ಸಂಕಷ್ಟದಿಂದ ಮತ್ತೆ ಸ್ವಾವಲಂಬನೆಯತ್ತ ಕೆಫೆ ಕಾಫಿ ಡೇ: ಕೊಟ್ಟಿದ್ದ ಮಾತಿನೊಂದಿಗೆ ಕಂಪನಿಯನ್ನೂ ಉಳಿಸಿಕೊಂಡ ಮಾಳವಿಕಾ ಹೆಗ್ಡೆ

ವಿ.ಜಿ.ಸಿದ್ದಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಮುಳುಗುತ್ತಿದ್ದ ಕಂಪನಿಗೆ ಮರುಜೀವ ನೀಡಿದ್ದಾರೆ. ಪತಿಯ ಕನಸಿನ ಉದ್ಯಮ ಸಾಮ್ರಾಜ್ಯವನ್ನು ಮತ್ತೆ ಕಟ್ಟಿ ಬೆಳೆಸುವ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾರೆ.

ಸಂಕಷ್ಟದಿಂದ ಮತ್ತೆ ಸ್ವಾವಲಂಬನೆಯತ್ತ ಕೆಫೆ ಕಾಫಿ ಡೇ: ಕೊಟ್ಟಿದ್ದ ಮಾತಿನೊಂದಿಗೆ ಕಂಪನಿಯನ್ನೂ ಉಳಿಸಿಕೊಂಡ ಮಾಳವಿಕಾ ಹೆಗ್ಡೆ
ಮಾಳವಿಕಾ ಹೆಗ್ಡೆ
Follow us
S Chandramohan
| Updated By: Digi Tech Desk

Updated on:Jan 11, 2022 | 4:58 PM

ಕೆಫೆ ಕಾಫಿ ಡೇ ಕಂಪನಿಯ ಸ್ಥಾಪಕ, ಮಾಲೀಕ ವಿ.ಜಿ.ಸಿದ್ದಾರ್ಥ ಹೆಗ್ಡೆ ಸಾವಿನ ಬಳಿಕ ಮುಳುಗಿಯೇ ಹೋಯಿತು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ವಿ.ಜಿ.ಸಿದ್ದಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಮುಳುಗುತ್ತಿದ್ದ ಕಂಪನಿಗೆ ಮರುಜೀವ ನೀಡಿದ್ದಾರೆ. ಪತಿಯ ಕನಸಿನ ಉದ್ಯಮ ಸಾಮ್ರಾಜ್ಯವನ್ನು ಮತ್ತೆ ಕಟ್ಟಿ ಬೆಳೆಸುವ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಕಂಪನಿಯ ಮೇಲಿದ್ದ ದೊಡ್ಡಮೊತ್ತದ ಸಾಲದ ಪ್ರಮಾಣ ಕಡಿಮೆ ಮಾಡುವಲ್ಲಿಯೂ ಮಾಳವಿಕಾ ಯಶಸ್ವಿಯಾಗಿದ್ದಾರೆ. ಕರ್ನಾಟಕದ ನೆಲದ ಆತ್ಮನಿರ್ಭರ ಕಂಪನಿ ಕೆಫೆ ಕಾಫಿ ಡೇ ಈಗಿನ ಸ್ಥಿತಿ ಹೇಗಿದೆ ಎನ್ನುವ ವಿವರ ಇಲ್ಲಿದೆ.

ಕರ್ನಾಟಕದ ಪ್ರತಿಷ್ಠಿತ ಕೆಫೆ ಕಾಫಿ ಡೇ ಒಂದು ಕಾಲದಲ್ಲಿ ಯಶಸ್ಸು ಕಂಡಿದ್ದ ಕಂಪನಿ. ಆದರೆ, ಬಳಿಕ ನಷ್ಟದ ಸುಳಿಗೆ ಸಿಲುಕಿದ್ದು ಹೌದು. ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. 2019ರ ಆಗಸ್ಟ್​ನಲ್ಲಿ ಸಿದ್ದಾರ್ಥ ಮಂಗಳೂರು ಬಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಕೆಫೆ ಕಾಫಿ ಡೇ ಕಥೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ನಾವಿಕನಿಲ್ಲದ ದೋಣಿಯನ್ನು ಮುನ್ನಡೆಸುವುದು ಸುಲಭವಿರಲಿಲ್ಲ. ಜೊತೆಗೆ ಮಾಲೀಕ ಸಿದ್ದಾರ್ಥ ಆತ್ಮಹತ್ಯೆಗೀಡಾದಾಗ ಕಂಪನಿಯ ಸಾಲದ ಪ್ರಮಾಣವೇ 7 ಸಾವಿರ ಕೋಟಿ ರೂಪಾಯಿ ಇತ್ತು. ಇಂಥ ಸಂಕಷ್ಟವನ್ನು ಎದುರಿಸಲಾಗದೇ ಸಿದ್ದಾರ್ಥ ಅವರೇ ಆತ್ಮಹತ್ಯೆಗೆ ಶರಣಾಗಿದ್ದರು. ಪ್ರೈವೇಟ್ ಈಕ್ವಿಟಿ ಪಾರ್ಟನರ್​ಗಳು, ಸಾಲಗಾರರ ಕಿರುಕುಳ ಹಾಗೂ ಆದಾಯ ತೆರಿಗೆ ಇಲಾಖೆಯ ಕಿರುಕುಳ ತಾಳಲಾಗದೇ ತಾವು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಸಿದ್ದಾರ್ಥ ಡೆತ್ ನೋಟ್ ಬರೆದಿಟ್ಟಿದ್ದರು.

ಆದರೆ ಇಂಥ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ ಮುಳುಗಿ ಹೋಗುತ್ತಿದ್ದ ಕಂಪನಿಯನ್ನು ಎರಡೇ ವರ್ಷದಲ್ಲಿ ಸಂಕಷ್ಟದಿಂದ ಪಾರು ಮಾಡಿದವರು ಸಿದ್ದಾರ್ಥ ಅವರ ಧರ್ಮಪತ್ನಿ ಮಾಳವಿಕಾ ಹೆಗ್ಡೆ. ಶಾಶ್ವತವಾಗಿ ಬಾಗಿಲು ಮುಚ್ಚಬೇಕಾಗಿದ್ದ ಕಂಪನಿಗೆ ಈಗ ಆರ್ಥಿಕ ಚೈತನ್ಯವನ್ನು ಮಾಳವಿಕಾ ಹೆಗ್ಡೆ ನೀಡಿದ್ದಾರೆ. ಎಲ್ಲ ಆರ್ಥಿಕ ಬಿಕ್ಕಟ್ಟು, ಸಂಕಷ್ಟ, ಬೆಟ್ಟದ ಎತ್ತರದ ಸಾಲವನ್ನು ತೀರಿಸಿ, ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಕಂಪನಿಯ ಕಥೆ ಮುಗಿದೇ ಹೋಯಿತು ಎನ್ನುತ್ತಿದ್ದವರಿಗೆ ತಮ್ಮ ಕೆಲಸದ ಮೂಲಕ ಮಾಳವಿಕಾ ಹೆಗ್ಡೆ ಉತ್ತರ ನೀಡಿದ್ದಾರೆ. ಸಂಕಷ್ಟ, ಬಿಕ್ಕಟ್ಟಿನ ನಡುವೆಯೂ ಮಾಳವಿಕಾ ಹೆಗ್ಡೆ ಹೊಸ ಯಶಸ್ಸಿನ ಹಾದಿಯನ್ನು ಹಾಕಿಕೊಟ್ಟಿದ್ದಾರೆ. ಪತಿ ಸಿದ್ದಾರ್ಥ ದಿಢೀರನೇ ಆತ್ಮಹತ್ಯೆಗೀಡಾದಾಗ ಮಾಳವಿಕಾ ಹೆಗ್ಡೆ ಅವರಿಗೆ ಬರೀ ಸವಾಲುಗಳೇ ಇದ್ದವು.

ಪತಿ ಕಳೆದುಕೊಂಡ ನೋವು, ದುಃಖ ಒಂದೆಡೆಯಾದರೆ ಮತ್ತೊಂದೆಡೆ ಪತಿ ಸಿದ್ದಾರ್ಥ ಕಟ್ಟಿ ಬೆಳೆಸಿದ್ದ ಉದ್ಯಮ ಸಾಮ್ರಾಜ್ಯವನ್ನು ಉಳಿಸಿ ಬೆಳೆಸುವ ಸವಾಲು. ಪತಿಯ ಕೈಯಲ್ಲಿ ಸಾಧ್ಯವಾಗದ್ದನ್ನು ಪತ್ನಿ ಮಾಳವೀಕಾ ಹೆಗ್ಡೆ ಈಗ ಸಾಧಿಸಿ ತೋರಿಸಿದ್ದಾರೆ. ಭಾರತದಲ್ಲಿ ಬ್ಯಾಂಕ್​ಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ವಿಜಯ ಮಲ್ಯ, ನೀರವ್ ಮೋದಿ, ಗುಜರಾತ್​ನ ಸ್ಟರ್ಲಿಂಗ್ ಬಯೋಟೆಕ್ ಕಂಪನಿಯ ಮಾಲೀಕ ನಿತಿನ್ ಸಂದೇಶರ, ಚೇತನ್ ಕುಮಾರ್ ಸಂದೇಶರ ದೇಶ ಬಿಟ್ಟು ವಿದೇಶಗಳಿಗೆ ಪರಾರಿಯಾದಂತೆ, ಮಾಳವೀಕಾ ಹೆಗ್ಡೆ ಸಾಲ ತೀರಿಸಲಾಗದೆ ವಿದೇಶಕ್ಕೆ ಪರಾರಿಯಾಗಲಿಲ್ಲ. ಭಾರತದಲ್ಲೇ ಇದ್ದುಕೊಂಡು ಕಂಪನಿಯ ಸಾಲವನ್ನು ಹಂತಹಂತವಾಗಿ ಮರುಪಾವತಿ ಮಾಡಿದ್ದಾರೆ. ಈ ಮೂಲಕ ತಾವು ವಿಜಯ ಮಲ್ಯ, ನೀರವ್ ಮೋದಿ, ಸಂದೇಶರ ಕುಟುಂಬಗಳ ಸಾಲಿಗೆ ಸೇರಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಮುಳುಗುತ್ತಿದ್ದ ಕಂಪನಿಗೆ ಮಾಳವಿಕಾ ಹೆಗ್ಡೆ ಮರುಜೀವ ನೀಡುತ್ತಿದ್ದಾರೆ.

ಕೆಫೆ ಕಾಫಿ ಡೇ ದೇಶದ 165 ನಗರಗಳಲ್ಲಿ 572 ಕೆಫೆಗಳನ್ನು ಹೊಂದಿತ್ತು. ಜೊತೆಗೆ 333 ಕೆಫೆ ಕಾಫಿ ಡೇ ವ್ಯಾಲ್ಯೂ ಎಕ್ಸಪ್ರೆಸ್ ಕಿಯೋಸ್ಕ್​ಗಳನ್ನು ಹೊಂದಿತ್ತು. 36,326 ವೆಂಡಿಂಗ್ ಮೆಷಿನ್ ಮೂಲಕ ಕೆಫೆ ಕಾಫಿ ಡೇ ತನ್ನ ಗ್ರಾಹಕರಿಗೆ ಕಾಫಿಯ ಘಮವನ್ನು ಉಣಬಡಿಸುತ್ತಿತ್ತು. ಮಾಳವಿಕಾ ಹೆಗ್ಡೆ 2020ರ ಡಿಸೆಂಬರ್ 7ರಿಂದ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್​ನ ಸಿಇಒ ಹುದ್ದೆಯನ್ನು ವಹಿಸಿಕೊಂಡರು. ಆದಾದ ಬಳಿಕ ಕಂಪನಿಯ ವ್ಯವಹಾರಗಳು, ಸಾಲ, ಆಸ್ತಿ ಮೌಲ್ಯ ಸೇರಿದಂತೆ ವ್ಯವಹಾರದ ಒಳ-ಹೊರಗು ಅರ್ಥ ಮಾಡಿಕೊಂಡು ಕಂಪನಿಯನ್ನು ಮುನ್ನಡೆಸಿದ್ದಾರೆ. ಮೊದಲಿಗೆ ಮಾಳವಿಕಾ ಹೆಗ್ಡೆ ಅವರಿಗೆ ಕಂಪನಿಯ ಸಾಲವನ್ನು ಮರುಪಾವತಿ ಮಾಡುವ ಮೂಲಕ ಕಂಪನಿಯ ಸಾಲದ ಪ್ರಮಾಣ ತಗ್ಗಿಸುವ ಜವಾಬ್ದಾರಿ ಇತ್ತು. ಇದನ್ನು ಮಾಳವಿಕಾ ಈಗ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ತಮ್ಮ ಧೈರ್ಯ, ಸಾಮರ್ಥ್ಯ, ಪ್ರತಿಭೆಯನ್ನು ಸಿಇಓ ಆಗಿ ಪ್ರದರ್ಶಿಸಿದ್ದಾರೆ.

ಕೆಫೆ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಕಂಪನಿಯ ವಾರ್ಷಿಕ ವರದಿ ಪ್ರಕಾರ 2021ರ ಮಾರ್ಚ್ 31ಕ್ಕೆ ಕಂಪನಿಯ ಸಾಲದ ಮೊತ್ತ 1,779 ಕೋಟಿ. ಇದರಲ್ಲಿ ₹ 1,263 ಕೋಟಿ ದೀರ್ಘಾವಧಿ ಸಾಲವಾದರೆ, ₹ 516 ಕೋಟಿ ಅಲ್ಪಾವಧಿ ಸಾಲವಾಗಿತ್ತು. 2020ರ ಹಣಕಾಸು ವರ್ಷದಲ್ಲಿ ಕಂಪನಿಯು ₹ 2909 ಕೋಟಿ ಸಾಲ ಹೊಂದಿತ್ತು. ಕಳೆದ ಎರಡೇ ವರ್ಷಗಳಲ್ಲಿ ಕೆಫೆ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ದೊಡ್ಡ ಪ್ರಮಾಣದ ಸಾಲವನ್ನು ಮರುಪಾವತಿ ಮಾಡುವ ಮೂಲಕ ತನ್ನ ಸಾಲದ ಪ್ರಮಾಣವನ್ನು ಕುಗ್ಗಿಸಿದೆ.

ಭಾರಿ ಪ್ರಮಾಣದ ಸಾಲವನ್ನು ತೀರಿಸಲು ಕೆಫೆ ಡೇ ಎಂಟರ್ ಪ್ರೈಸಸ್ ಲಿಮಿಟೆಡ್​ಗೆ ತನ್ನ ಆಸ್ತಿಗಳನ್ನು ಮಾರದೇ ಅನ್ಯ ಮಾರ್ಗಗಳಿರಲಿಲ್ಲ. ಅದೇ ಮಾರ್ಗವನ್ನು ಕಂಪನಿ ಅನುಸರಿಸಿತು. ಬೆಂಗಳೂರಿನ ಬಿಡದಿ ಬಳಿ ಇದ್ದ ತನ್ನ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಅನ್ನು ಬ್ಲಾಕ್ ಸ್ಟೋನ್ ಮತ್ತು ಸಲಾರ್​ಪುರಿಯಾ ಸತ್ವ ಕಂಪನಿಗಳಿಗೆ ₹ 2,700 ಕೋಟಿಗೆ ಮಾರಾಟ ಮಾಡಿತು. ಇದೇ ರೀತಿ ತನ್ನ ಐಟಿ ಕಂಪನಿಯಾದ ಮೈಂಡ್ ಟ್ರೀಯನ್ನು ಎಲ್ ಅಂಡ್ ಟಿ ಇನ್​ಫೊಟೆಕ್ ಕಂಪನಿಗೆ ಮಾರಾಟ ಮಾಡಿತ್ತು. ಇದರಿಂದಾಗಿ ಕಂಪನಿಯ ಸಾಲದ ಪ್ರಮಾಣವು ಕಳೆದ ವರ್ಷವೇ ₹ 7,200 ಕೋಟಿ ರೂಪಾಯಿಯಿಂದ ₹ 3,200 ಕೋಟಿಗೆ ಇಳಿಯಿತು. ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕಾಫಿ ಎಸ್ಟೇಟ್ ಅನ್ನು ಕೆಫೆ ಕಾಫಿ ಡೇ ಕಂಪನಿಯು ಮಾರಾಟಕ್ಕೆ ಇಟ್ಟಿದೆ. ಆದರೆ ಸೂಕ್ತ ಮಾರುಕಟ್ಟೆ ಬೆಲೆ ಸಿಗದೆ ಮಾರಾಟ ಮಾಡಿಲ್ಲ.

ಸಿದ್ದಾರ್ಥ ಸಾವಿನ ಬಳಿಕ ಮಾಳವಿಕಾ ಹೆಗ್ಡೆ, ಕಂಪನಿಯನ್ನು ಉಳಿಸುವುದಕ್ಕೆ ತಾವು ಬದ್ದ ಎಂದು ಕಾಫಿ ಡೇ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದರು. ಅದೇ ರೀತಿ ಈಗ ಕಂಪನಿಯನ್ನು ಉಳಿಸುತ್ತಿದ್ದಾರೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಎಲ್ಲ ಸಾಲಗಾರರ ಸಾಲವನ್ನು ಮರುಪಾವತಿ ಮಾಡುವುದಾಗಿ ಹೇಳಿದ್ದರು. ಇದೀಗ ನಾವು ಸಾಲದ ಹೊರೆಯನ್ನು ಇಳಿಸಿದ್ದೇವೆ. ಕಂಪನಿಯ ಕೆಟ್ಟ ದಿನಗಳು ಮುಗಿದಿವೆ ಎಂದು 2021ರ ಜನವರಿಯಲ್ಲಿ ಮಾಳವಿಕಾ ಹೆಗ್ಡೆ ಪತ್ರಿಕೆಯೊಂದರ ಸಂದರ್ಶನದಲ್ಲಿ ಹೇಳಿದ್ದರು.

ಮಾಳವಿಕಾ ಹೆಗ್ಡೆ ಕಂಪನಿಯ ಹೊಣೆಗಾರಿಕೆ ವಹಿಸಿಕೊಂಡು ಸಾಲ ಮರುಪಾವತಿ ಮಾಡದೇ ಇದಿದ್ದರೆ ಕಂಪನಿಗೆ ಬೀಗ ಬೀಳುತ್ತಿತ್ತು. ಕಂಪನಿಯ 24 ಸಾವಿರ ಉದ್ಯೋಗಿಗಳು ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದರು. ಆದರೇ ಇವರೆಡಕ್ಕೂ ಮಾಳವಿಕಾ ಹೆಗ್ಡೆ ಅವಕಾಶ ಕೊಟ್ಟಿಲ್ಲ. ಮಾಳವಿಕಾ ಹೆಗ್ಡೆ ಈಗ ಪತಿಯ ಕನಸಿನ ಉದ್ಯಮ ಸಾಮ್ರಾಜ್ಯವನ್ನು ಮತ್ತೆ ಕಟ್ಟಿ ಬೆಳೆಸುವ ಕಾಯಕದಲ್ಲಿ ತೊಡಗಿದ್ದಾರೆ. ಪತಿಯ ಕನಸನ್ನು ನನಸು ಮಾಡುವ ಹಾದಿಯಲ್ಲಿ ಮಾಳವಿಕಾ ಹೆಜ್ಜೆ ಹಾಕುತ್ತಿದ್ದಾರೆ. ಮಾಳವಿಕಾಗೆ ಇಬ್ಬರು ಮಕ್ಕಳು ಕೂಡ ಬೆಂಬಲವಾಗಿ ನಿಂತು, ಕಂಪನಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮಾಳವಿಕಾ ಪ್ರಯತ್ನಗಳ ಫಲವಾಗಿ ಕೆಫೆ ಕಾಫಿ ಡೇ ಕಂಪನಿಯ ಬಗ್ಗೆ ಹೂಡಿಕೆದಾರರು, ಬ್ಯಾಂಕ್​ಗಳು, ಷೇರು ಮಾರುಕಟ್ಟೆಯಲ್ಲೂ ಹೊಸ ಭರವಸೆ ಬಂದಿದೆ. ₹ 23ಕ್ಕೆ ಕುಸಿದಿದ್ದ ಕೆಫೆ ಕಾಫಿ ಡೇ ಷೇರುಗಳು ಈಗ ₹ 51ಕ್ಕೆ ಏರಿಕೆಯಾಗಿವೆ.

ಇದನ್ನೂ ಓದಿ: 4 ತಿಂಗಳಿಂದ ಸಂಬಳ ನೀಡಿಲ್ಲವೆಂದು ಕಾಫಿ ಡೇ ಶಾಪ್‌ನಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿ ಧರಣಿ, ಪ್ರತಿಭಟನೆ ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಕಾಫಿ ಡೇ ಮಾಲಿಕ ಸಿದ್ದಾರ್ಥ್ ಪತ್ನಿ ಮಾಳವಿಕಾ ಹೆಗ್ಡೆಗೆ ಸಿಕ್ತು ರಿಲೀಫ್​

Published On - 3:57 pm, Tue, 11 January 22