Weekly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 13ರಿಂದ 19ರ ತನಕ ವಾರಭವಿಷ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 13, 2023 | 1:30 AM

ಸಾಪ್ತಾಹಿಕ ಸಂಖ್ಯಾಶಾಸ್ತ್ರ ಮುನ್ಸೂಚನೆಗಳು: ಬೆಳಗ್ಗೆ ಎದ್ದ ತಕ್ಷಣ ನಮ್ಮ ದಿನ ಹೇಗಿದೆಯಪ್ಪಾ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ರಾಶಿಭವಿಷ್ಯದ ಜೊತೆಗೆ ಜನ್ಮಸಂಖ್ಯೆಗೆ ಅನುಗುಣವಾಗಿ ದಿನಭವಿಷ್ಯ ನೋಡುತ್ತಾರೆ.

Weekly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 13ರಿಂದ 19ರ ತನಕ ವಾರಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 13ರಿಂದ 19ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನೀವು ಮಾಡಿಕೊಂಡ ವ್ಯವಸ್ಥೆಯೊಳಗೆ ಬದಲಾವಣೆ ಆಗಬೇಕಾ ಎಂಬ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ನಿಮಗೆ ವಹಿಸಿದ ಕೆಲಸಗಳನ್ನು ಗಡುವಿನೊಳಗೆ ಮುಗಿಸುವುದು ಬಹಳ ಮುಖ್ಯವಾಗುತ್ತದೆ. ಯಾವುದೋ ಒಂದು ವಿಷಯವನ್ನು ನನಗೆ ಸಂಬಂಧಿಸಿದ್ದಲ್ಲ ಎಂದು ನೀವು ಅಂದುಕೊಂಡಿರುತ್ತೀರಿ. ಆದರೆ ಅದು ಬೂಟಿನೊಳಗಿನ ಕಲ್ಲಿನಂತೆ ಚುಚ್ಚಲು ಆರಂಭವಾಗುತ್ತದೆ. ಇದನ್ನು ನಿವಾರಿಸಿಕೊಂಡು, ಮುಂದೆ ಸಾಗುವುದಕ್ಕೆ ಆದ್ಯತೆಯನ್ನು ನೀಡಿ. ಇತರರ ಆಹಾರ ಪದ್ಧತಿ, ಜೀವನಶೈಲಿ ಏನೇ ಆಗಿರಬಹುದು. ಅವರಲ್ಲೇನೋ ಬದಲಾವಣೆ ತರ್ತೀನಿ ಎಂದು ಹೊರಡದಿರಿ. ಒಂದು ವೇಳೆ ಇದನ್ನು ಮೀರಿಯೂ ಪ್ರಯತ್ನ ಮಾಡಿದಲ್ಲಿ ಅವಮಾನದ ಪಾಲಾಗುತ್ತೀರಿ, ನಿಮ್ಮ ಗೌರವಕ್ಕೆ ಚ್ಯುತಿ ಸಹ ಆಗಬಹುದು. ಕೃಷಿಕರಿಗೆ ಬೆಳೆ ಕೈಗೆ ಬಾರದೆ ನಾನಾ ರೀತಿಯ ಸಮಸ್ಯೆ, ಸವಾಲುಗಳು ಎದುರಾಗಬಹುದು. ಈಗಾಗಲೇ ಸಾಲ ಮಾಡಿದ್ದೀನಿ, ಇಂಥ ಸಮಯದಲ್ಲಿ ಹಿಂತಿರುಗಿಸುತ್ತೀನಿ ಎಂದು ಹೇಳಿಯಾಗಿದೆ ಎಂದಿದ್ದಲ್ಲಿ ಅದನ್ನು ಹಿಂತಿರುಗಿಸುವ ಬಗ್ಗೆ ಗಂಭೀರವಾದಂಥ ಪ್ರಯತ್ನವನ್ನು ಮಾಡಿ. ಇನ್ನಷ್ಟು ಸಮಯ ತೆಗೆದುಕೊಳ್ಳೋಣ, ನಮ್ಮ ಕಷ್ಟಗಳನ್ನು ಹೇಳಿಕೊಳ್ಳೋಣ ಅಂತ ಆಲೋಚನೆ ಮಾಡದಿರಿ. ಈ ವಾರ ಮಕ್ಕಳನ್ನು ಬೈಯ್ಯುವುದಕ್ಕೆ, ಹೀಯಾಳಿಸುವುದಕ್ಕೆ ಹೋಗಬೇಡಿ. ವೈಯಕ್ತಿಕ ಒತ್ತಡವನ್ನು ಕುಟುಂಬ ಸದಸ್ಯರಿಗೆ ವರ್ಗಾಯಿಸುವ ಪ್ರಯತ್ನ ಬೇಡ. ಸೂರ್ಯನಾರಾಯಣನ ಆರಾಧನೆ ಮಾಡಿದಲ್ಲಿ ಸಮಸ್ಯೆಗಳನ್ನು ಎದುರಿಸುವ ನಿಮ್ಮ ಧಾರಣಾ ಸಾಮರ್ಥ್ಯ ವೃದ್ಧಿ ಆಗುತ್ತದೆ. ವೃತ್ತಿನಿರತರು ಏನೋ ಸಣ್ಣ ಸಂಗತಿಯನ್ನು ಮರೆತು, ಆ ಮೇಲೆ ಪೇಚಾಡಿಕೊಳ್ಳುವಂತಾಗಿದೆ. ಇನ್ನು ನಿಮಗಿರುವ ಸಂಪರ್ಕದ ಮೂಲಕ ಕೆಲಸ ಮಾಡಿಸಿಕೊಳ್ಳೋಣ ಅಂದುಕೊಳ್ಳುತ್ತಿದ್ದೀರಿ ಅಂತಾದರೆ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ, ಆ ನಂತರ ಮುಂದುವರಿಯಿರಿ. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಲಕ್ಷ್ಯ ವಹಿಸಿ. ಸ್ನೇಹಿತರು ಸಿನಿಮಾ, ಪ್ರವಾಸ, ರೆಸ್ಟೋರೆಂಟ್ ಅಂತ ನಿಮ್ಮನ್ನು ಕರೆದು, ಉತ್ಸಾಹದಲ್ಲಿ ನೀವೂ ಹೋಗ್ರೀರಿ. ಆದರೆ ನಂತರದಲ್ಲಿ ಓದಿನ ಹಿನ್ನಡೆ ಆಗಿ, ಪರಿತಪಿಸುತ್ತೀರಿ. ಮುಖ್ಯವಾಗಿ ತಂದೆ- ತಾಯಿಯಿಂದ ಏನನ್ನೂ ಮುಚ್ಚಿಡಬೇಡಿ.
ಮಹಿಳೆಯರಿಗೆ ಮೂಳೆ ನೋವು ಅಥವಾ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮನೆಯಲ್ಲಿ ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಸಣ್ಣ ಮಟ್ಟದಾದ್ದರೂ ಭಿನ್ನಾಭಿಪ್ರಾಯ ಅಥವಾ ಅಭಿಪ್ರಾಯ ಭೇದಗಳು ಕಂಡುಬರಬಹುದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ವಾರ ಬಹಳ ಖುಷಿ ಖುಷಿಯಾದ ಮನಸ್ಥಿತಿಯಲ್ಲಿ ಇರುತ್ತೀರಿ. ಕುಟುಂಬದ ಸದಸ್ಯರ ಜತೆಗೆ ಹೆಚ್ಚಿನ ಸಮಯ ಕಳೆಯುವುದಕ್ಕೆ ನಿರ್ಧಾರ ಮಾಡುತ್ತೀರಿ. ನಿಮ್ಮಲ್ಲಿ ಕೆಲವರು ಪ್ರವಾಸಕ್ಕೆ ತೆರಳುವಂಥ ಯೋಗ ಇದೆ. ಆದರೆ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ವಹಿಸಿ. ಅವರೇನಾದರೂ ಸಣ್ಣ- ಪುಟ್ಟ ತಪ್ಪುಗಳನ್ನು ಮಾಡಿದಲ್ಲಿ ಅದನ್ನು ವಿಪರೀತ ದೊಡ್ಡದು ಮಾಡಿ, ಕೂಗಾಟ- ರೇಗಾಟ ಮಾಡದಿರಿ. ಕಂಪ್ಯೂಟರ್ ಹ್ಯಾಕರ್ ಗಳಿಂದ ತುಂಬ ಜಾಗ್ರತೆಯಿಂದ ಇರುವುದು ಮುಖ್ಯವಾಗುತ್ತದೆ. ವ್ಯಾಲೆಟ್ ಬಳಸುತ್ತಿದ್ದಲ್ಲಿ ಅದನ್ನು ಜನ ಹೆಚ್ಚಿರುವ ಕಡೆಗಳಿಗೆ ತೆಗೆದುಕೊಂಡು ಹೋಗದಿರುವುದು ಉತ್ತಮ. ರಾಜಕಾರಣಿಗಳಾಗಿದ್ದಲ್ಲಿ ಶತ್ರುಗಳನ್ನು ಮಣಿಸುವಲ್ಲಿ ಸಫಲರಾಗುತ್ತಾರೆ. ಕೃಷಿಕರಿಗೆ ಭೂಮಿ ಖರೀದಿಸುವ, ಕೃಷಿಗೆ ಬೇಕಾದಂಥ ಸಲಕರಣೆಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇದಕ್ಕಾಗಿ ಸ್ವಲ್ಪ ಪ್ರಮಾಣದಲ್ಲಿ ಸಾಲ ಮಾಡಬೇಕಾದಂಥ ಸನ್ನಿವೇಶ ನಿರ್ಮಾಣ ಆಗಬಹುದು. ಸಂಗಾತಿ ಜತೆಗೆ ಉತ್ತಮವಾದ ಸಮಯವನ್ನು ಕಳೆಯುವ ಯೋಗ ಇದ್ದು, ಪ್ರವಾಸಕ್ಕೆ ಹೋಗುವ ಸಾಧ್ಯತೆಗಳಿವೆ. ಒಂದು ವೇಳೆ ಮನೆಯಲ್ಲಿ ಹೆಣ್ಣುಮಕ್ಕಳ ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರಬಹುದು. ಅವರಾಗಿಯೇ ಹುಡುಕಿಕೊಂಡು ಬಂದರು ಅನ್ನೋ ಕಾರಣಕ್ಕೆ ಅನುಮಾನ ಪಡುವುದು ಬೇಡ. ವೃತ್ತಿನಿರತರಿಗೆ ಹೊಸ ವಾಹನವನ್ನು ಖರೀದಿ ಮಾಡುವ ಅವಕಾಶಗಳಿವೆ. ಕೆಲವರು ಸೆಕೆಂಡ್ ಹ್ಯಾಂಡ್ ವಾಹನವನ್ನು ಖರೀದಿಸಬಹುದು. ಆದಾಯವನ್ನು ಜಾಸ್ತಿ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಹೊಸಬರೊಬ್ಬರನ್ನು ಪಾರ್ಟನರ್ ಆಗಿ ತೆಗೆದುಕೊಳ್ಳುವಂಥ ಆಲೋಚನೆ ಮೂಡಲಿದೆ. ಕಾಗದ- ಪತ್ರಗಳನ್ನು ಸರಿಯಾಗಿ ಮಾಡಿಕೊಂಡು, ಮುಂದುವರಿಯುವುದು ಉತ್ತಮ. ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಟ್ಯಾಬ್ ಲೆಟ್ , ಡೆಸ್ಕ್ ಟಾಪ್ ಅನ್ನು ಪೋಷಕರು ಕೊಡಿಸಬಹುದು. ಬ್ರ್ಯಾಂಡ್ ವಿಚಾರಕ್ಕೆ ವಿಪರೀತ ಹಠ ಮಾಡಬೇಡಿ. ಮಹಿಳೆಯರಿಗೆ ಹೊಸ ವಸ್ತ್ರಾಭರಣ ಬರುವಂಥ ಯೋಗ ಇದೆ. ಅದರಲ್ಲೂ ನಿಮ್ಮಲ್ಲಿ ಕೆಲವರಿಗೆ ಸ್ವಂತವಾಗಿ ಕೂಡಿಟ್ಟ ಹಣದಲ್ಲೇ ಹೊಸ ವಸ್ತ್ರ- ಒಡವೆಗಳನ್ನು ಖರೀದಿಸುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನೀವು ಕೈಗೆತ್ತಿಕೊಂಡ ಕೆಲಸ ಮುಗಿಸುವುದರೊಳಗೆ ಸಾಕು ಬೇಕಾಗುತ್ತದೆ. ಯಾರದೋ ಓಲೈಕೆಗಾಗಿ ನಿಮ್ಮ ಸಾಮರ್ಥ್ಯವನ್ನು ಮೀರಿದ ಕೆಲಸಗಳನ್ನು ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ, ನಿಮ್ಮೆದುರು ಕಾಣುವಂತೆಯೇ ಬೆನ್ನ ಹಿಂದೆಯೂ ಜನರು ಹಾಗೇ ಇರುತ್ತಾರೆ ಎಂಬ ಭಾವನೆಯಿದ್ದಲ್ಲಿ ಹೊರಬನ್ನಿ. ನಿಮ್ಮ ಪಾಲಿಗೆ ಬರುವಂಥ ಉದ್ಯೋಗ ಸ್ಥಳದ ಯಾವ ಅವಕಾಶವನ್ನೂ ಬೇರೆಯವರಿಗೆ ಬಿಟ್ಟುಕೊಡಲು ಹೋಗದಿರಿ. ನಿಂತು ಕೆಲಸ ಮಾಡುವಂಥ ಉದ್ಯೋಗದಲ್ಲಿ ಇರುವವರಿಗೆ ಕಾಲು ನೋವಿನ ಸಮಸ್ಯೆ ತೀವ್ರವಾಗಿ ಕಾಣಿಸಿಕೊಳ್ಳಬಹುದು, ಇದರ ಜತೆಗೆ ಅಥವಾ ಬೆನ್ನು ಹುರಿಯ ವಿಪರೀತ ನೋವು ಕಾಣಿಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ಸ್ವಯಂ ವೈದ್ಯ ಮಾಡಿಕೊಳ್ಳದಿರಿ. ಫೋನ್ ನಲ್ಲಿ ಮಾತನಾಡುವಾಗ ಇತರರ ವೈಯಕ್ತಿಕ ವಿಚಾರಗಳ ಚರ್ಚೆ ಮಾಡದಿರುವುದು ಉತ್ತಮ. ಹಾಗೊಂದು ವೇಳೆ ಮಾಡಿದಲ್ಲಿ ನಿಮ್ಮ ವಿರುದ್ಧ ಅಪಪ್ರಚಾರ, ಶತ್ರುತ್ವ ಬೆಳೆದುಬಿಡುತ್ತದೆ. ಕೃಷಿಕರು ಪೂರ್ತಿಯಾಗಿ ಒಳ್ಳೆ ಸುದ್ದಿ ಬರುವ ಮುನ್ನವೇ ಸಂಭ್ರಮಾಚರಣೆಯನ್ನು ಮಾಡುವುದಕ್ಕೆ ಆರಂಭಿಸಬೇಡಿ. ಅದು ಕೋರ್ಟ್- ಕಚೇರಿ ವಿಚಾರಗಳೇ ಇರಬಹುದು ಅಥವಾ ರಾಜಕಾರಣ, ಸಂಘ- ಸಂಸ್ಥೆಗಳ ಹುದ್ದೆಗಳ ಆಯ್ಕೆಯ ವಿಚಾರವೇ ಇರಬಹುದು. ವಿಷಯ ಖಾತ್ರಿ ಆಗುವ ಮೊದಲೇ ಸಂಭ್ರಮಿಸುವುದು ಬೇಡ. ಮನೆಯ ದುರಸ್ತಿ ಮಾಡಿಸಬೇಕು ಅಥವಾ ಈಗಾಗಲೇ ಇರುವಂಥ ಗೋದಾಮು, ಸಂಗ್ರಹಾಗಾರಗಳ ವಿಸ್ತರಣೆಗೆ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದೀರಿ. ವೃತ್ತಿನಿರತರಿಗೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ಮಾಡುತ್ತಿರುವ ಆರೋಪ- ನಿಂದೆ ಕೇಳಿಬರಲಿದೆ. ಆದ್ದರಿಂದ ನೀವು ಮಾಡಿದ ಕೆಲಸಗಳ ಬಗ್ಗೆ ಸಂಬಂಧಪಟ್ಟವರಿಗೆ ಆಗಿಂದಾಗಲೇ ಅಪ್ ಡೇಟ್ ಮಾಡುವುದು ಉತ್ತಮ. ವಿದ್ಯಾರ್ಥಿಗಳು ನಿಮಗೆ ಸಂಬಂಧವೇ ಪಡದ ವಿಚಾರಗಳಿಗೆ ಆಪ್ತರು- ಸ್ನೇಹಿತರ ಎದುರು ಅನುಮಾನಕ್ಕೆ ಗುರಿ ಆಗಬೇಕಾಗುತ್ತದೆ. ಸ್ವಂತಕ್ಕಾಗಿ ಕೂಡಿಟ್ಟಿದ್ದ ಹಣವನ್ನು ಅನಿವಾರ್ಯವಾಗಿ ಇತರರಿಗೆ ಕೊಡಬೇಕಾಗಬಹುದು. ಮಹಿಳೆಯರು ಉದ್ಯೋಗಸ್ಥರಾಗಿದ್ದಲ್ಲಿ ಕೆಲಸದ ಒತ್ತಡ ಜಾಸ್ತಿ ಆಗಲಿದೆ. ರಜಾ ಬೇಕು ಎಂಬ ಸನ್ನಿವೇಶ ಇದ್ದರೂ ಕೇಳಿದ ಮೇಲೆ ಇಲ್ಲ ಎಂಬ ಉತ್ತರ ಬರುತ್ತದೆ. ಇದರಿಂದ ಬೇಸರ ಹೆಚ್ಚಾಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನೀವು ಈ ಹಿಂದೆ ಕೆಲಸ ಮಾಡಿಯಾಗಿತ್ತು, ಅದರ ಹಣ ಬಂದಿರಲಿಲ್ಲ. ಇನ್ನು ಅದು ಬರುವುದೂ ಇಲ್ಲ ಎಂದು ಮನಸ್ಸಿನಲ್ಲಿ ನಿಶ್ಚಯ ಮಾಡಿಕೊಂಡಿದ್ದು ಒಂದರ ಮೊತ್ತ ನಿಮ್ಮ ಕೈ ಸೇರುವಂತೆ ಅವಕಾಶಗಳಿವೆ. ನೀವು ಇದಕ್ಕಾಗಿ ಒಂದು ಸಣ್ಣ ಪ್ರಯತ್ನ ಮಾಡಬೇಕಷ್ಟೆ. ಇನ್ನು ಹೊಸದಾಗಿ ದೊಡ್ಡ ಸಂಸ್ಥೆಗಳ ಜತೆಗೆ ಕೆಲಸಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಬಹುದು. ನಿಮ್ಮ ಸ್ನೇಹಿತರು ತರುವಂಥ ರೆಫರೆನ್ಸ್ ಗಳ ಬಗ್ಗೆ ಗಂಭೀರವಾಗಿ ಪರಿಗಣಿಸುವುದು ಒಳ್ಳೆಯದು. ಮನೆಗೆ ಟೀವಿ, ಸೋಫಾ ಮೊದಲಾದ ವಸ್ತುಗಳನ್ನು ಖರೀದಿಸಿ ತರಬೇಕು ಎಂಬ ಉದ್ದೇಶ ಏನಾದರೂ ಇದ್ದಲ್ಲಿ ಈ ವಾರ ಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಸಮರ್ಪಣಾ ಭಾವಕ್ಕೆ ಮೆಚ್ಚುಗೆ ವ್ಯಕ್ತವಾಗಲಿದೆ. ನಿಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದವರು ಬೆರಗುಗಣ್ಣಿನಿಂದ ನೋಡುವಂತಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಅಲ್ಪ ಕಾಲಕ್ಕಾದರೂ ಉದ್ಯೋಗ ನಿಮಿತ್ತವಾಗಿ ವಿದೇಶಕ್ಕೆ ತೆರಳುವಂಥ ಅವಕಾಶ ಬರಬಹುದು. ಕೃಷಿಕರು ಮನೆಗೆ ರಾಸುಗಳನ್ನು ಖರೀದಿಸಿ ತರುವಂಥ ಯೋಗ ಇದೆ. ಯಾರು ಈಗಾಗಲೇ ಡೇರಿ ವ್ಯವಹಾರಗಳನ್ನು ಮಾಡುತ್ತಾ ಇರುತ್ತೀರೋ ಅಂಥವರಿಗೆ ಆದಾಯವು ಹೆಚ್ಚಾಗಲಿದೆ. ಕೃಷಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿರುವಂಥವರು, ಅಂಥ ವಿಚಾರಗಳಿಗೆ ಇರುವಂಥ ಸೋಷಿಯಲ್ ಮೀಡಿಯಾ ಪೇಜ್ ನಿರ್ವಹಣೆ ಮಾಡುವಂಥವರಿಗೆ ಮೇಲಧಿಕಾರಿಗಳಿಂದ ಮೆಚ್ಚುಗೆ ಮಾತುಗಳನ್ನು ಕೇಳಿಸಿಕೊಳ್ಳಲಿದ್ದೀರಿ. ವೃತ್ತಿನಿರತರು ಸೋಷಿಯಲ್ ಕಾಂಟ್ಯಾಕ್ಟ್ ಗಳನ್ನು ಹೆಚ್ಚು ಮಾಡಿಕೊಳ್ಳಲಿದ್ದೀರಿ. ಹೊಸದಾಗಿ ಪರಿಚಯ ಆದವರು ನಿಮ್ಮ ವೃತ್ತಿಗೆ ಅನುಕೂಲ ಆಗುವಂಥ ಸಹಾಯ ಮಾಡಲಿದ್ದಾರೆ. ರಿಸ್ಕ್ ಇರುವಂಥ ಕೆಲಸವನ್ನು ಧೈರ್ಯ ಮಾಡಿ, ಮುಗಿಸಲಿದ್ದೀರಿ. ವಿದ್ಯಾರ್ಥಿಗಳು ಗುರು ಗ್ರಹದ ಆರಾಧನೆಯನ್ನು ಮಾಡಿದಲ್ಲಿ ನೆನಪಿನ ಶಕ್ತಿ ವೃದ್ಧಿ ಆಗಲಿದೆ. ಇನ್ನು ಹಳದಿ ಬಣ್ಣದ ತುಂಡು ಬಟ್ಟೆಯೊಂದನ್ನು ನಿಮ್ಮ ಬಳಿ ಇರಿಸಿಕೊಳ್ಳುವುದು ಸಹ ಉತ್ತಮ ಫಲಿತಾಂಶವನ್ನು ನೀಡಲಿದೆ. ಮಹಿಳೆಯರು ತೀರ್ಥಕ್ಷೇತ್ರಗಳ ದರ್ಶನ ಮಾಡುವಂಥ ಯೋಗ ಇದೆ. ಸಂಬಂಧಿಕರ ಜತೆಗೂಡಿ ತೆರಳಬಹುದು. ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಪದೋನ್ನತಿ ಆಗಬಹುದು. ಮತ್ತು ಅರೆಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಉದ್ಯೋಗ ಕಾಯಂ ಆಗಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಮನೆ, ಅಪಾರ್ಟ್ ಮೆಂಟ್ ಅಥವಾ ಸೈಟು ಖರೀದಿ ಮಾಡಬೇಕು ಎಂದಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವಂಥ ಯೋಗ ಇದೆ. ಒಂದು ವೇಳೆ ಈಗಾಗಲೇ ಸಿಕ್ಕಿಯಾಗಿದೆ ಅಂತಾದಲ್ಲಿ ಬ್ಯಾಂಕ್ ಲೋನ್ ಗಾಗಿ ಪ್ರಯತ್ನಿಸಿದಲ್ಲಿ ಸಾಲ ಮಂಜೂರು ಆಗುವಂಥ ಯೋಗ ಇದೆ. ಮನೆಗೆ ವಾಟರ್ ಫಿಲ್ಟರ್ ಅಥವಾ ನೀರಿನ ಶುದ್ಧತೆಗೆ ಸಂಬಂಧಿಸಿದಂಥ ಉಪಕರಣಗಳನ್ನು ಖರೀದಿ ಮಾಡಲಿದ್ದೀರಿ. ಸ್ಟ್ಯಾಂಡಪ್ ಕಾಮಿಡಿ, ಮ್ಯಾಜಿಕ್, ಅರ್ಥಶಾಸ್ತ್ರ ಉಪನ್ಯಾಸ ನೀಡುವವರಿಗೆ ಆದಾಯವು ಹೆಚ್ಚಾಗುವುದಕ್ಕೆ ಮಾರ್ಗ ಗೋಚರ ಆಗಲಿದೆ. ಹೊಸದಾಗಿ ಉದ್ಯೋಗ ಹುಡುಕುತ್ತಿರುವವರಿಗೆ ಕೆಲಸದ ಬಗ್ಗೆ ಮಾಹಿತಿ ದೊರೆಯಬಹುದು. ಇನ್ನು ಈಗಾಗಲೇ ಇಂಟರ್ ವ್ಯೂ ನೀಡಿಯಾಗಿದೆ ಎಂದಾದಲ್ಲಿ ಕೆಲಸ ಸಿಗಲಿದೆ. ಸಂಗಾತಿಯ ಜತೆಗಿನ ಮಾತುಕತೆ ವಾದ- ವಾಗ್ವಾದಕ್ಕೆ ಹೋಗದಂತೆ ನೋಡಿಕೊಳ್ಳುವ ಕಡೆಗೆ ಗಮನ ಕೊಡಿ. ಕೃಷಿಕರು ಅಧ್ಯಯನ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ನೀವು ಮಾಡಿದ ಹೊಸ ಕೃಷಿ ಪ್ರಯೋಗಗಳು ಫಲ ನೀಡುವುದಕ್ಕೆ ಆರಂಭವಾಗುತ್ತದೆ. ಕೃಷಿ ಸಹಕಾರ ಸಂಘಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿರುವಂಥವರಿಗೆ ಪ್ರಭಾವಿಗಳ ಶಿಫಾರಸು ದೊರೆಯಲಿದೆ. ಸಂಬಂಧಿಗಳ ಅಥವಾ ಸ್ನೇಹಿತರು ತಮ್ಮ ಮನೆಗೆ ಬರುವಂತೆ ಆಹ್ವಾನ ನೀಡಲಿದ್ದಾರೆ. ಇತರರು ತಮ್ಮಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ ಕೆಲಸವನ್ನು ಮಾಡಿ ಮುಗಿಸುವುದರಲ್ಲಿ ಯಶಸ್ವಿ ಆಗಲಿದ್ದೀರಿ. ವೃತ್ತಿನಿರತರು ಗ್ಯಾಜೆಟ್, ಲ್ಯಾಪ್ ಟಾಪ್ ಹೀಗೆ ವೃತ್ತಿಗೆ ಸಂಬಂಧಿಸಿದ್ದನ್ನು ಖರೀದಿಸುವಂಥ ಯೋಗ ಇದೆ. ಮಕ್ಕಳ ಶಿಕ್ಷಣಕ್ಕಾಗಿ ಹೂಡಿಕೆ ಮಾಡುವುದಕ್ಕೆ ಯೋಜನೆಯನ್ನು ರೂಪಿಸಲಿದ್ದೀರಿ. ಜತೆಯಲ್ಲಿ ಕೆಲಸ ಮಾಡುವವರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜನರನ್ನು ನೇಮಿಸಿಕೊಳ್ಳಲಿದ್ದೀರಿ. ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿ ಮಾಡಲಿದ್ದೀರಿ. ಸ್ವಂತ ಕಚೇರಿ ಇರುವವರು ದುರಸ್ತಿಗೆ ಸ್ವಲ್ಪ ಮಟ್ಟದ ಹಣವನ್ನು ಖರ್ಚು ಮಾಡಲಿದ್ದೀರಿ. ವಿದ್ಯಾರ್ಥಿಗಳು ಸ್ನೇಹಿತರ ಮಧ್ಯೆ ಜನಪ್ರಿಯರಾಗಲಿದ್ದೀರಿ. ಶಿಕ್ಷಣ ಸಂಸ್ಥೆಯಲ್ಲಿ ನಾಯಕರಾಗಿ ಆಯ್ಕೆಯಾಗುವ ಯೋಗ ಸಹ ಇದ್ದು, ಇತರರು ನಿಮ್ಮನ್ನು ಅಚ್ಚರಿಯಿಂದ ನೋಡುವಂತಾಗುತ್ತದೆ. ಮಹಿಳೆಯರಿಗೆ ಮಕ್ಕಳ ಸಾಧನೆಯಿಂದ ಮನಸ್ಸಿಗೆ ನೆಮ್ಮದಿ, ತೃಪ್ತಿ ದೊರೆಯಲಿದೆ. ಗೆಳತಿ- ಗೆಳೆಯರ ಭೇಟಿಯಿಂದ ಮನಸ್ಸಿಗೆ ಸಂತೋಷ ದೊರೆಯಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಸ್ವಂತ ವ್ಯವಹಾರ, ಉದ್ಯಮ ಮಾಡುತ್ತಿರುವವರಿಗೆ ಆದಾಯದಲ್ಲಿ ಇಳಿಕೆ ಆಗಲಿದೆ. ಸಾಲ ನೀಡಿದ್ದ ಹಲವರು ಅದನ್ನು ಹಿಂತಿರುಗಿಸುವಂತೆ ಒಂದೇ ಸಮಯಕ್ಕೆ ಕೇಳಲಿದ್ದಾರೆ. ನಿಮ್ಮಲ್ಲಿ ಕೆಲವರು ಬ್ಯಾಂಕ್ ನಲ್ಲಿ ಸಾಲ ಮಾಡಬಹುದು ಅಥವಾ ಚಿನ್ನವನ್ನು ಅಡಮಾನ ಮಾಡಿ, ಹಣವನ್ನು ಪಡೆದುಕೊಳ್ಳಬಹುದು. ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಸಮಸ್ಯೆ ಉಲ್ಬಣ ಆಗಬಹುದು. ಸ್ವಯಂ ವೈದ್ಯ ಮಾಡಿಕೊಳ್ಳುವುದರ ಬದಲು ಸೂಕ್ತ ವೈದ್ಯೋಪಚಾರ ಮಾಡಿಕೊಳ್ಳುವ ಬಗ್ಗೆ ಲಕ್ಷ್ಯ ನೀಡಿ. ಮಾಲ್ ಗಳಲ್ಲಿ, ಚಿತ್ರಮಂದಿರಗಳಲ್ಲಿ, ಪಿಜ್ಜಾ ಮಳಿಗೆಗಳಲ್ಲಿ ಕಾರ್ಯ ನಿರ್ವಹಿಸುವವರು ವಾಹನ ಚಲಾಯಿಸುವಾಗ ತುಂಬ ಎಚ್ಚರಿಕೆಯಿಂದ ಇರಬೇಕು. ಚೀಟಿಯಲ್ಲಿ ಹಣ ಹಾಕಿರುವವರು ಅದನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದಕ್ಕೆ ಏನು ಮಾಡಬೇಕೋ ಅದನ್ನು ಮಾಡುವುದಕ್ಕೆ ನಿರ್ಧರಿಸಲಿದ್ದೀರಿ. ಪ್ರಯಾಣದಲ್ಲಿ ಇರುವವರು ಬೆಲೆ ಬಾಳುವ ವಸ್ತುಗಳ ಕಡೆಗೆ ಲಕ್ಷ್ಯ ನೀಡಿ. ಕೃಷಿಕರು ಮನೆಯಲ್ಲಿ ಇರುವಂಥ ಪ್ರಮುಖ ಕಾಗದ- ಪತ್ರಗಳು ಇವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಅದರ ನಕಲು ತೆಗೆಸುವುದಕ್ಕೆ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗುತ್ತೀರಿ ಎಂದಾದರೆ ಜೋಪಾನವಾಗಿ ವಾಪಸ್ ತಂದು, ಮನೆಯಲ್ಲಿ ಇಟ್ಟುಕೊಳ್ಳುವ ಕಡೆಗೆ ಗಮನವನ್ನು ನೀಡಿ. ಸರ್ಕಾರಿ ಯೋಜನೆಗಳಿಗಾಗಿ ಅಪ್ಲೈ ಮಾಡಿದವರಿಗೆ ಅದರ ಲಾಭ ದೊರೆಯುವುದು ಇನ್ನಷ್ಟು ತಡವಾಗುವಂಥ ಸೂಚನೆ ದೊರೆಯಲಿದೆ. ಆದರೆ ಯಾವುದೇ ಕಾರಣಕ್ಕೂ ತಾಳ್ಮೆಯನ್ನು ಕಳೆದುಕೊಳ್ಳದಿರಿ. ವೃತ್ತಿನಿರತರು ಪೊಲೀಸ್ ಠಾಣೆ, ಕೋರ್ಟ್- ಕಚೇರಿ ಎಂದು ಸುತ್ತಾಡುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ನೀವು ಮಾಡುತ್ತಿರುವ ವೃತ್ತಿಯಲ್ಲಿ ಪಾರದರ್ಶಕವಾಗಿ ಇರುವುದಕ್ಕೆ ಪ್ರಯತ್ನಿಸಿ. ನೀವು ನೀಡಿದ ರಸೀದಿಯಲ್ಲಿ ತಪ್ಪುಗಳು ಉಳಿಯದಂತೆ ನೋಡಿಕೊಳ್ಳಿ. ಒಂಚೂರು ನಿರ್ಲಕ್ಷ್ಯ ಮಾಡಿದರೂ ದೊಡ್ಡ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಳ್ಳುವಂತೆ ಆಗುತ್ತದೆ. ವಿದ್ಯಾರ್ಥಿಗಳಿಗೆ ಮನೆಯಲ್ಲಿ ತಮ್ಮ ಮೇಲೆ ನಂಬಿಕೆ ಉಳಿಸಿಕೊಳ್ಳುವುದು ಹರಸಾಹಸ ಆಗಲಿದೆ. ಸಾಧ್ಯವಾದಷ್ಟೂ ಪಾರದರ್ಶಕವಾಗಿ ನಡೆದುಕೊಳ್ಳಿ. ಅನುಮಾನಗಳನ್ನು ಪರಿಹರಿಸುವ ರೀತಿಯಲ್ಲಿ ಉತ್ತರವನ್ನು ನೀಡಿ. ಮಹಿಳೆಯರು ಗಾಸಿಪ್ ಗಳಿಂದ ದೂರ ಉಳಿಯುವುದು ಬಹಳ ಮುಖ್ಯ. ನಿಮಗೆ ಮಾಹಿತಿಯೇ ಇಲ್ಲದ ವಿಚಾರಗಳ ಬಗ್ಗೆ ಮಾತನಾಡುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಮಹತ್ತರ ಒಪ್ಪಂದ ಅಥವಾ ವಿಚಾರಗಳಲ್ಲಿ ನಿಮ್ಮ ಅಭಿಪ್ರಾಯ, ನಿರ್ಧಾರಗಳಿಗೆ ಪ್ರಾಮುಖ್ಯ ಇರುತ್ತದೆ. ವಿವಾಹ ವಯಸ್ಕರಾಗಿದ್ದಲ್ಲಿ ಮದುವೆಗೆ ಪ್ರಯತ್ನ ಪಡುತ್ತಿದ್ದರೆ ಸೂಕ್ತ ಸಂಬಂಧವೊಂದು ಹುಡುಕಿಕೊಂಡು ಬರುವಂಥ ಯೋಗ ಇದೆ. ಗುರಿಯಿಟ್ಟು ಹೊಡೆದರೆ ಬೀಳದೆ ಇರುವುದು ಯಾವುದೂ ಇಲ್ಲ. ನಿಮ್ಮ ಏಕಾಗ್ರತೆ ಬಹಳ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಶಿಸ್ತು, ಸಮಯ ಪಾಲನೆಗೆ ಹೆಚ್ಚಿನ ಒತ್ತು ನೀಡಲಿದ್ದೀರಿ. ನಿಮ್ಮಿಂದ ಏನು ಮಾಡುವುದಕ್ಕೆ ಸಾಧ್ಯ ಹಾಗೂ ಏನನ್ನು ಮಾಡುವುದಕ್ಕೆ ಆಗುವುದಿಲ್ಲ ಎಂಬ ಬಗ್ಗೆ ಸ್ಪಷ್ಟವಾದ ಕಲ್ಪನೆ ನಿಮಗೆ ಇರಲಿದೆ. ಎಲ್ಲರ ಆಕ್ಷೇಪ, ಅನುಮಾನಗಳಿಗೆ ಸರಿಯಾದ ಉತ್ತರವನ್ನು ನಿಮ್ಮ ಕಾರ್ಯ ಚಟುವಟಿಕೆ ನೀಡಲಿದೆ. ಸೆಕೆಂಡ್ ಹ್ಯಾಂಡ್ ವಾಹನ ಖರೀದಿ- ಮಾರಾಟ ಮಾಡುವವರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ಕೃಷಿಕರಾಗಿದ್ದಲ್ಲಿ ನಿಮ್ಮ ಮಾತಿನ ಪ್ರಭಾವ, ಗೌರವ ಎರಡೂ ಹೆಚ್ಚಾಗಲಿದೆ. ಹೊಸಬರ ಎದುರಿಗೆ ನಿಮ್ಮ ಆದಾಯದ ಬಗ್ಗೆಯಾಗಲೀ ಅಥವಾ ನಿಮ್ಮ ವ್ಯವಹಾರದ ಗುಟ್ಟನ್ನಾಗಲೀ ಹಂಚಿಕೊಳ್ಳಬೇಡಿ. ಸಾವಯವ ಕೃಷಿ ಮಾಡುವಂಥವರಿಗೆ ಗೌರವ, ಸನ್ಮಾನ ಹಾಗೂ ಆದಾಯ ಹೆಚ್ಚಳ ಆಗುವಂಥ ಯೋಗ ಇದೆ. ವೃತ್ತಿನಿರತರು ಅಲ್ಪ ಪ್ರಮಾಣದಲ್ಲಿ ನಷ್ಟ ಅನುಭವಿಸುವ ಯೋಗ ಇದೆ. ವಕೀಲರು, ಚಾರ್ಟರ್ಡ್ ಅಕೌಂಟೆಂಟ್ ಇತ್ಯಾದಿ ವೃತ್ತಿಯಲ್ಲಿ ಇರುವವರಿಗೆ ಬಹಳ ಗೊಂದಲ ಏರ್ಪಡಲಿದೆ. ರಕ್ತದೊತ್ತಡ ಸಮಸ್ಯೆ ಇರುವವರು ಕಡ್ಡಾಯವಾಗಿ ಔಷಧೋಪಚಾರದ ಕಡೆಗೆ ಗಮನ ನೀಡಿ. ವೈದ್ಯರ ಬದಲಾವಣೆ ಅಥವಾ ಆಹಾರ ಪಥ್ಯದಲ್ಲಿ ಬದಲಾವಣೆ ಮಾಡಿಕೊಳ್ಳುವ ಮುನ್ನ ಎಚ್ಚರಿಕೆಯಿಂದ ಇರಬೇಕು. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಬೇಕು ಎಂದುಕೊಂಡಿದ್ದಲ್ಲಿ ಅಗತ್ಯ ನೆರವು, ಮಾರ್ಗದರ್ಶನ ದೊರೆಯಲಿದೆ. ಬಂಧುಗಳು, ಸ್ನೇಹಿತರ ಮನೆಗೆ ದೇವತಾರಾಧನೆಗೆ ಆಹ್ವಾನ ಬರಲಿದೆ. ಮಹಿಳೆಯರು ಸ್ವಂತವಾಗಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಲ್ಲಿ ಸಾಲ ಬಾಧೆ ಕಾಡಲಿದೆ. ಗೃಹ ಬಳಕೆ ವಸ್ತು ಖರೀದಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಸ್ವಂತ ವಿಚಾರದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ನಿರ್ಧರಿಸಲಿದ್ದೀರಿ. ಕೆಲಸ ಆಗುವ ತನಕ ಒಂದು ರೀತಿ ಇದ್ದು, ಆ ನಂತರ ಜನರು ಬದಲಾಗುತ್ತಿದ್ದಾರೆ ಎಂದು ಬಲವಾಗಿ ನಿಮಗೆ ಅನಿಸುವುದಕ್ಕೆ ಶುರುವಾಗುತ್ತದೆ. ಒಂದೇ ಕಡೆ ಹಾಗೂ ಒಂದೇ ರೀತಿಯಲ್ಲಿ ಆಲೋಚನೆ ಮಾಡುತ್ತಿದ್ದ ನೀವು ಇದೀಗ ನಾಲ್ಕೂ ಕಡೆಯ ಸಾಧ್ಯತೆಗಳನ್ನು ಅಳೆದು- ತೂಗಿ ನೋಡುವುದಕ್ಕೆ ಆರಂಭಿಸುತ್ತೀರಿ. ಕೃಷಿಕರಿಗೆ ಅಂತ ಹೇಳುವುದಾದರೆ ಅಡಿಕೆ ಕೃಷಿಕರಿಗೆ ಮನೆಯಲ್ಲಿ ಸಂತೋಷವಾದ ವಾರ ಇದಾಗಿರಲಿದೆ. ಇನ್ನು ಕೃಷಿಯ ಜತೆಗೆ ಸ್ವಂತ ವ್ಯವಹಾರವನ್ನೂ ಮಾಡುವಂಥವರು ಹೊಸ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುವಿರಿ. ಇದಕ್ಕಾಗಿ ಹೊಸದಾಗಿ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲು ತೀರ್ಮಾನ ಮಾಡಲಿದ್ದೀರಿ. ಕೃಷಿ ಸಂಘ- ಸಂಸ್ಥೆಗಳ ಪ್ರಮುಖರ ಸಭೆ, ಚರ್ಚೆ ಸಂದರ್ಭದಲ್ಲಿ ನೇರವಾದ ಮಾತುಗಳಿಂದ ಇತರರ ಗಮನ ಸೆಳೆಯುತ್ತೀರಿ. ಪ್ರಮುಖವಾಗಿ ಮಾಡಿ ಮುಗಿಸಬೇಕಾದ ಕೆಲಸವನ್ನು ಈ ವಾರ ಮಾಡಲಿಕ್ಕಾಗದೆ ಸ್ವಲ್ಪ ಮಟ್ಟಿಗೆ ದೇಹಾಲಸ್ಯ ಇರುತ್ತದೆ. ಅದಕ್ಕಾಗಿ ವಿಶ್ರಾಂತಿ ಪಡೆಯಲಿದ್ದೀರಿ. ವೃತ್ತಿಪರರಿಗೆ ಎಲ್ಲ ಮುಗಿದೇ ಹೋಯಿತು ಎಂದು ಕೈ ಚೆಲ್ಲಿದ್ದ ವಿಷಯಗಳು ಈಗ ಜೀವ ಪಡೆದುಕೊಳ್ಳುತ್ತವೆ. ಹೊಸ ಭರವಸೆಗಳು ಹುಟ್ಟುತ್ತವೆ. ಮಧ್ಯವರ್ತಿಗಳ ನೆರವಿನಿಂದ ಕೆಲವು ಒಪ್ಪಂದ, ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಗಳು ಹೆಚ್ಚುತ್ತವೆ. ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪ್ರಯತ್ನಗಳನ್ನು ತೀವ್ರಗೊಳಿಸುತ್ತೀರಿ. ಹಿತೈಷಿಗಳ ನೆರವಿನಿಂದ ಹೂಡಿಕೆಯನ್ನು ಹೆಚ್ಚು ಮಾಡುವುದರ ಬಗ್ಗೆ ಆಲೋಚನೆ ಮಾಡಲಿದ್ದೀರಿ. ವಿದ್ಯಾರ್ಥಿಗಳ ಮೇಲೆ ಅಪವಾದ ಬರುವ ಸಾಧ್ಯತೆ ಇದೆ, ಸಂಬಂಧಿಗಳ ಮನೆಯೋ ಸ್ನೇಹಿತರೋ ಮನೆಗೋ ಹೋಗುವಂತಿದ್ದರೆ ಎಚ್ಚರಿಕೆ ಬೇಕು. ಅಷ್ಟೇ ಅಲ್ಲ, ಮನೆಯಲ್ಲೂ ಅನುಮಾನ ಪಡಬಹುದು. ಮಹಿಳೆಯರಿಗೆ ಕಣ್ಣು ಕೆಂಪಾಗುವುದು, ನೀರು ಸೋರುವುದು ಸೇರಿದಂತೆ ಕಣ್ಣಿಗೆ ಸಂಬಂಧಿಸಿದ ಒಂದಲ್ಲ ಒಂದು ಸಮಸ್ಯೆಯನ್ನು ಕಾಣಿಸಿಕೊಳ್ಳಲಿದೆ. ದೂರದ ಸಂಬಂಧಿಕರು ಕಾರ್ಯ ನಿಮಿತ್ತ ನಿಮ್ಮನ್ನು ಭೇಟಿ ಆಗುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಇತರರು ನಿಮ್ಮ ಬಗ್ಗೆ ಟೀಕೆ- ಆಕ್ಷೇಪ ವ್ಯಕ್ತಪಡಿಸಿದರೂ ಧೃತಗೆಡಬೇಡಿ. ಯಾವುದೇ ವಿಚಾರದಲ್ಲಿ ಮುಕ್ತ ಮನಸ್ಸಿನಿಂದ ಆಲೋಚನೆ ಮಾಡುವುದು ಮುಖ್ಯವಾಗುತ್ತದೆ. ಏಕೆಂದರೆ ನಿಮಗೆ ಎಷ್ಟೇ ಹತ್ತಿರದವರು ಹೇಳಿದರೂ ಹೇಳಿಕೆ ಮಾತುಗಳನ್ನು ಕೇಳಬೇಡಿ. ನಿಮ್ಮ ಮೂಲಕ ಇತರರು ತಮ್ಮ ಗುರಿ ಸಾಧನೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ನಿಮ್ಮ ಹೆಸರು, ವರ್ಚಸ್ಸು ದುರುಪಯೋಗ ಆಗದಂತೆ ನೋಡಿಕೊಳ್ಳಿ. ಮೇಲಧಿಕಾರಿಗಳು ತಮ್ಮ ಮನಸ್ಸಿನಲ್ಲಿರುವ ವಿಚಾರ ನಿಮಗೆ ಹೇಳುತ್ತಿಲ್ಲ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. ಮಾತಿನ ಮೇಲೆ ನಿಗಾ ಇರಬೇಕು. ಇಲ್ಲದಿದ್ದರೆ ಅನಗತ್ಯ ವಿವಾದ ಆಗಬಹುದು. ಕಾರಣವೇ ಇಲ್ಲದೆ ನಿಮ್ಮ ಮನಸ್ಸಿಗೆ ಕೆಲವು ಬಾರಿ ಬೇಸರ ಕಾಡಲಿದೆ. ದೊಡ್ಡ ಸಂಖ್ಯೆಯ ಜನರ ಮಧ್ಯೆ ಇರುವಾಗ ನಿಮಗೆ ಗೊತ್ತಿಲದ ವಿಚಾರದ ಬಗ್ಗೆ ಮಾತನಾಡದಿರಿ. ಕೃಷಿಕರಾಗಿದ್ದಲ್ಲಿ ಒಂದಲ್ಲಾ ಒಂದು ವಿಷಯಕ್ಕೆ ಸೋದರರು ಅಥವಾ ಸೋದರಿಯರ ಜತೆಗೆ ಮನಸ್ತಾಪ ಮಾಡಿಕೊಳ್ಳಲಿದ್ದೀರಿ. ಇತರರ ವೈಯಕ್ತಿಕ ಜವಾಬ್ದಾರಿಗಳನ್ನು ವಹಿಸಿಕೊಳ್ಳದಿರುವುದು ಉತ್ತಮ. ಹಾಗೊಂದು ವೇಳೆ ವಹಿಸಿಕೊಂಡಲ್ಲಿ ಕೆಲಸ ಮಾಡಿಯೂ ಮಾತು ಕೇಳಿಸಿಕೊಳ್ಳುವಂತಾಗುತ್ತದೆ. ಅದೆಷ್ಟೇ ಸಣ್ಣ ಪ್ರಮಾಣದ, ಸಮಯದ ಪ್ರಯಾಣವಾದರೂ ನೀವು ಯಾರನ್ನು ಭೇಟಿ ಆಗುವುದಕ್ಕೆ ತೆರಳುತ್ತಿದ್ದೀರೋ ಅವರ ಲಭ್ಯತೆಯನ್ನು ಖಾತ್ರಿಪಡಿಸಿಕೊಂಡು ಆ ನಂತರ ತೆರಳುವುದು ಉತ್ತಮ. ವೃತ್ತಿನಿರತರಾಗಿದ್ದಲ್ಲಿ ಈ ವಾರ ಕೆಲಸದ ಒತ್ತಡವೋ ಅಥವಾ ಏಕ ಕಾಲಕ್ಕೆ ಹಲವು ಜವಾಬ್ದಾರಿಗಳು ನಿರ್ವಹಿಸ ಬೇಕಾಗುವುದರಿಂದ ಕೆಲವು ಮುಖ್ಯವಾದ ಅಂಶಗಳನ್ನು ಮರೆತುಬಿಡುವ ಸಾಧ್ಯತೆ ಇದೆ. ಆದ್ದರಿಂದ ಆದ್ಯತೆಯ ಮೇಲೆ ಯಾವ ಕೆಲಸವನ್ನು ಮೊದಲಿಗೆ ಹಾಗೂ ಆ ನಂತರದಲ್ಲಿ ಮಾಡುವುದು ಯಾವುದು ಎಂಬ ಬಗ್ಗೆ ಪಟ್ಟಿಯೊಂದನ್ನು ಮಾಡಿಟ್ಟುಕೊಂಡು ಬಿಡಿ. ವಿದ್ಯಾರ್ಥಿಗಳಾಗಿದ್ದಲ್ಲಿ ಶೈಕ್ಷಣಿಕ ಕೋರ್ಸ್ ಗೆ ಸಂಬಂಧಿಸಿದ ಕೆಲವು ಕಾಗದ ಪತ್ರಗಳು ಅಥವಾ ಮಾರ್ಕ್ಸ್ ಕಾರ್ಡ್ ಗಳು ಕಳೆದುಹೋಗಿ, ಆತಂಕದ ಕ್ಷಣಗಳನ್ನು ಎದುರಿಸಲಿದ್ದೀರಿ. ಇತರರಿಗೆ ಯಾವುದಾದರೂ ಕೆಲಸ ಒಪ್ಪಿಸುವ ಮೊದಲಿಗೆ ಅವರಿಂದ ಅದನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದಕ್ಕೆ ಸಾಧ್ಯವಿದೆಯೇ ಎಂಬುದನ್ನು ಕೇಳಿ, ತಿಳಿದುಕೊಳ್ಳಿ. ಮಹಿಳೆಯರು ಕೈಯಲ್ಲಿ ಹಣವಿಲ್ಲದ ಪಕ್ಷದಲ್ಲಿ ಮುಂದೆ ಬರುವ ಆದಾಯವೋ ಅಥವಾ ಸಾಲವನ್ನು ನೆಚ್ಚಿಕೊಂಡು ಬೇರೆಯವರಿಗೆ ಮಾತು ನೀಡುವುದಕ್ಕೆ ಹೋಗದಿರಿ. ಒಂದು ವೇಳೆ ಮಾತು ಕೊಟ್ಟಲ್ಲಿ ಅವಮಾನ, ಒತ್ತಡಕ್ಕೆ ಒಳಗಾಗುತ್ತೀರಿ.

ಲೇಖನ- ಎನ್‌.ಕೆ.ಸ್ವಾತಿ