ದೆಹಲಿ: ಬಹುತೇಕ ಎಲ್ಲ ಉದ್ಯಮಗಳ ಮೇಲೂ ಕೋವಿಡ್-19 ವ್ಯತಿರಿಕ್ತ ಪರಿಣಾಮ ಬೀರಿದೆ. ಭಾರತದಲ್ಲಿ ಕೊವಿಡ್ನ ಹೊಡೆತಕ್ಕೆ ಮೊದಲು ಸಿಕ್ಕ ಉದ್ಯಮಗಳ ಪೈಕಿ ಹೊಟೇಲ್ ಮತ್ತು ಪ್ರವಾಸೋದ್ಯಮವೂ ಇವೆ. ಲಾಕ್ಡೌನ್, ಸೀಲ್ಡೌನ್ಗಳ ಭರಾಟೆಯಲ್ಲಿ ಜನ ಮನೆಯಿಂದ ಆಚೆ ತಲೆ ಹಾಕದಂತಾಗಿ ಈ ಉದ್ಯಮಗಳು ಅಕ್ಷರಶಃ ನೆಲಕಚ್ಚಿದ್ದವು. ಆದರೆ, ಇದರ ನಡುವೆಯೂ 2020ರಲ್ಲಿ ಒಯೋ (OYO) ಮಾತ್ರ ಬೇರೆಲ್ಲಾ ರಾಷ್ಟ್ರಗಳಿಗಿಂತ ಭಾರತದಲ್ಲೇ ಅಧಿಕ ಗ್ರಾಹಕರನ್ನು ಸೆಳೆದಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಭಾರತದಲ್ಲಿ ಹಂತಹಂತವಾಗಿ ಅನ್ಲಾಕಿಂಗ್ ಆರಂಭವಾದ ಮೇಲೆ ಜನರು ಹೊಟೇಲ್ ಮತ್ತು ಪ್ರವಾಸಿತಾಣಗಳತ್ತ ಮುಖ ಮಾಡುತ್ತಿದ್ದಾರೆ. ಹಾಗಾಗಿ ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಒಯೋ ಬುಕ್ಕಿಂಗ್ ಹೆಚ್ಚಿನ ಸಂಖ್ಯೆಯಲ್ಲಿ ಆಗಿದೆ ಎಂದು ವರ್ಷಾಂತ್ಯದ ಒಯೋ ಟ್ರಾವೆಲೋಪಿಡಿಯಾ 2020ರ ವರದಿ ತಿಳಿಸಿದೆ.
ವರದಿಯಲ್ಲಿ ತಿಳಿಸಿರುವಂತೆ 2020ರ ಆರಂಭದಲ್ಲಿ ಜನರು ಅತಿ ಹೆಚ್ಚು ಪ್ರವಾಸ ಮಾಡಿದ್ದು, ಜನವರಿಯಲ್ಲಿ ಒಯೋ ಅತ್ಯಧಿಕ ಬುಕ್ಕಿಂಗ್ಗಳನ್ನು ಸ್ವೀಕರಿಸಿದೆ. ಆದರೆ, ಏಪ್ರಿಲ್ನಲ್ಲಿ ಕೊರೊನಾ ಗಲಾಟೆ ಮತ್ತು ಲಾಕ್ಡೌನ್ ಹೇರಿಕೆ ಆದ ಕಾರಣ ಬುಕ್ಕಿಂಗ್ ಹಿಂಪಡೆದವರ ಸಂಖ್ಯೆ ದೊಡ್ಡದಿದೆ. ಲಾಕ್ಡೌನ್ ಜಾರಿಯಲ್ಲಿದ್ದ ತನಕ ಸಹಜವಾಗಿ ಯಾವುದೇ ಬುಕ್ಕಿಂಗ್ಗಳು ಕಂಡುಬಂದಿಲ್ಲ.
ಅನ್ಲಾಕಿಂಗ್ ನಂತರ ಹೆಚ್ಚಿದ ಉತ್ಸಾಹ
ಅನ್ಲಾಕಿಂಗ್ ಶುರುವಾದ ನಂತರ ಡಿಸೆಂಬರ್ ಅತ್ಯಂತ ಬೇಡಿಕೆಯ ತಿಂಗಳಾಗಿ ಕಂಡುಬಂದಿದ್ದು, ಜನರು ಪ್ರವಾಸಿ ತಾಣಗಳತ್ತ ಹೋಗಲು ಉತ್ಸುಕರಾಗಿದ್ದಾರೆ ಎಂದು ಮಾಹಿತಿ ಲಭಿಸಿದೆ. ಲಾಕ್ಡೌನ್ ನಂತರ ಅಕ್ಟೋಬರ್ 2 ರಂದು ಹೆಚ್ಚು ಬುಕ್ಕಿಂಗ್ ಸ್ವೀಕರಿಸಿದ್ದನ್ನು ಹೊರತುಪಡಿಸಿದರೆ ಕ್ರಿಸ್ಮಸ್ ಅವಧಿಯ ತನಕ ಭಾರೀ ಬೇಡಿಕೆ ಕಂಡುಬಂದಿಲ್ಲ.
ಈ ವರ್ಷದಲ್ಲಿ ಒಯೋ ಆ್ಯಪ್ ಮತ್ತು ವೆಬ್ಸೈಟ್ ಒಟ್ಟು 85 ಲಕ್ಷ ಹೊಸ ಗ್ರಾಹಕರನ್ನು ಸೆಳೆದಿದೆ. ಧಾರ್ಮಿಕ ಕ್ಷೇತ್ರಗಳ ಪೈಕಿ ಪುರಿ ಅತಿ ಹೆಚ್ಚು ಜನರನ್ನು ಸೆಳೆದಿದೆ. ಪುರಿಯ ನಂತರ ಬೃಂದಾವನ, ತಿರುಪತಿ, ಶಿರಡಿ ಮತ್ತು ವಾರಣಾಸಿ ಕ್ಷೇತ್ರಗಳಿವೆ. ಅಧಿಕ ಪ್ರವಾಸಿಗರನ್ನು ಸೆಳೆದಿರುವ ಬೀಚ್ಗಳ ಪಟ್ಟಿಯಲ್ಲಿ ಗೋವಾ ಮೊದಲ ಸ್ಥಾನದಲ್ಲಿದ್ದರೆ ನಂತರದಲ್ಲಿ ಕೊಚ್ಚಿ, ವಿಶಾಖಪಟ್ಟಣಂ ಮತ್ತು ಪುದುಚೆರಿ ಇವೆ. ವ್ಯಾವಹಾರಿಕ ಉದ್ದೇಶಗಳಿಗಾಗಿ ಜನರು ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್ಗಳಿಗೆ ಅತಿ ಹೆಚ್ಚು ಭೇಟಿ ನೀಡಿದ್ದಾರೆಂದು ಒಯೋ ಹೇಳಿದೆ.
ಕೊವಿಡ್ ಪೂರ್ವಕ್ಕಿಂತಲೂ ಈಗ ಒಯೋ ಹೆಚ್ಚೆಚ್ಚು ಪರಿಚಿತಗೊಳ್ಳುತ್ತಿದೆ ಮತ್ತು ಸದೃಢವಾಗಿ ಬೆಳೆಯುತ್ತಿದೆ. ಡಿಸೆಂಬರ್ 31ರಂದು ಈ ವರ್ಷದ ಅತ್ಯಧಿಕ ಬುಕ್ಕಿಂಗ್ಗಳಿಗೆ ಸಾಕ್ಷಿಯಾಗಬಹುದು ಎಂಬ ಭರವಸೆ ಇದೆ ಎಂದು ಒಯೋ ಸಂಸ್ಥೆಯ ಭಾರತ ಮತ್ತು ದಕ್ಷಿಣ ಏಷ್ಯಾ ಪ್ರಾಂತ್ಯದ ಸಿಇಓ ರೋಹಿತ್ ಕಪೂರ್ ತಿಳಿಸಿದ್ದಾರೆ.