
ಚಿಕ್ಕಬಳ್ಳಾಪುರ(ಸೆಪ್ಟೆಂಬರ್ 29): ಜಾತಿ ಗಣತಿ (caste census) ಮಾಡುವ ವೇಳೆ ಶಿಕ್ಷಕರೊಬ್ಬರಿಗೆ ಹೃದಯಾಘಾತ ಸಂಭವಿಸಿ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ (chikkaballapur) ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ. ಜಾತಿ ಗಣತಿಯ ಕರ್ತವ್ಯದಲ್ಲಿದ್ದ ಮುಖ್ಯ ಶಿಕ್ಷಕ ರಾಮಕೃಷ್ಣಪ್ಪ(57) ಮೃತ ದುರ್ದೈವಿ. ಚಿಂತಾಮಣಿ ತಾಲ್ಲೂಕಿನ ಬೂರಗಮಾಕಲಹಳ್ಳಿ ಗ್ರಾಮದ ನಿವಾಸಿಯಾಗಿರುವ ರಾಮಕೃಷ್ಣಪ್ಪ ಅವರು, ದಿಗವಕೋಟೆ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜಾತಿ ಗಣತಿಯ ಕೆಲಸದಲ್ಲಿ ತೊಡಗಿದ್ದ ವೇಳೆ ಅವರಿಗೆ ದಿಢೀರ್ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಮುರಗಮಲ್ಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಚಿಂತಾಮಣಿ ನಗರದ ಡೆಕನ್ ಆಸ್ಪತ್ರೆಗೆ ರವಾನಿಸಲಾಗಿಯ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ರಾಮಕೃಷ್ಣಪ್ಪ ಅವರು ಡೆಕನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಚಿಕ್ಕಬಳ್ಳಾಪುರ: ನಗರದ ಕಂದವಾರ ಕೆರೆ ಬಳಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. 3 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ರಾಮಗಾನಪರ್ತಿ ಗ್ರಾಮದ ಗಣೇಶ್(23) ಎನ್ನುವ ಯುವಕನ ಶವ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯ ಬಳಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಬಳ್ಳಾರಿಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರ ಜನತಾ ದರ್ಶನದ ವೇಳೆ ಕರ್ತವ್ಯದಲ್ಲಿದ್ದ ಎಎಸ್ಐ ಸಾವನ್ನಪ್ಪಿದ್ದಾರೆ. ಬಳ್ಳಾರಿಯ ಹೊಸ ಡಿಸಿ ಕಚೇರಿ ಮುಂಭಾಗ ನಡೆದಿದ್ದ ಜನತಾ ದರ್ಶನ ವೇಳೆ ಎಪಿಎಂಸಿ ಠಾಣೆಯ ಎಎಸ್ಐ ಶ್ರೀನಿವಾಸ ರಾವ್(54) ಅವರು ಕುಸಿದುಬಿದ್ದು ಮೃತಪಟ್ಟಿದ್ದಾರೆ. ಕರ್ತವ್ಯದಲ್ಲಿದ್ದಾಗ ಲೋಬಿಪಿಯಿಂದ ಕುಸಿದುಬಿದ್ದಿದ್ದ ಶ್ರೀನಿವಾಸ ರಾವ್ ಅವರನ್ನು ಕೂಡಲೇ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದ್ರೆ, ಚಿಕಿತ್ಸೆ ಫಲಿಸದೆ ಎಎಸ್ಐ ಶ್ರೀನಿವಾಸ ರಾವ್ ಕೊನೆಯಸಿರೆಳೆದಿದ್ದಾರೆ.
Published On - 7:04 pm, Mon, 29 September 25