ಬೀಜಿಂಗ್: ಚೀನಾದ ಶ್ರೀಮಂತ ವ್ಯಕ್ತಿ, ಅಲಿಬಾಬಾ ಸಂಸ್ಥೆಯ ಸ್ಥಾಪಕ, ಜಾಕ್ ಮಾ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಚೀನಾ ಅಧ್ಯಕ್ಷ ಜಿನ್ಪಿಂಗ್ ನೇತೃತ್ವದ ಕಮ್ಯುನಿಸ್ಟ್ ಸರ್ಕಾರದ ಜೊತೆಗೆ ನಡೆದ ಜಿದ್ದಾಜಿದ್ದಿ ಬಳಿಕ ಜಾಕ್ ಮಾ ಜನರ ಕಣ್ಣಿಗೆ ಕಾಣಿಸಿಕೊಂಡಿಲ್ಲ. ಈ ಘಟನೆಯು ಜಗತ್ತಿನ ಕುತೂಹಲ ಕೆರಳಿಸಿದೆ.
ಜಾಕ್ ಮಾ ನೇತೃತ್ವದ ಟಾಲೆಂಟ್ ಶೋ, ‘ಆಫ್ರಿಕಾ ಬ್ಯುಸಿನೆಸ್ ಹೀರೋಸ್’ನ ಅಂತಿಮ ಎಪಿಸೋಡ್ನಲ್ಲಿ ಜಾಕ್ ಮಾ ತೀರ್ಪುಗಾರರಾಗಿ ಭಾಗವಹಿಸಬೇಕಿತ್ತು. ಆದರೆ, ಆ ಕಾರ್ಯಕ್ರಮದಲ್ಲೂ ಜಾಕ್ ಮಾ ಕಾಣಿಸಿಕೊಂಡಿಲ್ಲ. ಅಲ್ಲದೆ, ‘ಆಫ್ರಿಕಾ ಬ್ಯುಸಿನೆಸ್ ಹೀರೋಸ್’ನ ವೆಬ್ಸೈಟಿನಿಂದಲೂ ಜಾಕ್ ಮಾ ಫೋಟೋಗಳನ್ನು ತೆಗೆಯಲಾಗಿದೆ. ಈ ಬಗ್ಗೆ ಯುಕೆ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದ್ದು, ಘಟನೆಯ ಕುರಿತು ಮತ್ತಷ್ಟು ಪ್ರಶ್ನೆಗಳು ಸುಳಿದಾಡುವಂತೆ ಮಾಡಿದೆ.
ಚೀನಾ ಕಮ್ಯುನಿಸ್ಟ್ ಸರ್ಕಾರದ ಹಣಕಾಸು ನಿರ್ವಹಣೆ ಮತ್ತು ಬ್ಯಾಂಕ್ಗಳನ್ನು ಉದ್ಯಮಿ ಜಾಕ್ ಮಾ ಕಟುವಾಗಿ ಟೀಕಿಸಿದ್ದರು. ಅಕ್ಟೋಬರ್ನಲ್ಲಿ ಶಾಂಘೈನಲ್ಲಿ ಜಾಕ್ ಮಾ ಭಾಷಣದಲ್ಲಿ, ವಾಣಿಜ್ಯ ಉದ್ಯಮ ವಲಯದಲ್ಲಿ ಹೊಸ ಆವಿಷ್ಕಾರಗಳಾಗಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಜಾಕ್ ಮಾ ಮಾಡಿದ್ದ ಈ ಭಾಷಣವು ಚೀನಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಮಾ ಹರಿಹಾಯ್ದರು ಎಂದೇ ಕಮ್ಯುನಿಸ್ಟ್ ಅಧಿಕಾರಿಗಳು ತಿಳಿದುಕೊಂಡಿದ್ದರು. ಇದರಿಂದ ಜಾಕ್ ಮಾ ಉದ್ಯಮದ ಮೇಲೂ ದುಷ್ಪರಿಣಾಮ ಉಂಟಾಗಿತ್ತು. ನವೆಂಬರ್ನಲ್ಲಿ ಬೀಜಿಂಗ್ ಅಧಿಕಾರಿಗಳು ಮಾ ಹೇಳಿಕೆಯನ್ನು ಖಂಡಿಸಿದ್ದರು.
ಕ್ರಿಸ್ಮಸ್ ಸಂದರ್ಭದಲ್ಲಿ ಅಲಿಬಾಬಾ ಸಂಸ್ಥೆಯ ಏಕಸ್ವಾಮ್ಯದ ಬಗ್ಗೆ ತನಿಖೆ ಪ್ರಾರಂಭ ಮಾಡಲಾಗಿತ್ತು. ಆ ವರೆಗೆ ಜಾಕ್ ಮಾ ಚೀನಾದಲ್ಲೇ ಇರುವಂತೆ ಹೇಳಲಾಗಿತ್ತು ಎಂದು ಬ್ಲೂಮ್ಬರ್ಗ್ ವರದಿ ಮಾಡಿತ್ತು. ಜಾಕ್ ಮಾ ಟೆಕ್ ಕಂಪೆನಿ ಆಂಟ್ ಗ್ರೂಪ್ (Ant Group) ತನ್ನ ಕಾರ್ಯದಿಂದ ಹಿಂದೆ ಸರಿಯುವಂತೆಯೂ ಬೀಜಿಂಗ್ ಅಧಿಕಾರಿಗಳು ಮಾಗೆ ತಿಳಿಸಿದ್ದರು ಎಂದು ಮೂಲಗಳು ಮಾಹಿತಿ ನೀಡಿದ್ದವು.
ಇದೀಗ ಕೋಟ್ಯಧಿಪತಿ, ಚೀನಾ ಮೂಲದ ಪ್ರಖ್ಯಾತ ಉದ್ಯಮಿ ಜಾಕ್ ಮಾ ಕಣ್ಮರೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲಿಬಾಬ ವಕ್ತಾರ, ಜಾಕ್ ಮಾ ತಮ್ಮ ಕಾರ್ಯಕ್ರಮ ವೇಳಾಪಟ್ಟಿಯಲ್ಲಿ ಸಮಸ್ಯೆಯಾದ ಕಾರಣ ‘ಆಫ್ರಿಕಾ ಬ್ಯುಸಿನೆಸ್ ಹೀರೋಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
Published On - 1:46 pm, Mon, 4 January 21