ಕಲಬುರಗಿ: ಮಹಾಮಾರಿ ಕೊರೊನಾ ವೈರಸ್ ದೇಶದಲ್ಲೇ ಮೊದಲು ಕಾಲಿಟ್ಟಿದ್ದು ರಾಜ್ಯದ ಕಲಬುರಗಿ ಜಿಲ್ಲೆಗೆ. ಕೊರೊನಾ ವೈರಸ್ಗೆ ಕಲಬುರಗಿ ಜಿಲ್ಲೆಯ 76 ವರ್ಷದ ವೃದ್ಧ ಮೊದಲ ಬಲಿಯಾಗಿದ್ದರು. ಇದೀಗ ಜಿಲ್ಲೆಯಲ್ಲಿ ಕೊವಿಡ್ ಸೋಂಕಿಗೆ ಮತ್ತೆ ಒಬ್ಬ ವೃದ್ಧ ಬಲಿಯಾಗಿದ್ದಾರೆ.
ಮೇ 11ರಂದು ಉಸಿರಾಟ ಸಮಸ್ಯೆಯಿಂದ 60 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಜಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ವೃದ್ಧ ಸಾವಿಗೀಡಾಗಿದ್ದಾರೆ. ಕೊರೊನಾ ಕಂಟೇನ್‌ಮೆಂಟ್ ಜೋನ್‌ನಲ್ಲಿ ಅವರ ಮನೆಯಿತ್ತು. ಆದ್ರೆ ವೃದ್ಧನಿಗೆ ಹೇಗೆ ಸೋಂಕು ಬಂದಿದೆ ಎಂಬುದು ತಿಳಿದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈವರೆಗೆ ಕಲಬುರಗಿ ಜಿಲ್ಲೆಯಲ್ಲಿ ವೈರಸ್ ಸೋಂಕಿಗೆ ಒಟ್ಟು 7 ಜನರು ಬಲಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಬ್ಬರು ಬಲಿ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಬೋಳೂರಿನ 58 ವರ್ಷದ ಮಹಿಳೆ ಕೊರೊನಾದಿಂದ ಮೃತಪಟ್ಟಿದ್ದಾರೆ. ಮಿದುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಮಂಗಳೂರಿನ ಕೊವಿಡ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.
ಮಹಿಳೆಗೆ ಆಸ್ಪತ್ರೆಯ ಸ್ವೀಪರ್ ಸಂಪರ್ಕದಿಂದ ಸೋಂಕು ತಗುಲಿತ್ತು. ಏಪ್ರಿಲ್ 30ರಂದು ಮಹಿಳೆಗೆ ಕೊರೊನಾ ದೃಢಪಟ್ಟಿತ್ತು. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಈ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 4ಮಂದಿ ಬಲಿಯಾಗಿದ್ದಾರೆ.
Published On - 2:39 pm, Wed, 13 May 20