Weekly Numerology Predictions: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 30ರಿಂದ ಮೇ 6ರ ತನಕ ವಾರಭವಿಷ್ಯ 

|

Updated on: Apr 30, 2023 | 6:31 AM

ಸಂಖ್ಯಾಶಾಸ್ತ್ರ ವಾರ ಭವಿಷ್ಯ: 2023ರ ಏಪ್ರಿಲ್ 30ರಿಂದ ಮೇ 6 ರ ವರೆಗಿನ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.

Weekly Numerology Predictions: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 30ರಿಂದ ಮೇ 6ರ ತನಕ ವಾರಭವಿಷ್ಯ 
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 30ರಿಂದ ಮೇ 6ರ ತನಕ ವಾರಭವಿಷ್ಯ 
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 30ರಿಂದ ಮೇ 6ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಇತರರಿಗೆ ಸಹಾಯ ಮಾಡುವುದು ತಪ್ಪಲ್ಲ. ಆದರೆ ಅವರು ಸಂಪೂರ್ಣವಾಗಿ ನಿಮ್ಮ ಮೇಲೆ ಆನಿಕೊಂಡು ಬಿಟ್ಟರೆ ಬಹಳ ಕಷ್ಟ ಆಗುತ್ತದೆ. ಈ ವಾರ ಆಗುವುದು ಹಾಗೆ. ಬೇರೆ ಯಾರದೋ ಖರ್ಚು ನಿಮ್ಮ ತಲೆ ಮೇಲೆ ಬೀಳಲಿದೆ. ಇದಕ್ಕೆ ತಕ್ಕ ಹಾಗೆ ಊರವರ ಮದುವೆಗೆಲ್ಲ ನಂದೇ ಪೌರೋಹಿತ್ಯ ಎಂದು ಎಲ್ಲ ವಿಚಾರಗಳಿಗೆ ಮೂಗು ತೂರಿಸದಿರಿ. ಲೋಕಜ್ಞಾನದಿಂದ ಮುಂದುವರಿದಲ್ಲಿ – ಸ್ವಲ್ಪ ಮಟ್ಟಿಗೆ ಎಚ್ಚರಿಕೆ ವಹಿಸಿದರೆ ಉತ್ತಮ. ಇನ್ನು ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ವೃತ್ತಿಯಲ್ಲಿ ಇರುವವರಿಗೆ ರಾಜಕೀಯ ವೈಷಮ್ಯದಿಂದಾಗಿ ಸಿಗಬೇಕಾದ ಸವಲತ್ತುಗಳು ದೊರೆಯದಿರುವ ಸಾಧ್ಯತೆ ಇದೆ. ಶಿವನ ಆರಾಧನೆ ಮಾಡುವ ಮೂಲಕವಾಗಿ ಈ ಸಮಸ್ಯೆ ನಿವಾರಿಸಿಕೊಳ್ಳಬಹುದು. ವೃತ್ತಿ ನಿರತರಿಗೆ ತೆರಿಗೆ ಪಾವತಿ, ಇತರ ಶುಲ್ಕಗಳು, ಲೈಸೆನ್ಸ್ ಇತ್ಯಾದಿ ವಿಚಾರಗಳಲ್ಲಿ ಸಮಸ್ಯೆ ಎದುರಾಗಬಹುದು. ವಿದ್ಯಾರ್ಥಿಗಳಿಗೆ ಓದಿನ ವೇಗ ಹೆಚ್ಚಿಸಿಕೊಳ್ಳುವ ಅಭ್ಯಾಸವನ್ನು ಮಾಡಿಕೊಳ್ಳುವ ಸಮಯ ಇದು. ಕೆಲವು ತಂತ್ರಗಳನ್ನು ಅಳವಡಿಸಿಕೊಳ್ಳಿ. ಧ್ಯಾನ, ಯೋಗದಂಥ ಅಭ್ಯಾಸ ನಿಮಗೆ ಸಹಾಯ ಮಾಡಲಿದೆ. ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಸಣ್ಣದಾಗಿಯಾದರೂ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ಕೆಲಸ ಮಾಡಿ. ಧನ್ವಂತರಿ ಆರಾಧನೆಯನ್ನು ಮಾಡಿದರೆ ಉತ್ತಮ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಕುಟುಂಬದವರ ಸಲುವಾಗಿ ಹೆಚ್ಚಿನ ಖರ್ಚು- ವೆಚ್ಚ ಇದೆ. ಪ್ರಯಾಣ- ಪ್ರವಾಸಕ್ಕೆ ತೆರಳಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸುವಂತಿದ್ದರೆ ಎಚ್ಚರಿಕೆಯಿಂದ ಖರ್ಚು ಮಾಡಬೇಕು. ನೀವು ಯಾರದೋ ಮಾತನ್ನು ಕೇಳಿಕೊಂಡು, ಆಪ್ತರ ಮೇಲೆ ಅನುಮಾನ ಪಡುವಂತಾಗುತ್ತದೆ. ದುಡ್ಡಿನ ಅಗತ್ಯ ವಿಪರೀತ ಹೆಚ್ಚಾಗಲಿದ್ದು, ಸ್ನೇಹಿತರು- ಸಂಬಂಧಿಕರ ನೆರವಿನಿಂದ ಸ್ವಲ್ಪ ಮಟ್ಟಿಗೆ ಒತ್ತಡ ಕಡಿಮೆ ಆಗಲಿದೆ. ಕೃಷಿಕ ವರ್ಗದವರು ಊರ ದೇವರು, ಗ್ರಾಮದೇವರು ಅಥವಾ ಮನೆ ದೇವರ ದೇವಸ್ಥಾನಗಳಿಗೆ ಹಣ ಅಥವಾ ಮತ್ಯಾವುದಾದರೂ ರೂಪದಲ್ಲಿ ದೇಣಿಗೆ ನೀಡುವ ಸಾಧ್ಯತೆ ಇದೆ. ವೃತ್ತಿ ನಿರತರು ಸಂಘ- ಸಂಸ್ಥೆಗಳಿಗೆ ಸದಸ್ಯರಾಗಿ, ಅಧ್ಯಕ್ಷರಾಗಿ ನೇಮಕ ಅಥವಾ ಆಯ್ಕೆ ಆಗುವಂಥ ಯೋಗ ಇದೆ. ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿಯಾದರೂ ಯಾವುದಾದರೂ ವಿಷಯ, ವಸ್ತುಗಳ ಮೋಹಕ್ಕೆ ಸಿಲುಕಿ, ವ್ಯಾಸಂಗದಲ್ಲಿ ಹಿನ್ನಡೆ ಆಗಬಹುದು. ಆದ್ದರಿಂದ ಮನಸ್ಸಿನ ಮೇಲೆ ನಿಯಂತ್ರಣ ಇರಿಸಿಕೊಳ್ಳಿ. ಮಹಿಳೆಯರಿಗೆ ಸಂಗಾತಿ ಅಥವಾ ಅತ್ತೆ ಅಥವಾ ಸಂಬಂಧಿಕರ ಮಧ್ಯೆ ಮನಸ್ತಾಪಗಳು ಆಗಬಹುದು. ಥೈರಾಯ್ಡ್ ರೀತಿಯ ಸಮಸ್ಯೆ ಇರುವವರಿಗೆ ಅದು ಹೆಚ್ಚಾಗಬಹುದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಯಾವುದೋ ದುಡ್ಡು ಬಂದಿತು, ಅದನ್ನು ಯಾವುದಕ್ಕೋ ಬಳಸಿದೆ ಎಂದು ಲೆಕ್ಕಾಚಾರ ಮಾಡದಂತೆ ಜೀವನ ನಡೆಸುವುದು ಸಮಸ್ಯೆಗೆ ಕಾರಣ ಆಗಲಿದೆ. ಒಂದು ವೇಳೆ ಸೈಟು, ಮನೆ ಖರೀದಿ ಮಾಡಬೇಕು ಎಂದು ಬಹಳ ಸಮಯದಿಂದ ಪ್ರಯತ್ನ ಮಾಡುತ್ತಿರುವವರಿಗೆ ಈಗ ಮನಸ್ಸಿಗೆ ಹಿಡಿಸುವಂಥ ಸ್ಥಳ ಅಥವಾ ಮನೆ ಕಂಡುಬರಲಿದೆ. ನಿರ್ಧಾರಗಳನ್ನು ಮುಂದಕ್ಕೆ ಹಾಕುತ್ತಾ ಹೋಗಬೇಡಿ. ನಿಮ್ಮ ಕೈ ಅಳತೆಯಲ್ಲೇ ಇದ್ದು, ಮನಸ್ಸಿಗೂ ಮೆಚ್ಚಿದಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಿ. ಕೃಷಿಕರಿಗೆ ದೈಹಿಕ ಆಯಾಸ ಹೆಚ್ಚಾಗಲಿದೆ, ಲಾಭದ ಪ್ರಮಾಣದಲ್ಲೂ ಕಡಿಮೆ ಆಗುವ ಸಾಧ್ಯತೆಗಳಿವೆ. ಸಿಎ, ವೈದ್ಯರು ಇಂಥ ವೃತ್ತಿಯಲ್ಲಿ ಇರುವವರಿಗೆ ಹೆಚ್ಚುವರಿ ಆದಾಯ ಮೂಲಗಳು ದೊರೆಯಲಿವೆ. ವಿದ್ಯಾರ್ಥಿಗಳಿಗೆ ದೂರ ಪ್ರಯಾಣ ಮಾಡುವಂಥ ಯೋಗ ಇದೆ. ಮಹಿಳೆಯರಿಗೆ ಕೆಲಸದಲ್ಲಿ ಬದಲಾವಣೆ ಮಾಡಬೇಕು ಎಂದಿದ್ದಲ್ಲಿ ಅವಕಾಶಗಳು ದೊರೆಯಲಿವೆ. ಈ ವಾರದಲ್ಲಿ ಒಮ್ಮೆ ಸಾಯಿಬಾಬ ಅಥವಾ ರಾಘವೇಂದ್ರ ಸ್ವಾಮಿ ದೇವಸ್ಥಾನ ಅಥವಾ ಗುರುದ್ವಾರಕ್ಕೆ ಭೇಟಿ ನೀಡಿ. ಇನ್ನು ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ಸಿಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮ ಪಾಲಿಗೆ ಸಾಮರ್ಥ್ಯವನ್ನು ನಿರೂಪಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ. ಅದು ಹೇಗೆಂದರೆ, ಇತರರು ತಮ್ಮಿಂದ ಸಾಧ್ಯವಿಲ್ಲ ಎಂದು ಕೈ ಬಿಟ್ಟಿದ್ದ ಕೆಲಸವನ್ನು ನೀವು ಪೂರ್ತಿ ಮಾಡಿ, ಮುಗಿಸಿ ಬೇರೆಯವರು ಬೆರಗಿನಿಂದ ನೋಡುವಂತೆ ಮಾಡುತ್ತೀರಿ. ಇನ್ನು ಕಾಂಟ್ರ್ಯಾಕ್ಟರ್ ಅಥವಾ ಸಬ್ ಕಾಂಟ್ರ್ಯಾಕ್ಟರ್ ಆಗಿದ್ದಲ್ಲಿ ಹೊಸ ಕೆಲಸಗಳು ದೊರೆಯಲಿವೆ. ಸರ್ಕಾರದಿಂದ ಆಗಬೇಕಿದ್ದ ಕೆಲಸಕ್ಕಾಗಿ ಬಹಳ ಸಮಯದಿಂದ ಅಲೆದಾಟ ನಡೆಸುತ್ತಿರುವ ರೈತಾಪಿ ವರ್ಗಕ್ಕೆ ಅದು ಪೂರ್ತಿ ಆಗುವ ಮೂಲಕ ಮನಸ್ಸಿಗೆ ನಿರಾಳ ಆಗಲಿದೆ. ಒಂದಕ್ಕಿಂತ ಹೆಚ್ಚು ವೃತ್ತಿಯಲ್ಲಿ ತೊಡಗಿರುವಂಥವರು ಆ ಪೈಕಿ ಯಾವುದಾದರೂ ಒಂದನ್ನು ಇತರರಿಗೆ ವಹಿಸಿಕೊಡಬೇಕಾದ ಅಥವಾ ನಿಲ್ಲಿಸಬೇಕಾದ ಸನ್ನಿವೇಶ ಎದುರಾಗಲಿದೆ. ವಿದ್ಯಾರ್ಥಿ ವರ್ಗದವರು ವಿದೇಶ ವ್ಯಾಸಂಗಕ್ಕಾಗಿ ಬ್ಯಾಂಕ್ ಲೋನ್ ಪ್ರಯತ್ನಿಸುತ್ತಿದ್ದಲ್ಲಿ ಅನುಕೂಲ ಒದಗಿ ಬರಲಿದೆ. ಮಹಿಳೆಯರಿಗೆ ಹಳೆ ಪ್ರೇಮ ಪ್ರಕರಣಗಳ ನೆನಪು ಕಾಡಲಿದೆ. ಮನಸ್ಸಿನ ಮೇಲೆ ಹತೋಟಿ ಸಾಧಿಸುವುದು ಬಹಳ ಮುಖ್ಯ. ಸಾಮಾಜಿಕ ಕಟ್ಟಳೆಯೊಳಗೆ ಬದುಕುವುದು ಬಹಳ ಮುಖ್ಯ, ಈ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಒತ್ತಡ ಹಾಕಿ ಹಣ ಸಾಲ ತೆಗೆದುಕೊಳ್ಳುವಂತೆ ಕೇಳುತ್ತಿದ್ದಾರೆ, ಬಡ್ಡಿ ಕಡಿಮೆ ಹಾಗೂ ಹೆಚ್ಚಿನ ಅವಧಿಗೆ ಸಾಲ ದೊರೆಯುತ್ತದೆ ಎಂಬ ಕಾರಣಕ್ಕೆ ತೆಗೆದುಕೊಳ್ಳುವುದು ಸಮಸ್ಯೆ ಆಗಿ ಪರಿಣಮಿಸಲಿದೆ. ಇನ್ನು ನಿಮ್ಮ ಮಾತಿನ ಮೇಲೆ ನಿಗಾ ಇಟ್ಟುಕೊಳ್ಳಿ. ವೈಯಕ್ತಿಕ ವಿಚಾರವನ್ನು ಎಲ್ಲರೆದುರು ಹೇಳಿಕೊಳ್ಳುವುದು ಮುಳುವಾಗಬಹುದು. ಕೃಷಿಕರಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂಥವರಿಗೆ ಆದಾಯ ಕಡಿಮೆ ಆಗುತ್ತದೆ ಎಂದು ಬಲವಾಗಿ ಅನಿಸುತ್ತದೆ ಅಥವಾ ಖರ್ಚಿನ ಪ್ರಮಾಣ ಆದಾಯಕ್ಕಿಂತ ಬಹಳ ಹೆಚ್ಚಾಯಿತು ಅಂತಾದರೂ ಅನಿಸಬಹುದು. ವೃತ್ತಿನಿರತರು ಹೊಸ ವಿಷಯಗಳನ್ನು ಕಲಿತುಕೊಳ್ಳಬೇಕಾದ ಅನಿವಾರ್ಯ ಎದುರಾಗಲಿದೆ. ವಿದ್ಯಾರ್ಥಿಗಳಿಗೆ ಮನೆಯಲ್ಲಿ ಬೈಗುಳ, ಅನುಮಾನದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಪಾರದರ್ಶಕವಾಗಿ ನಡೆದುಕೊಳ್ಳಿ, ಏನನ್ನೂ ಮುಚ್ಚಿಡುವುದಕ್ಕೆ ಹೋಗದಿರಿ. ಮಹಿಳೆಯರು ಚಿನ್ನಾಭರಣ ಖರೀದಿ ಮಾಡುವ ಯೋಗ ಇದೆ. ಈಗಾಗಲೇ ಉಳಿತಾಯ ಮಾಡಿದಂಥ ಹಣದಿಂದಲಾದರೂ ಬೆಲೆಬಾಳುವ ಲೋಹದ ಆಭರಣಗಳನ್ನು ಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಈ ವಾರ ನಿಮಗೆ ದೈಹಿಕವಾಗಿ ಆಯಾಸ ಆಗುವಂಥ ಸನ್ನಿವೇಶಗಳು ಹೆಚ್ಚಿವೆ. ಇದರ ಜತೆಗೆ ಸೋದರ ಸಂಬಂಧಿಗಳ ಮನೆಯ ಕಾರ್ಯಕ್ರಮದ ಸಲುವಾಗಿ ನಿಮ್ಮ ಓಡಾಟ ಹೆಚ್ಚಾಗಬಹುದು. ಅವರಿಗೆ ಹಣಕಾಸಿನ ನೆರವು ಕೂಡ ಸಾಧ್ಯತೆ ಇದೆ. ಮುಖ್ಯವಾಗಿ ಬಾಂಧವ್ಯಗಳು ಗಟ್ಟಿ ಆಗಲಿದೆ. ಸ್ನೇಹಿತರು- ಸ್ನೇಹಿತೆಯರ ಜತೆಗೆ ಕಿರು ಪ್ರವಾಸಕ್ಕೆ ತೆರಳುವಂಥ ಯೋಗ ಕೂಡ ಇದೆ. ಕೃಷಿಕರು ಯಾವುದೇ ವ್ಯಾಜ್ಯಗಳು, ದೂರುಗಳು ದಾಖಲಾಗದಂತೆ ಮಾತುಕತೆ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ಪಶುಸಾಕಣೆ ಮಾಡುತ್ತಿರುವವರಿಗೆ ಹೆಚ್ಚಿನ ಹೂಡಿಕೆ ಮಾಡುವ ಯೋಗ ಇದೆ. ವೃತ್ತಿನಿರತರಿಗೆ ಉನ್ನತ ಸ್ಥಾನಮಾನಗಳು ದೊರೆಯುವಂಥ ಯೋಗ ಇದೆ. ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ಇನ್ನು ವಿದ್ಯಾರ್ಥಿಗಳು ಅನಾರೋಗ್ಯ ಸಮಸ್ಯೆಯಿಂದಾಗಿ ಪ್ರಮುಖ ಅವಕಾಶವೊಂದನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಮದುವೆಗಾಗಿ ಪ್ರಯತ್ನಿಸುತ್ತಿರುವ ಯುವತಿಯರು, ಮಹಿಳೆಯರಿಗೆ ಉತ್ತಮ ಸಂಬಂಧಗಳು ದೊರಕಲಿವೆ. ತಂದೆಯ ಕಡೆ ಸಂಬಂಧಿಕರ ಮೂಲಕ ಇದು ಒದಗಿಬರಬಹುದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಒಂದು ವೇಳೆ ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ನೀವು ನಿರೀಕ್ಷೆ ಮಾಡಿದ್ದಕ್ಕಿಂತ ದೊಡ್ಡ ಹುದ್ದೆ, ಸಂಬಳದ ಉದ್ಯೋಗಕ್ಕಾಗಿ ಕರೆ ಬರುವಂಥ ಅವಕಾಶಗಳು ಇವೆ. ಧೈರ್ಯವಾಗಿ ಮುಂದಕ್ಕೆ ಹೆಜ್ಜೆಯನ್ನು ಇಡಿ. ಇನ್ನು ನೀವು ಇದಕ್ಕೂ ಮುಂಚೆ ಮಾಡುತ್ತಿದ್ದ ಕೆಲಸಕ್ಕೆ ಸಂಬಂಧಿಸಿದ್ದು ಅಲ್ಲ ಅಂತಾದರೂ ಗಾಬರಿ ಪಡುವಂಥ ಸನ್ನಿವೇಶ ಇರುವುದಿಲ್ಲ. ಕೃಷಿ- ಹೈನುಗಾರಿಕೆಯಲ್ಲಿ ತೊಡಗಿರುವಂಥವರು ವ್ಯವಹಾರ ವೃದ್ಧಿಗಾಗಿ ಹಣ-ಕಾಸು ಸಾಲಕ್ಕೆ ಪ್ರಯತ್ನಿಸಲಿದ್ದೀರಿ. ವೃತ್ತಿನಿರತರಿಗೆ ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಆಗಬಹುದು. ಮುಖ್ಯವಾಗಿ ನಿಮ್ಮನ್ನು ತಲುಪುವುದಕ್ಕೆ ಇರುವ ಸಂವಹನವನ್ನು ಚೆನ್ನಾಗಿ ಮಾಡಿಕೊಳ್ಳಬೇಕಿದೆ. ವಿದ್ಯಾರ್ಥಿಗಳು ಅನವಶ್ಯಕವಾಗಿ ಸ್ನೇಹಿತರು- ಸ್ನೇಹಿತೆಯರ ಜತೆಗೆ ವ್ಯಾಜ್ಯ ಮಾಡಿಕೊಳ್ಳುವಂಥ ಸಾಧ್ಯತೆಗಳಿವೆ. ಮಹಿಳೆಯರಿಗೆ ತವರು ಮನೆಯಿಂದ ಶುಭ ವಾರ್ತೆ ಅಥವಾ ಸಮಾರಂಭಗಳಿಗೆ ಬರುವಂತೆ ಆಹ್ವಾನ ಬರಲಿದೆ. ಮನೆಯಲ್ಲಿ ಗಣಪತಿ ಮಂತ್ರವನ್ನು ಕೇಳಿಸಿಕೊಳ್ಳಿ. ಮುಖ್ಯವಾಗಿ ಸೋಮವಾರದಂದು ಶಿವನ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆಯಿರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಹದಿಹರೆಯದವರಾಗಿದ್ದು, ಪ್ರೀತಿ- ಪ್ರೇಮದ ವಿಚಾರಗಳನ್ನು ನಿವೇದನೆ ಮಾಡಿಕೊಳ್ಳುವುದು ಅಥವಾ ಈಗಾಗಲೇ ಪ್ರೀತಿ ಮಾಡುತ್ತಿರುವವರು ಮನೆಯಲ್ಲಿ ಅದನ್ನು ಹೇಳಿಕೊಳ್ಳುವ ಸಾಧ್ಯತೆಗಳಿವೆ. ನೀವು ಅಂದುಕೊಂಡ ಫಲಿತಾಂಶ ಬರುವ ಸಾಧ್ಯತೆ ಹೆಚ್ಚಿದೆ. ಕೃಷಿ- ಕೃಷಿಗೆ ಸಂಬಂಧಿಸಿದ ವೃತ್ತಿಯಲ್ಲಿ ಇರುವವರು ಕುಟುಂಬದವರ ಸಲುವಾಗಿ ಹೆಚ್ಚಿನ ಖರ್ಚು ಮಾಡುವಂಥ ಯೋಗ ಇದೆ. ಆದರೆ ಈ ಖರ್ಚು ಒಳ್ಳೆ ಉದ್ದೇಶಗಳಿಗೆ ಆಗಲಿದೆ. ವೃತ್ತಿನಿರತರಿಗೆ ಶತ್ರು ಬಾಧೆ ಇರಲಿದೆ. ಅದರಲ್ಲೂ ನಿಮ್ಮ ಜತೆಗೆ ನಗುನಗುತ್ತಾ ಮಾತನಾಡುತ್ತಿರುವವರು ಕೆಟ್ಟ ಅಭಿಪ್ರಾಯವನ್ನು ಮೂಡಿಸುವುದಕ್ಕೆ ಪ್ರಯತ್ನಿಸಬಹುದು. ವಿದ್ಯಾರ್ಥಿಗಳು ಹೊಸದಾಗಿ ಯಾರ ಜತೆ ಸ್ನೇಹ ಮಾಡುತ್ತಿದ್ದೀರಿ ಎಂಬ ಬಗ್ಗೆ ಲಕ್ಷ್ಯ ನೀಡಿ, ಜಂಕ್ ಫುಡ್ ಸೇವನೆಯನ್ನು ಕಡ್ಡಾಯವಾಗಿ ನಿಲ್ಲಿಸಿ. ಮಹಿಳೆಯರಿಗೆ ಸಾಮಾಜಿಕವಾಗಿ ಮನ್ನಣೆ, ಸನ್ಮಾನಗಳನ್ನು ಪಡೆಯುವಂಥ ಯೋಗ ಇದೆ. ದಿಢೀರನೆ ಪ್ರಚಾರವನ್ನು ಪಡೆದುಕೊಳ್ಳಲಿದ್ದೀರಿ. ಮುಖ್ಯವಾದ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಮೇಲಧಿಕಾರಿಗಳ ಎದುರು ನೀವು ಪಡುತ್ತಿರುವ ಶ್ರಮ, ಈಗಿನ ಕೆಲಸದಲ್ಲಿ ಎಷ್ಟು ತನ್ಮಯರಾಗಿದ್ದೀರಿ ಎಂಬುದನ್ನು ತೋರಿಸುವುದು ಅನಿವಾರ್ಯ ಎಂಬಂತಾಗುತ್ತದೆ. ಇಲ್ಲದಿದ್ದಲ್ಲಿ ನಿಮ್ಮ ಶ್ರಮ ಇನ್ಯಾರದೋ ಪಾಲಾಗುವ ಸಾಧ್ಯತೆಗಳಿವೆ. ಆದ್ದರಿಂದ ನಿಮ್ಮ ಶ್ರಮವನ್ನು ನಿಜಕ್ಕೂ ಯಾರಿಗೆ ತಲುಪಿಸಬೇಕು, ಅಂದರೆ ತಿಳಿಸಬೇಕು ಅಲ್ಲಿಗೆ ತಲುಪುವಂತೆ ನೋಡಿಕೊಳ್ಳಿ. ಯಾವುದೋ ಹಳೇ ಕಡತ, ಅಂದರೆ ಈ ಹಿಂದೆ ಯಾವಾಗಲೋ ಕೇಳಿದ್ದ ಭೂಮಿ ಅಥವಾ ಇತರ ದಾಖಲೆಗಳನ್ನು ಈಗ ಕೇಳಿ, ಕೃಷಿಕ ವರ್ಗದಲ್ಲಿ ಇರುವವರಿಗೆ ಒತ್ತಡದ ಸನ್ನಿವೇಶ ಸೃಷ್ಟಿ ಆಗಲಿದೆ. ಆತಂಕಕ್ಕೆ ಒಳಗಾಗದೆ ಆಲೋಚನೆಯಿಂದ ಸಮಸ್ಯೆ ನಿವಾರಿಸಿಕೊಳ್ಳಿ. ವೃತ್ತಿ ನಿರತರಿಗೆ ಹೊಸ ಹೊಸ ಜನರ ಪರಿಚಯ ಹಾಗೂ ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅವಕಾಶಗಳು ಹುಡುಕಿಕೊಂಡು ಬರಲಿವೆ. ವಿದ್ಯಾರ್ಥಿಗಳಿಗೆ ಆಲಸ್ಯ ಹೆಚ್ಚಾಗಲಿದೆ. ಯಾವುದೇ ಕಾರಣಕ್ಕೆ ಕೆಲಸಗಳನ್ನು ಮುಂದಕ್ಕೆ ಹಾಕದಿರಿ. ಮಹಿಳೆಯರಿಗೆ ತೂಕ, ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇತರರ ಬಗ್ಗೆ ನಿಮಗೆ ಅರೆಬರೆ ತಿಳಿದ ಮಾಹಿತಿಯನ್ನು ಎಲ್ಲ ಗೊತ್ತಿರುವವರಂತೆ ಮಾತನಾಡದಿರಿ, ಅವಮಾನ ಎದುರಿಸಬೇಕಾದೀತು.

ಲೇಖನ- ಎನ್‌.ಕೆ.ಸ್ವಾತಿ