ಉಡುಪಿ: ಅಯೋಧ್ಯೆಯಲ್ಲಿ ರಾಮದೇವರನ್ನು ಹೊತ್ತು ಮೆರೆಯುವ ರಥ ಉಡುಪಿಯಲ್ಲಿ ನಿರ್ಮಾಣವಾಗುವುದು ಬಹುತೇಕ ಖಚಿತವಾಗಿದ್ದು, ಹಂಪಿ ಸಮೀಪದ ಕಿಷ್ಕಿಂದೆಯ ಅಂಜನಾದ್ರಿ ಸ್ವಾಮೀಜಿಗಳ ಇಚ್ಛೆಯಂತೆ ಕುಂದಾಪುರದ ಪ್ರಖ್ಯಾತ ರಥ ಶಿಲ್ಪಿಗಳು ರಾಮರಥ ಸಿದ್ಧತೆಗೆ ತಯಾರಿ ನಡೆಸಿದ್ದಾರೆ. ದೇವಾಲಯಗಳ ನಗರಿ ಉಡುಪಿಗೂ ರಾಮದೇವರ ತವರು ಅಯೋಧ್ಯೆಗೂ ಅವಿನಾಭಾವ ಸಂಬಂಧವಿದ್ದು, ಇದೀಗ ಅಯೋಧ್ಯೆಯೊಂದಿಗಿನ ಉಡುಪಿಯ ಸಂಬಂಧವನ್ನು ಮರುಸ್ಥಾಪಿಸುವ ಅವಕಾಶವೊಂದು ಒದಗಿಬಂದಿದೆ. ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಚುರುಕುಗೊಂಡಿದ್ದು, ರಾಮದೇವರ ರಥೋತ್ಸವಕ್ಕೆ ಉಡುಪಿಯಲ್ಲೇ ರಥ ನಿರ್ಮಾಣವಾಗಲಿದೆ.
ಈ ವಿಚಾರವನ್ನು ಕುಂದಾಪುರದ ಪ್ರಖ್ಯಾತ ರಥ ಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ ಖಚಿತಪಡಿಸಿದ್ದಾರೆ. ರಾಮಮಂದಿರ ನಿರ್ಮಾಣ ಟ್ರಸ್ಟ್ಗೂ ಈ ರಥ ನಿರ್ಮಾಣಕ್ಕೂ ನೇರ ಸಂಬಂಧ ಇಲ್ಲವಾದರೂ, ಕರ್ನಾಟಕ ರಾಜ್ಯದ ಕೊಡುಗೆಯಾಗಿ ಈ ರಥವನ್ನು ಅಯೋಧ್ಯೆಗೆ ಸಮರ್ಪಿಸಲು ಅಂಜನಾದ್ರಿಯ ಸ್ವಾಮೀಜಿ ತೀರ್ಮಾನಿಸಿದ್ದಾರೆ. ಕುಂದಾಪುರದ ರಥ ಶಿಲ್ಪಿಗಳನ್ನು ಸಂಪರ್ಕಿಸಿ ಬೃಹದಾಕಾರದ ರಥ ನಿರ್ಮಿಸಿಕೊಡುವಂತೆ ಕೋರಿದ್ದಾರೆ.
ಹನುಮನ ನಾಡಾದ ಕಿಷ್ಕಿಂದೆಯಿಂದ ಅಯೋಧ್ಯೆಗೆ ರಥವನ್ನು ಕೊಡುಗೆಯಾಗಿ ನೀಡಬೇಕು ಎನ್ನುವುದು ಯೋಜನೆಯ ಹಿಂದಿನ ಆಶಯ. ಬೃಹದಾಕಾರದ ಈ ರಥದ ರೂಪುರೇಷೆಯನ್ನು ಈಗಾಗಲೇ ರಥ ಶಿಲ್ಪಿಗಳು ಸಿದ್ಧಪಡಿಸಿಕೊಂಡಿದ್ದಾರೆ. ಲಕ್ಷ್ಮೀನಾರಾಯಣ ಆಚಾರ್ಯರು ದಕ್ಷಿಣ ಭಾರತೀಯ ಅದರಲ್ಲೂ ಮುಖ್ಯವಾಗಿ ಉಡುಪಿ ಶೈಲಿಯ ರಥವನ್ನು ತಯಾರಿಸುವುದರಲ್ಲಿ ಸಿದ್ಧಹಸ್ತರು. ಈ ಬಗೆಯ ರಥ ಅಯೋಧ್ಯೆಯ ಪೂಜಾ ಪದ್ಧತಿ ಸೂಕ್ತ ವಾಗುತ್ತದೋ ಇಲ್ಲವೋ, ಎನ್ನುವ ಜಿಜ್ಞಾಸೆಯೂ ಇದೆ. ಆದರೆ ಅಂಜನಾದ್ರಿಯ ಶ್ರೀಗಳು ಅಯೋಧ್ಯೆಯಲ್ಲಿ ಈ ಕುರಿತು ಚರ್ಚಿಸಿಯೇ ರಥ ನಿರ್ಮಾಣಕ್ಕೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಥ ನಿರ್ಮಾಣಕ್ಕೆ ಸುಮಾರು 2 ವರ್ಷ ಸಮಯ ತಗಲುತ್ತದೆ. ರಥ ನಿರ್ಮಾಣ ಆರಂಭಿಸುವುದಕ್ಕೂ ಮುನ್ನ ಶಿಲ್ಪಿಗಳು ಪೇಜಾವರ ಶ್ರೀಗಳನ್ನು ಭೇಟಿಯಾಗಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದು ಯೋಜನೆ ಕೈಗೆತ್ತಿಕೊಳ್ಳುವುದಾಗಿ ರಥ ಶಿಲ್ಪಿ ಲಕ್ಷ್ಮೀ ನಾರಾಯಣ ಆಚಾರ್ಯ ತಿಳಿಸಿದ್ದಾರೆ.
ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು ಮುಂತಾದ ಪ್ರಸಿದ್ಧ ದೇವಾಲಯಗಳಿಗೆ ಇದೇ ತಂಡ ರಥ ನಿರ್ಮಿಸಿಕೊಟ್ಟಿದೆ. ಶತಮಾನಗಳ ಕಾಲ ದೇಶದ ಜನತೆ ರಾಮದೇವರನ್ನು ತಮ್ಮ ಹೃದಯದಲ್ಲಿ ಹೊತ್ತು ತಿರುಗಿದರೆ, ಇನ್ನು ಮುಂದೆ ಉಡುಪಿಯ ರಥದಲ್ಲಿ ರಾಮದೇವರ ಮೆರವಣಿಗೆ ನಡೆಯುವ ದಿನ ದೂರವಿಲ್ಲ ಎನ್ನುವುದು ಮಾತ್ರ ನಿಜ.
ಇದನ್ನೂ ಓದಿ: ಮಂದಿರ ನಿರ್ಮಾಣಕ್ಕೆ VHPಗೆ ಎಷ್ಟು ದೇಣಿಗೆ ಬಂದಿದೆ ಬಹಿರಂಗಪಡಿಸಿ: ದಿಗ್ವಿಜಯ್ ಸಿಂಗ್
Published On - 10:58 am, Fri, 12 February 21