ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಭವಿಷ್ಯ (Weekly Horoscope) ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹಾಗೂ ಕುತೂಹಲವಿರುತ್ತದೆ. ಅದರಂತೆ 2023ರ ಏಪ್ರಿಲ್ 30 ರಿಂದ ಮೇ 6 ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.
ಮೇಷ: ಮೇ ತಿಂಗಳ ಮೊದಲ ವಾರವು ಶುಭವಾಗಿದೆ. ಸೂರ್ಯ ಹಾಗೂ ಗುರು ಗ್ರಹರು ಮೇಷರಾಶಿಯನ್ನು ಪ್ರವೇಶಿಸಲಿದ್ದು, ನಿಮಗೆ ಆರೋಗ್ಯವನ್ನೂ ಗೌರವವನ್ನೂ ಕೊಡಿಸುವರು. ಬುಧನು ವಿದ್ಯಾಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡುವನು. ರಾಹುವು ಎಲ್ಲ ಕಾರ್ಯಗಳಿಗೂ ಹಿನ್ನಡೆ ಕೊಡಿಸುವನು. ಸರ್ಕಾರಿ ಕೆಲಸಗಳನ್ನು ಮಾಡಿಕೊಳ್ಳುವಿರಿ. ತಂದೆಯ ಅಥವಾ ಗುರು-ಹಿರಿಯರಲ್ಲಿ ಉಚಿತ ವರ್ತನೆ ಇರಲಿ. ಏಕಾದಶದ ಶನಿಯು ನಿಮಗೆ ಸಕಲ ಶ್ರೇಯಸ್ಸನ್ನೂ ಕೊಡಿಸುವನು. ಶುಕ್ರನು ಈ ವಾರ ತೃತೀಯ ಸ್ಥಾನಕ್ಕೆ ಹೋಗುವನು. ನಟರಿಗೆ ರೂಪದರ್ಶಿಗಳಿಗೆ ಹೆಚ್ಚಿನ ಅವಕಾಶಗಳು ಸಿಗಬಹುದು. ರಾಜಕಾರಣಿಗಳಿಗೆ ಉತ್ತಮ ಸ್ಪಂದನೆ ಸಿಗಲಿದೆ.
ವೃಷಭ: ಮೇ ಮಾಸದ ಮೊದಲ ವಾರದಲ್ಲಿ ಸ್ವಲ್ಪ ಶುಭ ಹಾಗೂ ಹೆಚ್ಚು ಅಶುಭಗಳು ಇರಲಿವೆ. ದ್ವಾದಶಸ್ಥಾನದ ರವಿ, ಗುರು, ಬುಧರು ಅಷ್ಟಾಗಿ ಅನುಕೂಲರಲ್ಲ. ಸಣ್ಣ ಸಣ್ಣ ಕಿರಿಕಿರಿಗಳು ನಿಮಗಾಗಬಹುದು. ತಂದೆಯ ಬಗ್ಗೆ ಬಗ್ಗೆ ಅಷ್ಟಾಗಿ ಪ್ರೀತಿ ಇರದು. ಆದರೆ ಅವರ ಆರೋಗ್ಯವನ್ನು ನಿಷ್ಕಾಳಜಿ ಮಾಡಬೇಡಿ. ಎಲ್ಲ ವಿಚಾರದಲ್ಲಿಯೂ ಅಳುಕು ಹೆಚ್ಚಾಗಿ ಇರಲಿದೆ. ದಶಮದಲ್ಲಿ ಶನಿಯು ಕರ್ಮದಲ್ಲಿ ನಿರಾಸಕ್ತಿಯನ್ನು ಮಾಡಿಸುವನು. ಗುರುದರ್ಶನ, ಅನುಗ್ರಹದ ಅವಶ್ಯಕತೆ ಇದೆ. ಶುಕ್ರನು ದ್ವಿತೀಯಕ್ಕೆ ಸಂಚರಿಸಲಿದ್ದು ತಾಯಿಯ ಕಡೆಯಿಂದ ಅಥವಾ ಪತಿಯ ಕಡೆಯಿಂದ ಲಾಭವು ಸಿಗಲಿದೆ.
ಮಿಥುನ: ಮೇ ತಿಂಗಳ ಮೊದಲ ವಾರವು ಶುಭವಿದೆ. ಈ ವಾರದ ಮಧ್ಯದಲ್ಲಿ ಶುಕ್ರನು ನಿಮ್ಮ ರಾಶಿಗೆ ಬರಲಿದ್ದು ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುವಂತೆ ಮಾಡುವನು. ಏಕಾದಶಸ್ಥಾನದಲ್ಲಿ ರವಿ, ಗುರು, ಬುಧ, ರಾಹುಗಳಿದ್ದು ಅಧಿಕ ಶುಭವನ್ನು ನಿರೀಕ್ಷಿಸಿ. ಪತಿಯಿಂದ ಪ್ರೀತಿಯನ್ನು, ಉಡುಗೊರೆ ಸಿಗಬಹುದು. ಸರ್ಕಾರಿ ಉದ್ಯೋಗಕ್ಕೆ ಅಥವಾ ಅಂತಹ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಲಭಿಸಲಿದೆ. ಷಷ್ಠಾಧಿಪತಿಯೂ ಏಕಾಡಶಾಧಿಪತಿಯೂ ಆಗಿ ಕುಜನು ನಿಮ್ಮದೇ ರಾಶಿಯಲ್ಲಿ ಇದ್ದಾನೆ. ಭೂಮಿಯ ಕಲಹದಿಂದ ನಿಮಗೆ ಮುಕ್ತಿ ಸಿಕ್ಕಿ ನಿಮಗೆ ಲಾಭವಾಗಲಿದೆ. ನವಮಸ್ಥಾನದಲ್ಲಿರುವ ಶನಿಯನ್ನು ಶನಿವಾರದಂದು ರುದ್ರಾಭಿಷೇಕವನ್ನು ಮಾಡಿಸಿ ಪ್ರಸನ್ನಗೊಳಿಸಿ.
ಕಟಕ: ಇದು ಮೇ ತಿಂಗಳ ಮೊದಲ ವಾರವಾಗಿದೆ. ನಿಮಗೆ ಇದು ಮಿಶ್ರಫಲವು ದೊರೆಯುವ ವಾರ. ಏಕಾದಶಾಧಿಪತಿಯಾದ ಹಾಗೂ ಚತುರ್ಥಾಧಿಪತಿಯೂ ಆದ ಶುಕ್ರನು ದ್ವಾದಶಕ್ಕೆ ಬಂದಿದ್ದಾನೆ. ಕುಟುಂಬಕ್ಕೆ ಅಥವಾ ಬಂಧುಗಳಿಗೆ ಧನಸಹಾಯ ನೀಡಬೇಕಾಗಿ ಬರಬಹುದು. ಕುಜ ಹಾಗೂ ಶುಕ್ರರ ಸಂಯೋಗವಾಗಿದೆ. ಬೆಂಕಿ ಹಾಗೂ ಗಾಳಿ ಸೇರಿದರೆ ಎಂತಹ ಅನಾಹುತವೂ ಆದೀತು. ದಶಮದಲ್ಲಿರುವ ಗುರು ಹಾಗೂ ಸೂರ್ಯರು ಉತ್ತಮ ಕೆಲಸವನ್ನು ಮಾಡಲು ಪ್ರೇರೇಪಿಸುವರು. ನಿಮ್ಮ ಎಲ್ಲ ಕೆಲಸಗಳೂ ಅನಾಯಾಸವಾಗಿ ಆಗುವುದು. ಹೊಸ ಯೋಜನೆಯನ್ನು ಆರಂಭ ಮಾಡಿದರೆ ನಿಮಗೆ ಅನುಕೂಲವಾಗಬಹುದು. ಪ್ರತಿಕೂಲನಾದ ಶನಿಯ ಅನುಗ್ರಹವಾಗಬೇಕಿದೆ. ಆಯುಸ್ಸನ್ನು ಕರುಣಿಸುವ ಮೃತ್ಯುಂಜಯನ ಜಪಮಾಡಿ.
ಸಿಂಹ: ಮೇ ತಿಂಗಳ ಮೊದಲ ವಾರ ಎಲ್ಲ ಗ್ರಹಗಳೂ ಯಥಾಸ್ಥಾನದಲ್ಲಿ ಇರುವರು. ಶುಕ್ರನು ಏಕಾದಶಕ್ಕೆ ಬರುವನು. ದಾಂಪತ್ಯದಲ್ಲಿ ಸರಸಸಲ್ಲಾಪಗಳು ಇರಲಿದೆ. ಆಲಂಕಾರಿಕ ವಸ್ತುಗಳ ಕಡೆ ಗಮನ ಹೆಚ್ಚಿರುವುದು. ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಬಯಕೆ ಇರಲಿದೆ. ಕಲಾವಿದರಿಗೆ ಹೆಚ್ಚು ಅನುಕೂಲಕರವಿದೆ. ಸ್ತ್ರೀಯರಿಂದ ಸಹಕಾರವು ಸಿಗಬಹುದು. ನವಮಸ್ಥಾನದಲದಲಿರುವ ಗುರು ಹಾಗೂ ಸೂರ್ಯರು ಶುಭಕರ್ಮಕ್ಕೆ, ದಾನಾದಿಗಳನ್ನು ಮಾಡಲು ಪ್ರೇರಿಸುವರು. ಬುಧ ಹಾಗೂ ರಾಹುಗಳಿಂದ ಒತ್ತಡ, ತುರ್ತು ಕಾರ್ಯದಗಳಿಂದ ದೂರಪ್ರಯಾಣವೂ ಆಗಬಹುದು. ಉತ್ತಮಕಾರ್ಯವನ್ನು ಮಾಡಲು ಕಾಲವು ಬರುವುದು.
ಕನ್ಯಾ: ಮೇ ತಿಂಗಳ ಮೊದಲ ವಾರವು ಆರಂಭವಾಗಿದ್ದು ಶುಕ್ರನು ನವಮದಿಂದ ದಶಮಕ್ಕೆ ಬರುವನು. ಸಾಪ್ಟ್ ವೇರ್ ಉದ್ಯೋಗಿಗಳಿಗೆ ಹೆಚ್ಚಿನ ಸ್ಥಾನಮಾನ, ಉದ್ಯೋಗಪ್ರಾಪ್ತಿಯು ಆಗಲಿದೆ. ಕೆಲಸದ ಸ್ಥಳದಲ್ಲಿ ಪ್ರೇಮವು ಹುಟ್ಟಿಕೊಳ್ಳಬಹುದು. ನಿಮ್ಮನ್ನು ನೀವು ಪರೀಕ್ಷಿಸಿಕೊಂಡು ಮುಂದುವರಿಯಿರಿ. ಗುರುವು ಅಷ್ಟಮಕ್ಕೆ ಪ್ರವೇಶಿಸಿದ್ದು ಕಷ್ಟಪಡಬೇಕಾದೀತು, ಮಾನಸಿಕ ಕಿರಿಕಿರಿಯುಂಟಾಗಬಹುದು. ಹಾಗೆಯೇ ಅಷ್ಟಮಕ್ಕೆ ಸೂರ್ಯನೂ ಬಂದಿದ್ದು, ತಂದೆಯ ಆನಾರೋಗ್ಯವು ಹೆಚ್ಚಾಗಬಹುದು. ಬುಧ ಹಾಗೂ ರಾಹುವಿನ ಸಂಚಾರವೂ ಅಷ್ಟಮದಲ್ಲಿರುವುದರಿಂದ ದೂರಪ್ರಯಾಣ ಬೇಡ. ಅಣ್ಣ-ತಮ್ಮಂದಿರ ಆರೋಗ್ಯದ ಬಗ್ಗೆಯೂ ಗಮನಬೇಕು. ಗುರುಸೇವೆಯನ್ನು ಮಾಡಿ.
ತುಲಾ: ಮೇ ತಿಂಗಳ ಮೊದಲ ವಾರದಲ್ಲಿ ಶುಕ್ರನೂ ಅನುಕೂಲಕರನಾಗಿರುವನು. ಅಷ್ಟಮದಿಂದ ನವಮಕ್ಕೆ ಹೋಗಲಿದ್ದಾನೆ. ಇಷ್ಟು ದಿನ ಸಂಪತ್ತಿಗೆ ಕಷ್ಟಪಡುತ್ತಿದ್ದ ನೀವು ಇನ್ನು ಅದು ಬರಲಿದೆ. ಪತ್ನಿಯೂ ನಿಮ್ಮ ಒಳ್ಳೆಯ ಕಾರ್ಯದಲ್ಲಿ ಜೊತೆಯಾಗುವಳು. ನಿಮ್ಮ ಯೋಜನೆಗಳಿಗೆ ಬೆಂಬಲವು ಸಿಗಲಿದೆ. ಗುರುಬಲವು ಇರುವ ಕಾರಣ ವಿವಾಹಾದಿ ಮಂಗಲಕಾರ್ಯಗಳನ್ನು ಮಾಡಿಕೊಳ್ಳಿ. ನವಮದ ಕುಜನಿರುವುದರಿಂದ ಎಂತಹ ಕಷ್ಟವನ್ನೂ ಸಹಿಸಿಕೊಂಡು ನಿಮ್ಮ ಸತ್ಕಾರ್ಯವನ್ನು ಮಾಡುವಿರಿ. ಪಂಚಮದ ಶನಿಯು ನಿಮಗೆ ನೋವನ್ನು ತಂದುಕೊಟ್ಟಾನು. ಜಾಗರೂಕತೆಯಿಂದ ಮುನ್ನಡೆಯಿರಿ.
ವೃಶ್ಚಿಕ: ಮೇ ತಿಂಗಳ ಮೊದಲ ವಾರದಲ್ಲಿ ಶುಕ್ರನು ಷಷ್ಠಕ್ಕೆ ಹೋಗಲಿದ್ದಾನೆ. ಕುಜನೂ ಅಲ್ಲಿರುವುದರಿಂದ ನಿಮ್ಮ ನಡವಳಿಕೆಯ ಮೇಲೆ ಎಚ್ಚರಿಕೆ ಒರಲಿ. ಅಪಮಾನವನ್ನು ಎದುರಿಸಬೇಕಾದೀತು. ಗುರುವು ಈಗ ಷಷ್ಠಸ್ಥಾನಕ್ಕೆ ಬಂದಿದ್ದು, ಶತ್ರುಗಳ ಕಾಟವು ಅಧಿಕವಾದೀತು. ಬೇರೆ ಬೇರೆ ಪ್ರಕಾರದಿಂದ ನಿಮ್ಮನ್ನು ಕೆಳಗಿಳಿಸುವ, ಸೋಲಿಸುವ ಪ್ರಯತ್ನವು ನಡೆಯುತ್ತಲೇ ಇರುತ್ತದೆ. ನಿಮ್ಮ ಕೆಲಸದಿಂದ ಬೇರೆಯವರು ಶ್ರೇಯಸ್ಸನ್ನು ಪಡೆದುಕೊಳ್ಳುವರು. ಅಷ್ಟಮದಲ್ಲಿರುವ ಕುಜನು ನಿಮಗೆ ಅನುಕೂಲಕರನಾಗಿರುವನು. ತೊಂದರೆಗಳಿಂದ ಪಾರುಮಾಡಿಯಾನು. ಸುಮಂಗಲಿಯರು ದುರ್ಗಾದೇವಿಯನ್ನು ಆರಾಧಿಸಿ. ದೇಹಕ್ಕೆ ಬಹಳ ನೋವಾಗಲಿದೆ. ಚತುರ್ಥದಲ್ಲಿರುವ ಶನಿಯಿಂದ ಬಂಧುಗಳ ವಿಚಾರದಲ್ಲಿ ಜಗಳಗಲಕು ಆಗಬಹುದು.
ಧನಸ್ಸು: ಮೇ ತಿಂಗಳ ಪ್ರಥಮವಾರವು ಇದಾಗಿದ್ದು ಶುಭ ಸುದ್ದಿಗಳು ಬರುವ ವಾರವೆಂದೇ ಹೇಳಬೇಕು. ಶುಕ್ರನು ಷಷ್ಠದಿಂದ ಸಪ್ತಮಕ್ಕೆ ಬರಲಿದ್ದಾನೆ. ಪ್ರೀತಿಸಿ ಮದುವೆ ಆಗುವವರಿದ್ದರೆ ಅವರಿಗೆ ಶುಭಕಾಲ. ಮನೆಯವರಿಂದ ಒಪ್ಪಿಗೆ ಸಿಕ್ಕಲಿದೆ. ಇಷ್ಟು ದಿನದ ಮೋಡ ಕವಿದ ವಾತಾವರಣವಿದ್ದು ಅದು ದೂರವಾಗುವುದು. ಗುರುವು ಪಂಚಮಸ್ಥಾನಕ್ಕೆ ಬಂದಿದ್ದು ನಿಮ್ಮ ಕಾರ್ಯವನ್ನು ಚೆನ್ನಾಗಿಸುವನು. ತಂದೆಯನ್ನು ನೀವು ಪ್ರೀತಿಸುವಿರಿ. ತೃತೀಯದಲ್ಲಿರುವ ಶನಿಯು ನಿಮ್ಮ ಸಾಮರ್ಥ್ಯವನ್ನು ಪ್ರಕಟಿಸುವನು. ಏಕಾದಶದಲ್ಲಿರುವ ಕೇತುವು ನಿಮಗೆ ಕುಕರ್ಮದಿಂದ ಹಣವನ್ನು ಕೊಡಿಸುವನು. ಗಣಪತಿಗೆ ದಿನವೂ ಪ್ರಿಯವಾದ ದೂರ್ವಾಪತ್ರವನ್ನು ಹಾಕಿ. ಕೆಟ್ಟ ಕರ್ಮಕ್ಕೆ ಮನಸ್ಸು ಕೊಡನು.
ಮಕರ: ಶುಕ್ರನು ಮೇ ಮೊದಲ ವಾರ ಪಂಚಮದಿಂದ ಷಷ್ಠಸ್ಥಾನಕ್ಕೆ ಹೋಗಲಿದ್ದಾನೆ. ಪುತ್ರರಿಂದ ಸಂತೋಷವನ್ನು ಪಡೆದ ನೀಚವು ಇನ್ನು ಸ್ವಲ್ಪ ಎಚ್ಚರಿಕೆಯಿಂದ ಹೆಚ್ಚೆ ಇಡಬೇಕು. ಸ್ತ್ರೀಗೆ ಸಂಬಂಧಿಸಿದ ಅಪವಾದಗಳು ಬರಬಹುದು. ಶುಕ್ರ ಹಾಗೂ ಕುಜರ ಸಂಯೋಗ ಅಗ್ನಿಗೆ ತುಪ್ಪ ಸುರಿದಂತೆ. ಆಸೆಗಳನ್ನು ಹೆಚ್ವಿಸವರು. ಗುರುವು ಚತುರ್ಥಸ್ಥಾನಕ್ಕೆ ಬಂದಿದ್ದು ಸ್ವಲ್ಪ ಒಳ್ಳೆಯದನ್ನು ಅನುಭವಿಸಿದ್ದೀರಿ. ಬಂಧುಗಳ ಸಹಕಾರವು ಸಿಗಬಹುದು. ಕುಟುಂಬದಲ್ಲಿ ಆನಂದದ ವಾತಾವರಣ ಇರಲಿದೆ. ದಶಮದಲ್ಲಿರುವ ಕೇತುವು ಯಂತ್ರೋಪಕರಣದ ಕೆಲಸಕ್ಕೆ ತೊಡಗಿಸುವನು. ದ್ವಿತೀಯದಲ್ಲಿರುವ ಶನಿಯು ಸಂಪತ್ತನ್ನು ನಿಮ್ಮ ಸಂಪತ್ತನ್ನು ಖಾಲಿ ಮಾಡಿಸುವನು. ಶಿವನಿಗೆ ರುದ್ರಾಭಿಷೇಕವನ್ನು ಮಾಡಿಸಿ.
ಕುಂಭ: ಮೊದಲ ವಾರ ಶುಕ್ರನು ಚತುರ್ಥದಿಂದ ಪಂಚಮಕ್ಕೆ ಹೋಗುವನು. ಮಕ್ಕಳಿಂದ ಸುಖವು ಸಿಗಲಿದೆ. ಸಾಪ್ಟ್ ವೇರ್ ಉದ್ಯೋಗದಲ್ಲಿ ಇದ್ದರೆ ನಿಮಗೆ ಒಳ್ಳೆಯ ಅವಕಾಶವು ಸಿಗಬಹುದು. ಪ್ರಶಂಸೆ ಬರಬಹುದು. ಸಾಡೇಸಾಥ್ ಶನಿಯಿಂದ ದೇಹಾಲಸ್ಯ ಇರಲಿದೆ. ಅಲೋಚನೆಯು ಸ್ಥಿರವಾಗಿರದು. ಕೆಲಸದಲ್ಲಿ ಪ್ರೀತಿ ಇಲ್ಲದೇ ಮಾಡುವಿರಿ. ಗುರುವು ತೃತೀಯಸ್ಥಾನಕ್ಕೆ ಬಂದಿದ್ದು ಸಹೋದರರ ಮಧ್ಯದಲ್ಲಿ ಹೊಂದಾಣಿಕೆಯ ಮನೋಭಾವ ಇರಲಿದೆ. ಬಂಧುಗಳಿಂದ ಸಹಾಯವು ಸಿಗಬಹುದು. ಗ್ರಹಗಳು ಅನನುಕೂಲರಾಗಿದ್ದರೂ ದೈವಬಲವು ನಿಮಗೆ ಸಹಾಯ ಮಾಡಲಿದೆ. ದೇವರ ಮೇಲೆ ಭಕ್ತಿ ಇರಲಿ. ಪರಮೇಶ್ವರನನ್ನು ಪ್ರಾರ್ಥಿಸಿ. ಕರ್ಮಾಧಿಪತಿಯು ಸತ್ಕರ್ಮಕ್ಕೆ ಒತ್ತು ಕೊಡುವನು.
ಮೀನ: ಈ ವಾರ ಶುಕ್ರನು ತೃತೀಯದಿಂದ ಚತುರ್ಥಕ್ಕೆ ಹೋಗಲಿದ್ದು ಬಂಧುಗಳ ಜೊತೆ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳುವನು. ಗುರು ದ್ವೀತೀಯಕ್ಕೆ ಬಂದಿದ್ದು ರವಿಯೂ ಬುಧನೂ ರಾಹುವೂ ಇದ್ದು ಮಿಶ್ರ ಫಲವಿದೆ. ಸರ್ಕಾರದಿಂದ ಬರುವ ಅಲ್ಪ ಹಣವು ಬರಬಹುದು. ಶನಿಯ ತೊಂದರೆಯನ್ನು ಅನ್ಯ ಗ್ರಹಗಳು ನಿಮಗೆ ಕಡಿಮೆ ಮಾಡಲಿವೆ. ಅಷ್ಟಮದಲ್ಲಿರುವ ಕೇತುವು ದೊಡ್ಡ ಚಿಕಿತ್ಸೆಯ ಮೂಲಕ ನಿಮ್ಮ ಆರೋಗ್ಯವನ್ನು ಗುಣಪಡಿಸುವನು. ಸೂರ್ಯನು ದ್ವಿತೀಯಕ್ಕೆ ಬಂದಿದ್ದು ತಂದೆಯು ಶತ್ರುವಿಂತೆ ಭಾಸವಾಗಬಹುದು. ತಂದೆಯಿಂದ ಸಿಗಬೇಕಾದ ಆಸ್ತಿ, ಹಣವು ಸಿಗದೇ ಹೋದೀತು. ಸೋಮವಾರ ರುದ್ರಾಭಿಷೇಕವನ್ನು ಮಾಡಿಸಿ.
-ಲೋಹಿತಶರ್ಮಾ ಇಡುವಾಣಿ