ಲೋಕ ನಿಯಮದ ಪ್ರಕಾರ ವರ್ಷವೊಂದು ಉರುಳಿ ಹೋಗುತ್ತಿದೆ. ಉರುಳಿ ಹೋಗುವ ಮುನ್ನ ಒಂದಷ್ಟು ನೆನಪುಗಳನ್ನು ಉಳಿಸಿ ಹೋಗುತ್ತಿದೆ. ಈ ಜಗತ್ತಿನ ಪುಟದಲ್ಲಿ ಸಂತಸಕ್ಕಿಂತ ಸಂಕಟವೇ ಹೆಚ್ಚು ಅಚ್ಚೊತ್ತಿರುವ 2020 ನಮ್ಮಿಂದ ಅದೆಷ್ಟೋ ಜೀವಗಳನ್ನು ಕಿತ್ತುಕೊಂಡಿದೆ. ಅವರನ್ನೆಲ್ಲಾ ನೆನಪಿಸಿಕೊಳ್ಳುವ ಕ್ಷಣವಿದು.
ಕೊರೊನಾದಿಂದ ಕೊನೆಯುಸಿರೆಳೆದ ಗಣ್ಯರು..
1. ಕನ್ನಡದ ಜನಪ್ರಿಯ ಪೋಷಕ ನಟ ಗಂಗಾಧರಯ್ಯ (70 ವರ್ಷ) ಜು.18 ರಂದು ಕೊವಿಡ್ನಿಂದಾಗಿ ಇಹಲೋಕ ತ್ಯಜಿಸಿದರು.
2. ಕೇಂದ್ರ ಸಚಿವ, ಬೆಳಗಾವಿ ಸಂಸದ, ಬಿಜೆಪಿ ಪಕ್ಷದ ನಾಯಕ ಸುರೇಶ್ ಅಂಗಡಿ (65 ವರ್ಷ) ಕೊರೊನಾ ಸೋಂಕಿನಿಂದ ಸೆ.23ರಂದು ಕೊನೆಯುಸಿರೆಳೆದರು.
3. ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ (74 ವರ್ಷ) ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿ ಹಲವು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದರು. ಆದರೆ, ಸೆ.25ರಂದು ಎಲ್ಲಾ ಪ್ರಯತ್ನಗಳೂ ವ್ಯರ್ಥವಾಗಿ ಸ್ವರ ಮಾಂತ್ರಿಕ ಈ ಜಗತ್ತನ್ನು ಅಗಲಿದರು.
4. ಬೆಂಗಾಳಿ ಭಾಷೆಯ ಪ್ರಸಿದ್ಧ ನಟ ಸೌಮಿತ್ರ ಚಟರ್ಜಿ (85 ವರ್ಷ) ಕೊರೊನಾದಿಂದಾಗಿ ನ.15 ರಂದು ಕಣ್ಮುಚ್ಚಿದರು.
5. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹ್ಮದ್ ಪಟೇಲ್ (71 ವರ್ಷ) ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ನ.25ರಂದು ಹಿರಿಯ ರಾಜಕಾರಣಿ ನಿಧನರಾದರು.
ಕೊರೊನಾ ಹೊರತಾದ ಕಾರಣಗಳಿಂದ ಕಣ್ಮುಚ್ಚಿದ ಪ್ರಸಿದ್ಧ ವ್ಯಕ್ತಿಗಳು..
6. ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್.ಚತುರ್ವೇದಿ (90 ವರ್ಷ) ಜ.6 ರಂದು ಕಾಲವಾದರು.
7. ಕನ್ನಡದ ಹಿರಿಯ ಸಾಹಿತಿ, ಸಂಶೋಧಕ ಚಿದಾನಂದ ಮೂರ್ತಿ (89 ವರ್ಷ) ಜ.11ರಂದು ತೀರಿ ಹೋದರು.
8. ಹಿರಿಯ ರಾಜಕಾರಣಿ, ಮಾಜಿ ಸಚಿವ ಸಿ.ಚೆನ್ನಿಗಪ್ಪ (70 ವರ್ಷ) ಅನಾರೋಗ್ಯದಿಂದ ಫೆ.21ರಂದು ವಿಧಿವಶರಾದರು.
9. ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಮಾತೆ ಮಾಣಿಕೇಶ್ವರಿ (87 ವರ್ಷ) ಮಾ.7ರಂದು ಲಿಂಗೈಕ್ಯರಾದರು.
10. ಕರ್ನಾಟಕದ ಮಾಜಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ (89 ವರ್ಷ) ಮಾ.8ರಂದು ಮರಣ ಹೊಂದಿದರು.
11. ಕನ್ನಡದ ಹಿರಿಯ ಪತ್ರಕರ್ತ, ಸಾಹಿತಿ, ಪಾಪು ಎಂದೇ ಪ್ರಸಿದ್ಧರಾಗಿದ್ದ ಶತಾಯುಷಿ ಪಾಟೀಲ ಪುಟ್ಟಪ್ಪ (102 ವರ್ಷ) ಮಾ.16ರಂದು ನಮ್ಮನ್ನಗಲಿದರು.
12. ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಬುಲೆಟ್ ಪ್ರಕಾಶ್ (44 ವರ್ಷ) ಅನಾರೋಗ್ಯದಿಂದ ಏ.6ರಂದು ಕೊನೆಯುಸಿರೆಳೆದರು.
13. ಹಿರಿಯ ಕಾಂಗ್ರೆಸ್ಸಿಗ, ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ (92 ವರ್ಷ) ಏ.13ರಂದು ನಿಧನರಾದರು.
14. ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ (53 ವರ್ಷ) ಏ.29ರಂದು ಕ್ಯಾನ್ಸರ್ ಕಾಯಿಲೆಯಿಂದ ಕಣ್ಮುಚ್ಚಿದರು.
15. ಖ್ಯಾತ ಬಾಲಿವುಡ್ ನಟ ರಿಷಿ ಕಪೂರ್ (67 ವರ್ಷ) ರಕ್ತ ಕ್ಯಾನ್ಸರ್ಗೆ ತುತ್ತಾಗಿ ಏ.30ರಂದು ವಿಧಿವಶರಾದರು.
16. ಮಾಜಿ ಡಾನ್, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ (68 ವರ್ಷ) ಅನಾರೋಗ್ಯ ಕಾರಣದಿಂದ ಮೇ.15ರಂದು ಕೊನೆಯುಸಿರೆಳೆದರು.
17. ಕನ್ನಡ ಚಿತ್ರರಂಗದ ನಾಯಕ ನಟ ಚಿರಂಜೀವಿ ಸರ್ಜಾ (39 ವರ್ಷ) ತಮ್ಮ ಕಿರಿಯ ವಯಸ್ಸಿನಲ್ಲೇ ಹೃದಯಾಘಾತಕ್ಕೀಡಾಗಿ ಜೂ.7ರಂದು ಕಣ್ಮುಚ್ಚಿದರು.
18. ಬಾಲಿವುಡ್ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ (34 ವರ್ಷ) ಅವರ ಮೃತದೇಹ ಜೂ.14ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಯಿತು.
19. ಮೂರು ಬಾರಿ ರಾಷ್ಟ್ರಪ್ರಶಸ್ತಿ ಗೆದ್ದ, ಬಾಲಿವುಡ್ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ (71 ವರ್ಷ) ಜು.3ರಂದು ಹೃದಯಾಘಾತದಿಂದ ಸಾವನ್ನಪ್ಪಿದರು.
20. ಕನ್ನಡ ಚಿತ್ರರಂಗದ ಹಿರಿಯ ನಟಿ ಶಾಂತಮ್ಮ (95 ವರ್ಷ) ಜು.19ರಂದು ಮೃತರಾದರು.
21. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (85 ವರ್ಷ) ಆ.31ರಂದು ಇಹಲೋಕ ತ್ಯಜಿಸಿದರು.
22. ಕನ್ನಡ ಚಿತ್ರರಂಗದ ಹಾಸ್ಯ ನಟ ರಾಕ್ಲೈನ್ ಸುಧಾಕರ್ (65 ವರ್ಷ) ಹೃದಯಾಘಾತದಿಂದ ನಿಧನರಾದರು.
23. ಹಿರಿಯ ರಾಜಕಾರಣಿ, ಮಾಜಿ ಹಣಕಾಸು ಸಚಿವ ಜಸ್ವಂತ್ ಸಿಂಗ್ (82 ವರ್ಷ) ಸೆ.27 ರಂದು ಕಾಲವಾದರು.
24. ಕನ್ನಡ ಸಾಹಿತ್ಯ ಲೋಕದ ಖ್ಯಾತ ವಿಮರ್ಶಕ, ಹಿರಿಯ ಸಾಹಿತಿ ಜಿ.ಎಸ್.ಅಮೂರ (96 ವರ್ಷ) ಸೆ.28 ರಂದು ಮರಣ ಹೊಂದಿದರು.
25. ಕೇಂದ್ರ ಸಚಿವ, ಎಲ್ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ (74 ವರ್ಷ) ಅ.8ರಂದು ಕಣ್ಮುಚ್ಚಿದರು.
26. ಕನ್ನಡದ ಖ್ಯಾತ ಪತ್ರಕರ್ತ, ಬರಹಗಾರ ರವಿ ಬೆಳಗೆರೆ (62 ವರ್ಷ) ನ.13ರಂದು ವಿಧಿವಶರಾದರು.
27. ತತ್ವಶಾಸ್ತ್ರ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ (84 ವರ್ಷ) ಡಿ.13ರಂದು ಇಹಲೋಕ ತ್ಯಜಿಸಿದರು.
28. ಖ್ಯಾತ ಉದ್ಯಮಿ, ಮುರುಡೇಶ್ವರದ ಅಭಿವೃದ್ಧಿಗೆ ಕಾರಣಕರ್ತರಾದ ಆರ್.ಎನ್.ಶೆಟ್ಟಿ (93 ವರ್ಷ) ಡಿ.17ರಂದು ಮೃತರಾದರು.
29. ಕರ್ನಾಟಕದ ಮೇಲ್ಮನೆ ಉಪಸಭಾಪತಿ ಧರ್ಮೇಗೌಡ (65 ವರ್ಷ) ಡಿ.28ರಂದು ಆತ್ಮಹತ್ಯೆಗೆ ಶರಣಾದರು.
30. ಹಿರಿಯ ರಂಗಭೂಮಿ ಕಲಾವಿದ, ಸಂಗೀತ ಸಂಯೋಜಕ ಆರ್.ಪರಮಶಿವನ್ (94 ವರ್ಷ) ಡಿ.31ರಂದು ಹೃದಯಾಘಾತದಿಂದ ನಿಧನರಾದರು.
2020 year in review | ಎರಡನೇ ತ್ರೈಮಾಸಿಕದಲ್ಲಿ ನೋವಿನ ಸರಮಾಲೆ, ಕಳೆದು ಬಂದೆವು ನಾವು ಇನ್ನಷ್ಟು ದಿವಸ
Published On - 2:05 pm, Thu, 31 December 20