
ಹಸ್ತ ನಕ್ಷತ್ರ ಹದಿಮೂರನೇ ನಕ್ಷತ್ರ. ಇದು ಹಸ್ತದ ಆಕಾರದಲ್ಲಿ ಕಾಣುವ ಐದು ನಕ್ಷತ್ರಗಳ ಸಮೂಹ. ಇದರ ದೇವತೆ ಸಾಕ್ಷಾತ್ ಸೂರ್ಯ. ಈ ನಕ್ಷತ್ರವು ಕನ್ಯಾರಾಶಿಗೆ ಸೇರಿದುದಾಗಿದೆ. ಇದರ ಅಕ್ಷರಗಳು ಪು ಷ ಣ ಠ. ಇದು ಮಹಿಷ ಯೋನಿಗೆ ಸೇರಿದ ನಕ್ಷತ್ರ. ದೇವಗಣಕ್ಕೆ ಸೇರಿದ್ದು, ಆದಿ ನಾಡಿಯಾಗಿರುವುದು. ಈ ನಕ್ಷತ್ರವು ಅನೇಕ ಸಂಸ್ಕಾರಕರ್ಮಗಳಿಗೆ ಯೋಗ್ಯವಾದುದೇ ಆಗಿದೆ. ಇಂತಹ ನಕ್ಷತ್ರದಲ್ಲಿ ಜನಿಸಿಸವರು ಹೇಗಿರಬಹುದು.
ಇವರ ಗುಣದಲ್ಲಿ ಮೊದಲು ಕಾಣುವುದೇ ಉತ್ಸಾಹ. ಸೂರ್ಯನು ಹೇಗೆ ನಿತ್ಯೋತ್ಸಾಹಿಯಾಗಿ ಪ್ರತಿದಿನ ಪ್ರತಿಕ್ಷಣ ಖಗೋಳದಲ್ಲಿ ನಿಗಿನಿಗಿಯುತ್ತಿರುವನೋ ಅದೇ ರೀತಿಯಲ್ಲಿ ಎಲ್ಲ ಕಾರ್ಯದಲ್ಲಿ ಉತ್ಸಾಹವನ್ನು ಕಾಣಬಹದು.
ನಾಚಿಕೆಯ ಸ್ವಭಾವ ಇವರ ಬಳಿ ಸುಳಿಯದು. ಎಲ್ಲವನ್ನೂ ನಿರ್ಬಿಡೆಯಿಂದ ಪೂರೈಸುವರು. ಇದು ಧೈರ್ಯ ಎನಿಸಿಕೊಳ್ಳದು, ಮಾಡಬಾರದ್ದನ್ನು ಮಾಡಲು ಮನಸ್ಸಿಗೆ ಸಂಕೋಚವಿರದು ಎಂದರ್ಥ.
ಪಾನಮತ್ತತೆ ಅಧಿಕವಾಗಿರುವುದು ಅಥವಾ ಮತ್ತಿನ ಪದಾರ್ಥಗಳನ್ನು ಸೇವಿಸುವರು. ಧೈರ್ಯವನ್ನು ಅಥವಾ ಶಕ್ತಿಯನ್ನು ಕೊಡಲು ಯಾವುದಾದರೂ ಪದಾರ್ಥಗಳನ್ನು ಸೇವಿಸುವರು.
ಯಾರ ಬಗ್ಗೆಯೂ ಕರುಣೆ ಇರದು. ಎಲ್ಲರ ಜೊತೆ ಬಹಳ ಕಠೋರವಾಗಿ ವರ್ತಿಸುವರು. ಮಾತುಗಳೂ ಕೂಡ ತೀಕ್ಷ್ಣವಾಗಿ ಇರುವುದು.
ಪರರ ಒಳ್ಳೆ ಸ್ವತ್ತನ್ನು ಅಸೆಪಟ್ಟು, ಅದು ತಮ್ಮ ಸ್ವತ್ತಾಗಿ ಮಾಡಿಕೊಳ್ಳುವವರು ಇವರು. ಒಳ್ಳೆಯ ಮನಸ್ಸನ್ನೂ ಪರಿವರ್ತಿಸುವ ಕುಶಲಿಗಳು.
ಮಾತಿನಲ್ಲಿ ಸತ್ಯ ಕಾಣಿಸುವುದು ಬಹಳ ಕಡಿಮೆ. ಎಲ್ಲ ವಿಚಾರಕ್ಕೂ ಸುಳ್ಳು ಹೇಳಿ ಅವರಿಗೆ ಆಗಬೇಕಾದುದನ್ನು ಮಾಡಿಸಿಕೊಳ್ಳುವರು. ಇವರ ಮಾತು ನಂಬಿಕೆಗೆ ಅರ್ಹವಾದಂತೆ ಕಾಣಿಸುವುದು.
ಇವರು ಬಂಧುಗಳಿಂದ ದೂರವಿರುವರು ಅಥವಾ ಇವರ ನಡತೆಯಿಂದ ಬಂಧುಗಳೇ ಇವರನ್ನು ದೂರವಿರಿಸಬಹುದು.
ಪರಸ್ತ್ರೀಯರ ಸಹವಾಸವನ್ನು ಹೆಚ್ಚು ಮಾಡುವರು. ಬಹುಪತ್ನಿತ್ವಕ್ಕೆ ಈ ನಕ್ಷತ್ರವರು ಆಸಕ್ತಿಯುಳ್ಳವರಾಗುವರು. ಬಹುಪತ್ನೀತ್ವದ ಸಂದರ್ಭವೂ ಬರಬಹುದು.
ವಿವಿಧ ಕಲೆಗಳಲ್ಲಿ ಆಸಕ್ತಿಯನ್ನು ಇಟ್ಡುಕೊಂಡವರು. ಪ್ರಸಿದ್ಧಿಯನ್ನು ಪಡೆಯುವವರೂ ಆಗುವರು.
ಇವರಿಗೆ ದೇವರ ಪೂಜೆಯಲ್ಲಿ ಹಾಗೂ ಅತಿಥಿಗಳ ಸತ್ಕಾರದಲ್ಲಿ ಆಸಕ್ತಿ ಇರುವುದು. ಧಾರ್ಮಿಕ ಆಚರಣೆ ಅಥವಾ ಪುಣ್ಯಸ್ಥಳಗಳಿಗೆ ಪ್ರವಾಸಗಳನ್ನೂ ಮಾಡುವರು.
ಹಸ್ತಾ ನಕ್ಷತ್ರವಾದ್ದರಿಂದ ಕೈಯಿಂದ ಆಡುವ ಆಟಗಳು ಇಷ್ಟವಾಗುವುದು ಮಾತ್ರವಲ್ಲ, ಉತ್ತಮ ಸ್ಥಾನವನ್ನೂ ಪಡೆಯಬಹುದು. ಉನ್ನತ ಸಾಧನೆಗೆ ಇವರು ಪ್ರಯತ್ನಮಾಡಬಹುದು.
ಗುಣ ಮತ್ತು ಅವಗುಣಗಳಿಂದ ಮಿಶ್ರಣಗೊಂಡ ಸ್ವಭಾವ ಇದಾಗಿದೆ.
– ಲೋಹಿತ ಹೆಬ್ಬಾರ್ – 8762924271