Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 16ರಿಂದ 22ರ ವರೆಗಿನ ವಾರಭವಿಷ್ಯ  

ವಾರದ ಭವಿಷ್ಯ: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 16ರಿಂದ 22ರ ತನಕ ವಾರಭವಿಷ್ಯ ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಂಡು, ನಿಮ್ಮ ವಾರವನ್ನು ಪ್ರಾರಂಭಿಸಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 16ರಿಂದ 22ರ ವರೆಗಿನ ವಾರಭವಿಷ್ಯ  
ಸಂಖ್ಯಾಶಾಸ್ತ್ರ
Edited By:

Updated on: Nov 15, 2025 | 3:47 PM

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಸ್ವಂತ ಆಲೋಚನೆಗಳಿಗೆ ಬೆಲೆ ಸಿಗುವ ಸಮಯ ಇದಾಗಿರುತ್ತದೆ. ಒಂದೇ ಥರದ ಕೆಲಸದಿಂದ ಬೇಸರವಾಗಿ ಹೊಸದೇನಾದರೂ ಪ್ರಯತ್ನಿಸುವ ಇರಾದೆ ಇರುವವರಿಗೆ ಹಲವು ಅವಕಾಶಗಳು ಏಕ ಕಾಲಕ್ಕೆ ತೆರೆದುಕೊಳ್ಳಲಿವೆ. ನಾನಾಯಿತು ನನ್ನ ಪಾಡಾಯಿತು ಎಂಬಂತೆ ನೀವು ಇದ್ದರೂ ಸಹ ಇತರರ ದೃಷ್ಟಿಯಲ್ಲಿ ಬೆರಗು ಮೂಡಿಸುವಂಥ ಸಾಧನೆ ಮಾಡುವ ಯೋಗ ಇದೆ. ನಿಮ್ಮ ಜೊತೆ ಅಥವಾ ಸುತ್ತಮುತ್ತ ಇರುವವರಿಗೆ ನಿಮಗಿರುವ ಪ್ರಭಾವ, ಜ್ಞಾನ, ತಿಳಿವಳಿಕೆ ಇವುಗಳಿಂದ ದೊಡ್ಡ ಮಟ್ಟದಲ್ಲಿ ಸಹಾಯ ಆಗಲಿದೆ. ಕಣ್ಣಂದಾಜಿನಲ್ಲಿ ನೀವು ಮುಂಚಿತವಾಗಿಯೇ ಹೇಳಿದ್ದ ಎಚ್ಚರಿಕೆಗಳು ಹಾಗ್ಹಾಗೇ ನಿಜವಾಗಲಿದ್ದು, ಇತರರು ಬಹಳ ಗೌರವ ಮತ್ತು ಮೆಚ್ಚುಗೆಯಿಂದ ನಿಮ್ಮನ್ನು ಕಾಣುವಂತಾಗುತ್ತದೆ. ಪ್ರತಿಷ್ಠೆ ಎಂಬಂತೆ ನೀವು ತೆಗೆದುಕೊಂಡ ಪ್ರಾಜೆಕ್ಟ್ ಗಳಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಹುಡುಕಿಕೊಂಡು ಬರಲಿದೆ. ನಿಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆ- ಪತ್ರಗಳನ್ನು ಸರಿ ಮಾಡಿಕೊಳ್ಳಲು ಓಡಾಟ ನಡೆಸುತ್ತಿದ್ದೀರಿ ಅಂತಾದಲ್ಲಿ ಕೆಲಸಗಳು ಸಲೀಸಾಗಿ ಆಗಿ, ನೆಮ್ಮದಿ ಸಿಗಲಿದೆ. ತಂದೆ- ತಾಯಿಯ ಸಲುವಾಗಿ ಹೆಲ್ತ್ ಇನ್ಷೂರೆನ್ಸ್ ಖರೀದಿ ಮಾಡುವ ಸಾಧ್ಯತೆ ನಿಮ್ಮಲ್ಲಿ ಕೆಲವರಿಗೆ ಇದ್ದು, ಅದರ ವೆಚ್ಚ ನೀವು ಅಂದುಕೊಂಡದ್ದಕ್ಕಿಂತ ಹೆಚ್ಚಾಗಲಿದೆ. ಕೃಷಿಕರಿಗೆ ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ. ಪ್ರಭಾವಿಗಳಾದವರು ತಾವು ಮಧ್ಯಸ್ಥಿಕೆಯನ್ನು ವಹಿಸಿ, ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮಾತು ನೀಡಲಿದ್ದು, ಅದು ಸಾಧ್ಯ ಕೂಡ ಆಗಲಿದೆ. ವೃತ್ತಿನಿರತರು ಕೆಲವು ಮುಖ್ಯ ಕೆಲಸಗಳನ್ನು ಮರೆಯುವುದರಿಂದ ಇತರರ ಬೇಸರಕ್ಕೂ ಹಾಗೂ ಆಕ್ಷೇಪಕ್ಕೂ ಗುರಿ ಆಗಲಿದ್ದಾರೆ. ಕೈಯಿಂದ ಸ್ವಲ್ಪ ಹೆಚ್ಚಿನ ಖರ್ಚಾದರೂ ವರ್ಚಸ್ಸಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಯಶ ಕಾಣಲಿದ್ದಾರೆ. ನಿಮ್ಮ ಸಮಯಪ್ರಜ್ಞೆ ಹಾಗೂ ಸ್ನೇಹ ವಲಯದ ಸಹಕಾರ ದೊಡ್ಡ ಮಟ್ಟದಲ್ಲಿ ಅನುಕೂಲ ಮಾಡಿಕೊಡಲಿದೆ. ವಿದ್ಯಾರ್ಥಿಗಳಿಗೆ ತಾವು ಓದುತ್ತಿರುವ ಶಿಕ್ಷಣ ಸಂಸ್ಥೆಯಿಂದ ಪ್ರತಿಷ್ಠಿತ ಸ್ಪರ್ಧೆಯೊಂದಕ್ಕೆ ಕಳುಹಿಸಿಕೊಡುವ ಸಾಧ್ಯತೆ ಇದ್ದು, ಈ ಹಿಂದೆ ನೀವು ಉಳಿಸಿಕೊಂಡು ಬಂದಂಥ ಸ್ಥಿರತೆ ಈಗಿನ ಸಮಯಕ್ಕೆ ನೆರವಿಗೆ ಬರಲಿದೆ. ನಿಮ್ಮಲ್ಲಿ ಕೆಲವರಿಗೆ ತಂದೆ- ತಾಯಿಗಳು ದ್ವಿಚಕ್ರ ವಾಹನವನ್ನು ಕೊಡಿಸುವ ಯೋಗ ಇದ್ದು, ಇದರಿಂದ ನಿಮ್ಮ ಸಮಯ ಉಳಿತಾಯದ ಪ್ರಯತ್ನಕ್ಕೆ ದೊಡ್ಡ ಮಟ್ಟದ ಸಹಾಯ ಆಗಲಿದೆ. ಮಹಿಳೆಯರು ಸ್ವಂತ ಉದ್ದಿಮೆ ಆರಂಭಿಸುವ ಯೋಗ ಇದೆ. ಅದಕ್ಕಾಗಿ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳುತ್ತಾ ಇದ್ದಲ್ಲಿ ಸಂಗಾತಿ ಸಹ ನೆರವಿಗೆ ನಿಲ್ಲಲಿದ್ದಾರೆ. ಬಹು ಸಮಯದಿಂದ ಕಾಡುತ್ತಾ ಇದ್ದ ಅನಾರೋಗ್ಯ ಸಮಸ್ಯೆಗಳಿಗೆ ಸೂಕ್ತವಾದ ವೈದ್ಯೋಪಚಾರ ದೊರೆಯುವ ಬಗ್ಗೆ ಮಾಹಿತಿ ಸಿಗಲಿದ್ದು, ಇದರಿಂದ ಮಾನಸಿಕವಾಗಿ ದೊಡ್ಡ ಮಟ್ಟದ ನೆಮ್ಮದಿ ದೊರೆಯಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಏನನ್ನಾದರೂ ಗಳಿಸಬಲ್ಲೆ, ದಕ್ಕಿಸಿಕೊಳ್ಳ ಬಲ್ಲೆ, ಸಾಧಿಸ ಬಲ್ಲೆ ಎಂಬ ಅದಮ್ಯವಾದ ಆತ್ಮವಿಶ್ವಾಸ ನಿಮ್ಮಲ್ಲಿ ಇರಲಿದೆ. ಈ ಹಿಂದಿನ ನಿಮ್ಮ ಶ್ರಮವನ್ನು ಗುರುತಿಸಿ, ನಾಯಕತ್ವದ ಜವಾಬ್ದಾರಿ ಕೊಡುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಬಗ್ಗೆ ಇಲ್ಲಸಲ್ಲದನ್ನು ಹೇಳಿ, ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿರುವವರು ಯಾರು ಎಂಬ ಸಂಗತಿ ಪತ್ತೆ ಹಚ್ಚುವಲ್ಲಿ ಯಶ ಕಾಣುತ್ತೀರಿ. ಅಧ್ಯಾತ್ಮವಾಗಿ ನಿಮ್ಮ ಜೀವನದಲ್ಲಿ ಮಹತ್ತರ ತಿರುವು ಕಾಣಿಸಿಕೊಳ್ಳುವ ಸಮಯ ಇದಾಗಿರುತ್ತದೆ. ನಿಮ್ಮಲ್ಲಿ ಕೆಲವರು ಮನೆಯಲ್ಲಿ ವಾಸ್ತು ರೀತಿಯಾಗಿ ಕೆಲವಾರು ಬದಲಾವಣೆ ಮಾಡಿಸುವುದಕ್ಕೆ ಮುಂದಾಗಲಿದ್ದೀರಿ. ಸಂಭ್ರಮದ ಕ್ಷಣಗಳು ನಿಮ್ಮ ಪಾಲಿಗೆ ಹಲವಾರು ಸಿಗಲಿವೆ. ಸ್ವಂತವಾಗಿ ವ್ಯಾಪಾರ- ವ್ಯವಹಾರ ಶುರು ಮಾಡಬೇಕು ಎಂದುಕೊಂಡವರಿಗೆ ಅದಕ್ಕೆ ಬೇಕಾದ ಹಣಕಾಸಿನ ಅನುಕೂಲ, ಜನ ಬೆಂಬಲ ದೊರೆಯಲಿದೆ. ಅದರಲ್ಲೂ ಆಹಾರಕ್ಕೆ ಸಂಬಂಧಿಸಿದ ವ್ಯಾಪಾರ ಶುರು ಮಾಡಬೇಕು ಎಂದುಕೊಂಡವರಿಗೆ ಹಲವು ಮೂಲಗಳಿಂದ ಬೆಂಬಲ ಸಿಗಲಿದೆ. ಹೊಟ್ಟೆಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ಇರಲಿ. ಹೊಸ ಸ್ಥಳದಲ್ಲಿ ಆಹಾರ ಸೇವನೆ ಮಾಡುವ ಮುನ್ನ ನಾಲ್ಕಾರು ಸಲ ಆಲೋಚಿಸಿ. ಕೃಷಿಕರು ಇದು ನನ್ನಿಂದಲೇ ಆಗಿದ್ದು ಎಂದು ಹೇಳುವ ಮುನ್ನ ನಾಲ್ಕಾರು ಬಾರಿ ಆಲೋಚಿಸುವುದು ಮುಖ್ಯ. ನಿಮ್ಮ ಉತ್ಸಾಹ ತಪ್ಪಲ್ಲ ಹಾಗೂ ನೀವು ಹೇಳುವ ವಿಚಾರವು ನಿಜವೇ ಇರಬಹುದು. ಆದರೆ ಅದನ್ನು ಹೇಳುವುದಕ್ಕೆ ಒಂದು ರೀತಿ ಹಾಗೂ ವೇದಿಕೆ ಇರುತ್ತದೆ. ಆ ಬಗ್ಗೆ ನಿರ್ಲಕ್ಷ್ಯ ಮಾಡಿದಲ್ಲಿ ನಂತರ ಪರಿತಪಿಸುವಂತೆ ಆಗಲಿದೆ. ವೃತ್ತಿಪರರಿಗೆ ವೈಯಕ್ತಿಕ ಜವಾಬ್ದಾರಿಗಳನ್ನು ನಿರ್ವಹಿಸುವುದು ದೊಡ್ಡ ಸವಾಲಿನಂತೆ ಆಗಲಿದೆ. ಅದರಲ್ಲೂ ಮಕ್ಕಳ ಶಿಕ್ಷಣ ಅಥವಾ ಮದುವೆ ವಿಚಾರವು ಚಿಂತೆಯಾಗಿ ಪರಿಣಮಿಸಲಿದೆ. ಇಷ್ಟು ಸಮಯದೊಳಗೆ ಆ ಕೆಲಸ ಮಾಡಿಕೊಡುತ್ತೇನೆ ಎಂದು ಮಾತು ನೀಡುವ ಮುನ್ನ ಸಾಧ್ಯಾಸಾಧ್ಯತೆಯನ್ನು ಅಳೆದು ತೂಗಿ ನೋಡುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ವರ್ಚಸ್ಸಿಗೆ ಹೊಡೆತ ಬೀಳದಂತೆ ಈ ವಾರ ಜಾಗ್ರತೆ ವಹಿಸಿ. ವಿದ್ಯಾರ್ಥಿಗಳಿಗೆ ನಿಮ್ಮದಲ್ಲದ ವಿಚಾರಗಳಲ್ಲಿ ವಿಪರೀತ ಆಸಕ್ತಿ ಮೂಡುವುದಕ್ಕೆ ಶುರು ಆಗಲಿದೆ. ಹೀಗೆ ನೀವು ತೋರುವ ವಿಚಿತ್ರ ಆಸಕ್ತಿ ಕಾರಣಕ್ಕೆ ತಂದೆ- ತಾಯಿಯಿಂದಲೂ ಬೈಸಿಕೊಳ್ಳುವಂತೆ ಆಗಲಿದೆ. ಹತ್ತಾರು ಜನ ಸೇರಿರುವ ಕಡೆಯಲ್ಲಿ ಆಡುವ ಮಾತು ಹಾಗೂ ಬಳಸುವ ಪದಗಳ ಬಗ್ಗೆ ಸರಿಯಾಗಿ ಆಲೋಚಿಸುವುದು ಮುಖ್ಯವಾಗುತ್ತದೆ. ನಿಮ್ಮ ಕೈಗೆ ಬರುವ ದೊಡ್ಡ ಅವಕಾಶವನ್ನು ಕೈ ತಪ್ಪಿ ಹೋಗದಂತೆ ನೋಡಿಕೊಳ್ಳಿ. ಮಹಿಳೆಯರಿಗೆ ಕೆಲವರಿಗೆ ತಿಂಗಳ ಮುಟ್ಟಿನ ವೇಳೆ ಬಹಳ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಈ ಹಿಂದೆ ಚಿಕಿತ್ಸೆ ಪಡೆಯುತ್ತಾ ಇದ್ದದ್ದು ಹಾಗೂ ಈಗ ಅದರ ಫಾಲೋ ಅಪ್ ಮಾಡದೆ ಹಾಗೇ ಬಿಟ್ಟಿದ್ದೀರಿ ಅಂತಾದಲ್ಲಿ ಆ ಕಡೆಗೆ ಗಮನವನ್ನು ನೀಡಿ. ಉದ್ಯೋಗದಲ್ಲಿ ಬದಲಾವಣೆ ಮಾಡಬೇಕು ಎಂದಿರುವವರಿಗೆ ಸಿಗುವ ರೆಫರೆನ್ಸ್ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಕಡೆಗೆ ಗಮನವಿರಲಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಯಾರು ಏನನ್ನಾದರೂ ಅಂದುಕೊಳ್ಳಲಿ, ನನಗೆ ಬೇಕಾದಂತೆಯೇ ಇರುತ್ತೇನೆ, ಇಷ್ಟವಾದ ಕೆಲಸವನ್ನಷ್ಟೇ ಮಾಡುತ್ತೇನೆ ಎಂಬ ಪಟ್ಟು ನಿಮ್ಮಲ್ಲಿ ಮೂಡಲಿದೆ. ಇದೇ ಕಾರಣದಿಂದ ನಿಮ್ಮಲ್ಲಿ ಕೆಲವರು ಇರುವ ಕೆಲಸ ತೊರೆದು ಸ್ವಂತ ವ್ಯವಹಾರ- ವ್ಯಾಪಾರ ಆರಂಭಿಸುವ ಬಗ್ಗೆ ಆಲೋಚನೆ ಮಾಡುತ್ತೀರಿ. ನಿಮ್ಮಲ್ಲಿ ಕೆಲವರು ದುಬಾರಿ ಪಾದರಕ್ಷೆ, ವಾಚ್, ಪರ್ ಫ್ಯೂಮ್ ಇಂಥವುಗಳ ಖರೀದಿ ಮಾಡಲು ಮುಂದಾಗುತ್ತೀರಿ. ನೀವು ವಹಿಸಿಕೊಂಡ ದೊಡ್ಡ ಜವಾಬ್ದಾರಿಗಳು, ಪ್ರಾಜೆಕ್ಟ್ ರೀತಿಯಲ್ಲಿ ಮಾಡಿದ ಕೆಲಸ- ಕಾರ್ಯಗಳಿಗೆ ಹೇಳಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡುವ ಅವಕಾಶಗಳು ಹೆಚ್ಚಿದೆ. ಇನ್ನು ನಿಮ್ಮಲ್ಲಿ ಯಾರು ಕಮಿಷನ್ ಪಡೆದುಕೊಂಡು ಮಾಡುವ ವ್ಯವಹಾರ ನಡೆಸಿಕೊಂಡು ಬಂದಿರುತ್ತೀರಿ ಅಂಥವರಿಗೆ ದೊಡ್ಡ ಬದಲಾವಣೆ ಮಾಡಿಕೊಳ್ಳುವ, ಬದಲಾವಣೆ ಎದುರು ನೋಡುವ ಅವಧಿ ಇದು ಆಗಿರಲಿದೆ. ದೇವತಾ ಪ್ರತಿಷ್ಠಾಪನೆ, ದೇಗುಲಗಳ ಜೀರ್ಣೋದ್ಧಾರ, ಕಲಶ ಸ್ಥಾಪನೆ ಇಂಥವುಗಳಿಗೆ ಓಡಾಟ ನಡೆಸುವ, ದಾನ- ಧರ್ಮವನ್ನು ಮಾಡುವ ಯೋಗ ನಿಮ್ಮ ಪಾಲಿಗೆ ಒದಗಿ ಬರಲಿದೆ. ಕೃಷಿಕರು ತಮ್ಮ ಬಳಿ ಇರುವಂಥ ಚಿನ್ನವನ್ನೋ ಅಥವಾ ತಮ್ಮದೇ ಜಮೀನನ್ನು ಅಡಮಾನ ಮಾಡಿ, ಅದರ ಮೇಲೆ ಸಾಲ ಮಾಡುವಂಥ ಸಾಧ್ಯತೆಗಳಿವೆ. ಹೊಸದಾಗಿ ಜಮೀನು ಗುತ್ತಿಗೆ ಪಡೆಯುವುದಕ್ಕಾಗಿಯೋ ಅಥವಾ ಜಮೀನನ್ನು ಖರೀದಿ ಮಾಡುವ ಉದ್ದೇಶದಿಂದಲೇ ಹೀಗೆ ಮಾಡುವ ಅವಕಾಶಗಳು ಹೆಚ್ಚಿವೆ. ನಿಮ್ಮಲ್ಲಿ ಕೆಲವರು ವಿಲಾಸಿ ಕಾರು ಖರೀದಿ ಮಾಡುವಂತಹ ಅವಕಾಶ ಸಹ ಇದೆ. ವೃತ್ತಿಪರರು ಸಣ್ಣದಾಗಿ ಅಂತ ಆರಂಭ ಮಾಡಿದ್ದ ಕಚೇರಿ ಅಥವಾ ವೃತ್ತಿಯನ್ನು ವಿಸ್ತರಿಸುವುದಕ್ಕೆ ಬೇಕಾದ ಸಮಯ ಇದಾಗಿದೆ ಎಂದು ಬಲವಾಗಿ ಅನಿಸುವುದಕ್ಕೆ ಶುರು ಆಗಲಿದೆ. ನಿಮ್ಮ ಕೆಲವು ಹಳೇ ಗೆಳೆಯರು ಅಥವಾ ಸಂಬಂಧಿಕರು ಜೊತೆಗೆ ನಿಂತು ಬೆಂಬಲ ನೀಡುವುದಾಗಿ ಮಾತು ನೀಡಲಿದ್ದಾರೆ. ಏಕ ಕಾಲಕ್ಕೆ ಹಲವು ಕಡೆಗಳಿಂದ ಪಾಸಿಟಿವ್ ಆದಂಥ ಬೆಳವಣಿಗೆಗಳು ಕಾಣಿಸಿಕೊಳ್ಳಲಿವೆ. ವಿದ್ಯಾರ್ಥಿಗಳು ಮರೆವಿನ ಸಮಸ್ಯೆಯಿಂದ ಬಳಲುವಂತೆ ಆಗಬಹುದು. ರಾತ್ರಿ ವೇಳೆ ನಿದ್ದೆಗೆಟ್ಟು ವ್ಯಾಸಂಗ ಮಾಡುವ ಅಭ್ಯಾಸ ಇರುವವರು ಅಥವಾ ರಾತ್ರಿ ಬಹಳ ಹೊತ್ತು ಟೀವಿ ಅಥವಾ ಮೊಬೈಲ್ ವೀಕ್ಷಣೆ ಮಾಡುವ ಹವ್ಯಾಸ ಇರುವವರು ಅದನ್ನು ಕಡಿಮೆ ಮಾಡುವುದು/ಬಿಟ್ಟೇ ಬಿಡುವುದು ತುಂಬ ಒಳ್ಳೆಯದು. ಕಣ್ಣಿನಿಂದ ತಾನಾಗಿಯೇ ನೀರು ಬರುವಂಥ ತೊಂದರೆ ಕಾಣಿಸಿಕೊಂಡಲ್ಲಿ ತಕ್ಷಣವೇ ಸೂಕ್ತ ವೈದ್ಯೋಪಚಾರ ಮಾಡಿಸಿಕೊಳ್ಳಿ. ಮಹಿಳೆಯರು ತಮ್ಮ ಚರ್ಮ, ಕೂದಲಿನ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ. ನಿಮ್ಮಲ್ಲಿ ಕೆಲವರಿಗೆ ವಿವಾಹ ನಿಶ್ಚಯ ಆಗುವಂಥ ಯೋಗ ಇದೆ. ಆದ್ದರಿಂದ ಅದರ ಸಿದ್ಧತೆ ಹಾಗೂ ಅದಕ್ಕೆ ಬೇಕಾದಂಥ ವಸ್ತುಗಳನ್ನು ಒದಗಿಸಿಕೊಳ್ಳುವುದಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಉನ್ನತ ಶಿಕ್ಷಣಕ್ಕಾಗಿ, ವಿದೇಶದಲ್ಲಿ ಕೆಲಸ, ವ್ಯಾಪಾರ- ವ್ಯವಹಾರಗಳಿಗೆ ತೆರಳುವಂಥ ಪ್ರಯತ್ನ ಮಾಡುತ್ತಿರುವವರಿಗೆ ಇಲ್ಲಿಯ ತನಕ ಎದುರಾದಂಥ ಅಡೆತಡೆ ನಿವಾರಿಸಿಕೊಳ್ಳಲು ಸಾಧ್ಯ ಆಗಲಿದೆ. ಇನ್ನು ನಿಮ್ಮಲ್ಲಿ ಕೆಲವರು ಹೊಸ ಕೋರ್ಸ್ ಗಳಿಗೆ ಸೇರ್ಪಡೆ ಆಗುವಂಥ ಯೋಗ ಇದೆ. ನಿಮಗೆ ಬರಬೇಕಾದ ಹಳೇ ಸಾಲದ ಬಾಕಿ ವಸೂಲಿಗೆ ಉತ್ತಮ ಸಮಯ ಇದಾಗಿರಲಿದೆ. ನಿಮ್ಮ ಜೊತೆಗೆ ಪಾಲುದಾರಿಕೆ ಮಾಡಲು ಸ್ನೇಹಿತರು- ಸಂಬಂಧಿಕರ ಪೈಕಿ ಕೆಲವರು ತಾವಾಗಿಯೇ ಮುಂದೆ ಬರಬಹುದು. ಪಿತ್ರಾರ್ಜಿತವಾಗಿ ಬಂದಂಥ ಆಸ್ತಿ ಮೂಲಕ ಹಣವೋ ಅಥವಾ ಒಡವೆಯೋ ನಿಮ್ಮ ಪಾಲಿಗೆ ಬರುವಂಥ ಯೋಗ ಇದೆ. ಅನಿಶ್ಚಿತತೆಯಲ್ಲಿ ಇದ್ದಂಥ ಭೂಮಿ ವ್ಯವಹಾರಗಳನ್ನು ಮಾತುಕತೆ ಮೂಲಕವಾಗಿ ಪೂರ್ತಿ ಮಾಡಿಕೊಳ್ಳಲಿದ್ದೀರಿ. ಪುರಾತತ್ವ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಜನಪ್ರಿಯತೆ, ಕೀರ್ತಿ ಹಾಗೂ ಸ್ಥಾನಮಾನ ಹೆಚ್ಚಾಗುವ ಸಾಧ್ಯತೆ ಇದೆ. ಬಹಳ ಸಮಯದಿಂದ ಮಾಡಿಕೊಂಡು ಬಂದಿದ್ದಂಥ ಹೂಡಿಕೆ ಹಣವನ್ನು ತೆಗೆದು, ಸ್ಥಿರಾಸ್ತಿ ಮೇಲೆ ಹೂಡಿಕೆ ಮಾಡುವ ಯೋಗ ನಿಮ್ಮಲ್ಲಿ ಕೆಲವರಿಗೆ ಇದೆ. ಕೃಷಿಕರು ಮರ ಕೃಷಿಯನ್ನೇ ತಮ್ಮ ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದೀರಿ ಅಂತಾದಲ್ಲಿ ಮನಸ್ಸಿಗೆ ಸಮಾಧಾನ- ತೃಪ್ತಿ ಆಗುವಂಥ ಬೆಳವಣಿಗೆಗಳು ಆಗಲಿವೆ. ಕೆಲವು ಸಂಸ್ಥೆ ಅಥವಾ ವ್ಯಕ್ತಿಗಳು ತಾವಾಗಿಯೇ ನಿಮ್ಮ ಬಳಿ ಬಂದು, ದೊಡ್ಡ ಮೊತ್ತವೊಂದನ್ನು ನೀಡಿ, ನೀವು ಬೆಳೆ ಕೃಷಿ ಉತ್ಪನ್ನದ ಖರೀದಿಗೆ ಒಪ್ಪಂದ ಮಾಡಿಕೊಳ್ಳಬಹುದು. ಒಟ್ಟಾರೆ ನಿಮ್ಮ ದೂರದೃಷ್ಟಿ ಹಾಗೂ ಬುದ್ಧಿವಂತಿಕೆ ಫಲ ನೀಡುವಂಥ ಸಮಯ ಇದಾಗಿರುತ್ತದೆ. ವೃತ್ತಿಪರರಿಗೆ ಬಿಡುವು ಇಲ್ಲದಷ್ಟು ಕೆಲಸಗಳು ಹುಡುಕಿಕೊಂಡು ಬರಲಿವೆ. ನಿಮಗೆ ಬಹಳ ಆಪ್ತರಾದವರು ಒಬ್ಬರು ತಮಗೆ ಇರುವಂಥ ಕ್ಲೈಂಟ್ ಪೈಕಿ ಕೆಲವರನ್ನು ನಿಮಗೆ ರೆಫರ್ ಮಾಡುವುದಾಗಿ ಹೇಳಿಬಹುದು. ಇನ್ನು ಇದರಿಂದ ನಿಮ್ಮ ಆದಾಯದಲ್ಲಿ ದೊಡ್ಡ ಮಟ್ಟದ ಏರಿಕೆ ಆಗಲಿದೆ. ಇದಕ್ಕಾಗಿ ಕೆಲವರನ್ನು ಹೊಸದಾಗಿ ಕೆಲಸಕ್ಕೆ ತೆಗೆದುಕೊಳ್ಳುವ ನಿರ್ಧಾರ ಸಹ ನೀವು ಮಾಡಬಹುದು. ವಿದ್ಯಾರ್ಥಿಗಳು ಇಷ್ಟು ಸಮಯ ಯಾವ ಸಬ್ಜೆಕ್ಟ್ ಬಹಳ ಕಷ್ಟ ಎಂದು ಚಿಂತೆಗೆ ಗುರಿ ಆಗಿದ್ದಿರೋ ಅದು ದೂರವಾಗುವಂಥ ಬೆಳವಣಿಗೆಗಳು ನಡೆಯಲಿವೆ. ಆ ವಿಷಯದ ಬಗ್ಗೆ ತುಂಬ ಚೆನ್ನಾಗಿ ಪಾಠ ಹೇಳಿಕೊಡುವಂಥ ಉಪನ್ಯಾಸಕರ ಬಗ್ಗೆ ನಿಮಗೆ ಮಾಹಿತಿ ದೊರೆಯಲಿದ್ದು, ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಮಹಿಳೆಯರು ತಮ್ಮ ಹಕ್ಕಿನ ಬಗ್ಗೆ ಗಟ್ಟಿಯಾದ ಧ್ವನಿಯಲ್ಲಿ ಕೇಳಲಿದ್ದೀರಿ ಮತ್ತು ಹೇಳಲಿದ್ದೀರಿ. ಇಷ್ಟು ಸಮಯ ಎಲ್ಲ ವಿಷಯಗಳಿಗೂ ಮೂಗು ತೂರಿಸಿಕೊಂಡು ಬರುತ್ತಿದ್ದ ವ್ಯಕ್ತಿಗಳಿಗೆ ಎಚ್ಚರಿಕೆಯ ಮಾತುಗಳನ್ನು ಹೇಳುವ ಸಾಧ್ಯತೆ ಇದೆ. ನೀವು ಆ ರೀತಿ ಎಂದಿಗೂ ಮಾತನಾಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಭಾವಿಸಿದ್ದವರು ಅಚ್ಚರಿ ಹಾಗೂ ಗಾಬರಿ ಪಡುವಂಥ ಬೆಳವಣಿಗೆ ಆಗಲಿದೆ.

ಇದನ್ನೂ ಓದಿ: ವಾರದ ಉದ್ಯೋಗ ಭವಿಷ್ಯ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಇಲ್ಲಿಯ ತನಕ ಆಗಿದ್ದೆಲ್ಲ ಆಯಿತು, ಇನ್ನು ಮುಂದೆ ಯಾವುದೇ ಕೆಲಸ- ಕಾರ್ಯದಲ್ಲಿ ಅಂದುಕೊಳ್ಳದ ಬೆಳವಣಿಗೆಗಳು ಆಗಬಾರದು ಎಂಬ ಗಟ್ಟಿ ಸಂಕಲ್ಪ ಮಾಡಿಕೊಂಡು, ಯೋಚನೆ ಮಾಡುವ ವಿಧಾನ- ಪ್ರಕ್ರಿಯೆಯಲ್ಲಿಯೇ ಬದಲಾವಣೆ ಮಾಡಿಕೊಳ್ಳಲು ಮುಂದಾಗಲಿದ್ದೀರಿ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ನಿಯೋಜನೆ ಮೇಲೆ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಬಹುದು. ಇನ್ನು ಮನೆಯಲ್ಲಿ ಮಕ್ಕಳ ಸಲುವಾಗಿ ಮಾಡಬೇಕು ಎಂದುಕೊಂಡಿದ್ದ ನಿರ್ಮಾಣ, ಹೊಸ ಅನುಕೂಲಗಳನ್ನು ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ತರಬೇಕು ಎಂಬ ನಿಟ್ಟಿನಲ್ಲಿ ಕೆಲಸ ಆರಂಭ ಮಾಡಲಿದ್ದೀರಿ. ನಾಟಕ- ರಂಗಭೂಮಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಇರುವಂಥವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಇನ್ನು ಕೆಲವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಹುದ್ದೆಗಳ ನಿರ್ವಹಣೆ ಮಾಡುವಂತೆ ಆಹ್ವಾನ ಬರುವ ಯೋಗ ಸಹ ಇದೆ. ಕಣ್ಣಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಯಿಂದ ಏನಾದರೂ ಬಳಲುತ್ತಾ ಇದ್ದಲ್ಲಿ ಅದು ತೀವ್ರವಾಗುವ ಸಾಧ್ಯತೆ ಇದೆ. ಸಮಸ್ಯೆಯನ್ನು ಆರಂಭದ ಹಂತದಲ್ಲಿಯೇ ಬಗೆಹರಿಸಿಕೊಳ್ಳುವುದು ಕ್ಷೇಮ. ಆಮೇಲೆ ನೋಡಿದರಾಯಿತು ಎಂದು ಮುಂದಕ್ಕೆ ಹಾಕಿಕೊಂಡು ಹೋಗಬೇಡಿ. ಕೃಷಿಕರು ದಯಾ- ದಾಕ್ಷಿಣ್ಯಕ್ಕೆ ಬಿದ್ದು, ಕಡಿಮೆ ಖರ್ಚಿನಲ್ಲಿ ಮುಗಿಯಬೇಕಾದ ಕೆಲಸಗಳಿಗೆ ಹೆಚ್ಚಿನ ಮೊತ್ತವನ್ನು ನೀಡುವಂತೆ ಆಗಲಿದೆ. ಮಕ್ಕಳ ಶಿಕ್ಷಣ ಹಾಗೂ ಉದ್ಯೋಗ ವಿಚಾರವಾಗಿ ದೊಡ್ಡ ಮಟ್ಟದ ಬೆಂಬಲ ನೀಡಲೇಬೇಕು ಎಂಬ ಸನ್ನಿವೇಶ ಸೃಷ್ಟಿ ಆಗಲಿದೆ. ಕುಟುಂಬದ ಎಲ್ಲ ಸದಸ್ಯರನ್ನು ಒಟ್ಟಿಗೆ ಕೂರಿಸಿಕೊಂಡು, ಈ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಇರುವ ಆಲೋಚನೆ ಹೇಳಿಕೊಳ್ಳಲಿದ್ದೀರಿ. ವೃತ್ತಿಪರರಿಗೆ ತಾವು ಏನೆಲ್ಲ ಅಂದಾಜು ಮಾಡಿದ್ದರೋ ಅವೆಲ್ಲ ಒಂದೊಂದಾಗಿ ನಿಜವಾಗಲು ಶುರು ಆಗುತ್ತದೆ. ನಿಮ್ಮ ಕೆಲವು ಕ್ಲೈಂಟ್ ಗಳು ತಾವಾಗಿಯೇ ಮುಂದೆ ಬಂದು, ನಿಮಗೆ ಅಗತ್ಯ ಇರುವ ಸೌಕರ್ಯಗಳನ್ನು ಮಾಡಿಕೊಳ್ಳಲು ಬೇಕಾದಂಥ ಹಣಕಾಸಿನ ನೆರವು ನೀಡುವುದಾಗಿ ಹೇಳಬಹುದು. ಇದರಿಂದಾಗಿ ನಿಮ್ಮ ಆತ್ಮವಿಶ್ವಾಸ ಮತ್ತೂ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಬೆನ್ನು ನೋವಿನ ಸಮಸ್ಯೆಯಿಂದ ಬಳಲುವಂತೆ ಆಗಬಹುದು. ನಿಮ್ಮಲ್ಲಿ ಕೆಲವರು ಬೀಳುವುದರಿಂದಲೋ ಅಥವಾ ದೇಹದ ತೂಕದ ಕಾರಣಕ್ಕೋ ಅಥವಾ ನೀವು ಮಲಗುವ ಭಂಗಿಯ ಕಾರಣದಿಂದ ಇಂಥ ಸಮಸ್ಯೆಗಳನ್ನು ಎದುರಿಸುವಂತೆ ಆಗಲಿದೆ. ನಿಮ್ಮ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳದಿದ್ದಲ್ಲಿ ಅಷ್ಟರ ಮಟ್ಟಿಗೆ ಸಮಸ್ಯೆಗಳು ಕಡಿಮೆಯಾಗಲಿವೆ. ಮಹಿಳೆಯರು ಯಾರು ಸಂತಾನಕ್ಕೆ ಪ್ರಯತ್ನ ಮಾಡುತ್ತಿದ್ದೀರಿ, ಅದರಲ್ಲೂ ವೈದ್ಯಕೀಯ ಪದ್ಧತಿ ಐವಿಎಫ್ ಮೂಲಕ ಯತ್ನಿಸುತ್ತಾ ಇದ್ದೀರಿ, ಅಂಥವರು ಕೆಲವು ಅಡೆತಡೆಗಳನ್ನು ಕಾಣುವಂತೆ ಆಗಬಹುದು. ಉದ್ಯೋಗಸ್ಥ ಮಹಿಳೆಯರು ತಮ್ಮ ಬಜೆಟ್ ಎಷ್ಟಿದೆಯೋ ಅಷ್ಟರಲ್ಲಿಯೇ ತಾವು ಅಂದುಕೊಂಡ ಕೆಲಸಗಳನ್ನು ಮುಗಿಸುವುದಕ್ಕೆ ಪ್ರಯತ್ನಿಸಬೇಕು. ಹೆಚ್ಚಿನ ಸಾಲ ಮಾಡಿಕೊಂಡಲ್ಲಿ ಆ ನಂತರ ಪರಿತಪಿಸುವಂತೆ ಆಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಸಣ್ಣದಾದ ಸಮಸ್ಯೆಯಂತೆ ಶುರುವಾಗಿದ್ದು ದೊಡ್ಡ ಮಟ್ಟದ ತಲೆನೋವಾಗಿ ಮಾರ್ಪಡುವ ಸಾಧ್ಯತೆಗಳಿವೆ. ಮುಖ್ಯವಾಗಿ ಜಮೀನು, ಸೈಟು, ಮನೆಯ ಕಾಗದ- ಪತ್ರಗಳ ವಿಚಾರದಲ್ಲಿ ತೊಡಕುಗಳು ಇವೆ ಎಂದೇನಾದರೂ ಸುಳಿವು ಸಿಕ್ಕಲ್ಲಿ ತಕ್ಷಣವೇ ಸೂಕ್ತ ಕ್ರಮವನ್ನು ತೆಗೆದುಕೊಳ್ಳಿ. ಯಾವುದೇ ವ್ಯಕ್ತಿಯ ಅಥವಾ ಒಂದು ಗುಂಪಿನ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡಿದಲ್ಲಿ ಆ ನಂತರ ಪರಿತಪಿಸುವಂತೆ ಆಗಲಿದೆ. ಸಂಬಂಧಿಕರು- ಸ್ನೇಹಿತರ ಬಳಿ ಏನಾದರೂ ಸಾಲವನ್ನು ಪಡೆದುಕೊಂಡಿದ್ದಲ್ಲಿ ಒಂದೋ ಅವಧಿಗೆ ಮುಂಚೆಯೇ ಹಿಂತಿರುಗಿಸುವಂತೆ ಕೇಳಬಹುದು. ಅಥವಾ ಈ ಸಮಯಕ್ಕೆ ನೀಡುವುದಾಗಿ ನೀವೇ ನೀಡಿದ್ದ ಮಾತಿನಂತೆ ನಡೆದುಕೊಳ್ಳಲು ನಿಮಗೆ ಸಾಧ್ಯವಾಗದೇ ಹೋಗಬಹುದು. ಇನ್ನು ಸಂಪೂರ್ಣವಾಗಿ ಮಾಹಿತಿ ಇಲ್ಲದ ವಿಚಾರದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದೋ ಅಥವಾ ಸೋಷಿಯಲ್ ಮೀಡಿಯಾಗಳಲ್ಲಿ ಆ ವಿಚಾರದ ಬಗ್ಗೆ ಪೋಸ್ಟ್ ಹಾಕುವುದೋ ಮಾಡಬೇಡಿ. ಮನೆಯಲ್ಲಿ ವಿದ್ಯುತ್ ಉಪಕರಣಗಳನ್ನು ಬಳಸುವಾಗ ಸಾಮಾನ್ಯ ದಿನಗಳಲ್ಲಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು. ಕೃಷಿಕರು ಬೆಳೆ ನಷ್ಟ ಅನುಭವಿಸುವಂತೆ ಆಗಬಹುದು. ಅಥವಾ ತಾವು ಬೆಳೆದ ಬೆಳೆಗೆ ಬೆಲೆ ಇಲ್ಲದಂತೆಯೋ ಅಥವಾ ತಾವು ಈ ಹಿಂದೆ ಒಬ್ಬರಿಗೆ ನೀಡಿದಂಥ ಮಾತಿನ ಪ್ರಕಾರ ಅವರಿಗೇ ಮಾರಾಟ ಮಾಡುವ ಪರಿಸ್ಥಿತಿಗೆ ಕಟ್ಟುಬಿದ್ದು, ನಷ್ಟ ಕಾಣುವಂತೆ ಆಗಬಹುದು. ನಿಮ್ಮ ತಿಳಿವಳಿಕೆಯ ಮಿತಿಯನ್ನು ಅರಿತು ಮಾತನಾಡುವುದು ಒಳ್ಳೆಯದು. ಅತ್ಯುತ್ಸಾಹದಲ್ಲಿ ನೀವು ಹೇಳಿದ ವಿಷಯಗಳು, ಆಡಿದ ಮಾತಿನಿಂದಾಗಿ ದೊಡ್ಡ ಸಮಸ್ಯೆಗಳನ್ನು ಎದುರಿಸುವಂತೆ ಆಗಬಹುದು, ಎಚ್ಚರ. ವೃತ್ತಿನಿರತರಿಗೆ ಎಲ್ಲ ವಿಚಾರದಲ್ಲೂ ಗೊಂದಲ ಸೃಷ್ಟಿ ಆಗಬಹುದು. ನಿಮ್ಮ ಸಾಮರ್ಥ್ಯದ ಬಗ್ಗೆಯೇ ಅನುಮಾನ ಮೂಡುವುದಕ್ಕೆ ಶುರು ಆಗುತ್ತದೆ. ಹೊಸ ಸಾಫ್ಟ್ ವೇರ್ ಬಳಕೆ ಮಾಡುತ್ತಿದ್ದೀರಿ ಅಥವಾ ನೀವು ಈ ತನಕ ಮಾಡದಿದ್ದ ಕೆಲಸವೊಂದನ್ನು ಮಾಡುತ್ತಿದ್ದೀರಿ ಅಂತಾದಲ್ಲಿ ಪರಿಣತರ ಮಾರ್ಗದರ್ಶನವನ್ನು ತೆಗೆದುಕೊಳ್ಳುವುದು ಕ್ಷೇಮ. ವಿದ್ಯಾರ್ಥಿಗಳು ದೈಹಿಕವಾಗಿ ಸದೃಢ ಆಗಬೇಕು ಎಂಬ ಉದ್ದೇಶದಿಂದ ಜಿಮ್, ಯೋಗ ಇಂಥವುಗಳಿಗೆ ಸೇರ್ಪಡೆ ಆಗುವಂಥ ಯೋಗ ಇದೆ. ಒಂದು ವೇಳೆ ತಾತ್ಕಾಲಿಕವಾಗಿಯಾದರೂ ಸಂಬಂಧಿಗಳ ಮನೆಗೆ ತೆರಳುತ್ತಿದ್ದೀರಿ ಅಂತಾದಲ್ಲಿ ಸಲುಗೆ ತೆಗೆದುಕೊಂಡು ಎಲ್ಲೆಂದರಲ್ಲಿ ಓಡಾಟ ನಡೆಸುವುದು ಒಳ್ಳೆಯದಲ್ಲ. ನಿಮ್ಮ ಮೇಲೆ ಆರೋಪಗಳು ಬರಬಹುದು, ಎಚ್ಚರಿಕೆ ವಹಿಸಿ. ಮಹಿಳೆಯರು ತಮ್ಮ ಬಳಿ ಇರುವಂಥ ರಹಸ್ಯ ಸಂಗತಿಗಳನ್ನು ಜೋಪಾನವಾಗಿ ಇರಿಸಿಕೊಳ್ಳುವುದು ಬಹಳ ಮುಖ್ಯ ಆಗಲಿದೆ. ಅತಿಯಾದ ಉತ್ಸಾಹದಲ್ಲೋ ಅಥವಾ ಮೈ ಮರೆವೆಯಲ್ಲೋ ಆಡಿದಂಥ ಮಾತುಗಳು ದೊಡ್ಡ ಮಟ್ಟದ ಮುಜುಗರಕ್ಕೆ ಕಾರಣ ಆಗಬಹುದು. ಇತರರ ಹಣಕಾಸಿನ ವಿಚಾರದಲ್ಲಿಯಂತೂ ಯಾವ ಕಾರಣಕ್ಕೂ ಮೂಗು ತೂರಿಸಿಕೊಂಡು ಹೋಗಬೇಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನೀವಾಗಿಯೇ ಮೈ ಮೇಲೆ ಹಾಕಿಕೊಂಡ ಜವಾಬ್ದಾರಿಗಳು ಹಣ್ಣುಗಾಯಿ ನೀರುಗಾಯಿ ಮಾಡಲಿವೆ. ಜ್ಯೋತಿಷ್ಯ, ಪೌರೋಹಿತ್ಯ ಸೇರಿದಂತೆ ಯಾವುದೇ ಧಾರ್ಮಿಕ ವೃತ್ತಿಯನ್ನು ಮಾಡಿಕೊಂಡು ಬರುತ್ತಾ ಇರುವವರಿಗೆ ಆದಾಯ ಹಾಗೂ ಆದಾಯದ ಮೂಲ ಎರಡರಲ್ಲೂ ಹೆಚ್ಚಳ ಆಗುವ ಯೋಗ ಇದೆ. ಪರಿಸರಪ್ರೇಮಿಗಳು, ಪರಿಸರ ಹೋರಾಟಗಾರರಿಗೆ ತಾವು ನಡೆಸಿಕೊಂಡು ಬಂದಂಥ ದೀರ್ಘ ಕಾಲದ ಹೋರಾಟದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವಂಥ ಯಶಸ್ಸು ದೊರೆಯಲಿದೆ. ನಾಲ್ಕಾರು ಸ್ನೇಹಿತರು ಸೇರಿ ಒಟ್ಟಾಗಿ ಸೈಟು ಖರೀದಿ ಮಾಡಿ, ಅಲ್ಲಿ ಮನೆ ನಿರ್ಮಾಣ ಮಾಡಬೇಕು ಎಂಬ ಪ್ರಯತ್ನವನ್ನು ಮಾಡುತ್ತಿದ್ದಲ್ಲಿ ಅದು ಸಾಧ್ಯವಾಗಲಿದೆ. ನೀವು ಮಾಡಿಕೊಂಡ ಗುಂಪಿನ ಎಲ್ಲರ ಮನಸ್ಸಿಗೂ ಒಪ್ಪುವಂಥ ಸ್ಥಳದಲ್ಲಿ ಸೈಟು ದೊರೆಯಲಿದ್ದು, ಆ ಮೊತ್ತವೂ ಹಾಕಿಕೊಂಡ ಬಜೆಟ್ ಒಳಗಾಗಿಯೇ ಇರಲಿದೆ. ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತು, ಹೆಸರು ಹಾಗೂ ಕೀರ್ತಿ- ಪ್ರಖ್ಯಾತಿಗಳು ಹುಡುಕಿಕೊಂಡು ಬರಲಿವೆ. ಕೃಷಿಕರಿಗೆ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ಭುಜದ ನೋವು, ಕಿಡ್ನಿ ಸ್ಟೋನ್, ವೆರಿಕೋಸ್ ಇಂಥ ತೊಂದರೆಗಳು ಕಾಣಿಸಿಕೊಂಡು ಬಹಳ ಹಿಂಸೆ ಪಡುವಂತೆ ಆಗಬಹುದು. ಸ್ನೇಹಿತರ ಮಾತಿಗೆ ಕಟ್ಟುಬಿದ್ದು ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಕೆಲಸ- ಕಾರ್ಯಗಳನ್ನು ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ. ಇದರಿಂದ ಅವಮಾನಕ್ಕೆ ಗುರಿ ಆಗುವಂಥ ಸನ್ನಿವೇಶ ಸೃಷ್ಟಿ ಆಗುತ್ತದೆ. ವೃತ್ತಿನಿರತರು ಆದಾಯ ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ಶತಾಯ ಗತಾಯ ಪ್ರಯತ್ನಗಳನ್ನು ಆರಂಭ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಈಗಿರುವ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದಕ್ಕೆ ಮುಂದಾಗಬಹುದು. ಇನ್ನು ಇದೇ ವೇಳೆ ನೀವು ನೀಡಿದ್ದ ಮಾತುಗಳನ್ನು ಮುರಿಯುವಂಥ ಸನ್ನಿವೇಶ ಸಹ ಸೃಷ್ಟಿ ಆಗಲಿದ್ದು, ಇಂಥ ಪರಿಸ್ಥಿತಿ ಹೇಗೆ ನಿಭಾಯಿಸುತ್ತೀರಿ ಎಂಬ ಬಗ್ಗೆ ಸ್ಪಷ್ಟವಾದ ಆಲೋಚನೆ ಇರುವುದು ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ಹಣಕಾಸಿನ ವಿಚಾರಕ್ಕೆ ದೂಷಣೆಗೆ ಒಳಗಾಗುತ್ತೀರಿ. ಲೆಕ್ಕವನ್ನು ಸರಿಯಾಗಿ ನೀಡುವ ಕಡೆಗೆ ಲಕ್ಷ್ಯವನ್ನು ನೀಡಿ. ತಂದೆ- ತಾಯಿ ನಿಮ್ಮ ಮೇಲೆ ಇರಿಸಿಕೊಂಡ ನಂಬಿಕೆಯನ್ನು ಹಾಗೂ ವಿಶ್ವಾಸವನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನವನ್ನು ಪಡಿ. ನಿಮ್ಮ ವಯಸ್ಸಿಗೆ ಮೀರಿದ ಮಾತುಗಳನ್ನು ಆಡಬೇಡಿ. ಮಹಿಳೆಯರು ಸಮಾನ ಮನಸ್ಕರು, ಸಮಾನ ವಯಸ್ಕರೊಂದಿಗೆ ಪ್ರವಾಸ ತೆರಳುವಂಥ ಯೋಗ ಇದೆ. ಕುಟುಂಬದಲ್ಲಿ ಒಂದು ಮನಸ್ತಾಪ, ಜಗಳ ಅಥವಾ ಕಲಹ ಇದ್ದಲ್ಲಿ ಅವುಗಳನ್ನು ನಿವಾರಿಸಿಕೊಳ್ಳಲು ಬೇಕಾದಂಥ ವೇದಿಕೆ ದೊರೆಯಲಿದೆ. ಜಮೀನು- ಮನೆ ಪತ್ರಗಳು ನಿಮ್ಮ ಹೆಸರಿನಲ್ಲಿದ್ದಲ್ಲಿ ಅದಕ್ಕೆ ಸಂಬಂಧಿಸಿದಂತೆ ಕೆಲವು ವ್ಯಾಜ್ಯಗಳು ಕಾಣಿಸಿಕೊಳ್ಳಬಹುದು ಅಥವಾ ಕೋರ್ಟ್- ಕಚೇರಿ ಅಲೆದಾಡುವಂತೆ ಆಗಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ ಅಥವಾ ಸರ್ಕಾರಿ ಇಲಾಖೆಗಳಲ್ಲಿ ಆಗಬೇಕಾದ ಕೆಲಸ- ಕಾರ್ಯಗಳನ್ನು ನಯ ನಾಜೂಕಿನಿಂದ ಮಾಡಿ ಮುಗಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಒಂದು ವೇಳೆ ಸಿಟ್ಟಿನಿಂದ ಮಾತನಾಡಿದಿರೋ ಅಥವಾ ಕೂಗಾಟ- ಕಿರುಚಾಟ ಮಾಡಿದಿರೋ ಕೊನೆ ಕ್ಷಣದಲ್ಲಿ ಕೆಲಸ ಕೆಟ್ಟಂತೆ ಆಗಲಿದೆ. ತಿಂಗಳಾ ತಿಂಗಳು ನಿಶ್ಚಿತವಾದ ಆದಾಯ ಬರುವಂತೆ ಮಾಡಿಕೊಳ್ಳಲು ಬೇಕಾದ ಪ್ರಯತ್ನಗಳನ್ನು ಶುರು ಮಾಡಲಿದ್ದೀರಿ. ಈ ಹಿಂದೆ ನೀವಾಗಿಯೇ ಬೇಡ ಅಂದುಕೊಂಡಿದ್ದ ಹಾಗೂ ಅದನ್ನು ಇನ್ನು ಮುಂದೆ ಮಾಡುವುದಿಲ್ಲ ಎಂದು ತಿಳಿಸಿದ್ದ ಕೆಲವು ಕೆಲಸಗಳನ್ನು ಮತ್ತೆ ಮುಂದುವರಿಸಿಕೊಂಡು ಹೋಗುವುದಾಗಿ ಹೇಳುವ ಸಾಧ್ಯತೆಗಳಿವೆ. ಚಿನ್ನ- ಬೆಳ್ಳಿ ಮತ್ತಿತರ ಲೋಹಗಳ ಕಮಾಡಿಟಿ ಎಕ್ಸ್ ಚೇಂಜ್ ವ್ಯವಹಾರಗಳನ್ನು ಮಾಡುತ್ತಾ ಇರುವವರಿಗೆ ಈ ವಾರ ಹಲವು ರೀತಿಯಲ್ಲಿ ಸವಾಲುಗಳು ಇರುತ್ತವೆ. ಯಾರಿಗೂ ಹೇಳದಿರುವಂತೆ ಸೂಚನೆ ನೀಡಿ, ತಿಳಿಸಿದ್ದ ವಿಷಯವೊಂದು ಎಲ್ಲ ಕಡೆಗೆ ಪ್ರಚಾರವಾಗಿ, ಅದಕ್ಕೆ ಕಾರಣಕರ್ತರು ನೀವೇ ಎಂಬುದು ತಿಳಿಯಲಿದೆ. ಇದರಿಂದ ಮುಜುಗರದ ಸನ್ನಿವೇಶ ಎದುರಾಗಲಿದೆ. ಕೃಷಿಕರಿಗೆ ಜಮೀನಿಗೆ ಸಂಬಂಧಿಸಿದ ಕಾಗದ- ಪತ್ರದ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ ಕಾರ್ಯಗಳು ಆಗುವಂಥ ಯೋಗ ಇದೆ. ಸರ್ವೇ, ಪೋಡಿ, ಖಾತೆ ಬದಲಾವಣೆ ಇತ್ಯಾದಿ ಕೆಲಸ- ಕಾರ್ಯಗಳನ್ನು ಮಾಡಿ ಮುಗಿಸಿಕೊಳ್ಳುವುದಕ್ಕೆ ಬೇಕಾದ ಸಹಾಯ- ನೆರವು ನಿಮಗೆ ದೊರೆಯಲಿದೆ. ಬಹಳ ಸಮಯದ ಹಿಂದೆಯೇ ಅಡ್ವಾನ್ಸ್ ನೀಡಿಯಾಗಿತ್ತು. ಆ ಭೂಮಿ ವ್ಯವಹಾರ ಹಾಗೇ ಬಾಕಿ ಉಳಿದುಹೋಗಿದೆ ಅಂತಾದಲ್ಲಿ ಅದನ್ನು ಮಾತುಕತೆ ಮೂಲಕ ಹೊಸ ಒಪ್ಪಂದಕ್ಕೆ ಬಂದು, ಆ ವ್ಯವಹಾರ ಸಲೀಸಾಗಿ ಮುಗಿಸುವುದಕ್ಕೆ ಬೇಕಾದ ವೇದಿಕೆ ಸಿದ್ಧವಾಗಲಿದೆ. ವೃತ್ತಿನಿರತರು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನವನ್ನು ಆರಂಭ ಮಾಡಲಿದ್ದೀರಿ. ಇದಕ್ಕಾಗಿ ಕೆಲವು ಪ್ರಮೋಷನಲ್ ಚಟುವಟಿಕೆಗಳನ್ನು ಸಹ ಆರಂಭ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ನಿಮ್ಮ ವಿರುದ್ಧ ಪೊಲೀಸ್ ಸ್ಟೇಷನ್ ಅಥವಾ ಕೋರ್ಟ್ ಮೆಟ್ಟಿಲು ಏರಿದವರು ಇದ್ದರೆ ಅವರಾಗಿಯೇ ಆ ಪ್ರಕರಣ ಹಿಂತೆಗೆದುಕೊಳ್ಳಬಹುದು ಅಥವಾ ತಾವಾಗಿಯೇ ರಾಜೀ- ಸಂಧಾನಕ್ಕೆ ಬರುವ ಅವಕಾಶ ಇದೆ. ವಿದ್ಯಾರ್ಥಿಗಳು ತಮ್ಮ ಕೆಲವು ನಿರ್ಧಾರಗಳನ್ನು ಬದಲಿಸುವಂಥ ಸಾಧ್ಯತೆ ಇದೆ. ಅದರಲ್ಲೂ ಮುಖ್ಯವಾಗಿ ತಾವು ಮುಂದೆ ತೆಗೆದುಕೊಳ್ಳಬೇಕು ಅಂದುಕೊಂಡಿದ್ದ ಕೋರ್ಸ್ ಅನ್ನು ಬೇರೆ ತೆಗೆದುಕೊಳ್ಳಬೇಕು ಎಂದುಕೊಳ್ಳಬಹುದು. ತಾವು ಸೇರಬೇಕು ಎಂದುಕೊಂಡಿದ್ದ ಶಿಕ್ಷಣ ಸಂಸ್ಥೆಯ ನಿರ್ಧಾರ ಕೂಡ ಬದಲಾಯಿಸುವಂತೆ ಆಗಬಹುದು. ಮಹಿಳೆಯರಿಗೆ ನಿಮ್ಮಲ್ಲಿ ಕೆಲವರಿಗೆ ಮಾನಸಿಕ ಖಿನ್ನತೆ ಕಾಡಬಹುದು. ಅದರಲ್ಲೂ ಮುಖ್ಯವಾಗಿ ಹಣಕಾಸಿನ ವಿಚಾರದಲ್ಲಿ ನಿಮ್ಮ ಅಸಹಾಯಕ ಪರಿಸ್ಥಿತಿ ಕಾರಣಕ್ಕೆ ಹೀಗಾಗಬಹುದು. ಅಂದ ಹಾಗೆ ಇದು ತಾತ್ಕಾಲಿಕವಾದ ಪರಿಸ್ಥಿತಿ ಆಗಿರಲಿದ್ದು, ಇದರಲ್ಲಿ ಸುಧಾರಣೆ ಕಾಣಲಿದೆ. ಒಡವೆ- ವಸ್ತ್ರಗಳ ಖರೀದಿಗೆ ತಮ್ಮ ಜೊತೆಗೆ ಬರಲೇಬೇಕು ಎಂದು ಇತರರು ಹಠ ಮಾಡಿದಲ್ಲಿ ಅವರ ಜೊತೆಗೆ ಹೋಗಬೇಕಾದ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ, ನಿರ್ಧಾರ ಕೈಗೊಳ್ಳಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮ ಬದುಕಲ್ಲಿ ಆಗುತ್ತಿರುವ ಬೆಳವಣಿಗೆಗಳು ಒಳ್ಳೆಯದ್ದಕ್ಕೋ ಅಥವಾ ಕೆಟ್ಟದ್ದಕ್ಕೋ ಎಂದು ನಿರ್ಧರಿಸುವುದಕ್ಕೆ ಸಾಧ್ಯವೇ ಇಲ್ಲದಂತೆ ಗೊಂದಲಕ್ಕೆ ಬೀಳುತ್ತೀರಿ. ಕುಟುಂಬದಲ್ಲಿ ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗಳನ್ನು ಮುಗಿಸುವುದಕ್ಕೆ ಸಾಧ್ಯವಾಗದೆ ನಿಂದನೆ ಮಾತುಗಳನ್ನು ಕೇಳಿಸಿಕೊಳ್ಳುವಂತೆ ಆಗಲಿದೆ. ಎಷ್ಟು ತಾಳ್ಮೆಯಿಂದ ಉತ್ತರಿಸಬೇಕು ಎಂದುಕೊಂಡರೂ ಧ್ವನಿಯಲ್ಲೋ ಅಥವಾ ಬಳಸುವ ಭಾಷೆಯಲ್ಲೋ “ಅಯ್ಯೋ ತಪ್ಪು ಮಾಡಿಬಿಟ್ಟೆನಲ್ಲಾ” ಎಂದು ನಿಮಗೇ ಅನಿಸುವಂತೆ ಆಗಲಿದೆ. ಹೊಸ ಉದ್ಯೋಗ ಅವಕಾಶಗಳು ನಿಮ್ಮಲ್ಲಿ ಕೆಲವರಿಗೆ ಹುಡುಕಿಕೊಂಡು ಬರಲಿವೆ. ಆದರೆ ಅದನ್ನು ಒಂದಲ್ಲಾ ಒಂದು ಕಾರಣಕ್ಕೆ ನೀವಾಗಿಯೇ ತಿರಸ್ಕರಿಸುವ ಸಾಧ್ಯತೆ ಇದೆ. ಸಾವಯವ ಪದಾರ್ಥಗಳನ್ನು ಮಾರಾಟ ಮಾಡುವ ಮೂಲಕ ಆದಾಯ ಪಡೆಯುತ್ತಾ ಇರುವವರಿಗೆ ದೊಡ್ಡ ಮಟ್ಟದ ಹಾಗೂ ದೊಡ್ಡ ಮೊತ್ತದ ಆರ್ಡರ್ ದೊರೆಯುವಂಥ ಯೋಗ ಇದೆ. ಇದರ ಸಲುವಾಗಿಯೇ ನಿಮ್ಮಲ್ಲಿ ಕೆಲವರು ದೂರದ ಊರುಗಳಿಗೆ ಪ್ರಯಾಣ ಮಾಡಲೇಬೇಕಾದ ಸನ್ನಿವೇಶ ಸಹ ಉದ್ಭವ ಆಗಲಿದೆ. ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುವಾಗ ನಿಮ್ಮ ವಸ್ತುಗಳನ್ನು ಜಾಗ್ರತೆಯಾಗಿ ನೋಡಿಕೊಳ್ಳಿ. ಕೃಷಿಕರು ಈಗಿರುವ ಬೆಳೆ ಪದ್ಧತಿಯನ್ನು ಬದಲಿಸಿ, ಹೊಸದಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದೀರಿ. ಇನ್ನು ಹೈನುಗಾರಿಕೆಯು ನಿಮ್ಮ ಆದಾಯದ ಪ್ರಮುಖ ಮೂಲವಾಗಿದ್ದಲ್ಲಿ ಅದರಲ್ಲಿ ಹೆಚ್ಚಳ ಆಗಲಿದೆ. ನೀವು ಈಗಾಗಲೇ ನೀಡಿದ ಅಥವಾ ಮಾರಾಟ ಮಾಡಿದ ಉತ್ಪನ್ನಗಳಿಗೆ ಬರಬೇಕಾದ ಹಣ ಇದ್ದಲ್ಲಿ ಅದು ವಸೂಲಿ ಆಗುವ ಸಾಧ್ಯತೆ ಇದೆ. ವೃತ್ತಿನಿರತರು ತುಂಬ ಆಕ್ರಮಣಕಾರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಆಗಲಿದೆ. ಯಾವುದರಲ್ಲೂ ರಾಜೀ ಮಾಡಿಕೊಳ್ಳುವ ಮನಸ್ಥಿತಿಯಲ್ಲಿ ನೀವಿರುವುದಿಲ್ಲ. ನಿಮಗೆ ನೀಡಿದ ಬಜೆಟ್ ಒಳಗೆ ಬೆರಗು ಮೂಡಿಸುವಂಥ ಫಲಿತಾಂಶ ನೀಡುವುದರಿಂದ ನಿಮ್ಮ ಕ್ಲೈಂಟ್ ಸಂತುಷ್ಟರಾಗಲಿದ್ದಾರೆ. ವಿದ್ಯಾರ್ಥಿಗಳು ತುರ್ತಾಗಿ ಪ್ರವಾಸಕ್ಕೆ ತೆರಳಲೇಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ಸ್ನೇಹಿತರು ಕೂಡ ಇದಕ್ಕಾಗಿ ನಿಮಗೆ ಜೊತೆ ಆಗಬಹುದು. ಮನೆಯ ಹೊರಗಿನ ಆಹಾರ ಪದಾರ್ಥಗಳನ್ನು ಸೇವನೆ ಮಾಡಲೇಬೇಕು ಎಂಬ ಸಂದರ್ಭದಲ್ಲಿ ಕರಿದ ಪದಾರ್ಥಗಳು ಹಾಗೂ ಮಸಾಲೆಯುಕ್ತ ಆಹಾರ ಪದಾರ್ಥಗಳಿಂದ ದೂರ ಇರುವುದಕ್ಕೆ ಪ್ರಯತ್ನಿಸಿ. ನಿಮ್ಮ ಉಪನ್ಯಾಸಕರು ನೀಡುವ ಸಲಹೆಗಳನ್ನು ಗಂಭೀರವಾಗಿ ಪ್ರಯತ್ನಿಸಿ. ಇತರರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಮಹಿಳೆಯರಿಗೆ ದೂರದ ಊರಿನಲ್ಲಿ ಇರುವ ಬಂಧುಗಳಿಂದ ಶುಭ ವಾರ್ತೆಯನ್ನು ಕೇಳುವಂಥ ಯೋಗ ಇದೆ. ಬಟ್ಟೆ- ಬರೆ, ಒಡವೆಗಳ ಖರೀದಿಗಾಗಿ ಹೆಚ್ಚಿನ ಖರ್ಚನ್ನು ಮಾಡಲಿದ್ದೀರಿ. ನಿಮ್ಮ ಹಳೇ ಗೆಳೆಯ- ಗೆಳತಿಯರು ಭೇಟಿ ಆಗುವುದರಿಂದ ಮನಸ್ಸಿಗೆ ಸಂತೋಷ ಆಗಲಿದ್ದು, ಅವರ ಜೊತೆಗೆ ಹೋಟೆಲ್- ರೆಸ್ಟೋರೆಂಟ್ ಗಳಿಗೆ ತೆರಳುವಂಥ ಯೋಗ ಇದೆ.

ಲೇಖನ- ಎನ್‌.ಕೆ.ಸ್ವಾತಿ