ಕರ್ನಾಟಕದ ಮತದಾರರ ಪಟ್ಟಿಯಲ್ಲಿ 11 ವಿದೇಶಿಗರು: ಚುನಾವಣಾ ಅಧಿಕಾರಿಗಳಿಂದ ಪರಿಶೀಲನೆ

ಕರ್ನಾಟಕದ ಮತದಾರರ ಗುರುತಿನ ಚೀಟಿ (EPIC) ಹಾಗೂ ಮತದಾನದ ಹಕ್ಕು ಹೊಂದಿರುವ 11 ವಿದೇಶಿ ಪ್ರಜೆಗಳ ಕುರಿತು ವಿದೇಶಿಗರ ನೋಂದಣಿ ಕಚೇರಿ (FRO) ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಮಾಹಿತಿ ಕೇಳಿದೆ. ಎಸ್‌ಐಆರ್‌ ಪ್ರಕ್ರಿಯೆ ನಡುವೆಯೇ ಈ ಪ್ರಕರಣಗಳು ಅಧಿಕಾರಿಗಳ ಗಮನ ಸೆಳೆದಿವೆ.

ಕರ್ನಾಟಕದ ಮತದಾರರ ಪಟ್ಟಿಯಲ್ಲಿ 11 ವಿದೇಶಿಗರು: ಚುನಾವಣಾ ಅಧಿಕಾರಿಗಳಿಂದ ಪರಿಶೀಲನೆ
ಸಾಂಕೇತಿಕ ಚಿತ್ರ (ಪಿಟಿಐ)
Image Credit source: PTI

Updated on: Aug 21, 2026 | 11:21 AM

ಮುಖ್ಯಾಂಶಗಳು

  • 11 ವಿದೇಶಿಗರ ಮತದಾರರ ವಿವರ ಪರಿಶೀಲನೆ
  • CEO ಕಚೇರಿಯಿಂದ ಮಾಹಿತಿ ಕೋರಿದ ವಿದೇಶಿಗರ ನೋಂದಣಿ ಕಚೇರಿ
  • ಪೌರತ್ವ ದೃಢೀಕರಣಕ್ಕೆ ದಾಖಲೆಗಳ ಮರುಪರಿಶೀಲನೆ

ಬೆಂಗಳೂರು, ಆಗಸ್ಟ್ 21: ಕರ್ನಾಟಕದ ಮತದಾರರ ಪಟ್ಟಿಯಲ್ಲಿ ವಿದೇಶಿ ಪ್ರಜೆಗಳ ಹೆಸರುಗಳು ಸೇರ್ಪಡೆಯಾಗಿರುವ ಶಂಕೆ ಇದೀಗ ಚುನಾವಣಾ ಅಧಿಕಾರಿಗಳ ಪರಿಶೀಲನೆಗೆ ಕಾರಣವಾಗಿದೆ. ಕರ್ನಾಟಕದ ಮತದಾರರ ಗುರುತಿನ ಚೀಟಿ (EPIC) ಹೊಂದಿರುವ 11 ವಿದೇಶಿ ಪ್ರಜೆಗಳ ವಿವರಗಳನ್ನು ವಿದೇಶಿಗರ ನೋಂದಣಿ ಕಚೇರಿ (FRO) ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿಯಿಂದ ಕೇಳಿದೆ. ಈ 11 ಮಂದಿಯನ್ನು ತಮಿಳುನಾಡಿನಲ್ಲಿ ಪತ್ತೆಹಚ್ಚಲಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳೂ ಇವೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ. ಅವರು ಶ್ರೀಲಂಕಾ ಮೂಲದವರು ಎನ್ನಲಾಗಿದ್ದು, ಅವರ ಸಂಪೂರ್ಣ ವಿವರಗಳನ್ನು ಇನ್ನಷ್ಟೇ ಖಚಿತಪಡಿಸಿಕೊಳ್ಳಬೇಕಿದೆ. ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ವ್ಯಕ್ತಿಗಳ ಮತದಾರರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.

ಈ ವಿದೇಶಿ ಪ್ರಜೆಗಳ ಹೆಸರಿನಲ್ಲಿ ಇರುವ ಮತದಾರರ ಗುರುತಿನ ಚೀಟಿಗಳು ನಕಲಿಯೇ ಅಥವಾ ನೈಜವೇ ಎಂಬುದರ ಜೊತೆಗೆ, ಅವುಗಳನ್ನು ಹಿಂದೆ ಮತದಾನಕ್ಕೆ ಬಳಸಲಾಗಿದೆಯೇ ಎಂಬುದನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಮತದಾರರ ಮಾಹಿತಿಯಲ್ಲಿ ಅಸಂಗತತೆ ಅಥವಾ ಮ್ಯಾಪಿಂಗ್ ಆಗದ ದಾಖಲೆಗಳು ಕಂಡುಬಂದಿರುವ ಇತರ ಪ್ರಕರಣಗಳನ್ನೂ ಪರಿಶೀಲಿಸಲಾಗುತ್ತಿದೆ.

ಗೋವಾ, ಅಂಡಮಾನ್, ಒಡಿಶಾ ಎಸ್​ಐಆರ್​ನಲ್ಲಿ ಕರ್ನಾಟಕದವರ ವಿವರ!

ಇದೇ ವೇಳೆ ಗೋವಾ, ಅಂಡಮಾನ್ ಮತ್ತು ಒಡಿಶಾ ಸೇರಿದಂತೆ ಇತರ ರಾಜ್ಯಗಳ ಅಧಿಕಾರಿಗಳೂ ಕರ್ನಾಟಕದ CEO ಕಚೇರಿಯನ್ನು ಸಂಪರ್ಕಿಸಿ, ತಮ್ಮ ರಾಜ್ಯಗಳ ಮತದಾರರು ಎಸ್‌ಐಆರ್‌ ಅರ್ಜಿಗಳಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ದಾಖಲಿಸಿರುವ ಪ್ರಕರಣಗಳ ಕುರಿತು ವಿವರ ಹಾಗೂ ಪರಿಶೀಲನೆ ಕೋರಿದ್ದಾರೆ.

ಅಸಹಜತೆ ಹೊಂದಿರುವ ಕೆಲವು ಮತದಾರರ ದಾಖಲೆಗಳ ಪರಿಶೀಲನೆ ವೇಳೆ ಪಾಸ್‌ಪೋರ್ಟ್‌ಗಳನ್ನೂ ಅಧಿಕಾರಿಗಳು ಕೇಳುತ್ತಿದ್ದಾರೆ. ಪಾಸ್‌ಪೋರ್ಟ್‌ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ, ಅಗತ್ಯವಿದ್ದಲ್ಲಿ ಕೇಂದ್ರದ ಸಂಬಂಧಿತ ಸಚಿವಾಲಯಗಳ ಮೂಲಕವೂ ಅದರ ನೈಜತೆ ಪರಿಶೀಲಿಸಲಾಗುತ್ತಿದೆ.

‘ನೋ-ಮ್ಯಾಪಿಂಗ್’ ವಿಭಾಗಕ್ಕೆ ಸೇರಿದ ದಾಖಲೆಗಳನ್ನು ಚುನಾವಣಾ ನೋಂದಣಿ ಅಧಿಕಾರಿ (ERO) ಹಾಗೂ ಜಿಲ್ಲಾ ಚುನಾವಣಾಧಿಕಾರಿ (DEO) ಹಂತದಲ್ಲಿ ಎರಡು ಬಾರಿ ಪರಿಶೀಲಿಸಲಾಗುತ್ತದೆ. ವ್ಯಕ್ತಿಯ ಪೌರತ್ವವನ್ನು ಖಚಿತಪಡಿಸಿಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ: SIR: ಕರ್ನಾಟಕದ 43.8 ಲಕ್ಷ ಮತದಾರರಿಗೆ ಶಾಕ್; ಆಯೋಗದಿಂದ ಶೀಘ್ರದಲ್ಲೇ ಬರಲಿದೆ ನೋಟಿಸ್!

ಕರ್ನಾಟಕದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೂ ಮತದಾರರ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಇಂತಹ ಅನುಮಾನಾಸ್ಪದ ದಾಖಲೆಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯಲಿದೆ. ಇದರಿಂದ ಮತದಾರರ ಪಟ್ಟಿಯನ್ನು ಮತ್ತಷ್ಟು ಶುದ್ಧೀಕರಿಸುವ ಉದ್ದೇಶವನ್ನು ಚುನಾವಣಾ ಇಲಾಖೆ ಹೊಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us