JioPhone Next: ಜಿಯೋಫೋನ್ ನೆಕ್ಸ್ಟ್ 4G ಸ್ವಾರ್ಟ್​ಫೋನ್ ಭಾರತದಲ್ಲಿ ಕೇವಲ ರೂ. 1999ಕ್ಕೆ

| Updated By: Srinivas Mata

Updated on: Oct 29, 2021 | 7:02 PM

ರಿಲಯನ್ಸ್ ಜಿಯೋಫೋನ್ ನೆಕ್ಸ್ಟ್ 4G ಸ್ಮಾರ್ಟ್​ಫೋನ್ ಬೆಲೆಯನ್ನು ನಿಗದಿ ಮಾಡಲಾಗಿದೆ. ಆ ಬಗ್ಗೆ ಸಂಪೂರ್ಣ ವಿವರವು ಇಲ್ಲಿದೆ. ಇದು ದೀಪಾವಳಿ ಹಿನ್ನೆಲೆಯಲ್ಲಿ ಹೊರಬರಬಹುದು ಎಂಬ ನಿರೀಕ್ಷೆ ನಿಜವಾಗಿದೆ.

JioPhone Next: ಜಿಯೋಫೋನ್ ನೆಕ್ಸ್ಟ್ 4G ಸ್ವಾರ್ಟ್​ಫೋನ್ ಭಾರತದಲ್ಲಿ ಕೇವಲ ರೂ. 1999ಕ್ಕೆ
ಸಾಂದರ್ಭಿಕ ಚಿತ್ರ
Follow us on

ಭಾರತದಲ್ಲಿ ಜಿಯೋಫೋನ್ ನೆಕ್ಸ್ಟ್ (JioPhone Next) ಬೆಲೆಯನ್ನು ಘೋಷಿಸಲಾಗಿದೆ. ಗ್ರಾಹಕರು ಕೇವಲ ರೂ. 1,999 ಪಾವತಿಸುವ ಮೂಲಕ ರಿಲಯನ್ಸ್ ಜಿಯೋದಿಂದ ಬಜೆಟ್ 4G ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು. ಉಳಿದ ಮೊತ್ತವನ್ನು ಕಂಪೆನಿಯ ಸುಲಭ ಇಎಂಐ ಯೋಜನೆಯ ಮೂಲಕ ಪಾವತಿಸಬಹುದು. ಜಿಯೋಫೋನ್ ನೆಕ್ಸ್ಟ್ ಬೆಲೆ 6,499 ರೂಪಾಯಿ. ಆದರೂ ಗ್ರಾಹಕರು 1,999 ರೂಪಾಯಿಗಳ ಮುಂಗಡ ಪಾವತಿಸುವ ಮೂಲಕ ಭಾರತದಲ್ಲಿ ಬಜೆಟ್ 4G ಸ್ಮಾರ್ಟ್‌ಫೋನ್ ಅನ್ನು ಪಡೆಯಬಹುದು. ಉಳಿದ ಮೊತ್ತವನ್ನು 18ರಿಂದ 24 ತಿಂಗಳೊಳಗೆ ಪಾವತಿಸಬಹುದು. ಜಿಯೋ ತನ್ನ ಗ್ರಾಹಕರಿಗೆ ನಾಲ್ಕು ವಿಭಿನ್ನ ಜಿಯೋಫೋನ್ ನೆಕ್ಸ್ಟ್ EMI ಯೋಜನೆಗಳನ್ನು ಘೋಷಿಸಿದೆ. ಆಲ್​ವೇಸ್-ಆನ್ ಪ್ಲಾನ್ ಅಡಿಯಲ್ಲಿ ಇದು 18 ತಿಂಗಳು ಮತ್ತು 24 ತಿಂಗಳ ಅವಧಿಯನ್ನು ಹೊಂದಿದೆ. ಗ್ರಾಹಕರು ಅವಧಿಯ ಆಯ್ಕೆಯ ಆಧಾರದ ಮೇಲೆ ಕೇವಲ 350 ಅಥವಾ 300 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಬಳಕೆದಾರರು ತಿಂಗಳಿಗೆ 5GB ಡೇಟಾ + 100 ನಿಮಿಷ ಟಾಕ್‌ಟೈಮ್ ಅನ್ನು ಸಹ ಪಡೆಯುತ್ತಾರೆ.

ನೆಕ್ಸ್ಟ್ ಯೋಜನೆ ಜಿಯೋಫೋನ್ ನೆಕ್ಸ್ಟ್​ನ ದೊಡ್ಡ ಯೋಜನೆಯಾಗಿದೆ. ಈ ಯೋಜನೆಯಡಿ ಗ್ರಾಹಕರು 18 ತಿಂಗಳಿಗೆ 500 ರೂಪಾಯಿ ಅಥವಾ 24 ತಿಂಗಳಿಗೆ 450 ರೂಪಾಯಿ ಪಾವತಿಸಬಹುದು. ಬಳಕೆದಾರರು ದಿನಕ್ಕೆ 1.5GBಯ 4G ಡೇಟಾವನ್ನು ಮತ್ತು ಅನಿಯಮಿತ ಧ್ವನಿ ಕರೆಗಳನ್ನು ಪಡೆಯುತ್ತಾರೆ. JioPhone Nextಗಾಗಿ ಮೂರನೇ ರಿಲಯನ್ಸ್ ಜಿಯೋ ಯೋಜನೆಯನ್ನು XL ಎಂದು ಕರೆಯಲಾಗುತ್ತದೆ. ಗ್ರಾಹಕರು 18 ತಿಂಗಳಿಗೆ ರೂ. 550 ಅಥವಾ 24 ತಿಂಗಳಿಗೆ ರೂ. 500 ಪಾವತಿಸಲು ಆಯ್ಕೆ ಮಾಡಬಹುದು. ಈ ಯೋಜನೆಯಡಿ ಬಳಕೆದಾರರು ಪ್ರತಿದಿನ 2GB ಹೆಚ್ಚಿನ ವೇಗದ 4G ಡೇಟಾವನ್ನು ಮತ್ತು ಅನಿಯಮಿತ ಧ್ವನಿ ಕರೆಗಳನ್ನು ಪಡೆಯುತ್ತಾರೆ.

ಗೂಗಲ್ ಮತ್ತು ಜಿಯೋ ತಂಡಗಳು ಯಶಸ್ವಿ
ಕೊನೆಯದಾಗಿ XXL ಯೋಜನೆ ಇದೆ. ಜಿಯೋಫೋನ್ ನೆಕ್ಸ್ಟ್ ಖರೀದಿದಾರರು ತಿಂಗಳಿಗೆ 600 ರೂಪಾಯಿಗಳನ್ನು 18 ತಿಂಗಳಿಗೆ ಅಥವಾ 550 ರೂಪಾಯಿಗಳನ್ನು 24 ತಿಂಗಳಿಗೆ ಪಾವತಿಸಬಹುದು ಮತ್ತು ಅನಿಯಮಿತ ಧ್ವನಿ ಕರೆಗಳೊಂದಿಗೆ ದಿನಕ್ಕೆ 2.5 GB 4G ಡೇಟಾವನ್ನು ಪಡೆಯಬಹುದು. ಈ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ, “ಸದ್ಯಕ್ಕೆ ಹಬ್ಬದ ಋತುವಿನಲ್ಲಿ ಭಾರತೀಯ ಗ್ರಾಹಕರಿಗೆ ಈ ಅದ್ಭುತ ಸಾಧನವನ್ನು ತರುವಲ್ಲಿ ಗೂಗಲ್ ಮತ್ತು ಜಿಯೋ ತಂಡಗಳು ಯಶಸ್ವಿಯಾಗಿರುವುದು ನನಗೆ ಖುಷಿ ತಂದಿದೆ. ಕೊವಿಡ್ ಸಾಂಕ್ರಾಮಿಕದಿಂದ ಉಂಟಾದ ಪೂರೈಕೆ ಜಾಲದ ಸವಾಲುಗಳ ಹೊರತಾಗಿಯೂ 135 ಕೋಟಿ ಭಾರತೀಯರ ಜೀವನವನ್ನು ಉತ್ಕೃಷ್ಟಗೊಳಿಸಲು, ಸಕ್ರಿಯಗೊಳಿಸಲು ಮತ್ತು ಸಶಕ್ತಗೊಳಿಸಲು ಡಿಜಿಟಲ್ ಕ್ರಾಂತಿಯ ಶಕ್ತಿಯಲ್ಲಿ ನಾನು ಯಾವಾಗಲೂ ದೃಢ ನಂಬಿಕೆ ಹೊಂದಿದ್ದೇನೆ. ಸಂಪರ್ಕದೊಂದಿಗೆ ನಾವು ಇದನ್ನು ಹಿಂದೆ ಮಾಡಿದ್ದೇವೆ. ಈಗ ನಾವು ಅದನ್ನು ಸ್ಮಾರ್ಟ್‌ಫೋನ್ ಸಾಧನದೊಂದಿಗೆ ಮತ್ತೆ ಸಕ್ರಿಯಗೊಳಿಸುತ್ತಿದ್ದೇವೆ.

ಅಪ್ಲಿಕೇಷನ್‌ಗಳೊಂದಿಗೆ ಪ್ರೀ ಇನ್​ಸ್ಟಾಲ್ 
“JioPhone Nextನ ಅನೇಕ ಶ್ರೀಮಂತ ವೈಶಿಷ್ಟ್ಯಗಳ ಪೈಕಿ, ನನ್ನನ್ನು ಹೆಚ್ಚು ಪ್ರಭಾವಿಸಿದ್ದು – ಮತ್ತು ಸಾಮಾನ್ಯ ಭಾರತೀಯರನ್ನು ಹೆಚ್ಚು ಸಶಕ್ತಗೊಳಿಸುತ್ತದೆ ಮತ್ತು ಅವರ ಡಿಜಿಟಲ್ ಪ್ರಯಾಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ – ಇದು ಭಾರತದ ಭಾಷೆ ಸಂಯೋಜನೆ ಕೊಡುಗೆಯಾಗಿದೆ. ಭಾರತದ ವಿಶಿಷ್ಟ ಶಕ್ತಿಯೇ ನಮ್ಮ ಭಾಷಾ ವೈವಿಧ್ಯತೆ. ಆಂಗ್ಲ ಭಾಷೆಯಲ್ಲಿ ಅಥವಾ ಅವರ ಭಾಷೆಯಲ್ಲಿ ವಿಷಯವನ್ನು ಓದಲು ಸಾಧ್ಯವಾಗದಿರುವ ಭಾರತೀಯರು ಈ ಸ್ಮಾರ್ಟ್ ಸಾಧನದಲ್ಲಿ ಅದನ್ನು ತಮ್ಮ ಭಾಷೆಯಲ್ಲಿ ಭಾಷಾಂತರಿಸಬಹುದು ಮತ್ತು ಓದಬಹುದು. ‘India’ ಮತ್ತು ‘ಭಾರತ್’ ನಡುವಿನ ಅಂತರವನ್ನು ನಾವು ತುಂಬುತ್ತಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಏಕೆಂದರೆ ‘ಭಾರತ್’ ಕರೇಗಾ ಡಿಜಿಟಲ್ ಪ್ರಗತಿ – ಪ್ರಗತಿ ಓಎಸ್ ಕೇ ಸಾಥ್’ ಎಂದು ಶತಕೋಟ್ಯಧಿಪತಿ ಮುಕೇಶ್ ಅಂಬಾನಿ ಸೇರಿಸಿದ್ದಾರೆ.

ಆಂಡ್ರಾಯ್ಡ್ ಆಧಾರಿತ ಪ್ರಗತಿ ಓಎಸ್ ಅನ್ನು ಗೂಗಲ್‌ನೊಂದಿಗೆ ಅಭಿವೃದ್ಧಿಪಡಿಸಲಾಗಿದೆ. JioPhone Nextಗಾಗಿ ಆಪರೇಟಿಂಗ್ ಸಿಸ್ಟಮ್ ರೀಡ್ ಅಲೌಡ್, ಟ್ರಾನ್ಸ್‌ಲೇಟ್‌ನಂತಹ ವಿಶೇಷ ವೈಶಿಷ್ಟ್ಯಗಳನ್ನು ನೀಡುತ್ತದೆ ಮತ್ತು ಎಲ್ಲ Google ಅಪ್ಲಿಕೇಷನ್‌ಗಳನ್ನು ಸಹ ಬೆಂಬಲಿಸುತ್ತದೆ. JioPhone ನೆಕ್ಸ್ಟ್ ಕೂಡ MyJio, JioCinema, JioTv, JioSaavn ಮುಂತಾದ ಜಿಯೋ ಅಪ್ಲಿಕೇಷನ್‌ಗಳೊಂದಿಗೆ ಪ್ರೀ ಇನ್​ಸ್ಟಾಲ್ ಆಗಿದೆ.

JioPhone ನೆಕ್ಸ್ಟ್ ವಿಶೇಷಗಳು
JioPhone Next 720 x 1440 ರೆಸಲ್ಯೂಶನ್ ಜೊತೆಗೆ 5.5-ಇಂಚಿನ HD+ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರ ಹುಡ್ ಅಡಿಯಲ್ಲಿ Qualcomm Snapdragon 215 SoC ಅನ್ನು ಹೊಂದಿದೆ. ಫೋನ್ 3,500 mAh ಬ್ಯಾಟರಿ ಮತ್ತು 32GB ಆಂತರಿಕ ಸಂಗ್ರಹವನ್ನು ಹೊದಿದೆ. ಫೋನ್ ಹಿಂಭಾಗದಲ್ಲಿ 13MP ಪ್ರಾಥಮಿಕ ಕ್ಯಾಮೆರಾ ಇದೆ. ಮುಂಭಾಗದ ಕ್ಯಾಮೆರಾವು ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8MP ಸೆನ್ಸರ್ ಹೊಂದಿದೆ.

ಇದನ್ನೂ ಓದಿ: JioPhone Next: ಗೂಗಲ್ ಮತ್ತು ರಿಲಯನ್ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಹೊಸ ಸ್ಮಾರ್ಟ್​ಫೋನ್ ಬಗ್ಗೆ ತಿಳಿದುಕೊಳ್ಳಿ