ಬೆಂಗಳೂರಿನಲ್ಲಿ ಮಲತಂದೆಯಿಂದ ಬಾಲಕಿ ಸಿರಿ ಹತ್ಯೆ ಪ್ರಕರಣ ; ಶುಕ್ರವಾರ ಆ ಮನೆಯಲ್ಲಿ ನಡೆದಿದ್ದೇನು!

ಬೆಂಗಳೂರು ಕುಂಬಳಗೋಡು ಪ್ರದೇಶದ ಕನ್ನಿಕಾ ಬಡಾವಣೆಯಲ್ಲಿ ಮಲತಂದೆ ದರ್ಶನ್ ತನ್ನ 7 ವರ್ಷದ ಮಗಳು ಸಿರಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ ಘಟನೆ ಬೆಳಕಿಗೆ ಬಂದಿತ್ತು. ಈ ಪ್ರಕರಣದ ಆರೋಪಿ ಕೊಲೆ ಮಾಡಿ ಬೈಕ್ನಲ್ಲಿ ಪರಾರಿಯಾಗಿದ್ದ. ಹತ್ಯೆ ಆರೋಪಿ ದರ್ಶನ್ ಈಗ ಪೊಲೀಸರ ವಶದಲ್ಲಿದ್ದಾನೆ.ಮೃತ ಬಾಲಕಿ ತಾಯಿ ದರ್ಶನ್​ ಎನ್ನುವಾತನನ್ನು ಎರಡನೇ ಮದುವೆಯಾಗಿದ್ದಳು. ಆಕೆಯ ಮಗುವಿನಿಂದ ಕಿರಿಕಿರಿಗೊಳಗಾಗಿದ್ದ ದರ್ಶನ್ ಈ ಕೃತ್ಯವನ್ನೆಸಗಿದ್ದಾನೆಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಮಲತಂದೆಯಿಂದ ಬಾಲಕಿ ಸಿರಿ ಹತ್ಯೆ ಪ್ರಕರಣ ; ಶುಕ್ರವಾರ ಆ ಮನೆಯಲ್ಲಿ ನಡೆದಿದ್ದೇನು!
ಹತ್ಯೆಯಾದ ಸಿರಿ ಮತ್ತು ಆರೋಪಿ ದರ್ಶನ್

Updated on: Oct 28, 2025 | 1:42 PM

ಬೆಂಗಳೂರು, ಅಕ್ಟೋಬರ್ 28: ಕೆಲ ದಿನಗಳ ಹಿಂದೆ ನಗರದ ಕುಂಬಳಗೋಡು ಠಾಣಾ ವ್ಯಾಪ್ತಿಯ ಕನ್ನಿಕಾ ಬಡಾವಣೆಯಲ್ಲಿ ಮಲತಂದೆಯೇ 7 ವರ್ಷದ ಮಗಳನ್ನು ಉಸಿರುಗಟ್ಟಿಸಿ ಹತ್ಯೆ (Murder) ಮಾಡಿದ ಭೀಕರ ಘಟನೆ ನಡೆದಿತ್ತು. ಆರೋಪಿ ದರ್ಶನ್ ತನ್ನ ಮಗಳು ಸಿರಿಯನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದು, ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಇದೀಗ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ತನಿಖೆ ಮುಂದುವರೆದಿದೆ.

7 ವರ್ಷದ ಬಾಲಕಿಯನ್ನು ಕತ್ತು ಹಿಸುಕಿ ಕೊಂದ ಮಲತಂದೆ

ಶುಕ್ರವಾರ ಸಂಜೆ ಕೆಲಸಕ್ಕೆ ಹೋಗಿದ್ದ ತಾಯಿ ಇನ್ನೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಶಾಲೆಯಿಂದ ಬಂದ ಬಾಲಕಿ ಮನೆಗೆ ಹೋಗದೆ ಪರಿಚಯಸ್ಥರ ಅಂಗಡಿ ಬಳಿ ನಿಂತಿದ್ದಳು. ಈ ವೇಳೆ ಮನೆಯಲ್ಲಿದ್ದ ದರ್ಶನ್, ಬಾಲಕಿಯನ್ನು ಹುಡುಕಿಕೊಂಡು ಬಂದಿದ್ದ. ಅಂಗಡಿ ಬಳಿ ಇದ್ದ ಸಿರಿಯನ್ನು ಮನೆಗೆ ಕರೆದಾಗ ತಾನು ಮನೆಗೆ ಬರುವುದಿಲ್ಲವೆಂದು ಹಠ ಮಾಡಿದ್ದಳು. ಈತ ನನಗೆ ಹೊಡೆಯುತ್ತಾನೆ ಎಂದು ಎಲ್ಲರ ಎದುರು ಹೇಳಿದ್ದಳು. ಆದರೂ ದರ್ಶನ್ ಬಲವಂತವಾಗಿ ಬಾಲಕಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ.

ಮನೆಗೆ ಬಂದ ನಂತರ ಕೋಪದಲ್ಲಿ ಕೈಯಲ್ಲೇ ಬಲವಾಗಿ ಥಳಿಸಿದ್ದಾನೆ. ಬಾಲಕಿಯನ್ನು ನೆಲಕ್ಕೆ ತಳ್ಳಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ವೇಳೆ ಬಾಲಕಿಯ ಮೂಗಿನಲ್ಲಿ, ಬಾಯಿಯಲ್ಲಿ ರಕ್ತ ಬಂದಿತ್ತು. ಸಾಕ್ಷ್ಯ ನಾಶ ಮಾಡಲು ರಕ್ತದ ಕಳೆಯನ್ನೆಲ್ಲಾ ತೊಳೆದಿದ್ದಾನೆ. ನಂತರ ಮನೆಗೆ ಬಂದ ಬಾಲಕಿಯ ತಾಯಿ ಶಿಲ್ಪಾ ಬಳಿ ಮಗು ಮಾತನಾಡುತ್ತಿಲ್ಲವೆಂದು ದರ್ಶನ್ ಹೇಳಿದ್ದ. ಆಕೆ ತನ್ನ ಮಗುವಿನ ಪರಿಸ್ಥಿತಿ ಕಂಡು ಕಿರುಚಿಕೊಂಡಿದ್ದಳು. ಇದೇ ವೇಳೆ ದರ್ಶನ್ ಶಿಲ್ಪಾಳನ್ನು ರೂಮಿನಲ್ಲಿ ಕೂಡಿಹಾಕಿ ಬೈಕ್‌ನಲ್ಲಿ ಪರಾರಿಯಾಗಿದ್ದವನು ಈಗ ಕುಂಬಳಗೋಡು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ ಬೆಂಗಳೂರಿನಲ್ಲಿ ಘೋರ ಕೃತ್ಯ: ಮಲತಂದೆಯಿಂದಲೇ 7 ವರ್ಷದ ಮಗಳ ಹತ್ಯೆ

ಗಂಡ ಹೆಂಡತಿಯ ಖಾಸಗಿ ಸಮಯಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ಬಾಲಕಿಗೆ ಕಿರುಕುಳ

ಮೊದಲ ಪತಿ ಮೃತಪಟ್ಟ ಬಳಿಕ ಸಿರಿಯ ತಾಯಿ ಶಿಲ್ಪಾ, ದರ್ಶನ್ ಜೊತೆ ಎರಡನೇ ಮದುವೆಯಾಗಿದ್ದರು. ಮನೆಯಲ್ಲಿ ಶಿಲ್ಪಾ ತಾಯಿ ಇರುವ ತನಕ ಮಗುವನ್ನು ಪ್ರೀತಿಯಿಂದ‌ ನೋಡಿಕೊಳ್ಳುತ್ತಿದ್ದ ಪಾಪಿ, ಶಿಲ್ಪಾಳ ತಾಯಿ ಸಾವನ್ನಪ್ಪಿದ್ದ ಮೇಲೆ ಬೇರೆ ವರ್ತನೆ ಶುರುಮಾಡಿದ್ದ. ಗಂಡ ಹೆಂಡತಿಯ ಖಾಸಗಿ ಸಮಯಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ಬಾಲಕಿಗೆ ಕಿರುಕುಳ ಕೊಡುತ್ತಿದ್ದ ದರ್ಶನ್, ಮಗುವಿಗೆ ಮನಸಿಗೆ ಬಂದ ಹಾಗೆ ಹೊಡೆಯುತ್ತಿದ್ದ. ಇದರಿಂದ ಮಲತಂದೆಯನ್ನು ಕಂಡರೆ ಸಿರಿ ಭಯಭೀತಳಾಗುತ್ತಿದ್ದಳು. ಇದೇ ಕೋಪಕ್ಕೆ ಆಕೆಯನ್ನು ಹತ್ಯೆ ಮಾಡಿರುವ ದರ್ಶನ್ ಈಗ ಪೊಲೀಸರ ವಶದಲ್ಲಿದ್ದಾನೆ.

ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:01 pm, Tue, 28 October 25