Weekly Numerology 23 – 29 July: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 23ರಿಂದ 29ರ ತನಕ ವಾರಭವಿಷ್ಯ
ಸಾಪ್ತಾಹಿಕ ಸಂಖ್ಯಾಶಾಸ್ತ್ರ ಮುನ್ಸೂಚನೆಗಳು: ಬೆಳಗ್ಗೆ ಎದ್ದ ತಕ್ಷಣ ನಮ್ಮ ದಿನ ಹೇಗಿದೆಯಪ್ಪಾ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ರಾಶಿಭವಿಷ್ಯದ ಜೊತೆಗೆ ಜನ್ಮಸಂಖ್ಯೆಗೆ ಅನುಗುಣವಾಗಿ ದಿನಭವಿಷ್ಯ ನೋಡುತ್ತಾರೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 23ರಿಂದ 29ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ತುಂಬ ನಿರೀಕ್ಷೆ ಇಟ್ಟುಕೊಂಡಿದ್ದಂಥ ಪ್ರಾಜೆಕ್ಟ್ ಕೈ ತಪ್ಪಿ ಹೋಗುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಹೇಗಾದರೂ ಅದನ್ನು ಪಡೆದುಕೊಳ್ಳಲೇಬೇಕು ಎಂಬ ಪ್ರಯತ್ನದಲ್ಲಿ ಸಣ್ಣ- ಪುಟ್ಟ ಸುಳ್ಳನಾದರೂ ಹೇಳಿಬಿಡೋಣ ಎಂದುಕೊಳ್ಳದಿರಿ. ಈ ರೀತಿಯಾಗಿ ಸ್ನೇಹಿತರು- ಸಂಬಂಧಿಕರು ಸಲಹೆ ನೀಡಿದರೂ ಹಾಗೆ ಮಾಡದಿರಿ. ಇನ್ನು ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರಿಗೆ ಸಂಬಂಧಿಕರಿಂದ ಅವಮಾನ ಆಗಬಹುದು. ಆದ್ದರಿಂದ ಸಮಾರಂಭಗಳಿಗೋ ಕಾರ್ಯಕ್ರಮಗಳಿಗೋ ಭಾಗವಹಿಸುತ್ತಿದ್ದೀರಿ ಎಂದಾದಲ್ಲಿ ಆ ಸ್ಥಳದಲ್ಲಿ ನೀವಾಡುವ ಮಾತಿನ ಮೇಲೆ ನಿಗಾ ಇರಿಸಿಕೊಳ್ಳಿ. ನಿಮ್ಮಿಂದ ತಪ್ಪು ಮಾತುಗಳನ್ನು ಆಡಿಸುವುದಕ್ಕೆ ಅಥವಾ ಬೇಕೆಂತಲೇ ಕೆರಳಿಸುವುದಕ್ಕೆ ಕೆಲವರು ಪ್ರಯತ್ನಿಸುತ್ತಾರೆ. ಕೃಷಿಕರಾದವರಿಗೆ ಮಕ್ಕಳ ಸಲುವಾಗಿ ಹಣವನ್ನು ಹೊಂದಿಸಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಹೆಣ್ಣುಮಕ್ಕಳಿದ್ದು, ಅವರಿಗೆ ಮದುವೆ ಆಗಿದ್ದಲ್ಲಿ ಅಂಥವರ ಸಂಸಾರದಲ್ಲಿ ಭಿನ್ನಾಭಿಪ್ರಾಯ ತೀವ್ರಗೊಳ್ಳುವ ಸಾಧ್ಯತೆಗಳಿವೆ. ಅದನ್ನು ಸರಿ ಮಾಡುವುದಕ್ಕಾಗಿ ಹೆಚ್ಚು ಪ್ರಯತ್ನ ಹಾಕಬೇಕಾಗುತ್ತದೆ. ಮುಖ್ಯವಾಗಿ ಪ್ರಭಾವಿಗಳ ಸಹಾಯವನ್ನು ಪಡೆದುಕೊಳ್ಳಬೇಕಾಗುತ್ತದೆ. ಇನ್ನು ಭೂಮಿ ವ್ಯಾಜ್ಯಗಳು ಕೋರ್ಟ್- ಪೊಲೀಸ್ ಠಾಣೆ ಮೆಟ್ಟಿಲೇರುವಂಥ ಸಾಧ್ಯತೆಗಳಿವೆ. ವೃತ್ತಿಪರರು ವೃತ್ತಿ ವಿಸ್ತರಣೆಗಾಗಿ ಆಲೋಚನೆ ಮಾಡಲಿದ್ದೀರಿ. ಕೆಲಸಕ್ಕಾಗಿ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ. ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಅದು ದೊರೆಯುವ ಭರವಸೆ ಸಿಗಲಿದೆ. ವಿದ್ಯಾರ್ಥಿಗಳು ಸ್ನೇಹಿತರ ಜತೆಗೆ ಪ್ರವಾಸಕ್ಕೆ ತೆರಳುವಂಥ ಯೋಗ ಇದೆ. ಹಣ ಖರ್ಚು ಮಾಡುವ ವಿಚಾರದಲ್ಲಿ ನಿಯಂತ್ರಣ ಮುಖ್ಯವಾಗುತ್ತದೆ. ನಿಮ್ಮ ಧೋರಣೆ ಬಗ್ಗೆ ಕುಟುಂಬ ಸದಸ್ಯರಿಂದ ಆಕ್ಷೇಪ ಕೇಳಿಬರಲಿದೆ. ಯುವತಿಯರಿಗೆ ತಮ್ಮ ಮನಸ್ಸಿಗೆ ಮೆಚ್ಚುವಂಥ ಸಂಗಾತಿ ದೊರೆಯುವ ಯೋಗ ಇದ್ದು, ಪ್ರೀತಿ- ಪ್ರೇಮದಲ್ಲಿ ಬೀಳುವಂಥ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಕುಟುಂಬ ಸದಸ್ಯರ ಜತೆಗೆ ಪ್ರವಾಸ ತೆರಳುವಂಥ ಯೋಗ ಇದೆ. ದಂಪತಿ ಮಧ್ಯೆ ಸಣ್ಣ- ಪುಟ್ಟ ಮನಸ್ತಾಪಗಳು ಇದ್ದಲ್ಲಿ ಬಗೆಹರಿಸಿಕೊಳ್ಳುವುದಕ್ಕೆ ಉತ್ತಮ ವೇದಿಕೆ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಮನೆಯನ್ನು ಬದಲಿಸಿ, ಬೇರೆಡೆ ತೆರಳುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಈ ಓಡಾಟದಲ್ಲಿ ಹೆಚ್ಚಿನ ಸಮಯ ಹೋಗಲಿದೆ. ಇನ್ನು ಮನೆಗೆ ದೊಡ್ಡ ಅಳತೆಯ ಟೀವಿ, ಹೋಮ್ ಥಿಯೇಟರ್ ಇಂಥದ್ದನ್ನು ಕೊಳ್ಳುವುದಕ್ಕೆ ಹಣ ಖರ್ಚು ಮಾಡಲಿದ್ದೀರಿ. ಒಟ್ಟಾರೆಯಾಗಿ ನೋಡಿದಾಗ ಕುಟುಂಬ- ಮನೆಯ ಸಲುವಾಗಿಯೇ ಹೆಚ್ಚು ಖರ್ಚು ಮಾಡುವಂಥ ಯೋಗ ಕಂಡುಬರುತ್ತಿದೆ. ಮಕ್ಕಳ ಶಿಕ್ಷಣದ ಸಲುವಾಗಿ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಸಹ ಆರಂಭಿಸುವುದಕ್ಕೆ ಮುಂದಾಗಲಿದ್ದೀರಿ. ಸಾಕುಪ್ರಾಣಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಿ. ಉದ್ಯೋಗ ಸ್ಥಳದಲ್ಲಿ ಇತರರು ಆಗುವುದಿಲ್ಲ ಎಂದು ಕೈ ಬಿಟ್ಟ ಕೆಲಸದ ಹೊಣೆಯನ್ನು ನಿಮಗೆ ವಹಿಸುವ ಸಾಧ್ಯತೆ ಹೆಚ್ಚಿದೆ. ಕೃಷಿಕರು ಮನೆಗೆ ರಾಸುಗಳನ್ನು, ಯಂತ್ರೋಪಕರಣಗಳನ್ನು ಅಥವಾ ನಿಮ್ಮ ವೃತ್ತಿಗೆ ಅಗತ್ಯವಾದ ಕೆಲವು ವಿಮೆಗಳನ್ನು ಖರೀದಿ ಮಾಡಲಿದ್ದೀರಿ. ಕುಟುಂಬದ ವಿಚಾರದಲ್ಲಿ ನೀವು ತೆಗೆದುಕೊಂಡಂಥ ಸಮಯೋಚಿತ ನಿರ್ಧಾರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿವೆ. ಚಾರ್ಟರ್ಡ್ ಅಕೌಂಟೆಂಟ್, ವಕೀಲರು ಇಂಥ ವೃತ್ತಿಯಲ್ಲಿ ಇರುವವರಿಗೆ ಕ್ಲೈಂಟ್ ಗಳ ಜತೆಗೆ ಮನಸ್ತಾಪ ಏರ್ಪಡುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ವಿಚಾರವನ್ನು ಮೇಲ್ ಮಾಡುವುದೋ ಅಥವಾ ದಾಖಲೆ ಸಹಿತವಾಗಿ ಅವರಿಗೆ ತಲುಪಿಸುವುದಕ್ಕೆ ಪ್ರಯತ್ನ ಮಾಡಿ. ವಿದ್ಯಾರ್ಥಿಗಳು ಈಜು, ಅಥ್ಲೆಟಿಕ್ಸ್, ಜಿಮ್ ಇಂಥದ್ದಕ್ಕೆ ಸೇರ್ಪಡೆ ಆಗುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಒಟ್ಟಿನಲ್ಲಿ ಚಟುವಟಿಕೆಯಿಂದ ಇರುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಪ್ರೀತಿ- ಪ್ರೇಮದಲ್ಲಿ ಇರುವ ಯುವತಿಯರ ಮನೆಯಲ್ಲಿ ಈ ವಿಚಾರ ತಿಳಿಯುವ ಸಾಧ್ಯತೆ ಹೆಚ್ಚಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಚೀಟಿ ವ್ಯವಹಾರ ನಡೆಸುತ್ತಿರುವವರಿಗೆ ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ಅಥವಾ ನಿಮ್ಮದೇ ಅತಿಯಾದ ಆತ್ಮವಿಶ್ವಾಸದ ಕಾರಣಕ್ಕೆ ಕೆಲವು ಎಡವಟ್ಟುಗಳನ್ನು ಮಾಡಿಕೊಳ್ಳಲಿದ್ದೀರಿ. ಯಾವುದೇ ನಿರ್ಧಾರವನ್ನು ಆತುರವಾಗಿ ಮಾಡದಿರಿ. ಅತಿಯಾದ ಲಾಭ ಅಥವಾ ಆದಾಯದ ಆಸೆಗೆ ಬಿದ್ದು, ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುವಂತಾಗಲಿದೆ. ಯಾರು ಉದ್ಯೋಗದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದೀರಿ, ಅಂಥವರು ನಿಮ್ಮ ಕೈ ಕೆಳಗೆ ಕೆಲಸ ಮಾಡುವವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ನಿಮ್ಮ ಜತೆಗೆ ಮಾತನಾಡಬೇಕು ಎಂದು ಕೇಳಿಕೊಂಡರೆ ಅವರಿಗೆ ಸಮಯವನ್ನು ಕೊಡಿ. ಇನ್ನು ನಿಮ್ಮ ವೈಯಕ್ತಿಕ ಕೆಲಸಗಳು ಎಷ್ಟೇ ಇರಲಿ, ಏನೇ ಇರಲಿ ಉದ್ಯೋಗಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ಮುಂದಕ್ಕೆ ಹಾಕದಿರಿ. ಒಂದು ವೇಳೆ ಹಾಗೆ ಮಾಡಿದರೆ ಇದಕ್ಕೆ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ,. ಕೃಷಿಗೆ ಸಂಬಂಧಿಸಿದ ವೃತ್ತಿಯಲ್ಲಿ ಇರುವವರಿಗೆ ಆದಾಯದ ಹರಿವು ಹೆಚ್ಚಾಗಲಿದೆ. ಒಂದಕ್ಕಿಂತ ಹೆಚ್ಚಿನ ಮೂಲಗಳು ಗೋಚರಿಸುತ್ತವೆ. ಕೆಲವು ಶುಭ ಕಾರ್ಯಗಳು ಅಥವಾ ಸಮಾರಂಭಗಳ ಕಾರಣಕ್ಕಾಗಿ ದೂರ ಪ್ರಯಾಣ ಮಾಡಬೇಕಾಗಬಹುದು. ಒಬ್ಬೊಬ್ಬರೇ ಪ್ರಯಾಣ ಮಾಡುತ್ತಿದ್ದೀರಿ ಅಂತಾದಲ್ಲಿ ಬೆಲೆಬಾಳುವ ವಸ್ತುಗಳ ಕಡೆಗೆ ಜಾಸ್ತಿ ನಿಗಾ ಮಾಡಿ, ಅದರಲ್ಲೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದಾದರೆ ಮತ್ತೂ ಎಚ್ಚರ. ವೃತ್ತಿ ನಿರತರಿಗೆ ಹೊಸ ಹೊಸ ಆಲೋಚನೆಗಳು, ಕೆಲಸಗಳು ದೊರೆಯಲಿವೆ. ಇದರಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಕೆಲವು ವಸ್ತುಗಳನ್ನು ಖರೀದಿಸುವಂಥ ಯೋಗ ಇದೆ. ಇದು ಉಡುಗೊರೆ ರೂಪದಲ್ಲಿಯಾದರೂ ದೊರೆಯಬಹುದು. ಒಟ್ಟಾರೆ ಇದರಿಂದ ಸಂತೋಷ ಪಡುತ್ತೀರಿ. ಮಹಿಳೆಯರು ಸಾಮಾಜಿಕವಾಗಿ ಮನ್ನಣೆ ಹಾಗೂ ಸ್ಥಾನ- ಮಾನಗಳನ್ನು ಪಡೆಯುವ ಸಾಧ್ಯತೆ ಇದೆ. ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಡ್ತಿ ದೊರೆಯಬಹುದು.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ವಿಮಾ ಏಜೆಂಟರು, ಸೆಕೆಂಡ್ ಹ್ಯಾಂಡ್ ವಾಹನಗಳ ಡೀಲರ್ ಗಳು, ಮನೆ- ಸೈಟುಗಳ ದಲ್ಲಾಳಿಗಳಿಗೆ ಆದಾಯ ಹೆಚ್ಚಾಗಲಿದೆ. ಈ ಹಿಂದೆ ನೀವು ಮಾಡಿದ ಸಹಾಯ, ನೀಡಿದ ಸಲಹೆ- ಸೂಚನೆಗಳಿಂದ ಲಾಭವಾದಂಥವರು ಈಗ ಮತ್ತೆ ನಿಮ್ಮನ್ನು ಹುಡುಕಿಕೊಂಡು ಬಂದು, ಕೆಲವು ಕೆಲಸಗಳನ್ನು ನೀಡಲಿದ್ದೀರಿ. ಪರ್ಫಾರ್ಮೆನ್ಸ್ ಅಪ್ರೈಸಲ್ ನಿರೀಕ್ಷೆಯಲ್ಲಿ ಇರುವವರಿಗೆ ನೀವು ಅಂದುಕೊಂಡಂತೆಯೇ ಬೆಳವಣಿಗೆಗಳು ಆಗಲಿವೆ. ಎಲೆಕ್ಟ್ರಿಕಲ್ ವಾಹನ ಖರೀದಿ ಮಾಡಬೇಕು ಎಂಬ ಕಾರಣಕ್ಕೆ ಹಣಕಾಸಿಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಅದು ಒದಗಿ ಬರುವ ಸಾಧ್ಯತೆ ಇದೆ. ನೀವು ತೆಗೆದುಕೊಂಡ ಕೆಲವು ನಿರ್ಧಾರಗಳು ತಕ್ಷಣವೇ ಫಲ ನೀಡುವುದಕ್ಕೆ ಆರಂಭಿಸಲಿವೆ. ಸೋದರಮಾವ, ತಾಯಿಯ ತಂದೆ ಇವರ ಆರೋಗ್ಯದ ಬಗ್ಗೆ ಮಾತ್ರ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಸಣ್ಣ- ಪುಟ್ಟ ಅನಾರೋಗ್ಯ ಎಂದು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ವಿಜ್ಞಾನಿಗಳಿಗೆ ಹೊಸ ಪ್ರಾಜೆಕ್ಟ್ ವೊಂದರ ಸಲುವಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ. ಇದರಿಂದ ಹೆಸರು, ಸ್ಥಾನ- ಮಾನ ದೊರೆಯಲಿದೆ. ಕೃಷಿ ವೃತ್ತಿಯಲ್ಲಿ ಇರುವವರು ಹೋಮ್ ಸ್ಟೇಯಂಥದ್ದನ್ನು ಆರಂಭಿಸುವ ಬಗ್ಗೆ ಚಿಂತನೆ ಮಾಡಲಿದ್ದೀರಿ. ಇದಕ್ಕಾಗಿ ಬೇಕಾದ ಸಿದ್ಧತೆಗಳನ್ನು ಆರಂಭಿಸಿದ್ದೀರಿ ಎಂದಾದರೆ ಅದು ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ವೃತ್ತಿನಿರತರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಚಿಂತೆ ಕಾಡಲಿದೆ. ಅಂದುಕೊಂಡಂಥ ಅಥವಾ ಪ್ರಯತ್ನ ಮಾಡಿದ ಸಂಸ್ಥೆಯಲ್ಲಿ ಪ್ರವೇಶ ದೊರಕದೆ ಮನಸ್ಸಿಗೆ ಬೇಸರ ಕೂಡ ಆಗಬಹುದು. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿದ್ದಲ್ಲಿ ಅದು ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಮಹಿಳೆಯರಿಗೆ ತವರು ಮನೆಯಲ್ಲಿ ನಡೆಯುವ ಕೆಲವು ಬೆಳವಣಿಗೆಗಳು, ವಿದ್ಯಮಾನಗಳು ಆತಂಕಕ್ಕೆ ಕಾರಣ ಆಗಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಇತರರಿಗೆ ಸಹಾಯ ಮಾಡುವುದು ತಪ್ಪಲ್ಲ. ಆದರೆ ಅವರು ಸಂಪೂರ್ಣವಾಗಿ ನಿಮ್ಮ ಮೇಲೆ ಆನಿಕೊಂಡು ಬಿಟ್ಟರೆ ಬಹಳ ಕಷ್ಟ ಆಗುತ್ತದೆ. ಈ ವಾರ ಆಗುವುದು ಹಾಗೆ. ಬೇರೆ ಯಾರದೋ ಖರ್ಚು ನಿಮ್ಮ ತಲೆ ಮೇಲೆ ಬೀಳಲಿದೆ. ಇದಕ್ಕೆ ತಕ್ಕ ಹಾಗೆ ಊರವರ ಮದುವೆಗೆಲ್ಲ ನಂದೇ ಪೌರೋಹಿತ್ಯ ಎಂದು ಎಲ್ಲ ವಿಚಾರಗಳಿಗೆ ಮೂಗು ತೂರಿಸದಿರಿ. ಲೋಕಜ್ಞಾನದಿಂದ ಮುಂದುವರಿದಲ್ಲಿ – ಸ್ವಲ್ಪ ಮಟ್ಟಿಗೆ ಎಚ್ಚರಿಕೆ ವಹಿಸಿದರೆ ಉತ್ತಮ. ಇನ್ನು ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ವೃತ್ತಿಯಲ್ಲಿ ಇರುವವರಿಗೆ ರಾಜಕೀಯ ವೈಷಮ್ಯದಿಂದಾಗಿ ಸಿಗಬೇಕಾದ ಸವಲತ್ತುಗಳು ದೊರೆಯದಿರುವ ಸಾಧ್ಯತೆ ಇದೆ. ಶಿವನ ಆರಾಧನೆ ಮಾಡುವ ಮೂಲಕವಾಗಿ ಈ ಸಮಸ್ಯೆ ನಿವಾರಿಸಿಕೊಳ್ಳಬಹುದು. ವೃತ್ತಿ ನಿರತರಿಗೆ ತೆರಿಗೆ ಪಾವತಿ, ಇತರ ಶುಲ್ಕಗಳು, ಲೈಸೆನ್ಸ್ ಇತ್ಯಾದಿ ವಿಚಾರಗಳಲ್ಲಿ ಸಮಸ್ಯೆ ಎದುರಾಗಬಹುದು. ವಿದ್ಯಾರ್ಥಿಗಳಿಗೆ ಓದಿನ ವೇಗ ಹೆಚ್ಚಿಸಿಕೊಳ್ಳುವ ಅಭ್ಯಾಸವನ್ನು ಮಾಡಿಕೊಳ್ಳುವ ಸಮಯ ಇದು. ಕೆಲವು ತಂತ್ರಗಳನ್ನು ಅಳವಡಿಸಿಕೊಳ್ಳಿ. ಧ್ಯಾನ, ಯೋಗದಂಥ ಅಭ್ಯಾಸ ನಿಮಗೆ ಸಹಾಯ ಮಾಡಲಿದೆ. ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಸಣ್ಣದಾಗಿಯಾದರೂ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ಕೆಲಸ ಮಾಡಿ. ಧನ್ವಂತರಿ ಆರಾಧನೆಯನ್ನು ಮಾಡಿದರೆ ಉತ್ತಮ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನೀವು ಇಷ್ಟವಿರುತ್ತದೋ ಇಲ್ಲವೋ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಈ ಹಿಂದೆ ಅಭಿಪ್ರಾಯ ಭೇದಗಳು, ಜಗಳ- ಕಲಹ ಏನೇ ಆಗಿದ್ದರೂ ಅಂಥವರ ಜತೆಗೂಡಿಯೇ ಕೆಲಸ ಮಾಡುವಂಥ ಅನಿವಾರ್ಯ ಸೃಷ್ಟಿ ಆಗುತ್ತದೆ. ದೈಹಿಕ ದೃಢತೆ ಕಾಪಾಡಿಕೊಳ್ಳುವ ಸಲುವಾಗಿ ಜಿಮ್, ಯೋಗ ಅಥವಾ ಇಂಥ ಯಾವುದಾದರೂ ಒಂದರಲ್ಲಿ ತೊಡಗಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಗುರುವಿನ ಸ್ಮರಣೆ, ಆರಾಧನೆಯಿಂದ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಕೃಷಿಕರಿಗೆ ಡೇರಿ ವ್ಯವಹಾರ ಕೈ ಹಿಡಿಯಲಿದೆ. ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಉದ್ದೇಶದಿಂದಲೇ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದೀರಿ. ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಪ್ರತಿಷ್ಠಿತ ಕಂಪನಿಯೊಂದರ ಜತೆಗೆ ವ್ಯವಹಾರದ ಮಾತುಕತೆಗಳು ನಡೆಯುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಚೌಕಾಶಿಗೆ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಸಂಗಾತಿಯ ಮಾತನ್ನು ಕೇಳಿಸಿಕೊಳ್ಳಿ. ಅವರು ನೀಡುವ ಸಲಹೆಗಳನ್ನು ಪಾಲಿಸುವ ಬಗ್ಗೆ ಗಂಭೀರವಾಗಿ ಆಲೋಚಿಸಿ. ವೃತ್ತಿ ನಿರತರಾಗಿ ವಿದೇಶದಲ್ಲಿ ಇರುವವರಿಗೆ ಒಂಟಿತನ ವಿಪರೀತ ಕಾಡಲಿದೆ. ಕೂಡಿಟ್ಟ ಹಣ ಅಚಾನಕ್ ಆಗಿ ಅಥವಾ ನೀವಾಗಿಯೇ ಖರ್ಚು ಮಾಡಿಬಿಡುವಂಥ ಸಾಧ್ಯತೆ ಇದೆ. ಮನಸ್ಸಿನ ಮೇಲೆ ಹತೋಟಿ ಸಾಧಿಸುವುದಕ್ಕೆ ಪ್ರಯತ್ನಿಸಿ. ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಅಂತಾದರೆ ಖರ್ಚಿನ ವಿಚಾರದಲ್ಲಿ ಇನ್ನೂ ಹೆಚ್ಚು ಜಾಗ್ರತೆಯಿಂದ ಇರುವುದು ಅತ್ಯವಶ್ಯ. ವಿದ್ಯಾರ್ಥಿಗಳು ಯಾವುದೇ ಮುಖ್ಯ ದಿನ, ಕೆಲಸ ಅಂತ ಇರುವುದಾದರೆ ಆಗ ಹಳದಿ ದಿರಿಸನ್ನು ಧರಿಸುವುದು ಉತ್ತಮ. ಏಕಾಏಕಿ ದೊಡ್ಡ ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳಬೇಡಿ. ಮಹಿಳೆಯರಿಗೆ ಸಂಘ- ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳು ದೊರೆಯುವ ಅವಕಾಶಗಳು ಹೆಚ್ಚಿವೆ. ಕುಟುಂಬ ಸದಸ್ಯರ ಬೆಂಬಲ ಕೂಡ ನಿಮ್ಮ ಪಾಲಿಗೆ ದೊರೆಯಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮ್ಮ ಸ್ವಂತ ವಿಚಾರಗಳನ್ನು ಯಾರ ಜತೆಗೆ ಹಂಚಿಕೊಳ್ಳುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಆಪ್ತರು ಎನಿಸಿಕೊಂಡವರ ಬಳಿ ನಿಮ್ಮ ಖಾಸಗಿ ಅಥವಾ ಸ್ವಂತ ವಿಚಾರಗಳು ಎಷ್ಟರ ಮಟ್ಟಿಗೆ ರಹಸ್ಯವಾಗಿ ಉಳಿದೀತು ಎಂಬುದರ ಬಗ್ಗೆಯೂ ನಿಗಾ ಇರಲಿ. ಕೆಲವು ಅನಾರೋಗ್ಯ ಸಮಸ್ಯೆಗಾಗಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಸಾಕು ಪ್ರಾಣಿಗಳ ಜತೆಗೆ ಇರುವಾಗ ಮಾಮೂಲಿಗಿಂತ ಸ್ವಲ್ಪ ಜಾಸ್ತಿಯೇ ಎಚ್ಚರಿಕೆಯಿಂದ ಇರುವುದು ಉತ್ತಮ. ಇಲ್ಲದಿದ್ದಲ್ಲಿ ಅವುಗಳಿಂದ ಗಾಯ ಆಗಬಹುದು ಅಥವಾ ಕಡಿತವಾಗಬಹುದು. ಕೃಷಿಕರಿಗೆ ಮನೆಯಲ್ಲಿ ಆಸ್ತಿ ಹಂಚಿಕೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಲಿದೆ. ಮಕ್ಕಳ ಶಿಕ್ಷಣದ ಸಲುವಾಗಿ ರಾಸುಗಳನ್ನೋ ಅಥವಾ ಸೈಟು- ಸ್ವಲ್ಪ ಜಮೀನನ್ನು ಮಾರಾಟ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವವರಿಗೆ ಹೊಸದಾಗಿ ಹುದ್ದೆ ಅಥವಾ ಜವಾಬ್ದಾರಿ ನಿಮ್ಮ ಪಾಲಿಗೆ ಬರಲಿವೆ. ಇದರಿಂದ ಭವಿಷ್ಯದಲ್ಲಿ ಅನುಕೂಲ ಆಗಲಿದೆ. ಪ್ರಭಾವಿಗಳ ಸಂಫರ್ಕಕ್ಕೆ ಬರಲಿದ್ದು, ಅವರ ಮಾತಿ- ಶಿಫಾರಸಿನ ಮೂಲಕಚಾಗಿ ಕೆಲವು ಕೆಲಸಗಳು ಸರಾಗವಾಗಿ ಮುಗಿಯಲಿವೆ. ವೃತ್ತಿನಿರತರು ನೀವು ಕೈಗೆತ್ತಿಕೊಂಡ ಕೆಲಸ ಪೂರ್ತಿ ಆಗುವ ತನಕ ಅದರ ಬಗ್ಗೆ ಹೇಳಿಕೊಳ್ಳಬೇಡಿ. ಹಾಗೊಂದು ವೇಳೆ ಹೇಳಿಕೊಂಡಲ್ಲಿ ನಿಮ್ಮ ಅತ್ಯುತ್ಸಾಹಕ್ಕೆ ತಣ್ಣೀರು ಎರಚುವಂಥ ಬೆಳವಣಿಗೆಗಳು ಆಗಲಿವೆ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಮುಗಿಸುವ ಕಡೆಗೆ ಲಕ್ಷ್ಯ ವಹಿಸಬೇಕು. ನೀವು ಅದೆಷ್ಟು ಡಿಪ್ಲೊಮ್ಯಾಟಿಕ್ ಆಗಿ ವ್ಯವಹಾರಗಳನ್ನು ಮಾಡಿ ಮುಗಿಸಲಿದ್ದೀರಿ ಎಂಬ ಕಡೆಗೆ ಹೆಚ್ಚು ಶ್ರಮ ವಹಿಸಿ. ಮಹಿಳೆಯರು ಉದ್ಯೋಗಸ್ಥರಾಗಿದ್ದಲ್ಲಿ ಡೆಡ್ ಲೈನ್ ಒಳಗಾಗಿ ಕೆಲಸವನ್ನು ಮುಗಿಸಬೇಕಾದ ಒತ್ತಡದ ಸನ್ನಿವೇಶ ಸೃಷ್ಟಿ ಆಗಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಉದ್ಯೋಗ ಸ್ಥಳದಲ್ಲಿ ಭಾರೀ ಬದಲಾವಣೆಗಳನ್ನು ಕಾಣಬೇಕಾಗುತ್ತದೆ. ಮಹತ್ತರವಾದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ನೀವು ಸಿದ್ಧವಾಗಬೇಕಾಗುತ್ತದೆ. ವಾಹನಗಳ ದುರಸ್ತಿ, ಸರ್ವೀಸ್ ಗಾಗಿ ಹಣ ಖರ್ಚು ಮಾಡಲಿದ್ದೀರಿ. ನೇರವಂತಿಕೆಯಿಂದ ಮಾಡಿದಲ್ಲಿ ವ್ಯವಹಾರಗಳು ಕೈ ಹಿಡಿಯಲಿವೆ. ದೂರದ ಊರಿನಲ್ಲಿ ಇರುವ ಸಂಬಂಧಿಕರು ತುರ್ತಾಗಿ ಹಣದ ಅಗತ್ಯವಿದೆ ಎಂದು ಕೇಳಿಕೊಂಡು ಬರಬಹುದು. ಸಣ್ಣ ಮಟ್ಟದ ವ್ಯಾಜ್ಯವೋ ಅಥವಾ ಮನಸ್ತಾಪವೋ ಇದು ಇಲ್ಲಿಗೇ ನಿಲ್ಲುವುದಿಲ್ಲ ಎಂದು ಬಲವಾಗಿ ಅನಿಸುತ್ತದೆ. ಆದರೆ ನೀವಾಗಿಯೇ ಇದನ್ನು ಮುಂದುವರಿಸಿಕೊಂಡು ಹೋಗದಿರುವುದು ಕ್ಷೇಮ. ನಿಮಗಿಂತ ಸಣ್ಣ ವಯಸ್ಸಿನವರ ಜತೆಗೆ ವ್ಯವಹರಿಸುವಾಗ ಬಳಸುವ ಪದಗಳ ಬಗ್ಗೆ ನಿಗಾ ಇರಲಿ. ಇಲ್ಲದಿದ್ದರೆ ಅವಮಾನದ ಪಾಲಾಗುತ್ತೀರಿ. ಕೃಷಿಕರಿಗೆ ಅಂದುಕೊಳ್ಳದ ರೀತಿಯಲ್ಲಿ ಆದಾಯಕ್ಕೆ ದಾರಿ ಕಾಣಿಸಿಕೊಳ್ಳುತ್ತದೆ. ಕೆಲಸದ ಒತ್ತಡ ಅಂತಲೋ ಅಥವಾ ಆಸಕ್ತಿ ಕಳೆದುಕೊಂಡಿರಿ ಎಂಬ ಕಾರಣಕ್ಕೆ ಮುಖ್ಯ ಸಂಗತಿ ಅಥವಾ ಜವಾಬ್ದಾರಿಗಳನ್ನು ಮುಂದಕ್ಕೆ ಹಾಕಬೇಡಿ. ವೃತ್ತಿನಿರತರಿಗೆ ಸ್ಪರ್ಧೆ ಹೆಚ್ಚಾಗಲಿದೆ. ಈಗ ಮಾಡುತ್ತಿರುವುದರ ಜತೆಗೆ ಹೊಸ ವ್ಯವಹಾರ ಕೂಡ ಶುರು ಮಾಡಬೇಕು ಎಂದು ಆಲೋಚಿಸಲಿದ್ದೀರಿ. ಕಾರು ಅಥವಾ ಎಲೆಕ್ಟ್ರಿಕಲ್ ಸ್ಕೂಟರ್ ಖರೀದಿ ಮಾಡುವುದಕ್ಕೆ ಮಾಹಿತಿ ಕಲೆ ಹಾಕಲಿದ್ದೀರಿ ಮತ್ತು ನಿಮ್ಮಲ್ಲಿ ಕೆಲವರು ಅಡ್ವಾನ್ಸ್ ನೀಡುವ ಸಾಧ್ಯತೆ ಕೂಡ ಇದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಮಿಂಚಲಿದ್ದು, ಕೆಲವು ವಿಭಾಗಕ್ಕೆ ನಿಮ್ಮನ್ನು ನಾಯಕ/ನಾಯಕಿ ಮಾಡುವಂಥ ಅವಕಾಶಗಳಿವೆ. ಆ ಮೂಲಕವಾಗಿ ನೀವು ಜನಪ್ರಿಯರಾಗಲಿದ್ದೀರಿ. ಮಹಿಳೆಯರಿಗೆ ತವರು ಮನೆಯಲ್ಲಿನ ಕಾರ್ಯಕ್ರಮಗಳಿಗೆ ಆಹ್ವಾನ ಬರಲಿದೆ. ತಂದೆ ಅಥವಾ ತಂದೆ ಸಮಾನರಾದವರು ಹಣಕಾಸನ್ನು ಪ್ರೀತಿಪೂರ್ವಕವಾಗಿ ನೀಡಲಿದ್ದಾರೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಅನಗತ್ಯವಾಗಿ ಸಮಯ ಕಳೆದುಹೋಗುತ್ತಿದೆ, ಅಂದುಕೊಂಡಿದ್ದನ್ನು ಮಾಡಲು ಆಗುತ್ತಿಲ್ಲ ಎಂದು ನಿಮಗೆ ಅನಿಸುವುದಕ್ಕೆ ಶುರುವಾಗುತ್ತದೆ. ವಾರದ ಶುರುವಿನಲ್ಲಿ ಕೆಲವು ಕೆಲಸಗಳನ್ನು ಮುಗಿಸುವುದಕ್ಕೆ ಶತಾಯಗತಾಯ ಪ್ರಯತ್ನ ಪಡಲಿದ್ದೀರಿ. ಇನ್ನು ಮದುವೆಗಾಗಿ ಪ್ರಯತ್ನಿಸುತ್ತಿರುವವರಿಗೆ ಸಂಬಂಧಿಗಳ ಮೂಲಕವಾಗಿ ಕೆಲವು ಸಲಹೆ, ರೆಫರೆನ್ಸ್ ಗಳನ್ನು ನೀಡುವ ಸಾಧ್ಯತೆ ಇದೆ. ಕುಟುಂಬದಲ್ಲಿ ಹಣಕಾಸಿನ ತುರ್ತು, ಭವಿಷ್ಯದ ಅಗತ್ಯಗಳ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯಲಿದೆ. ಉದ್ಯೋಗದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿದ್ದಲ್ಲಿ ಜಾಬ್ ಕನ್ಸಲ್ಟೆನ್ಸಿ ಮೂಲಕವಾಗಿ ಸಹಾಯ ಆಗಲಿದೆ. ಕೃಷಿಕರು ದೊಡ್ಡ ಮೊತ್ತದ ಖರ್ಚುಗಳನ್ನು ಸಂಭಾಳಿಸುವುದಕ್ಕೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದಕ್ಕೆ ಮುಂದಾಗಲಿದ್ದೀರಿ. ಇನ್ನು ಕೆಲವರಿಗೆ ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ನೀವು ಮಾಡಿದ ಕೆಲಸಗಳಲ್ಲಿ ತಪ್ಪು ಹುಡುಕುವುದಕ್ಕೆ ಅಂತಲೇ ಕೆಲವರು ಪ್ರಯತ್ನಿಸುತ್ತಾರೆ. ಈ ನಡೆಗಳಿಂದ ಅಧೀರರಾಗಬೇಡಿ. ನಿಮಗೆ ಸತ್ಯ ಎಂದು ಗೊತ್ತಿರುವ ವಿಚಾರಗಳಲ್ಲಿ ಯಾವುದೇ ಕಾರಣಕ್ಕೂ ರಾಜೀ ಆಗಬೇಡಿ. ವೃತ್ತಿನಿರತರಿಗೆ ನೀವು ಬಹಳ ನಿರೀಕ್ಷೆ ಮಾಡುತ್ತಿದ್ದಲ್ಲಿ ಕಚೇರಿಗೆ ಬೇಕಾದಂಥ ಸಲಕರಣೆಗಳನ್ನು ಖರೀದಿ ಮಾಡಲಿದ್ದೀರಿ.ಇವೆಲ್ಲಕ್ಕೂ ಶಕ್ತಿ ಮೀರಿ ಶ್ರಮಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯ ವಾತಾವರಣದಲ್ಲಿ ಬಹಳ ಬದಲಾವಣೆ ಆಗಿದೆ ಎನಿಸುವುದಕ್ಕೆ ಆರಂಭವಾಗುತ್ತದೆ. ಗೆಳೆಯರ ಜತೆಗೆ ಮಾಮೂಲಿನಂತೆ ಇರುವುದು ಕಷ್ಟವಾಗುತ್ತದೆ. ಯುವತಿಯರು ಪ್ರೀತಿ- ಪ್ರೇಮದಲ್ಲಿ ಇದ್ದಲ್ಲಿ ಮೂರನೇ ವ್ಯಕ್ತಿಗಳ ಮಧ್ಯಪ್ರವೇಶವಾಗಿ, ಗೊಂದಲಗಳಿಗೆ ಎಡೆ ಮಾಡಿಕೊಡಬಹುದು. ಮಹಿಳೆಯರು ಮನೆಗೆ ಗೃಹೋಪಯೋಗಿ ವಸ್ತುಗಳನ್ನು ತರುವುದಕ್ಕೆ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಸೋದರ ಸಂಬಂಧಿಗಳು ನಿಮ್ಮಿಂದ ಸಹಾಯವನ್ನು ಬಯಸಿ ಬರಲಿದ್ದಾರೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ