ಉದ್ಯಮಿಗಳನ್ನುದ್ದೇಶಿಸಿ ‘Why not India?’ ಎಂದು ಪ್ರಶ್ನಿಸಿದ ಪ್ರಧಾನಿ ನರೇಂದ್ರ ಮೋದಿ: 5 ಟ್ರಿಲಿಯನ್ ಆರ್ಥಿಕತೆಗೆ ಪಂಥಾಹ್ವಾನ
ಭಾರತದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದ ಕಂಪನಿಗಳು, ಈಗ ಹೂಡಿಕೆ ಮಾಡಲು ಅವಕಾಶ ಕೇಳುತ್ತಿವೆ. ಈ ಬದಲಾವಣೆ ಹೊಸ ಕೈಗಾರಿಕಾ ಕ್ರಾಂತಿಗೆ ಕಾರಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೆಹಲಿ: ಭಾರತದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದ ಕಂಪನಿಗಳು, ಈಗ ಹೂಡಿಕೆ ಮಾಡಲು ಅವಕಾಶ ಕೇಳುತ್ತಿವೆ. ಈ ಬದಲಾವಣೆ ಹೊಸ ಕೈಗಾರಿಕಾ ಕ್ರಾಂತಿಗೆ ಕಾರಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅವರು ಉದ್ಯಮ ಮತ್ತು ಕೈಗಾರಿಕಾ ಪ್ರವರ್ತಕರ ಸಂಘಟನೆ ASSOCHAM ನ ಸ್ಥಾಪನಾ ವಾರದ ಕಾರ್ಯಕ್ರಮದಲ್ಲಿ ವರ್ಚುವಲ್ ಕಾನ್ಫರೆನ್ಸ್ ಮೂಲಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊರೊನಾ ಪಿಡುಗಿನ ವೇಳೆ ಹೂಡಿಕೆ ಮಾಡಲು ಜಗತ್ತಿನ ಎಲ್ಲ ಕಂಪನಿಗಳು ಹೆದರುತ್ತಿದ್ದವು. ಆದರೆ, ಈ ವೇಳೆ ಭಾರತದಲ್ಲಿ ಅತಿ ಹೆಚ್ಚು ವಿದೇಶಿ ನೇರ ಹೂಡಿಕೆಯಾಗಿದೆ. ಭಾರತದ ಆರ್ಥಿಕತೆಯ ಮೇಲೆ ಜಗತ್ತಿನ ಇತರ ದೇಶಗಳ ನಂಬಿಕೆ ಬಲಗೊಂಡಿರುವುದನ್ನು ಇದು ಸೂಚಿಸುತ್ತದೆ ಎಂದು ಅವರು ತಿಳಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಟಾಟಾ ಸಂಸ್ಥೆಗೆ ‘ASSOCHAM ಶತಮಾನದ ಉದ್ಯಮ’ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ರತನ್ ಟಾಟಾ ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು. 5 ಟ್ರಿಲಿಯನ್ ಆರ್ಥಿಕತೆ ಗುರಿಯತ್ತ ಇಂದಿನಿಂದಲೇ ಕೆಲಸ ಮಾಡಲು ಕರೆ ಸಾಮುದಾಯಿಕ ಪಿಡುಗಿನ ವೇಳೆ ಕೃಷಿಯಿಂದ ಔಷಧ ಕ್ಷೇತ್ರದವರೆಗೂ ಭಾರತ ಜಗತ್ತಿಗೆ ಸಹಾಯ ಹಸ್ತ ಚಾಚಿದೆ. 5 ಟ್ರಿಲಿಯನ್ ಆರ್ಥಿಕತೆ ಸಾಧಿಸುವ ಗುರಿಯತ್ತ ಇಂದಿನಿಂದಲೇ ನಾವು ಕಾರ್ಯೋನ್ಮುಖರಾಗಬೇಕು. ಈ ಗುರಿಯನ್ನು ಶೀಘ್ರವೇ ಸಾಧಿಸಬೇಕಿದೆ ಎಂದು ಅವರು ಕರೆ ನೀಡಿದರು.
ASSOCHAM ಸಂಸ್ಥಾಪನಾ ವಾರದ ಕಾರ್ಯಕ್ರಮಗಳು ಇಡೀ ವಾರ ನಡೆಯಲಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ವಾಣಿಜ್ಯ, ರೈಲ್ವೆ ಕೈಗಾರಿಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪೀಯೂಷ್ ಗೋಯಲ್, ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್, ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾಗವಹಿಸಲಿದ್ದಾರೆ.
1920ರಲ್ಲಿ ಉದ್ಯಮ ಮತ್ತು ಕೈಗಾರಿಕಾ ಪ್ರವರ್ತಕರಿಂದ ಆರಂಭಗೊಂಡ ASSOCHAM ಇಂದು 4.5 ಲಕ್ಷ ಸದಸ್ಯರ ಪ್ರಬಲ ಸಂಘಟನೆಯಾಗಿ ಬೆಳೆದಿದೆ. ದೇಶಾದ್ಯಂತ 400 ಸಂಸ್ಥೆಗಳು ASSOCHAM ವ್ಯಾಪ್ತಿಗೆ ಒಳಪಟ್ಟಿವೆ.
Published On - 1:28 pm, Sat, 19 December 20