ಮೇ ತಿಂಗಳ ಎರಡನೇ ವಾರವು 05 ರಿಂದ 11 ರವರೆಗೆ ಇರಲಿದೆ. ಗ್ರಹಗಳ ಸಂಚಾರದಲ್ಲಿ ವ್ಯತ್ಯಾಸವಾಗಲಿದೆ. ಮೀನದಿಂದ ಮೇಷಕ್ಕೆ ಶುಕ್ರ, ಬುಧರು ಬರಲಿದ್ದಾರೆ, ಗುರುವು ವೃಷಭ ರಾಶಿಗೆ ಬಂದಿದ್ದಾನೆ. ಗ್ರಹಗಳು ಮನುಷ್ಯನ ಮೇಲೆ ಅನುಕೂಲ ಮತ್ತು ಪ್ರತಿಕೂಲ ಪರಿಣಾಮವನ್ನು ಬೀರಲಿದ್ದು, ಪ್ರತಿಕೂಲದವರಿಗೆ ದೈವಾನುಗ್ರಹದಿಂದ ಉತ್ತಮಫಲವನ್ನು ಪಡೆಯಲು ಸಾಧ್ಯ. ಪುರುಷ ಪ್ರಯತ್ನವೂ ಇರಲಿ. ಶುಭವಾಗಲಿ. ಅಕ್ಷಯ ತೃತೀಯದಂದು ನಿಮ್ಮ ಸಂಪತ್ತು ಅಕ್ಷಯವಾಗಲಿ.
ಮೇಷ ರಾಶಿ : ಮೇ ತಿಂಗಳ ಎರಡನೇ ವಾರದಲ್ಲಿ ರಾಶಿ ಚಕ್ರದ ಮೊದಲ ರಾಶಿಯವರಿಗೆ ಮಿಶ್ರ ಫಲವಿರುವುದು. ಗುರುವು ದ್ವಿತೀಯದಲ್ಲಿ ಗುರುವು ನಿಮ್ಮ ಸಂಪತ್ತನ್ನು ಅಧಿಕ ಮಾಡುವನು. ಗುರುಬಲವು ನಿಮ್ಮ ಎಲ್ಲ ಕಾರ್ಯಗಳಿಗೂ ಇರಲಿದೆ. ನಿಮ್ಮ ರಾಶಿಯಲ್ಲಿ ಸೂರ್ಯ, ಬುಧ, ಶುಕ್ರರ ಸಮಾಗಮದಿಂದ ಮಾನಸಿಕವಾದ ಒತ್ತಡವನ್ನು ದೂರ ಮಾಡಿಕೊಂಡು ನಿಶ್ಚಿಂತರಾಗುವಿರಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಯಂತ್ರೋಪಕರಣಗಳಿಗೆ ಹಣವನ್ನು ಖರ್ಚು ಮಾಡುವಿರಿ. ಉದ್ಯಮದಲ್ಲಿ ಉನ್ನತ ಸ್ಥಾನವನ್ನು ನಿರೀಕ್ಷಿಸಿ ಪಡೆಯುವಿರಿ. ಸುಬ್ರಹ್ಮಣ್ಯನಿಗೆ ಪ್ರಿಯವಾದ ಅಪೂಪವನ್ನು ನೈವೇದ್ಯ ಮಾಡಿ.
ವೃಷಭ ರಾಶಿ : ರಾಶಿ ಚಕ್ರದ ಎರಡನೇ ರಾಶಿಯವರಿಗೆ ಮೇ ತಿಂಗಳ ಎರಡನೇ ವಾರವು ಸಾಮಾನ್ಯ ವಾರವಾಗುವುದು. ಗುರುವಿನ ಅವಕೃಪೆಗೆ ಪಾತ್ರರಾದ ನೀವು ಇನ್ನು ಸ್ವಲ್ಪ ಚೇತರಿಸಿಕೊಳ್ಳುವಿರಿ. ಆದರೂ ದ್ವಾದಶದಲ್ಲಿ ಸೂರ್ಯ ಹಾಗೂ ಬುಧರು ಇರುವುದು ಜಾಣತನದಿಂದ ಎಲ್ಲವನ್ನೂ ಸರಿ ಮಾಡಿಕೊಳ್ಳುವ ಸಾಮರ್ಥ್ಯ ಇರುವುದು. ಉದ್ಯೋಗದ ಕಡೆ ಗಮನವಿದ್ದರೂ ಕೂಡಲೇ ಸಿಗಲಾರದು. ನಿಮ್ಮ ಮಾತೇ ನಿಮಗೆ ಮೃತ್ಯುವಿನಂತೆ ಆಗುವುದು. ಐಷಾರಮಿ ಬದುಕನ್ನು ಇಷ್ಟಪಡುವಿರಿ. ಮಹಾಲಕ್ಷ್ಮಿಯ ಉಪಾಸನೆಯನ್ನು ಮಾಡಿ ಆರ್ಥಿಕ ಸಂಕಟವನ್ನು ದೂರ ಮಾಡಿಕೊಳ್ಳಿ.
ಮಿಥುನ ರಾಶಿ : ಮೇ ತಿಂಗಳ ಎರಡನೆಯ ವಾರದಲ್ಲಿ ರಾಶಿ ಚಕ್ರದ ಮೂರನೆಯ ರಾಶಿಯವರಿಗೆ ಅಶುಭ ಫಲವಿದೆ. ನಿಮ್ಮ ಒಂದು ವರ್ಷದ ಶ್ರಮವು ಒಂದು ಕಡೆಯಾದರೆ ಅದನ್ನು ಅನುಭವಿಸಿದ ನಿಮಗೆ ಈ ವಾರ ಬಹಳ ಕಷ್ಟ ಎನಿಸುವುದು. ದ್ವಾದಶ ಸ್ಥಾನಕ್ಕೆ ಗುರುವಿನ ಆಗಮನವಾಗಿರುವುದು ನಿಮಗೆ ಎಲ್ಲ ವಿಚಾರದಲ್ಲಿಯೂ ಹಿನ್ನಡೆಯಾಗಲಿದೆ. ಕಾರ್ಯವನ್ನು ಮಾಡಲು ನಿಮಗೆ ಉತ್ಸಾಹ ಸಾಲದು. ವಿದೇಶಕ್ಕೆ ಹೋಗುವ ಕನಸು ಪೂರ್ಣವಾಗದು. ಬಂಧುಗಳ ಸಹಕಾರವು ಇದ್ದರೂ ಮಾನಸಿಕವಾಗಿ ಅತೃಪ್ತರಾಗುವಿರಿ. ವೈವಾಹಿಕ ಸಂಬಂಧದಲ್ಲಿ ತೊಡಕು ಇರುವುದು. ಲಕ್ಷ್ಮೀನಾರಾಯಣರ ಸ್ತೋತ್ರವನ್ನು ಪಠಿಸಿ.
ಕಟಕ ರಾಶಿ : ರಾಶಿ ಚಕ್ರದ ನಾಲ್ಕನೆಯ ರಾಶಿಯು ಇದಾಗಿದ್ದು ಮೇ ತಿಂಗಳ ಎರಡನೇ ವಾರವು ಶುಭಾಶುಭ ಫಲದಿಂದ ಕೂಡಿದೆ. ನವಮದಲ್ಲಿ ಕುಜ, ರಾಹುಗಳು ಇರುವುದರಿಂದ ನಿಮಗೆ ಯಾವುದೇ ಸ್ಥಾನಮಾನಗಳು ಸಿಗದೇಹೋಗುವುದು. ದಶಮದಲ್ಲಿ ಸೂರ್ಯ, ಬುಧ, ಶುಕ್ರರು ಇರುವುದು ಸರ್ಕಾರದ ಉದ್ಯೋಗಿಗಳಿಗೆ ಭಡ್ತಿ ಸಿಗುವುದು. ಗುರುವು ಏಕಾದಶದಲ್ಲಿ ಇರುವುದರಿಂದ ವಿವಾಹ ಪ್ರತಿಬಂಧಕಗಳು ದೂರವಾಗಿ ಉತ್ತಮ ಸಂಬಂಧವು ಬರುವುದು. ಎಲ್ಲ ಕಾರ್ಯದಲ್ಲಿಯೂ ನೆಮ್ಮದಿಯನ್ನು ಪಡೆಯುವಿರಿ. ಮಹಾದೇವಿಯನ್ನು ಪ್ರಾರ್ಥಿಸಿ, ನಿಮ್ಮ ಕಾರ್ಯದಲ್ಲಿ ತೊಡಗಿ.
ಸಿಂಹ ರಾಶಿ : ಈ ತಿಂಗಳು ರಾಶಿ ಚಕ್ರದ ಐದನೇ ರಾಶಿಯವರಿಗೆ ಸಾಮಾನ್ಯ ಫಲವಿರುವುದು. ಗುರುವು ದಶಕದಲ್ಲಿ ಇರುವುದು ಔದ್ಯೋಗಿಕವಾಗಿ ಉತ್ತಮ. ಶಿಕ್ಷಕ ವೃತ್ತಿಯವರಿಗೆ, ಬರಹಗಾರರಿಗೆ ವೃದ್ಧಿಯಾಗಲಿದೆ. ಕೀರ್ತಿಯನ್ನೂ ಗಳಿಸುವರು. ತಂದೆಯಿಂದ ಸಹಾಯ, ಸರ್ಕಾರದ ಕಡೆಯಿಂದ ಗೌರವಗಳು ಸಿಗುವುದು. ಪೂರ್ವ ಸುಕೃತದಿಂದ ಪ್ರೇಮವು ಉಂಟಾಗುವುದು. ಶಸ್ತ್ರಚಿಕಿತ್ಸೆಗಳು ಆಗುವುದು. ದ್ವಿತೀಯದಲ್ಲಿ ಕೇತುವಿರುವುದು ಬರುವ ಹಣವು ಬಾರದೇಹೋಗುವುದು. ಸೂರ್ಯನಿಗೆ ಪ್ರಿಯವಾದ ಗೋದಿಯನ್ನು ಕೆಂಪು ಬಣ್ಣದ ವಸ್ತ್ರದಲ್ಲಿ ಹಾಕಿ ದಾನ ಮಾಡಿ.
ಕನ್ಯಾ ರಾಶಿ : ಮೇ ತಿಂಗಳ ಎರಡನೇ ವಾರದಂದು ರಾಶಿ ಚಕ್ರದ ಆರನೇ ರಾಶಿಯವರಿಗೆ ಶುಭ ಫಲವು ಅಧಿಕವಾಗಿರುವುದು. ವೈವಾಹಿಕ ಜೀವನವನ್ನು ಬಹಳ ಜೋಪಾನವಾಗಿ ನಡೆಸಿಕೊಂಡು ಹೋಗಬೇಕಾಗುವುದು. ತಂದೆಯ ವಿಚಾರದಲ್ಲಿ ಅಸಮಾಧಾವಿರುವುದು. ಬಂಧುಗಳು ನಿಮ್ಮನ್ನು ನಿಷ್ಠುರ ಮಾಡುವರು. ಗುರುವು ನವಮ ಸ್ಥಾನದಲ್ಲಿ ಇರುವುದು ನಿಮಗೆ ಅನೇಕ ಅನುಕೂಲತೆಗಳನ್ನು ಮಾಡುವನು. ಗಣ್ಯ ಮಾನ್ಯರ ಸಹಕಾರವು ಸಿಗಲಿದೆ. ಪೂರ್ವ ಪೂಣ್ಯದಿಂದ ಸುಖವಾಗಿ ಇರುವಿರಿ. ದೇವಿಯ ಸ್ತುತಿಯನ್ನು ಮಾಡಿ ದಾಂಪತ್ಯದಲ್ಲಿ ಬರುವ ಸಂಕಷ್ಟವನ್ನು ಪರಿಹರಿಸಿಕೊಳ್ಳಿ.
ತುಲಾ ರಾಶಿ : ಮೇ ತಿಂಗಳ ಎರಡನೇ ವಾರ ರಾಶಿ ಚಕ್ರದ ಏಳನೇ ರಾಶಿಯವರಿಗೆ ಸಂಕಷ್ಟಗಳು ಅಧಿಕವಾಗಿ ಇರುವುದು. ಮಾನಸಿಕವಾಗಿ ಬಹಳ ಹಿಂಸೆಪಡಬೇಕಾದೀತು. ಬುದ್ಧಿವಂತರ ಜೊತೆ ಪ್ರೇಮವು ಉಂಟಾಗುವುದು. ಅದನ್ನು ಜಾಗರೂಕತೆಯಿಂದ ಮುನ್ನಡೆಸುವ ಅಗತ್ಯವಿರುವುದು. ಶತ್ರುಗಳ ವಿಚಾರದಲ್ಲಿ ನೀವು ನಿಶ್ಚಿಂತೆಯಿಂದ ಇರುವಿರಿ. ದುಂದುವೆಚ್ಚವನ್ನು ನೀವು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕಾಗುವುದು. ವಿವಾಹ ಸಂಬಂಧದಲ್ಲಿ ಮನಸ್ತಾಪ ಬರುವುದು. ಗುರುವಿನ ದರ್ಶನವನ್ನು ಮಾಡುವಿರಿ. ನಿಮ್ಮ ಆಸೆಗಳು ನಿಧಾನವಾಗಿ ಪೂರ್ಣವಾಗುವುದು.
ವೃಶ್ಚಿಕ ರಾಶಿ : ರಾಶಿ ಚಕ್ರದ ಎಂಟನೇ ರಾಶಿಯಾಗಿದ್ದು, ಮೇ ತಿಂಗಳ ಎರಡನೇ ವಾರ ಶುಭ ಫಲವಿರಲಿದೆ. ವಿವಾಹಕ್ಕಾಗಿ ಇಷ್ಟು ದಿನ ಕಷ್ಟಪಡುತ್ತಿರುವ ನಿಮಗೆ ಅನಾಯಾಸವಾಗಿ ಸಂಬಂಧವು ಕೂಡಿಬರುವುದು. ಸುಂದರ ವಧೂ ವರರ ಪ್ರಾಪ್ತಿಯಾಗಲಿದೆ. ಷಷ್ಠದಲ್ಲಿ ಸೂರ್ಯ, ಶುಕ್ರ, ಬುಧರು ಇರುವುದು ತಂದೆಯಿಂದ ನಿಮಗೆ ಬೇಸರವಾಗುವುದು. ಯಾವುದೇ ಸಹಕಾರವು ತತ್ಕ್ಷಣದಲ್ಲಿ ಸಿಗದು. ಮಾತೂ ಕೂಡ ಬಹಳ ಒರಟಾಗುವುದು. ಆರೋಗ್ಯವೂ ಹದ ತಪ್ಪುವುದು. ವಿದ್ಯಾರ್ಥಿಗಳಿಗೆ ಏನಾದರೂ ಅಡ್ಡಿಗಳು ಆಗುವುದು. ವಾಹನದಿಂದ ನೋವಾಗುವ ಸಾಧ್ಯತೆ ಇದೆ. ಕೆಂಪು ವಸ್ತ್ರವನ್ನು ದಾನವಾಗಿ ನೀಡಿ.
ಧನು ರಾಶಿ : ಈ ತಿಂಗಳ ಎರಡನೇ ವಾರ ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಮಿಶ್ರ ಫಲ ಪ್ರಾಪ್ತಿ. ಷಷ್ಠದಲ್ಲಿ ಗುರುವು ಸ್ತ್ರೀ ದ್ವೇಷವನ್ನು ಮಾಡಿಸುವನು. ಅವರಿಂದ ಅಪಮಾನವಾಗುವ ಸಾಧನೆ ಇದೆ. ವಾಹನದಿಂದ ತೊಂದರೆಗಳನ್ನು ಎದುರಿಸಬೇಕಾಗುವುದು. ಪಂಚಮದಲ್ಲಿ ರವಿ, ಬುಧ, ಶುಕ್ರರ ಯೋಗದಿಂದ ನಿಮ್ಮ ವಿದ್ಯಾಭ್ಯಾಸದಲ್ಲಿ ಪ್ರಗತಿ ಇದ್ದರೂ ಪ್ರೇಮದಲ್ಲಿ ಬೀಳುವ ಸಂಭವವು ಎದುರಾಗುವುದು. ಉತ್ತಮ ಸ್ತ್ರೀಯ ಜೊತೆ ಪ್ರೇಮ ಬೆಳೆಯುವುದು. ಚತುರ್ಥದಲ್ಲಿ ರಾಹು ಹಾಗೂ ಕುಜರಿಂದ ನಿಮಗೆ ಕೌಟುಂಬಿಕ ಕಲಹವು ಅಧಿಕವಾಗಬಹುದು. ಹಿರಿಯ ಜೊತೆ ಸಭ್ಯತೆಯಿಂದ ವರ್ತಿಸಿ. ಗುರುಚರಿತ್ರೆಯನ್ನು ಏಕಾಗ್ರತೆಯಿಂದ ಪಠಿಸಿ, ಅನ್ನದಾನ ಮಾಡಿ.
ಮಕರ ರಾಶಿ : ಮೇ ತಿಂಗಳ ಎರಡನೇ ವಾರದಲ್ಲಿ ರಾಶಿ ಚಕ್ರದ ಹತ್ತನೆ ರಾಶಿಯವರಿಗೆ ಶುಭ ಫಲ. ಪಂಚಮದಲ್ಲಿ ರಾಹುವಿರುವುದು ಪುತ್ರರಿಂದ ಸುಖ, ನೆಮ್ಮದಿ ಸಿಗಲಿದೆ. ವಿದ್ಯಾಭ್ಯಾಸದ ಅಪೇಕ್ಷಿತರು ಉತ್ತಮ ಅಭ್ಯಾಸದ ಕಡೆ ಗಮನಕೊಡಬಹುದು. ಚತುರ್ಥದಲ್ಲಿ ರವಿ, ಬುಧ, ಶುಕ್ರರು ಇರುವುದರಿಂದ ಕುಟುಂಬವನ್ನು ಬಹಳ ಜಾಣ್ಮೆಯಿಂದ ನಡೆಸಬೇಕಾಗುತ್ತದೆ. ನಿಮ್ಮ ಮಾತುಗಳು ವಿಪರೀತ ಪರಿಣಾಮವನ್ನು ಬೀರಬಹುದು. ತೃತೀಯದಲ್ಲಿ ರಾಹು ಹಾಗೂ ಕುಜರು ನೀವು ಸದಾ ಉತ್ಸಾಹದಿಂದ ಇರುವಂತೆ ಮಾಡುತ್ತಾರೆ. ವೈವಾಹಿಕ ವಿಚಾರದಲ್ಲಿ ನೀವು ಮುನ್ನಡೆ ಸಾಧಿಸಬಹುದು. ಆಂಜನೇಯನ ಸಂಪ್ರೀತಿಗಾಗಿ ರಾಮಾಯಣದ ಸುಂದರ ಕಾಂಡವನ್ನು ಪಠಿಸಿ. ಎಣಿಸಿಕೊಂಡ ಕಾರ್ಯವನ್ನು ಆತ ಮಾಡಿಸಿಕೊಡುವನು.
ಕುಂಭ ರಾಶಿ : ರಾಶಿ ಚಕ್ರದ ಹನ್ನೊಂದನೆ ರಾಶಿಯವರಿಗೆ ಮೇ ತಿಂಗಳ ಎರಡನೇ ವಾರ ತಕ್ಕಮಟ್ಟಿನ ಸುಖದ ವಾರವಾಗಿದೆ. ಸ್ವಸ್ಥಾನದಲ್ಲಿ ಶನಿಯು ತನ್ನ ಕ್ಷೇತ್ರದಲ್ಲಿ ಇದ್ದು ನಿಮಗೆ ಉಪಕಾರ ಮಾಡುವವನೇ ಅದರೂ ನಿಮಗೆ ಅದು ಗೊತ್ತಾಗದೇ ಚಿಂತೆಯಾಗುವುದು. ದ್ವಿತೀಯದಲ್ಲಿ ರಾಹು ಹಾಗೂ ಕುಜರು ಬರುವ ಸಂಪತ್ತಿಗೆ ಅಡ್ಡಿಮಾಡುವರು. ತೃತೀಯದಲ್ಲಿ ಸೂರ್ಯ, ಬುಧ, ಶುಕ್ರರಿಂದ ನಿಮ್ಮ ಶ್ರಮಕ್ಕೆ ಯೋಗ್ಯವಾದ ಸ್ಥಾನ – ಮಾನ ಸಿಗುವುದು. ಚತುರ್ಥದಲ್ಲಿ ಗುರುವಿರುವುದು ಮಂಗಲ ಕಾರ್ಯಗಳಿಗೆ ಶುಭವಲ್ಲದಿದ್ದರೂ ಕುಟುಂಬದಲ್ಲಿ ನೆಮ್ಮದಿಯನ್ನು ಕಾಣಬಹುದಾಗಿದೆ. ವಿವಾಹಕ್ಕೆ ಅನುಕೂಲಕರವಲ್ಲ. ಶನಿಗೆ ಪ್ರಿಯವಾದ ಎಳ್ಳನ್ನು ಅಥವಾ ಕಪ್ಪು ಬಟ್ಟೆಗಳನ್ನು ದಾನಮಾಡಿ.
ಮೀನ ರಾಶಿ : ಮೇ ತಿಂಗಳ ಎರಡನೇ ವಾರದಲ್ಲಿ ರಾಶಿ ಚಕ್ರದ ಹನ್ನೆರಡನೆ ರಾಶಿಗೆ ಮಿಶ್ರ ಫಲ. ಸ್ವರಾಶಿಯಲ್ಲಿ ರಾಹು ಹಾಗು ಕುಜರ ಯೋಗವಿರಲಿದೆ. ದೈಹಿಕ ಪೀಡೆಯಿಂದ ಕಷ್ಟವಾಗುವುದು. ದ್ವಿತೀಯದಲ್ಲಿ ಸೂರ್ಯ, ಬುಧ ಹಾಗು ಶುಕ್ರರ ಸಂಯೋಗವಿದೆ. ಸರ್ಕಾರದ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಬಂಧುಗಳಿಂದ ಬೇಕಾದ ಸಹಕಾರವೂ ಸಿಗಲಿದೆ. ತೃತೀಯದಲ್ಲಿ ಗುರುವಿರುವುದು ಅಷ್ಟು ಶುಭವಲ್ಲ. ಸಪ್ತಮದಲ್ಲಿರುವ ಕೇತುವಿನಿಂದ ದಾಂಪತ್ಯದಲ್ಲಿ ಕಲಹವಾಗುವ ಸಾಧ್ಯತೆ ಇದೆ. ಅದು ಮತ್ತೇನಾದರೂ ಆಗಬಹುದು. ಅನ್ನದಾನ ಮಾಡಿ, ಸುಬ್ರಹ್ಮಣ್ಯನು ಪ್ರೀತನಾಗುತ್ತಾನೆ.
-ಲೋಹಿತ ಹೆಬ್ಬಾರ್ – 8762924271 (what’s app only)