೆ ಬಿದ್ದ ತಕ್ಷಣ ಸಂತೋಷವನ್ನು ಉಂಟು ಮಾಡುವಂಥದ್ದನ್ನು ಮಕ್ಕಳಿಗೆ ಹೆಸರು ಇಡುವುದು ಉತ್ತಮ ಮತ್ತು ಕ್ಷೇಮ. ವಿಶಿಷ್ಟವಾದ- ಈ ವರೆಗೆ ಯಾರೂ ಇಡದ ಹೆಸರನ್ನು ನಮ್ಮ ಮಗುವಿಗೆ ಇಡಬೇಕು ಎಂದು ಆಲೋಚಿಸುವವರೇ ಬಹಳ ಹೆಚ್ಚು. ಇಂಥ ಪ್ರಯತ್ನದಲ್ಲಿ ಆಭಾಸ ಆಗದಂತೆ ಎಚ್ಚರಿಕೆಯನ್ನು ವಹಿಸಿ.
“ನಾಮಕರಣ ಎಂಬುದು ಷೋಡಶ ಕರ್ಮಗಳಲ್ಲಿ ಒಂದು. ನಕ್ಷತ್ರ ನಾಮ, ವ್ಯವಹಾರ ನಾಮ, ಮಾಸ ನಾಮ, ಮನೆ ದೇವರ ಹೆಸರು ಹಾಗೂ ಆ ಮಗುವಿನ ಅಜ್ಜ ಅಥವಾ ಹೆಣ್ಣುಮಗುವಾದಲ್ಲಿ ಅಜ್ಜಿಯ ಹೆಸರನ್ನು ಇಡಲಾಗುತ್ತದೆ. ಇನ್ನು ಕ್ರಮದ ದೃಷ್ಟಿಯಿಂದ ಪ್ರಾದೇಶಿಕವಾಗಿ ಬದಲಾವಣೆಗಳು ಆಗುತ್ತವೆ. ಒಬ್ಬ ವ್ಯಕ್ತಿಗೆ ನಕ್ಷತ್ರ ನಾಮ ಅನ್ನುವುದು ಇಡಲೇಬೇಕು. ಆದರೆ ಅದನ್ನೇ ವ್ಯವಹಾರ ನಾಮವಾಗಿ ಇಟ್ಟುಕೊಳ್ಳಲೇಬೇಕು ಎಂಬ ಕಡ್ಡಾಯ ಏನಿಲ್ಲ. ಒಬ್ಬ ವ್ಯಕ್ತಿಯ ಜಾತಕ ಇಲ್ಲ, ಆ ವ್ಯಕ್ತಿಗೂ ತನ್ನ ನಕ್ಷತ್ರ ಯಾವುದು ಎಂಬುದು ನೆನಪಿಲ್ಲ ಅಥವಾ ಗೊತ್ತಿಲ್ಲ ಎಂದಾಗ ನಕ್ಷತ್ರ ನಾಮ ಏನು ಬಂತು ಎಂಬುದನ್ನು ತಿಳಿದುಕೊಳ್ಳವ ಮೂಲಕ ನಕ್ಷತ್ರ ಹಾಗೂ ರಾಶಿ ಯಾವುದು ಎಂದು ತಿಳಿದುಕೊಳ್ಳಬಹುದು. ಆ ವ್ಯಕ್ತಿಯ ಗೋಚಾರದ ಫಲಗಳನ್ನು ಇದರ ಸಹಾಯದಿಂದ ಹೇಳಬಹುದು,” ಎಂದು ಖ್ಯಾತ ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಕೆಕ್ಕಾರು ಅವರು ಹೇಳಿದರು.
ಲೇಖನ ಮಾಹಿತಿ: ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಕೆಕ್ಕಾರು
ಲೇಖನ: ಸ್ವಾತಿ ಎನ್.ಕೆ.
ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ