ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ನಡೆಸುತ್ತಿರುವ ರೈಲುಗಳಲ್ಲಿನ ಆಹಾರಗಳ ದರಗಳನ್ನು ಕೇಂದ್ರ ರೈಲ್ವೆ ಸಚಿವಾಲಯವು ಪರಿಷ್ಕರಿಸಿದೆ. ಹೊಸದಾಗಿ ಪರಿಷ್ಕೃತ ದರ ಪಟ್ಟಿಯ ಪ್ರಕಾರ, ಪ್ರೀಮಿಯಂ ರೈಲುಗಳಲ್ಲಿ ಪ್ರೀ-ಆರ್ಡರ್ ಮಾಡದ ಆಹಾರ ಮತ್ತು ಪಾನೀಯಗಳ ಮೇಲಿನ ಸೇವಾ ಶುಲ್ಕವನ್ನು ರೈಲ್ವೆ ಇಲಾಖೆಯು ತೆಗೆದುಹಾಕಿದೆ. ಅಂದರೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ (IRCTC) ಹಿಂದಿನ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಊಟವನ್ನು ರೈಲು ಟಿಕೆಟ್‌ನೊಂದಿಗೆ ಕಾಯ್ದಿರಿಸದಿದ್ದರೆ, ಪ್ರಯಾಣದ ಸಮಯದಲ್ಲಿ ಆಹಾರವನ್ನು ಆರ್ಡರ್ ಮಾಡುವಾಗ ಅವನು ಹೆಚ್ಚುವರಿ ಸೇವಾ ಶುಲ್ಕವಾಗಿ 50 ರೂಪಾಯಿಗಳನ್ನು ಪಾವತಿಸಬೇಕಾಗಿತ್ತು. ಇಲ್ಲಿ ಕೇವಲ 20 ರೂ. ಟೀ, ಕಾಫಿ ಆರ್ಡರ್ ಮಾಡಿದರೂ 70 ರೂ. ನೀಡಬೇಕಾಗಿತ್ತು. ಇದೀಗ ಆಹಾರ, ಟೀ ಮತ್ತು ಕಾಫಿ ಮೇಲೆ ವಿಧಿಸಲಾಗುತ್ತಿದ್ದ 50 ರೂ. ಸೇವಾ ಶುಲ್ಕವನ್ನು ಕೇಂದ್ರ ರೈಲ್ವೆ ಸಚಿವಾಲಯ ತೆಗೆದು ಹಾಕಿದೆ. ಆದರೆ ಮತ್ತೊಂದೆಡೆ ತಿಂಡಿ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟದ ದರವನ್ನು 50 ರೂ. ಹೆಚ್ಚಿಸಲಾಗಿದೆ.
ಈ ಹಿಂದೆ ಪ್ರೀಮಿಯಂ ರೈಲುಗಳಲ್ಲಿ ಆರ್ಡರ್ ಮಾಡದ ಎಲ್ಲಾ ಆಹಾರ ಮತ್ತು ಪಾನೀಯ ವಸ್ತುಗಳ ಮೇಲೆ 50 ರೂ. ಸೇವಾ ಶುಲ್ಕವನ್ನು ವಿಧಿಸಲಾಗುತ್ತಿತ್ತು. ಇದೀಗ ಮೊದಲೇ ಆರ್ಡರ್ ಮಾಡಿದ ಹಾಗೂ ಟಿಕೆಟ್ ಜೊತೆ ಬುಕ್ ಮಾಡದ ಚಹಾ ಮತ್ತು ಕಾಫಿಯ ಬೆಲೆಗಳು ಎಲ್ಲಾ ಪ್ರಯಾಣಿಕರಿಗೆ ಒಂದೇ ಆಗಿರುತ್ತದೆ. ಅವುಗಳ ದರದಲ್ಲಿ ಯಾವುದೇ ಹೆಚ್ಚಳವಾಗುವುದಿಲ್ಲ.
ಇದಾಗ್ಯೂ ಇತರೆ ಉಪಹಾರಗಳ ಮೇಲಿನ ದರವನ್ನು ಹೆಚ್ಚಿಸಲಾಗಿದೆ. ಅಂದರೆ ಪ್ರೀಮಿಯಂ ರೈಲುಗಳಲ್ಲಿ ಆಹಾರ ಖರೀದಿಸಿದರೆ ಹೆಚ್ಚುವರಿ 50 ರೂ. ಪಾವತಿಸಬೇಕಾಗುತ್ತದೆ. ಈ ಹಿಂದೆ ಉಪಹಾರ, ಮಧ್ಯಾಹ್ನ ಮತ್ತು ಸಂಜೆ ತಿಂಡಿಗೆ ಕ್ರಮವಾಗಿ 105, 185 ಮತ್ತು 90 ರೂ. ಇತ್ತು. ಇನ್ಮುಂದೆ ಇವುಗಳಿಗೆ ಪ್ರಯಾಣಿಕರು ಕ್ರಮವಾಗಿ 155, 235 ಮತ್ತು 140 ರೂ. ಸೇವಾ ಶುಲ್ಕವನ್ನು ಸೇರಿಸಿ ಪಾವತಿಸಬೇಕು. ಇಲ್ಲಿ ಸೇವಾ ಶುಲ್ಕ ವಿನಾಯಿತಿ ಚಹಾ ಮತ್ತು ಕಾಫಿ ಬೆಲೆಗೆ ಮಾತ್ರ ಅನ್ವಯಿಸಲಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರೀಮಿಯಂ ರೈಲುಗಳಲ್ಲಿ ಶತಾಬ್ದಿ, ರಾಜಧಾನಿ, ವಂದೇ ಭಾರತ್, ತೇಜಸ್ ಮತ್ತು ದುರಂತೋ ಎಕ್ಸ್‌ಪ್ರೆಸ್ ಸೇರಿವೆ. ಜುಲೈ 15 ರಂದು ಹೊರಡಿಸಿದ ಆದೇಶದ ಜೊತೆಗೆ, ರೈಲ್ವೆ ಮಂಡಳಿಯು ಆಹಾರ ಪದಾರ್ಥಗಳಿಗೆ ಸಂಬಂಧಿಸಿದಂತೆ ಚಾರ್ಟ್ ಅನ್ನು ಸಹ ಬಿಡುಗಡೆ ಮಾಡಿದೆ. ರೈಲಿನಲ್ಲಿ ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ರೈಲು ಟಿಕೆಟ್ ಕಾಯ್ದಿರಿಸುವಾಗ ಅದನ್ನು ಮುಂಚಿತವಾಗಿ ಕಾಯ್ದಿರಿಸದ ಪ್ರಯಾಣಿಕರಿಂದ 50 ರೂ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬೆಳಗಿನ ಉಪಾಹಾರಕ್ಕೆ 155 ರೂ. ಬದಲು 205 ರೂ. ಮತ್ತು ಸಂಜೆ ತಿಂಡಿಗೆ 105 ರೂ. ಬದಲು 155 ರೂ. ಪಾವತಿಸಬೇಕಾಗುತ್ತದೆ. ಹಾಗೆಯೇ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 244 ರೂ. ಬದಲು 294 ರೂ. ಪಾವತಿಸಬೇಕಾಗುತ್ತದೆ. ಇದೇ ರೀತಿ ಇತರೆ ಎಲ್ಲಾ ಪ್ರೀಮಿಯಂ ರೈಲುಗಳಲ್ಲಿ ಉಪಹಾರ ಮತ್ತು ಊಟೋಪಚಾರಕ್ಕೆ ಹೆಚ್ಚುವರಿಯಾಗಿ 50 ರೂ. ಪಾವತಿಸಬೇಕಾಗುತ್ತದೆ.
Published On - 1:14 pm, Wed, 20 July 22