ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿಗೆ ಟಿಕೆಟ್ ಬುಕ್ಕಿಂಗ್ ಕರೆಗಳ ಕಾಟ, ಅಧಿಕಾರಿಗಳು ಮಾಡಿದ್ದೇನು?

ಶಾಸಕ ಜಮೀರ್ ಅಹಮದ್ ಖಾನ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡಕ್ಕೆ ಟಿಕೆಟ್ ಬುಕ್ಕಿಂಗ್ ಕಾಲ್ ಕಿರಿಕ್ ಎದುರಾಗಿದೆ. ಕರೆಗಳನ್ನು ಸ್ವೀಕರಿಸಿ ಸುಸ್ತಾದ ಎಸಿಬಿ ಅಧಿಕಾರಿಗಳು.

ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿಗೆ ಟಿಕೆಟ್ ಬುಕ್ಕಿಂಗ್ ಕರೆಗಳ ಕಾಟ, ಅಧಿಕಾರಿಗಳು ಮಾಡಿದ್ದೇನು?
ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಬಾಗಿಲು ತೆಗೆಯುತ್ತಿರುವ ಎಸಿಬಿ ಅಧಿಕಾರಿಗಳು
Edited By:

Updated on: Jul 05, 2022 | 10:31 AM

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಡಿ ಕಾಂಗ್ರೆಸ್ ಶಾಸಕ ಜಮೀರ್​ ಅಹ್ಮದ್ ಖಾನ್ (Zameer Ahmad Khan) ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ACB) ಅಧಿಕಾರಿಗಳು ಇಂದು ಮುಂಜಾನೆ ದಾಳಿ (Raid) ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅಧಿಕಾರಿಗಳು ದಾಳಿ ನಡೆಸಿದ ಸ್ಥಳಗಳ ಪೈಕಿ ಜಮೀರ್ ಅಹಮದ್ ಖಾನ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಕೂಡ ಒಂದಾಗಿದೆ. ಈ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡಕ್ಕೆ ಟಿಕೆಟ್ ಬುಕ್ಕಿಂಗ್ ಕಾಲ್ ಕಿರಿಕ್ ಎದುರಾಗಿದೆ.

ಎಸಿಬಿ, ಐಟಿ, ಇಡಿ ದಾಳಿ ಎಂದರೆ ಹಾಗೆ, ಯಾವುದೇ ಅಧಿಕಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಅವರಿಗೆ ಸೇರಿದ ಎಲ್ಲಾ ಆಸ್ತಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗುತ್ತದೆ. ಅದೇ ರೀತಿ ಜಮೀರ್ ಅಹಮದ್ ಖಾನ್​ಗೆ ಸೇರಿದ ಎಲ್ಲಾ ಆಸ್ತಿಗಳ ಮೇಲೆ ಎಸಿಬಿ ದಾಳಿ ನಡೆಸಿದ್ದು, ಈ ಪೈಕಿ ಟಿಕೆಟ್ ಬುಕ್ಕಿಂಗ್ ಮಾಡುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಕೂಡ ಒಂದು. ಈ ಕಚೇರಿ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಟಿಕೆಟ್ ಬುಕ್ಕಿಂಗ್ ಕಚೇರಿ ಆಗಿರುವುದರಿಂದ ಗ್ರಾಹಕರು ಟಿಕೆಟ್ ಬುಕ್ಕಿಂಗ್​ಗಾಗಿ ದೂರವಾಣಿ ಕರೆಗಳನ್ನು ಮಾಡುತ್ತಿದ್ದಾರೆ. ದಾಳಿಯ ನಡುವೆ ಮೇಲಿಂದ ಮೇಲೆ ದೂರವಾಣಿ ಕರೆಗಳು ಬಂದ ಹಿನ್ನೆಲೆ ಅಧಿಕಾರಿಗಳಿಗೆ ಕಿರಿಕಿರಿ ಉಂಟಾಗಿದೆ. ಹೀಗಾಗಿ ಕರೆಗಳ ಕಾಟ ತಡೆಯಲಾಗದೆ ಅಧಿಕಾರಿಗಳು ಫೋನ್ ರಿಸೀವರನ್ನೇ ಎತ್ತಿಟ್ಟಿದ್ದಾರೆ.

ಮಲ್ಯರಸ್ತೆಯ ಫ್ಲ್ಯಾಟ್ ಮೇಲೂ ಎಸಿಬಿ ದಾಳಿ

ಎಸಿಬಿ ಅಧಿಕಾರಿಗಳು ಜಮೀರ್ ಅಹಮದ್ ಖಾನ್​ಗೆ ಸೇರಿದ ಮಲ್ಯರಸ್ತೆಯಲ್ಲಿರುವ ಫ್ಲ್ಯಾಟ್ ಮೇಲೂ ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿದ್ದು, 2 ವಾಹನಗಳಲ್ಲಿ ಆಗಮಿಸಿರುವ ಎಸಿಬಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ. ಸಿಲ್ವರ್ ಓಕ್ ಅಪಾರ್ಟ್​​ಮೆಂಟ್​ನ ನಾಲ್ಕನೇ ಪ್ಲೋರ್​ನಲ್ಲಿರುವ 402ರ ಫ್ಲ್ಯಾಟ್​ನಲ್ಲಿ 8ಕ್ಕೂ ಅಧಿಕ ಎಸಿಬಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ.

ಇಂದು ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರದ ದಳದ ಅಧಿಕಾರಿಗಳು ಜಮೀರ್ ಮನೆಗೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ವೇಳೆ ಜಮೀರ್ ಖಾನ್ ಇನ್ನೂ ಎದ್ದಿರಲಿಲ್ಲ, ಮಲಗಿಯೇ ಇದ್ದರು. ಕಂಟೋನ್ಮೆಂಟ್​ನಲ್ಲಿರುವ ಜಮೀರ್ ಅಹಮದ್ ಖಾನ್ ಅವರ ನಿವಾಸ, ಸಿಲ್ವರ್ ಓಕ್ ಅಪಾರ್ಟ್ಮೆಂಟ್​ನಲ್ಲಿರುವ ಫ್ಲಾಟ್, ಸದಾಶಿವನಗರದಲ್ಲಿರುವ ಗೆಸ್ಟ್ ಹೌಸ್, ಬನಶಂಕರಿಯಲ್ಲಿರುವ ಜಿ.ಕೆ ಅಸೋಸಿಯೇಟ್ಸ್ ಕಚೇರಿ, ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ಏಕಕಾದಲ್ಲಿ 40 ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

Published On - 10:30 am, Tue, 5 July 22