ಕರ್ನಾಟಕದಲ್ಲಿ 2023ರ ಮೊದಲಾರ್ಧದಲ್ಲಿ ರಸ್ತೆ ಅಪಘಾತದಲ್ಲಿ ಬಲಿಯಾದವರೆಷ್ಟು? ಇಲ್ಲಿದೆ ಮಾಹಿತಿ
ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಇದನ್ನು ತಡೆಗಟ್ಟಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಿದ್ದರೂ 2022 ರಲ್ಲಿ ರಾಜ್ಯದಲ್ಲಿ 10,000 ಕ್ಕೂ ಹೆಚ್ಚು ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮೈಸೂರು: ರಾಜ್ಯದಲ್ಲಿ ರಸ್ತೆ ಅಪಘಾತಗಳ (Road Accident) ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಇದನ್ನು ತಡೆಗಟ್ಟಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. 2022 ರಲ್ಲಿ ರಾಜ್ಯದಲ್ಲಿ 10,000 ಕ್ಕೂ ಹೆಚ್ಚು ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 2023 ರ ಮೊದಲಾರ್ಧದಲ್ಲಿ ರಾಜ್ಯಾದ್ಯಂತ 5,804 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 2023 ರ ದ್ವಿತೀಯಾರ್ಧದಲ್ಲಿ ಅಪಘಾತಗಳನ್ನು ಶೇ 30 ರಷ್ಟು ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ. ಅಪಘಾತಗಳನ್ನು ತಡೆಗಟ್ಟಲು ರಸ್ತೆಗಳಲ್ಲಿನ ದೋಷಗಳನ್ನು ಸರಿಪಡಿಸಲು ಇಲಾಖೆಯು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಹೇಳಿದರು.
ಇದನ್ನೂ ಓದಿ: Accidents in Bengaluru: ಬೆಂಗಳೂರು ರಸ್ತೆ ಅಪಘಾತ; ಪಾದಚಾರಿಗಳ ಸಾವಿನ ಸಂಖ್ಯೆಯಲ್ಲಿ ಶೇ 53ರಷ್ಟು ಹೆಚ್ಚಳ
ಇದಕ್ಕೂ ಮುನ್ನ ಮೈಸೂರು-ಬೆಂಗಳೂರು ಎಕ್ಸಪ್ರೆಸ್ ವೇಗೆ ಭೇಟಿ ನೀಡಿ ಪರಿಶೀಲಿಸಿದರು. ಮೈಸೂರು ನಗರ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಹೊಸ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಅಲ್ಲದೇ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ಹಾಗೂ ಇತರ ಸಣ್ಣ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದನ್ನು ಅಲೋಕ್ ಕುಮಾರ್ ಸಮರ್ಥಿಸಿಕೊಂಡಿದ್ದರು. ಎಕ್ಸಪ್ರೆಸ್ ವೇನಲ್ಲಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಇತರ ಮೋಟಾರು ರಹಿತ ವಾಹನಗಳ ವಾಹನಗಳ ಸಂಚಾರಕ್ಕೆ ಆಗಸ್ಟ್‌ನಿಂದ ಅನುವು ಮಾಡಿಕೊಡಲು ಸಾಧ್ಯವೇ ಇಲ್ಲ. ನಾನು ಮೂರು ವಿಭಿನ್ನ ಸಂದರ್ಭಗಳಲ್ಲಿ ಎಕ್ಸ್‌ಪ್ರೆಸ್‌ವೇಯನ್ನು ಪರಿಶೀಲಿಸಿದ್ದೇನೆ ಮತ್ತು ಅಪಘಾತವಾದ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಸ್ಥಳೀಯ ಗ್ರಾಮಸ್ಥರನ್ನು ಭೇಟಿ ಮಾಡಿದ್ದೇನೆ ಎಂದು ತಿಳಿಸಿದರು.
ಮೈಸೂರು, ಮಂಡ್ಯ ಮತ್ತು ರಾಮನಗರದ ಪೊಲೀಸ್ ಅಧಿಕಾರಿಗಳಿಗೆ ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವಂತೆ ಸೂಚನೆಗಳನ್ನು ನೀಡಿದ್ದು, ಲೇನ್ ಶಿಸ್ತನ್ನು ಹೇಗೆ ಅನುಸರಿಸಬೇಕು, ನಿರ್ದಿಷ್ಟ ವೇಗದ ಮಿತಿಯನ್ನು ಮೀರಿ ವಾಹನ ಚಲಾಯಿಸಬಾರದು ಮತ್ತು ಕುಡಿದು ವಾಹನ ಚಲಾಯಿಸುವುದನ್ನು ತಪ್ಪಿಸಬೇಕು. ಹೆದ್ದಾರಿಯಲ್ಲಿ ಅಪಘಾತಕ್ಕೀಡಾದವರಲ್ಲಿ ಹೆಚ್ಚಿನವರು ದ್ವಿಚಕ್ರ ವಾಹನ ಸವಾರರು ಮತ್ತು ಅತಿಯಾದ ವೇಗವೇ ಇದಕ್ಕೆ ಕಾರಣ ಎಂದು ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:33 am, Fri, 28 July 23