ಮೈಸೂರು: ನಾಡಿನೆಲ್ಲೆಡೆ ಶಿವರಾತ್ರಿ ಜಪ ಜೋರಾಗಿದೆ. ಶಿವರಾತ್ರಿ ಅಂಗವಾಗಿ ಶಿವನ ಜಪ ಮಾಡಲು ಜನ ದೇವಾಲಯಗಳ ಮುಂದೆ ಸಾಲುಗಟ್ಟುತ್ತಿದ್ದಾರೆ. ಈ ನಡುವೆ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 21 ಅಡಿ ಎತ್ತರದ ಬೃಹತ್ ಶಿವಲಿಂಗ ನಿರ್ಮಾಣ ಮಾಡಲಾಗಿದೆ. ಅದೂ ಕೂಡ ಶಿವನ ಪೂಜೆಗೆ ಅರ್ಪಿಸಲಾದ ತೆಂಗಿನಕಾಯಿಗಳಿಂದ ಶಿವಲಿಂಗವನ್ನು ನಿರ್ಮಾಣ ಮಾಡಿರುವುದು ವಿಶೇಷವಾಗಿದೆ.
ಮೈಸೂರು ನಗರದ ಆಲನಹಳ್ಳಿ ವೃತ್ತದ ಮೈದಾನದಲ್ಲಿ ತೆಂಗಿನಕಾಯಿಗಳಿಂದ ನಿರ್ಮಾಣಗೊಂಡ ಬೃಹದಾಕಾರ ಶಿವಲಿಂಗ ಜನಾಕರ್ಷಣೆಯಾಗಿದೆ. ಶಿವರಾತ್ರಿ ಅಂಗವಾಗಿ ಆಲನಹಳ್ಳಿಯ ಬ್ರಹ್ಮಕುಮಾರಿಸ್ ಆಶ್ರಮದವರು ತೆಂಗಿನ ಕಾಯಿಗಳಿಂದ ಶಿವಲಿಂಗ ನಿರ್ಮಾಣ ಮಾಡಿದ್ದಾರೆ. ನುರಿತ 15 ಜನ ಕಲಾವಿದರು 8 ದಿನಗಳ ಕಾಲ ಶಿವಲಿಂಗವನ್ನು ನಿರ್ಮಾಣ ಮಾಡಿದ್ದಾರೆ. ಸುಮಾರು 8 ಸಾವಿರ ತೆಂಗಿನಕಾಯಿಗಳಿಂದ ಈ ಶಿವಲಿಂಗವನ್ನು ನಿರ್ಮಾಣ ಮಾಡಲಾಗಿದೆ. ಬೃಹದಾಕಾರ ಶಿವಲಿಂಗವು 21 ಅಡಿ ಎತ್ತರವಿದ್ದು, 12 ಅಡಿ ಅಗಲ ಇದೆ. ಶಿವರಾತ್ರಿ ಅಂಗವಾಗಿ ನಿರ್ಮಾಣವಾಗಿರುವ ಬೃಹತ್ ಲಿಂಗವನ್ನು ಒಂದು ವಾರಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಸದ್ಯ ಎಲ್ಲರಿಗೂ ಉಚಿತ ಪ್ರವೇಶವನ್ನು ನೀಡಲಾಗಿದ್ದು, ಪೊಲೀಸರು ಅನುಮತಿಕೊಟ್ಟರೆ ಇನ್ನು ಒಂದಷ್ಟು ದಿನ ಪ್ರದರ್ಶನವನ್ನು ವಿಸ್ತರಿಸಲಾಗುತ್ತದೆಯಂತೆ.
4 ಲಕ್ಷ ರೂ. ಖರ್ಚು
ತೆಂಗಿನಕಾಯಿಗಳಿಂದ ನಿರ್ಮಾಣಗೊಂಡ ಬೃಹತ್ ಶಿವಲಿಂಗಕ್ಕೆ ಸುಮಾರು 4 ಲಕ್ಷ ರೂ. ಖರ್ಚು ಮಾಡಲಾಗಿದೆಯಂತೆ. ಶಿವಲಿಂಗದ ಸುತ್ತ ಶಾಮಿಯಾನ ಹಾಕಿ ಬರುವ ಭಕ್ತರಿಗೆ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಸುಂದರವಾಗಿ ಮೂಡಿಬಂದಿರುವ ಲಿಂಗವನ್ನು ನೋಡಲು ಜನರು ಈಗಾಗಲೇ ಬರುತ್ತಿದ್ದಾರೆ. ಬೃಹತ್ ಲಿಂಗದ ಬಳಿ ನಿಂತು ಮಹಿಳೆಯರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಶಿವಲಿಂಗಕ್ಕೆ ಶಿವ ಭಕ್ತರು ಹಾಗೂ ಸಾರ್ವಜನಿಕರು ಫಿದಾ ಆಗಿದ್ದಾರೆ.
ನಾಳೆ ನಡೆಯುವ ಶಿವರಾತ್ರಿ ಆಚರಣೆಗೆ ಎಲ್ಲೆಡೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶಿವರಾತ್ರಿ ದಿನದಂದು ಹಣ್ಣು ಹಂಪಲು ತಿನ್ನುತ್ತ ಜಾಗರಣೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ನಿರ್ಮಾಣಗೊಂಡಿರುವ ಬೃಹತ್ ಶಿವಲಿಂಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ
ಕೊಪ್ಪಳ ಜಿಲ್ಲೆಯಲ್ಲಿ ಹಣ್ಣಿನ ಮೇಳ: ಶಿವರಾತ್ರಿ ಹಬ್ಬದ ಸಂತಸ ಹೆಚ್ಚಿಸಿದ ವಿವಿಧ ಉತ್ಪನ್ನಗಳು
Maha Shivaratri 2021: ಶಿವ ಶಿವಾ.. ಶಿವರಾತ್ರಿಗೆ ಇನ್ನೂ ಒಂದು ವಾರ ಇರುವಾಗಲೇ ರಣಬಿಸಿಲಿನ ಆರ್ಭಟ ಶುರು!