Ola EV: ಓಲಾ ಇವಿ ತಮಿಳುನಾಡು ಪಾಲಾಯ್ತು, ಕರ್ನಾಟಕಕ್ಕೆ ಚಿಂತೆ ಇಲ್ಲವಾ?: ಪ್ರಧಾನಿಗೆ ಟ್ಯಾಗ್ ಮಾಡಿ ಉದ್ಯಮಿ ಪೈ ಟ್ವೀಟ್

|

Updated on: Feb 20, 2023 | 11:10 AM

Mohandas Pai Anguish On Karnataka Govt Attitude: ಬೆಂಗಳೂರಿನ ಓಲಾ ಸಂಸ್ಥೆ ವಿಶ್ವದ ಅತಿದೊಡ್ಡ ಇವಿ ಹಬ್ ನಿರ್ಮಿಸಲು ತಮಿಳುನಾಡನ್ನು ಆರಿಸಿಕೊಂಡಿದೆ. ಕರ್ನಾಟಕಕ್ಕೆ ದೊಡ್ಡ ಹೂಡಿಕೆ ಅವಕಾಶ ಕೈತಪ್ಪಿದೆ. ಸರ್ಕಾರಕ್ಕೆ ಈ ಬಗ್ಗೆ ಚಿಂತೆ ಇಲ್ಲ ಎಂದು ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಬೇಸರ ವ್ಯಕ್ತಪಡಿಸಿದ್ದಾರೆ.

Ola EV: ಓಲಾ ಇವಿ ತಮಿಳುನಾಡು ಪಾಲಾಯ್ತು, ಕರ್ನಾಟಕಕ್ಕೆ ಚಿಂತೆ ಇಲ್ಲವಾ?: ಪ್ರಧಾನಿಗೆ ಟ್ಯಾಗ್ ಮಾಡಿ ಉದ್ಯಮಿ ಪೈ ಟ್ವೀಟ್
ಉದ್ಯಮಿ ಮೋಹನ್ ದಾಸ್ ಪೈ
Follow us on

ಬೆಂಗಳೂರು: ವಿಶ್ವದ ಅತಿದೊಡ್ಡ ಇವಿ ಹಬ್ (World’s Largest EV Hub) ನಿರ್ಮಿಸಲು ಒಲಾ ಕಂಪನಿ ತಮಿಳುನಾಡನ್ನು ಆರಿಸಿಕೊಂಡಿರುವುದು ಕರ್ನಾಟಕದ ಪಾಲಿಗೆ ಕೈತಪ್ಪಿದ ದೊಡ್ಡ ಹೂಡಿಕೆ ಅವಕಾಶ ಎಂದು ಉದ್ಯಮಿ ಮೋಹನ್ ದಾಸ್ ಪೈ (Mohandas Pai) ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೂ ಮಿಗಿಲಾಗಿ, ಸಾವಿರಾರು ಕೋಟಿ ರೂ ಹೂಡಿಕೆ ಕೈತಪ್ಪಿರುವ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಪರಿತಾಪವೇ ಇಲ್ಲ ಎಂದೂ ಪೈ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಬೇಸರದಲ್ಲಿ ಅವರು ಪಿಎಂ ನರೇಂದ್ರ ಮೋದಿ, ಸಿಎಂ ಬೊಮ್ಮಾಯಿ ಮೊದಲಾದವರನ್ನು ಟ್ವಿಟ್ಟರ್​ನಲ್ಲಿ ಟ್ಯಾಗ್ ಮಾಡಿ ಟ್ವೀಟಿಸಿದ್ದಾರೆ.

ಭಾರತದಲ್ಲಿ ಮೊತ್ತಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನ ನೀತಿ ತಂದಿದ್ದು ಕರ್ನಾಟಕ. ಆದರೂ ಕೂಡ ಇವಿ ಕ್ಷೇತ್ರದಲ್ಲಿ ರಾಜ್ಯ ಯಾಕೆ ಹಿನ್ನಡೆ ಕಂಡಿದೆ? ದೊಡ್ಡ ಹೂಡಿಕೆ ಕೈತಪ್ಪಿದ ಬಗ್ಗೆ ಯಾವ ಚಿಂತೆಯೂ ಇಲ್ಲದಿರುವುದು ಬಹಳ ಬೇಸರ ತಂದಿದೆ ಎಂದು ಇನ್ಫೋಸಿಸ್​ನ ಮಾಜಿ ಛೇರ್ಮನ್ ಹಾಗೂ ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸಂಸ್ಥೆಯ ಛೇರ್ಮನ್ ಮೋಹನದಾಸ್ ಪೈ ಟ್ವೀಟ್ ಮಾಡಿದ್ದಾರೆ.


ಭಾರತದ ಮೊದಲ ಕ್ಯಾಬ್ ಅಗ್ರಿಗೇಟರ್ ಸಂಸ್ಥೆ ಎನಿಸಿದ ಓಲಾ ಬೆಂಗಳೂರಿನಲ್ಲಿ ಸ್ಥಾಪನೆಯಾದ ಕಂಪನಿ. ಈಗ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ದೊಡ್ಡ ಮಟ್ಟದಲ್ಲಿ ಇಳಿಯುತ್ತಿರುವ ಓಲಾ ತಮಿಳುನಾಡಿನಲ್ಲಿ ಇವಿ ಹಬ್ ಸ್ಥಾಪಿಸಲು ನಿರ್ಧರಿಸಿದೆ. ತಮಿಳುನಾಡಿನಲ್ಲಿ 2ಡಬ್ಲ್ಯೂ, ಕಾರು ಮತ್ತು ಲಿಥಿಯಮ್ ಸೆಲ್ ಗೀಗಾಫ್ಯಾಕ್ಟರಿಗಳನ್ನೊಳಗೊಂಡಿರುವ ವಿಶ್ವದ ಅತಿದೊಡ್ಡ ಇವಿ ಹಬ್ ಸ್ಥಾಪಿಸುತ್ತಿದ್ದೇವೆ. ತಮಿಳುನಾಡು ಸರ್ಕಾರದ ಜೊತೆ ಎಂಒಯುಗೆ ಸಹಿ ಹಾಕಲಾಗಿದೆ. ಭಾರತ ಸಂಪೂರ್ಣ ಎಲೆಕ್ಟ್ರಿಕ್ ಕಡೆಗೆ ಪರಿವರ್ತನೆಗೆ ಇದು ಪುಷ್ಟಿ ನೀಡುತ್ತದೆ ಎಂದು ಓಲಾ ಸಿಇಒ ಭವೀಶ್ ಅಗರ್ವಾಲ್ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಮೋಹನ್ ದಾಸ್ ಪೈ, ಕರ್ನಾಟಕಕ್ಕೆ ದೊಡ್ಡ ಹೂಡಿಕೆ ಅವಕಾಶ ಕೈತಪ್ಪಿದ್ದಕ್ಕೆ ಪರಿತಪಿಸಿದ್ದಾರೆ.

ಇದನ್ನೂ ಓದಿ: G20 Meeting: ಫೆ. 22-25, ಬೆಂಗಳೂರಿನಲ್ಲಿ 2 ಪ್ರಮುಖ ಜಿ20 ಸಭೆಗಳು

ಭಾರತದಲ್ಲಿ ಮುಂಬರುವ ವರ್ಷಗಳು ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ರೆಡ್ ಕಾರ್ಪೆಟ್ ಸಿಕ್ಕಿದೆ. ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿ ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ಕೊಡಲಾಗುತ್ತಿದೆ. ಈಗಾಗಲೇ ಸಾಲುಸಾಲಾಗಿ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬರುತ್ತಿವೆ. ಮುಂದಿನ ದಿನಗಳಲ್ಲಿ ಇವಿಗಳು ಕಡಿಮೆ ಬೆಲೆಗೆ ಸಿಗುವ ಸಾಧ್ಯತೆಯೂ ಇದೆ.

ಉದ್ಯಮ ಸಂಬಂಧಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:08 am, Mon, 20 February 23