
ಪೆರಿಯ, ಅಕ್ಟೋಬರ್ 21: ಬೇಕಲ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ಅಡಿಯಲ್ಲಿ ಐದನೇ ದೀಪಾವಳಿ (Deepavali) ಸಂಗೀತೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ. ಕೈಗಾರಿಕೋದ್ಯಮಿ ಹಾಗೂ ಭಾರತೀಯ ಗೋಸಂರಕ್ಷಣಾ ಹೋರಾಟಗಾರ ಕೋಲ್ಕತ್ತಾದ ಮಹಾವೀರ ಸೋನಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಅಕ್ಟೋಬರ್ 20ರಿಂದ ಆರಂಭಗೊಂಡಿರುವ ಸಂಗೀತ ಉತ್ಸವ ಒಟ್ಟು 13 ದಿನಗಳ ಕಾಲ ನಡೆಯಲಿದೆ. ಸಮಾರಂಭದಲ್ಲಿ ಗೋಶಾಲೆ ಸಂಸ್ಥಾಪಕ ವಿಷ್ಣುಪ್ರಸಾದ್ ಹೆಬ್ಬಾರ್, ಡಾ.ನಾಗರತ್ನ ಹೆಬ್ಬಾರ್, ಪರಂಪರಾ ವಿದ್ಯಾಪೀಠದ ಸಂಗೀತ ಗುರು ವೆಳ್ಳಿಕೋತ್ ವಿಷ್ಣುಭಟ್, ಸಂಗೀತಗಾರ ತಾಮರಶ್ಶೇರಿ ಈಶ್ವರನ್ ಭಟ್ಟತಿರಿ ಉಪಸ್ಥಿತರಿದ್ದರು.
5ನೇ ಸಂಗೀತೋತ್ಸವದ ಮೊದಲ ಕಾರ್ಯಕ್ರಮವಾಗಿ ಉಡುಪಿ ಪಾವನ ಆಚಾರ್ ನೇತೃತ್ವದಲ್ಲಿ ಪಂಚವಾದ್ಯ ವೀಣೆಗಳ ಕಛೇರಿ ನಡೆಯಿತು. ಇಡಯಾರ್ ಸಹೋದರರು, ತಾಮರಶ್ಶೇರಿ ಈಶ್ವರನ್ ಭಟ್ಟತಿರಿ, ವೆಳ್ಳಿಕೋತ್ ಸಹೋದರಿಯರಾದ ಉಷಾಭಟ್ ಜಯಲಕ್ಷ್ಮಿ ಭಟ್, ಕಾಞಂಗಾಡ್ ಟಿ.ಪಿ. ಶ್ರೀನಿವಾಸನ್, ಶ್ರೀಹರಿ ಭಟ್, ಚೈತನ್ಯ ಅಶೋಕ್ ಮತ್ತು ವೈಷ್ಣವಿ ನಂಬಿಯಾರ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಣವಂ ಶಂಕರನ್ ನಂಬೂದಿರಿ ಅವರ ಸಂಗೀತ ಕಛೇರಿಯಲ್ಲಿ ಎಡಪ್ಪಳ್ಳಿ ಅಜಿತ್- ಪಿಟೀಲು, ಬಾಲಕೃಷ್ಣ ಕಮ್ಮತ್ ಮೃದಂಗದಲ್ಲಿ ಮತ್ತು ಶ್ರೀಜಿತ್ ವೆಳ್ಳಾಟ್ಟತ್ತನ್ನೂರ್ ಘಟದಲ್ಲಿ ಮೆರುಗು ನೀಡಿದರು. ನಂದಿ ಮಂಟಪದಲ್ಲಿ ವೆಳ್ಳಿಕ್ಕೋತ್ ವಿಷ್ಣು ಭಟ್ ನೇತೃತ್ವದ ಪರಂಪರಾ ವಿದ್ಯಾಪೀಠದಿಂದ ನಡೆದ ಭಜನಾ ಸಂಗಮ ನೋಡುಗರ ಕಣ್ಮನ ಸೆಳೆಯಿತು. ಶ್ರೀಲತಾ ನಿಕ್ಷಿತ್ ವೀಣೆಯಲ್ಲಿ, ಕುಳಲ್ಮಂದಂ ರಾಮಕೃಷ್ಣನ್ ಮೃದಂಗದಲ್ಲಿ, ಕೃಷ್ಣಪ್ರಸಾದ್ ಹೆಬ್ಬಾರ್ ಕೀಬೋರ್ಡ್‌ನಲ್ಲಿ ಸಹಕರಿಸಿದರು.
ಸಂಗೀತ ಕಾರ್ಯಕ್ರಮ.
ಸಂಗೀತೋತ್ಸವದ ಎರಡನೇ ದಿನವಾದ ಇಂದು ಅನಸೂಯಾ ಪಾಠಕ್, ಸರ್ವೇಶ್ ದೇವಸ್ಥಳಿ, ಅದಿತಿ ಪ್ರಹ್ಲಾದ್, ಅಭಿಜ್ಞಾ ರಾವ್, ಶಿಲ್ಪಾ ಪಂಜ. ನಂದಿ ಮಂಟಪದಲ್ಲಿ ಅಜಯ್ ಮುಕ್ಕು ಚೆನ್ನಯ್ಯ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಸ್ನೇಹಾ ಗೋಮತಿ ವೀಣಾ, ಶ್ರೀನಿಧಿ ಭಟ್, ವಿಭಾಶ್ರೀ ಬೈಲಾರೆ, ಶ್ರುತಿ ವಾರಿಜಾಕ್ಷನ್, ಶ್ರೇಯಾ ಕೊಳತ್ತಾಯ, ಪ್ರತೀಕ್ಷಾ ಭಟ್ ಮತ್ತು ಕಾಂಚನಾ ಸಹೋದರಿಯರಿಂದ ಕಾರ್ಯಕ್ರಮ ನಡೆಯಲಿದೆ. ಗೋಶಾಲಾ ಸ್ಥಾಪಕ ವಿಷ್ಣುಪ್ರಸಾದ್ ಅವರು ರಚಿಸಿದ ಕೃತಿಗಳು ಹಾಗೂ ನಂದಿ ಮಂಟಪದಲ್ಲಿ ವಿಷ್ಣು ಭಟ್ ಅವರ ಕೃತಿಗಳು ಪ್ರಕಾಶನಗೊಳ್ಳಲಿವೆ.
ಇದನ್ನೂ ಓದಿ: ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀ ಪೂಜೆ; ಪೌರಾಣಿಕ ಹಿನ್ನೆಲೆ ಮತ್ತು ಪ್ರಯೋಜನಗಳು
2010ರಲ್ಲಿ ಒಂದು ವೇಚೂರ್ ಹಸು ಮತ್ತು ಹೋರಿಯೊಂದಿಗೆ ಪ್ರಾರಂಭವಾದ ಈ ಗೋಶಾಲೆಯು, ಹದಿನೈದು ವರ್ಷಗಳ ನಂತರ ವೇಚೂರ್, ಕಾಸರಗೋಡು ಗಿಡ್ಡ, ಹಳ್ಳಿಕಾರ್, ಮಲೆನಾಡು ಗಿಡ್ಡ, ಗಿರ್, ಓಂಗೋಲ್ ಸೇರಿ ದೇಸಿ ತಳಿಗಳ 250ಕ್ಕೂ ಹೆಚ್ಚು ಹಸುಗಳಿಗೆ ಆಶ್ರಯ ನೀಡಿದೆ. ದೇಸೀಯ ಗೋವುಗಳ ರಕ್ಷಣೆಯ ಜೊತೆಗೆ ವೈಜ್ಞಾನಿಕ ಕಲೆಗಳನ್ನು ಉತ್ತೇಜಿಸುವ ಉದ್ದೇಶದಿಂದ, 2021ರಲ್ಲಿ ಪರಂಪರಾ ವಿದ್ಯಾಪೀಠಂ ಎಂಬ ಗುರುಕುಲ ಆರಂಭವಾಗಿದೆ. ಇದರ ಅಡಿಯಲ್ಲಿ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಮತ್ತು ಭಾರತದ ವಿವಿಧ ನೃತ್ಯ ಪ್ರಕಾರಗಳನ್ನು ಉತ್ತೇಜಿಸಲು ಮತ್ತು ಪ್ರಚಾರ ಮಾಡಲು ಪ್ರಯತ್ನಗಳು ನಡೆದಿವೆ. ದೀಪಾವಳಿಯ ಸಮಯದಲ್ಲಿ ಇಲ್ಲಿ ಸಂಗೀತ ಉತ್ಸವ ಮತ್ತು ವೈಶಾಖ ತಿಂಗಳಲ್ಲಿ ನೃತ್ಯ ಉತ್ಸವವನ್ನು ನಡೆಸಲಾಗುತ್ತದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:21 pm, Tue, 21 October 25