ಶುಕ್ರನ ಅನುಗ್ರಹ ಇರುವ ವ್ಯಕ್ತಿಗೆ ಪ್ರಧಾನಮಂತ್ರಿ ಹುದ್ದೆ; ಇಲ್ಲಿದೆ ಮತಎಣಿಕೆ ದಿನದ ಮುಹೂರ್ತ ವಿಶ್ಲೇಷಣೆ

|

Updated on: May 10, 2024 | 9:37 AM

ಜೂನ್ ನಾಲ್ಕನೇ ತಾರೀಕಿನ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವಂಥ ದೇಶವಾದ ಭಾರತದ ಸಂಸತ್ ಗೆ ಆಯ್ಕೆಯಾಗುವ 543 ಸಂಸದರ ಹೆಸರು ಹೊರಬರುವ ದಿನವಿದು. ಹೀಗೆ ಆಯ್ಕೆಯಾದವರು ಪ್ರತಿನಿಧಿಸುವ ಪಕ್ಷ ಅಥವಾ ಮೈತ್ರಿಕೂಟಕ್ಕೆ ಬಹುಮತ ಬಂದು, ಅದರ ಸಂಸದರು ತಮ್ಮ ನಾಯಕನನ್ನು ಪ್ರಧಾನಮಂತ್ರಿ ಹುದ್ದೆಗೆ ಆಯ್ಕೆ ಮಾಡುತ್ತಾರೆ. ಮೊದಲೇ ಹೇಳಿದಂತೆ ಚುನಾವಣೆ ಘೋಷಣೆಯಾದ ದಿನ, ವಿವಿಧ ಹಂತದ ಮತದಾನದ ಪೈಕಿ ಮೊದಲ ಹಂತದಲ್ಲಿ ಪ್ರಥಮ ಮತ ಬೀಳುವ ದಿನ ಹಾಗೂ ಮತ ಎಣಿಕೆ ಆರಂಭವಾಗುವ ಕಾಲದ ಮುಹೂರ್ತ ಈ ಎಲ್ಲವನ್ನೂ ವಿಶ್ಲೇಷಿಸಿದ ನಂತರದಲ್ಲಿ ಹೇಳಬಹುದಾದದ್ದು ಈ ಕೆಳಗಿನಂತಿದೆ.

ಶುಕ್ರನ ಅನುಗ್ರಹ ಇರುವ ವ್ಯಕ್ತಿಗೆ ಪ್ರಧಾನಮಂತ್ರಿ ಹುದ್ದೆ; ಇಲ್ಲಿದೆ ಮತಎಣಿಕೆ ದಿನದ ಮುಹೂರ್ತ ವಿಶ್ಲೇಷಣೆ
Follow us on

ಲೋಕಸಭೆ ಚುನಾವಣೆಯ (lok sabha election) ಮತದಾನ ಹಂತಗಳು ಬಹುತೇಕ ಮುಗಿಯುತ್ತಾ ಬಂದಿವೆ. ಈ ಸಂದರ್ಭದಲ್ಲಿ ಫಲಿತಾಂಶ ದಿನದ ಮುಹೂರ್ತ ವಿಶ್ಲೇಷಣೆ ಹಾಗೂ ಚುನಾವಣೆ ಘೋಷಣೆಯಾದ ದಿನದ ಮುಹೂರ್ತದ ತಾಳೆ ಈ ಎರಡನ್ನೂ ಅಕೆಡಮಿಕ್ ಆದ ಆಸಕ್ತಿಯಿಂದ ನಿಮ್ಮೆದುರು ತೆರೆದಿಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಓದುಗರು- ಜ್ಯೋತಿಷ್ಯ ಆಸಕ್ತರಲ್ಲಿ ನನ್ನ ಮನವಿ ಇಷ್ಟೇ: ಗ್ರಹಗಳ ಸ್ಥಿತಿ, ಅವುಗಳ ಬಲ, ದೃಷ್ಟಿ ಹಾಗೂ ಫಲಗಳ ಆಧಾರದ ಮೇಲೆ ಮಾತ್ರ ಈ ವಿಶ್ಲೇಷಣೆ ಇದೆ. ಹಾಗೊಂದು ವೇಳೆ ಶಾಸ್ತ್ರ ಪ್ರಮಾಣದ ರೀತಿಯಲ್ಲಿ ವಿಶ್ಲೇಷಣೆ ಇಲ್ಲ ಎಂದು ಹೇಳುವುದಾದರೆ ದಯವಿಟ್ಟು ಪ್ರಮಾಣ ಸಹಿತವಾಗಿ ಕಾಮೆಂಟ್ ಮೂಲಕವೋ ಅಥವಾ ಇನ್ಯಾವುದಾದರೂ ರೀತಿಯಲ್ಲಿ ಗಮನಕ್ಕೆ ತನ್ನಿ. ವಿನಾಕಾರಣದ ಚರ್ಚೆ, ನಿಂದೆ- ಆರೋಪ, ವಾದ- ವಾಗ್ವಾದಗಳು ಬೇಡ ಎಂಬುದು ನನ್ನ ವಿನಂತಿ. ಮತ್ತೊಮ್ಮೆ ಸ್ಪಷ್ಟ ಪಡಿಸುತ್ತಿದ್ದೇನೆ, ಇದು ಗ್ರಹ ಸ್ಥಿತಿಗಳ ಆಧಾರದ ಮೇಲೆ ಲೋಕಸಭೆ ಚುನಾವಣೆಯ ಫಲಿತಾಂಶದ ವಿಶ್ಲೇಷಣೆ. ಇದು ಯಾವುದೇ ಒಂದು ಪಕ್ಷ, ಸಿದ್ಧಾಂತ, ವ್ಯಕ್ತಿಯ ಪರವಾಗಿ ಇರುವಂಥದ್ದು ಅಲ್ಲ.

ಮೊದಲಿಗೆ ಮತ ಎಣಿಕೆ ಫಲಿತಾಂಶ ದಿನವಾದ ಜೂನ್ ನಾಲ್ಕನೇ ತಾರೀಕಿನ ಬಗ್ಗೆ ಮುಹೂರ್ತ ವಿಶ್ಲೇಷಣೆಯನ್ನು ಮಾಡೋಣ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವಂಥ ದೇಶವಾದ ಭಾರತದ ಸಂಸತ್ ಗೆ ಆಯ್ಕೆಯಾಗುವ 543 ಸಂಸದರ ಹೆಸರು ಹೊರಬರುವ ದಿನವಿದು. ಹೀಗೆ ಆಯ್ಕೆಯಾದವರು ಪ್ರತಿನಿಧಿಸುವ ಪಕ್ಷ ಅಥವಾ ಮೈತ್ರಿಕೂಟಕ್ಕೆ ಬಹುಮತ ಬಂದು, ಅದರ ಸಂಸದರು ತಮ್ಮ ನಾಯಕನನ್ನು ಪ್ರಧಾನಮಂತ್ರಿ ಹುದ್ದೆಗೆ ಆಯ್ಕೆ ಮಾಡುತ್ತಾರೆ. ಮೊದಲೇ ಹೇಳಿದಂತೆ ಚುನಾವಣೆ ಘೋಷಣೆಯಾದ ದಿನ, ವಿವಿಧ ಹಂತದ ಮತದಾನದ ಪೈಕಿ ಮೊದಲ ಹಂತದಲ್ಲಿ ಪ್ರಥಮ ಮತ ಬೀಳುವ ದಿನ ಹಾಗೂ ಮತ ಎಣಿಕೆ ಆರಂಭವಾಗುವ ಕಾಲದ ಮುಹೂರ್ತ ಈ ಎಲ್ಲವನ್ನೂ ವಿಶ್ಲೇಷಿಸಿದ ನಂತರದಲ್ಲಿ ಹೇಳಬಹುದಾದದ್ದು ಈ ಕೆಳಗಿನಂತಿದೆ.

ಚುನಾವಣೆ ಘೋಷಣೆ ದಿನ ಮುಹೂರ್ತ ವಿಶ್ಲೇಷಣೆ

ಲೋಕಸಭೆ ಚುನಾವಣೆಯ ಅಧಿಸೂಚನೆ ಹೊರಡಿಸಿದ್ದು ಮಾರ್ಚ್ 20ನೇ ತಾರೀಕು. ಆ ದಿನದ ಅಧಿಪತಿ ರವಿ ಆಗುತ್ತಾನೆ. ಅದು ಹೇಗೆ ಎಂಬ ವಿವರಣೆ ಹೀಗಿದೆ: ಆ ತಿಂಗಳಿನ ಕೃಷ್ಣ ಪಕ್ಷದ ಪಾಡ್ಯ ತಿಥಿಯು ಯಾವ ವಾರದಲ್ಲಿ ಬರುವುದೋ ಆ ಗ್ರಹವೇ ಮಾಸಾಧಿಪತಿ ಆಗಿರುತ್ತದೆ. ಅದು ರವಿವಾರ ಬಂದಿತ್ತು. ಇನ್ನು ಆ ದಿನದ ನಕ್ಷತ್ರವು ಪೂರ್ವಫಲ್ಗುಣಿ ಅಥವಾ ಪುಬ್ಬಾ ನಕ್ಷತ್ರ. ಆ ನಕ್ಷತ್ರದ ಅಧಿಪತಿ ಶುಕ್ರ ಆಗುತ್ತದೆ. ಇನ್ನು ವಿವಿಧ ಹಂತದ ಮತದಾನ ಪ್ರಕ್ರಿಯೆಯಲ್ಲಿ ಮೊದಲ ಮತದಾನದ ದಿನ ಶುಕ್ರವಾರ. ಇನ್ನು ಆ ದಿನದ ನಕ್ಷತ್ರ ಮಖಾ. ಆ ನಕ್ಷತ್ರದ ಅಧಿಪತಿ ಕೇತು ಹಾಗೂ ಆ ಮಾಸಕ್ಕೆ ಅಧಿಪತಿ ಕುಜ ಆಗುತ್ತದೆ.

ಮತಎಣಿಕೆ ದಿನದ ಮುಹೂರ್ತ ವಿಶ್ಲೇಷಣೆ

ಇನ್ನು ಚುನಾವಣೆ ಮತ ಎಣಿಕೆ ದಿನವಾದ ಜೂನ್ ನಾಲ್ಕನೆ ತಾರೀಕಿನಂದು ಭರಣಿ ನಕ್ಷತ್ರ ಇದೆ. ಆ ನಕ್ಷತ್ರ ಅಧಿಪತಿ ಶುಕ್ರ ಗ್ರಹ ಆಗುತ್ತದೆ. ಅದರ ಜತೆಗೆ ಆ ಮಾಸಕ್ಕೆ ಅಧಿಪತಿ ಶುಕ್ರ. ಮತ ಎಣಿಕೆ ಶುರುವಾಗುವ ಸಮಯಕ್ಕೆ ಮಿಥುನ ಲಗ್ನ ಆಗುತ್ತದೆ. ಈ ಲಗ್ನದ ಯೋಗಕಾರಕ ಗ್ರಹ ಶುಕ್ರ ಆಗುತ್ತದೆ. ಇನ್ನು ಶುಕ್ರ ಗ್ರಹವು ಮಿಥುನ ಲಗ್ನದ ಅಧಿಪತಿಯಾದ ಬುಧನೊಡನೆ ಇರುವುದರಿಂದ ಲಕ್ಷ್ಮೀ ಯೋಗ ಹಾಗೂ ಮಾಲವ್ಯ ಯೋಗ (ಪಂಚ ಮಹಾಪುರುಷ ಯೋಗಗಳಲ್ಲಿ ಇದೂ ಇಂದು) ಇದೆ. ಮಿಥುನ ಲಗ್ನದ ಅಧಿಪತಿಯಾದ ಬುಧನು ರವಿಯ ಜತೆಗೆ ನಿಪುಣ ಯೋಗದಲ್ಲಿ ಕರ್ಮಾಧಿಪತಿ (ಮಿಥುನ ಲಗ್ನಕ್ಕೆ ಹತ್ತನೇ ಮನೆ ಮೀನ ರಾಶಿ) ಗುರುವಿನ ಜತೆಗೆ ಇರುತ್ತದೆ. ಈ ದಿನ ಲಗ್ನಕ್ಕೆ ಕಿರೀಟಾಧಿಪತಿಯಾಗಿ ಕುಜ ಗ್ರಹ ಇದೆ.

ಫಲಿತಾಂಶದ ವ್ಯಾಖ್ಯಾನ

ಒಂದು ಮುಹೂರ್ತದ ವಿಶ್ಲೇಷಣೆ ಮಾಡುವುದಕ್ಕೆ ವಿವೇಚನೆ- ವಿವೇಕ, ಅನುಭವ, ವೇದ, ಉಪನಿಷತ್ ಹಾಗೂ ಮಹಾಕಾವ್ಯಗಳ ಬಗ್ಗೆ ಅಧ್ಯಯನ ಹಾಗೂ ಶಾಸ್ತ್ರಜ್ಞಾನ ಈ ಎಲ್ಲ ಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಗಮನಿಸಿದರೆ ಇದು “ಯಥಾಸ್ಥಿತಿ” ಮುಂದುವರಿಯುತ್ತದೆ ಎಂಬುದನ್ನು ಸೂಚಿಸುತ್ತದೆ. ಲಗ್ನಕ್ಕೆ ಗಮನಿಸಿದರೆ ಆರನೇ ಮನೆಯಾಗಿ ಕುಜ ಇರುವುದರಿಂದ ವಿಪಕ್ಷಗಳ ಸ್ಥಾನದಲ್ಲೂ ಯಾವುದೇ ಬದಲಾವಣೆ ಆಗುವುದಿಲ್ಲ ಅಂತಲೇ ಹೇಳಬೇಕಾಗುತ್ತದೆ. ಈ ಮಾತಿಗೆ ಪುಷ್ಟಿ ನೀಡುವಂತೆ ರಾಜನಾಗಿ ಶನಿಯು, ಆಡಳಿತ ರವಿಯಾಗಿ, ರಾಜನಾದ ಶನಿ ತನ್ನ ಮೂಲ ತ್ರಿಕೋಣದಲ್ಲಿ, ಭಾಗ್ಯಸ್ಥಾನದಲ್ಲಿ (ಮಿಥುನ ಲಗ್ನಕ್ಕೆ ಒಂಬತ್ತನೇ ಮನೆ- ಕುಂಭ ರಾಶಿಯಲ್ಲಿ ಶನಿ) ಇರುವುದರಿಂದ “ಯಥಾಸ್ಥಿತಿ” (ಈಗಿರುವುದೇ ಆಡಳಿತ ಪಕ್ಷ ಹಾಗೂ ವಿಪಕ್ಷ ಸ‌್ಥಾನವಾಗಿ) ಮುಂದುವರಿಯುತ್ತದೆ ಎಂದು ಹೇಳಬೇಕಾಗುತ್ತದೆ.

ಆದರೆ, ಈ ಬಾರಿ ಒಂದು ವಿಶೇಷವನ್ನು ಗಮನಿಸಲೇ ಬೇಕು. ಅದೇನೆಂದರೆ, ಮಿಥುನ ಲಗ್ನಕ್ಕೆ ಹತ್ತನೇ ಮನೆಯಲ್ಲಿ (ಕರ್ಮಸ್ಥಾನ) ರಾಹು ಇದ್ದು, ಆಡಳಿತದಲ್ಲಿ ಇನ್ನೂ ಹೆಚ್ಚು ಪ್ರಾಮಾಣಿಕತೆಯನ್ನು ಸೂಚಿಸುತ್ತದೆ.

ಇದನ್ನೂ ಓದಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜನ್ಮ ಜಾತಕ ವಿಶ್ಲೇಷಣೆ ಏನು ಹೇಳುತ್ತದೆ?

ಯಾರಿಗೆ ವಿಜಯಮಾಲೆ?

ಇನ್ನು ಇಡೀ ಲೇಖನದ ಅತಿ ಮುಖ್ಯವಾದ ಪ್ರಶ್ನೆಗೆ ಬಂದಿದ್ದೇವೆ. ಯಾರಿಗೆ ಪ್ರಧಾನಮಂತ್ರಿ ಹುದ್ದೆ ದೊರೆಯುತ್ತದೆ? ಯಾವ ವ್ಯಕ್ತಿಯ ಜಾತಕದಲ್ಲಿ ಶುಕ್ರ ಗ್ರಹ ಬಲಿಷ್ಠವಾಗಿ ಇರುತ್ತದೋ ಅವರಿಗೆ ಪ್ರಧಾನಿ ಹುದ್ದೆ ದೊರೆಯುತ್ತದೆ. ಜಾತಕದಲ್ಲಿ ಶುಕ್ರನ ಬಲಿಷ್ಠತೆಗೆ ಮಾನದಂಡ ಇದೆ. ಅಂಶ ಬಲಿಷ್ಠತೆ ಇರಬೇಕು, ಪಾಪಗ್ರಹ ಯುತಿ, ಆ ದಿನ ನಕ್ಷತ್ರದ ಅಧಿಪತಿ ಸ್ಥಾನ, ಇನ್ನು ಜಾತಕದಲ್ಲಿ ಕರ್ಮಸ್ಥಾನದಲ್ಲಿ ಇದ್ದಾಗ, ರಾತ್ರಿ ವೇಳೆಯಲ್ಲಿ ಶುಕ್ರೋದಯ ಆಗಿದ್ದರೆ ಮಾತ್ರ ಬಲಿಷ್ಠತೆ ಬರುತ್ತದೆ. ಆದ್ದರಿಂದ ಪ್ರಧಾನಿ ಹುದ್ದೆಗೆ ಏರುವ ವ್ಯಕ್ತಿಗೆ ಮಾಸಾಧಿಪತಿ ಆಗಿರುವಂಥ ಶುಕ್ರನು ಕಾರಕನಾಗಿದ್ದಲ್ಲಿ ಅಂಥವರಿಗೆ ಪ್ರಧಾನಿ ಹುದ್ದೆ ಒಲಿಯುತ್ತದೆ. ರಾಜಕಾರಣ ಕ್ಷೇತ್ರದಲ್ಲಿ ಇದ್ದು, ಜನ್ಮಜಾತಕದಲ್ಲಿ ಬಲಿಷ್ಠ ಶುಕ್ರ ಇರುವಂಥವರಿಗೆ ಪ್ರಧಾನಮಂತ್ರಿ ಹುದ್ದೆ ಒಲಿಯುತ್ತದೆ. ಇಂಥ ಯೋಗ ನರೇಂದ್ರ ಮೋದಿಯವರ ಜಾತಕದಲ್ಲಿ ನಿಚ್ಚಳವಾಗಿದೆ.

ಈ ಯೋಗವನ್ನು ಮೋದಿ ಅವರ ಜಾತಕದಲ್ಲಿ ಕಂಡಿದ್ದು ಹೇಗೆ ಎಂದು ವಿವರಿಸುತ್ತೇನೆ. ಅದಕ್ಕಾಗಿ ಶುಕ್ರ ಗ್ರಹದ ಬಗ್ಗೆ ಒಂದಿಷ್ಟು ವಿವರಣೆ ನೀಡುತ್ತೇನೆ. ಆಡು ಮಾತಿನಲ್ಲಿ ಶುಕ್ರ ಸ್ತ್ರೀ ಗ್ರಹ ಎನ್ನುತ್ತಾರೆ. ಇಲ್ಲಿ ಸ್ತ್ರೀ ಎಂಬ ಪದಕ್ಕೆ ಲಕ್ಷ್ಮಿ, ಜ್ಞಾನ ಎಂದು ತಿಳಿಯಬೇಕು. ಜ್ಯೋತಿಷ್ಯದಲ್ಲಿ ಸ್ತ್ರೀ- ಪುರುಷ ಭೇದ ಹೇಳಿಲ್ಲ. ಗ್ರಹಗಳ ಗುಣಗಳನ್ನಷ್ಟೇ ಹೇಳಲಾಗಿದೆ. ಸ್ತ್ರೀಯ ಗುಣವೆಂದರೆ ತಾಳ್ಮೆ. ಇದನ್ನು ಗೋ (ಪೃಥ್ವಿ) ಶಕ್ತಿ ಎಂದಿದ್ದಾರೆ. ಭೂಮಿಗೆ ಎಷ್ಟು ಬೇಕಾದರೂ ಹಿಂಸೆ ಕೊಡಿ.ಅದು ಕೋಪಗೊಳ್ಳುವುದಿಲ್ಲ. ಮಾತೃತ್ವ ಅದರಲ್ಲಿ ಇರುವುದರಿಂದ ತಾಳ್ಮೆ ಜಾಸ್ಥಿ. ಅಂದರೆ ಪ್ರಧಾನಿಯಾಗುವ ವ್ಯಕ್ತಿಗೆ ತಾಳ್ಮೆ, ಸಂಯಮ ಇರಬೇಕು. ಯಾವ ಜಾತಿ- ಮತದವರೇ ಇರಲಿ, ವಿರೋಧಿಗಳೇ ಇರಲಿ ಆತ ಪ್ರಧಾನಿಯಾದ ಮೇಲೆ ಸರ್ವ ಸಮಾನವಾಗಿ, ನೀತಿಗೆ ಅನುಗುಣವಾಗಿ, ಶಾಸನಕ್ಕೆ ಬದ್ಧವಾಗಿ ಕೆಲಸ ಮಾಡುವವನಾಗಿರಬೇಕು.

ಒಟ್ಟಿನಲ್ಲಿ ಈ ಮುಹೂರ್ತವು ಸುಭಿಕ್ಷ ಸೂಚಕವೂ ಹೌದು, ಆಡಳಿತಕ್ಕೆ ಶತ್ರು ಕಾಟದ ಲಕ್ಷಣವೂ ಹೌದು.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)

(ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಆ ಲೇಖಕರದೇ ಹೊರತು ಇದನ್ನು ಟಿವಿ9 ಕನ್ನಡ ವೆಬ್ ಸೈಟ್ ಸೇರಿದಂತೆ ನೆಟ್ ವರ್ಕ್ ನ ಇತರ ಯಾವುದೇ ಸಹೋದರ ಸಂಸ್ಥೆಗಳು ಅನುಮೋದಿಸುವುದಿಲ್ಲ. ಇದರ ಸಂಪೂರ್ಣ ಜವಾಬ್ದಾರಿ ಲೇಖಕರದು. -ಸಂಪಾದಕರು)