Uttar Pradesh 2022 Elections Prediction: ಕರ್ನಾಟಕದ ಖ್ಯಾತ ಜ್ಯೋತಿಷಿಯಿಂದ ಉತ್ತರಪ್ರದೇಶ ಚುನಾವಣೆ ಭವಿಷ್ಯ

| Updated By: Srinivas Mata

Updated on: Feb 01, 2022 | 5:47 PM

ಉತ್ತರಪ್ರದೇಶ 2022ರ ವಿಧಾನಸಭೆ ಚುನಾವಣೆ ಬಗ್ಗೆ ಉಡುಪಿಯ ಕಾಪು ಮೂಲದ ಪ್ರಕಾಶ್ ಅಮ್ಮಣ್ಣಾಯ ಅವರು ಭವಿಷ್ಯ ನುಡಿದಿದ್ದಾರೆ. ಅದರ ವಿವರ ತಿಳಿಯಲು ಮುಂದೆ ಓದಿ.

Uttar Pradesh 2022 Elections Prediction: ಕರ್ನಾಟಕದ ಖ್ಯಾತ ಜ್ಯೋತಿಷಿಯಿಂದ ಉತ್ತರಪ್ರದೇಶ ಚುನಾವಣೆ ಭವಿಷ್ಯ
ಜ್ಯೋತಿಷಿ ಪ್ರಕಾಶ್​ ಅಮ್ಮಣ್ಣಾಯ
Follow us on

2022ರ ಬಜೆಟ್ ಮುಗಿಯಿತು. ಇನ್ನೇನು ಪಂಜಾಬ್, ಉತ್ತರಪ್ರದೇಶ, ಉತ್ತರಾಖಂಡ್, ಗೋವಾ, ಮಣಿಪುರ ಈ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ (Five State Assembly Elections) ಕಡೆಗೆ ಎಲ್ಲರ ಕಣ್ಣು. ಅದರಲ್ಲೂ ಉತ್ತರಪ್ರದೇಶ ಚುನಾವಣೆ ವಿಧಾನಸಭೆ ಚುನಾವಣೆ ಮೇಲೆ ವಿಪರೀತ ಕುತೂಹಲ ಇದೆ. ಒಟ್ಟು 403 ಸ್ಥಾನಗಳಿವೆ. ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಬಹುಮತ ಸಾಬೀತಿಗೆ 202 ಸ್ಥಾನಗಳಲ್ಲಿ ಜಯ ಗಳಿಸಬೇಕು. 2017ನೇ ಇಸವಿಯ ವಿಧಾನಸಭೆ ಚುನಾವಣೆಯಲ್ಲಿ 312 ಸ್ಥಾನಗಳಲ್ಲಿ ಗೆದ್ದು, ಬಿಜೆಪಿ ಹೊಸ ಇತಿಹಾಸವನ್ನು ಸೃಷ್ಟಿಸಿತ್ತು​. ಈ ಬಾರಿ ಈ ಮೇಲ್ಕಂಡ ರಾಜ್ಯಗಳಲ್ಲಿ ಯಾವ ಪಕ್ಷಗಳು ಎಷ್ಟು ಸ್ಥಾನಗಳು ಗೆಲ್ಲಬಹುದು ಎಂಬ ಬಗ್ಗೆ ವಿವಿಧ ನ್ಯೂಸ್​ ಚಾನೆಲ್​ಗಳು, ಸಂಸ್ಥೆಗಳು ಚುನಾವಣೆ ಸಮೀಕ್ಷೆಗಳನ್ನು ನಡೆಸಿವೆ. ಅವು ನಿಮ್ಮ ಗಮನಕ್ಕೂ ಬಂದಿರಬಹುದು. ಆದರೆ ಕರ್ನಾಟಕದ ಖ್ಯಾತ ಜ್ಯೋತಿಷಿಗಳಾದ, ಉಡುಪಿಯ ಕಾಪು ಮೂಲದ ಪ್ರಕಾಶ್ ಅಮ್ಮಣ್ಣಾಯ ಉತ್ತರಪ್ರದೇಶದ ಚುನಾವಣೆ ಭವಿಷ್ಯವನ್ನು ನುಡಿದಿದ್ದಾರೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭವಿಷ್ಯದ ಬಗ್ಗೆ ಕೂಡ ಟಿವಿ9ಕನ್ನಡ ಡಿಜಿಟಲ್​ಗೆ ಎಕ್ಸ್​ಕ್ಲೂಸಿವ್ ಆಗಿ ತಿಳಿಸಿದ್ದಾರೆ. ಅವರು ಏನು ಹೇಳಿದ್ದಾರೆ ಎಂಬುದನ್ನು ಯಥಾವತ್ ನಿಮ್ಮೆದುರು ಇಡಲಾಗಿದೆ.

ಜನ್ಮ ಕುಂಡಲಿಯಲ್ಲಿ ಲಗ್ನಕ್ಕೆ ಏಕಾದಶ ಸ್ಥಾನದಲ್ಲಿ ಗುರು ಇರಬೇಕು ಅಥವಾ ವೀಕ್ಷಣೆ ಮಾಡಬೇಕು. ಲಗ್ನದ ಅಧಿಪತಿಗೆ ಕರ್ಮ ಸ್ಥಾನದಲ್ಲಿ ಗುರು ಇರಬೇಕು. ಚಂದ್ರ ಇರುವಂಥ ರಾಶಿಯು ಯಾವುದಿರುತ್ತದೋ ಅದರ ಅಧಿಪತಿಗೆ ಗೋಚರದಲ್ಲಿ ದ್ವಿತೀಯ ಗುರು ಇರಬೇಕು (ಚಂದ್ರ ಇರುವಂಥ ರಾಶಿಯ ಅಧಿಪತಿ ಶನಿ ಮಕರದಲ್ಲಿದ್ದಾನೆ. ಗುರು ಕುಂಭದಲ್ಲಿದ್ದಾನೆ). ಈ ಸ್ಥಿತಿ ಇದ್ದು, ರಾಜಯೋಗ ಇದ್ದಾಗ ರಾಜನಾಗುತ್ತಾನೆ. ಇಂಥ ಜಾತಕ ಉತ್ತರಪ್ರದೇಶದ ಮುಖ್ಯಮಂತ್ರಿ ಹಾಗೂ ಈ ಬಾರಿ ಅಲ್ಲಿನ ಚುನಾವಣೆ ನಾಯಕತ್ವ ವಹಿಸಿರುವ ಯೋಗಿ ಆದಿತ್ಯನಾಥ್​ ಅವರದು. ಆ ರೀತಿಯ ಜಾತಕ ನಮ್ಮ ನಿಮ್ಮಂಥವರದ್ದಾಗಿದ್ದರೆ ಸಮಾಜದಲ್ಲಿ ಗೌರವವೋ ಸನ್ಮಾನವೋ ಲಭಿಸುತ್ತದೆ. ಅಂದರೆ ಈ ಗ್ರಹ- ಗೋಚರ ಸ್ಥಿತಿ ಆದಿತ್ಯನಾಥ ಯೋಗಿಗೆ ಮಾತ್ರವಲ್ಲ, ಅವರು ಹುಟ್ಟಿದ ದಿನ, ಸಮಯದಲ್ಲಿ ಹುಟ್ಟಿದವರೆಲ್ಲರಿಗೂ ಹೀಗೇ ಇರುತ್ತದೆ. ಹಾಗೆಂದು ಎಲ್ಲರಿಗೂ ಮುಖ್ಯಮಂತ್ರಿ ಆಗುತ್ತೀರಿ ಎಂದರೆ ಹೇಗೆ?

ಯೋಗಿ ಆದಿತ್ಯನಾಥ್ ಜನ್ಮ ಜಾತಕ

ಆದರೆ, ನೆನಪಿನಲ್ಲಿರಲಿ. ಇದರ ಮೂಲಕ ಒಟ್ಟಾರೆ ಪ್ರಸನ್ನತೆ ಬರುತ್ತದೆ. ಎರಡನೆಯದ್ದು ಯೋಗಿ ಆದಿತ್ಯನಾಥ್​ ಅವರಿಗೆ ಅವರಿಗೆ ಜನ್ಮ ಜಾತಕದಲ್ಲಿ ಲಗ್ನದಿಂದ ಹನ್ನೊಂದನೇ ಮನೆಯಲ್ಲಿ ಶುಕ್ರ- ಅಂಗಾರಕ ಒಂದೇ ಕಡೆ ಇದೆ. ಯಾರದಾದರೂ ಜನ್ಮ ಜಾತಕದಲ್ಲಿ ಲಗ್ನದಿಂದ ಮೂರು, ಆರು, ಹನ್ನೊಂದನೇ ಮನೆಯಲ್ಲಿ ಶುಕ್ರ- ಕುಜ ಗ್ರಹ ಒಟ್ಟಿಗೆ ಇದ್ದಲ್ಲಿ ರಾಜ ಯೋಗ ತರುತ್ತದೆ. ಹಾಗೆಯೇ ಈ ರೀತಿಯ ಸಂಯೋಗದಿಂದ ದೋಷ ಚಿಂತನೆ ಮಾಡಿದರೆ, ಈ ವ್ಯಕ್ತಿಗಳು ನಿಷ್ಟುರ ಸತ್ಯ ನುಡಿಯುವವರೂ ಆಗಿರುತ್ತಾರೆ. ದೈಹಿಕವಾಗಿ ಆರೋಗ್ಯಕ್ಕೆ ಹಾನಿ ತರುವಂಥದ್ದೂ ಆಗಿರುತ್ತದೆ (ಇದಕ್ಕೆಲ್ಲ ವೈದ್ಯಕೀಯ ಚಿಕಿತ್ಸೆ ಇದೆ).

ಆದರೂ ಮೂತ್ರ ಸಂಬಂಧಿತ, ಕಿಡ್ನಿ ಸಂಬಂಧಿತ ವ್ಯಾಧಿಗಳ ಸೂಚನೆ ಇದು. ಅಂದರೆ ದೇಹಕ್ಕೆ ವಯಸ್ಸಾದಂತೆ ಕಿಡ್ನಿಯ ಗಾತ್ರವು ಆರೋಗ್ಯ ಪೂರ್ಣರಿಗೆ ಇರುವಂತೆ ಇರುವುದಿಲ್ಲ.ಗಾತ್ರ ಸಣ್ಣದಾಗುತ್ತದೆ ಎಂದರ್ಥ. ಆಹಾರ ಪಥ್ಯವೇ ಇದಕ್ಕೆ ನಿಯಂತ್ರಣ. ಜಾತಕದಲ್ಲಿ ಗ್ರಹಸ್ಥಿತಿಯು ಕೇವಲ ಸೂಚಿತ. ಹೀಗೆಯೇ ಆಗುತ್ತದೆ ಎಂದರ್ಥವಲ್ಲ. ಪರಿಹಾರ ಮಾಡದಿದ್ದರೆ ಹೀಗಾಗಬಹುದು. ಇದನ್ನೇ ‘ಯೋಗಸ್ಯ ಪರಿರಕ್ಷಣಂ ಕ್ಷೇಮಃ’ ಎಂದರು ಬಲ್ಲವರು. ಆದ್ದರಿಂದ ಆಹಾರ ಪಥ್ಯ ಮಾಡಿದಲ್ಲಿ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು ಅಥವಾ ನಿಯಂತ್ರಿಸಬಹುದು.

ಇನ್ನು ಬೇಕಾದದ್ದು ಸಂಖ್ಯಾಬಲದ ವಿಚಾರ. ಚುನಾವಣೆ ಫಲಿತಾಂಶದ ದಿನ ಏನು ಹೇಳುತ್ತದೆ ಅಂದರೆ, ಆ ದಿನದ ಚಂದ್ರ ಸ್ಥಿತಿಗೆ ಯೋಗಿಯವರ ಜಾತಕದಲ್ಲಿ ಇದ್ದಂತೆ ಬುಧಾದಿತ್ಯ (ಒಂದೇ ಮನೆಯಲ್ಲಿ ರವಿ ಹಾಗೂ ಬುಧ ಇರುವುದು) ಯೋಗ ಇದ್ದು, ಆ ದಿನದ ಚಂದ್ರ ಕರ್ಮ ಸ್ಥಾನದಲ್ಲಿ (ಚಂದ್ರ ಇರುವ ರಾಶಿಯಿಂದ ಹತ್ತನೇ ಮನೆಯಲ್ಲಿ) ಸ್ಥಿತವಾಗಿದೆ. ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಪುಷ್ಟಿ ನೀಡುವುದರಿಂದ ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ (ಮಿತ್ರ ಕೂಟಗಳು ಸೇರಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ) 284 ಸ್ಥಾನ ಗೆಲ್ಲುವುದಕ್ಕೆ ಅಡ್ಡಿ ಆಗುವುದಿಲ್ಲ ಎನ್ನಬಹುದು.

ಇದನ್ನೂ ಓದಿ: ಯೋಗಿ ಆದಿತ್ಯನಾಥ್ ವಿಧಾನಸಭಾ ಚುನಾವಣೆ ಸ್ಪರ್ಧೆಗೆ ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದ ರಾಜಕೀಯ ಇತಿಹಾಸ ಇಲ್ಲಿದೆ ನೋಡಿ