Global Livability Index 2022: ಪಾಕಿಸ್ತಾನದ ಕರಾಚಿಗಿಂತಲೂ ಕಷ್ಟವಂತೆ ಬೆಂಗಳೂರಿನಲ್ಲಿ ಬದುಕೋದು, ವಿಶ್ವ ಸುಗಮ ಜೀವನ ಸೂಚ್ಯಂಕದ ಮುಖ್ಯಾಂಶಗಳಿವು
ಪಾಕಿಸ್ತಾನದ ಕರಾಚಿ ಮತ್ತು ನೈಜಿರಿಯಾದ ಲಾಗೊಸ್ ನಗರಗಳಿಗಿಂತಲೂ ಬೆಂಗಳೂರಿನಲ್ಲಿ ಜೀವನ ಕಷ್ಟ ಎಂದು ಸೂಚ್ಯಂಕವು ತಿಳಿಸಿದೆ.
ಬೆಂಗಳೂರು: ಕೇಂದ್ರ ಸರ್ಕಾರವು ಪ್ರಕಟಿಸುವ ಸುಲಭವಾಗಿ ಜೀವನ ಮಾಡಲು ಅನುಕೂಲ ಕಲ್ಪಿಸುವ ನಗರಗಳ ಪಟ್ಟಿ ‘ಈಸ್ ಆಫ್ ಲಿವಿಂಗ್ ಇಂಡೆಕ್ಸ್’ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನ ದೊರೆತಿದೆ. ಆದರೆ ವಿಶ್ವ ಮಟ್ಟದ ಸೂಚ್ಯಂಕ ಎನಿಸಿರುವ ‘ಗ್ಲೋಬಲ್ ಲಿವಬಿಲಿಟಿ ಇಂಡೆಕ್ಸ್’ನಲ್ಲಿ (Global Livability Index 2022 – ಸುಗಮ ಜೀವನ ಸೂಚ್ಯಂಕ) ಬೆಂಗಳೂರು ಕಳಪೆ ಸಾಧನೆ ಮಾಡಿದೆ. ಕಳೆದ ಜೂನ್ 24ರಂದು ‘ಎಕಾನಾಮಿಕ್ ಇಂಟೆಲಿಜೆನ್ಸ್ ಯೂನಿಟ್’ ಪ್ರಕಟಿಸಿದ ಈ ಸೂಚ್ಯಂಕದಲ್ಲಿ ಬೆಂಗಳೂರು ಭಾರತದ ಇತರ ನಗರಗಳಿಗಿಂತಲೂ ಹಿಂದೆ ಇರುವುದನ್ನು ತೋರಿಸಲಾಗಿದೆ. ಪಾಕಿಸ್ತಾನದ ಕರಾಚಿ ಮತ್ತು ನೈಜಿರಿಯಾದ ಲಾಗೊಸ್ ನಗರಗಳಿಗಿಂತಲೂ ಬೆಂಗಳೂರಿನಲ್ಲಿ ಜೀವನ ಕಷ್ಟ ಎಂದು ಸೂಚ್ಯಂಕವು ತಿಳಿಸಿದೆ.
ಇದೇ ಮೊದಲ ಬಾರಿಗೆ ಈ ಸೂಚ್ಯಂಕದಲ್ಲಿ ಭಾರತದ ಐದು ನಗರಗಳು ಸ್ಥಾನ ಪಡೆದಿವೆ. 2022ಕ್ಕೂ ಮೊದಲು ಕೇವಲ ದೆಹಲಿ ಮತ್ತು ಮುಂಬೈ ನಗರಗಳ ಬಗ್ಗೆ ಈ ಸೂಚ್ಯಂಕವು ಗಮನ ಸೆಳೆದಿತ್ತು. ಪ್ರಸಕ್ತ ಸಾಲಿನಲ್ಲಿ ಈ ಸೂಚ್ಯಂಕದಲ್ಲಿ ಅಹಮದಾಬಾದ್, ಬೆಂಗಳೂರು ಮತ್ತು ಚೆನ್ನೈ ನಗರಗಳ ಬಗ್ಗೆಯೂ ವಿವರಗಳಿವೆ.
ಆದರೆ ಭಾರತದ ಎಲ್ಲ ಐದೂ ನಗರಗಳೂ ಈ ಸೂಚ್ಯಂಕ ಕೊನೆಯಲ್ಲಿಯೇ ಸ್ಥಾನ ಪಡೆದಿರುವುದು ಗಮನಾರ್ಹ ಸಂಗತಿ. ಭಾರತದ ಐಟಿ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರಿನ ಲಿವಬಿಲಿಟಿ ಸ್ಕೋರ್ (ಸುಗಮ ಜೀವನ ನಡೆಸಲು ಸಾಧ್ಯವಿರುವ ಅಂಶಗಳು) 54.6, ರಾಷ್ಟ್ರ ರಾಜಧಾನಿ ದೆಹಲಿ ಮತ್ತು ವಾಣಿಜ್ಯ ನಗರಿ ಮುಂಬೈನ ಸ್ಕೋರ್ 56.5. ಈ ಎರಡೂ ನಗರಗಳು ಸೂಚ್ಯಂಕದಲ್ಲಿ 140ನೇ ಸ್ಥಾನದಲ್ಲಿವೆ. ಚೆನ್ನೈ ಮತ್ತು ಅಹಮದಾಬಾದ್ ನಗರಗಳು ಕ್ರಮವಾಗಿ 142 ಮತ್ತು 143ನೇ ಸ್ಥಾನದಲ್ಲಿವೆ. ಈ ಎರಡೂ ನಗರಗಳು ಕ್ರಮವಾಗಿ 55.8 ಮತ್ತು 55.7 ಸ್ಕೋರ್ ಪಡೆದಿವೆ.
ಬೆಂಗಳೂರಿನ ಸಾಧನೆ ಅಷ್ಟೇಕೆ ಕಳಪೆ?
ಹಲವು ಬಹುರಾಷ್ಟ್ರೀಯ ಕಂಪನಿಗಳು ಕಾರ್ಯನಿರ್ವಹಿಸುವ ಬೆಂಗಳೂರು ಸ್ಟಾರ್ಟ್ಅಪ್ಗಳಿಗೆ ಹೇಳಿ ಮಾಡಿಸಿದ ಊರು ಎನಿಸಿದೆ. ಆದರೂ 100ಕ್ಕೆ ಕೇವಲ 46.4 ಅಂಕಗಳನ್ನು ಪಡೆದಿದೆ. ಭಾರತದ ಇತರೆಲ್ಲ ನಗರಗಳಿಗಿಂತಲೂ ಬೆಂಗಳೂರಿನಲ್ಲಿ ಮೂಲ ಸೌಕರ್ಯ ಸಮಸ್ಯೆ ಹೆಚ್ಚು ಎನ್ನುವುದು ಇದಕ್ಕೆ ಮುಖ್ಯ ಕಾರಣ. ರಸ್ತೆ ಗುಣಮಟ್ಟ, ಸಾರ್ವಜನಿಕ ಸಾರಿಗೆ, ಅಂತರರಾಷ್ಟ್ರೀಯ ಸಂಪರ್ಕ, ವಿದ್ಯುತ್ ಪೂರೈಕೆ, ಟೆಲಿಕಮ್ಯುನಿಕೇಶನ್, ನೀರು ಮತ್ತು ಉತ್ತಮ ಗುಣಮಟ್ಟದ ವಸತಿಯ ಅಂಶಗಳನ್ನು ಆಧರಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ. ಈ ಎಲ್ಲ ಅಂಶಗಳಲ್ಲಿ ಬೆಂಗಳೂರಿನ ಸಾಧನೆ ಕಳಪೆಯಾಗಿದೆ.
ಉದ್ಯಾನನಗರಿ ಎಂದು ಹೆಸರುವಾಸಿಯಾಗಿರುವ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ‘ಕಾಂಕ್ರಿಟ್ ಕಾಡು’ ಎನಿಸಿಕೊಂಡಿದೆ. ಬೆಂಗಳೂರಿನ ಟ್ರಾಫಿಕ್ ಜಾಮ್ ಸಹ ವಿಶ್ವಮಟ್ಟದಲ್ಲಿ ಕುಖ್ಯಾತವಾಗಿದೆ. ಬೆಂಗಳೂರಿನ ಕಳಪೆ ರಸ್ತೆಗಳ ಬಗ್ಗೆ ಇತ್ತೀಚೆಗಷ್ಟೇ ಕರ್ನಾಟಕ ಹೈಕೋರ್ಟ್ ಸಹ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ನಾವು ಸ್ಮರಿಸಬಹುದಾಗಿದೆ.
ಪಾಕಿಸ್ತಾನದ ಕರಾಚಿಯು ಬೆಂಗಳೂರಿಗೆ ಹೋಲಿಸಿದರೆ ಉತ್ತಮ ಮೂಲಸೌಕರ್ಯ ಹೊಂದಿದೆ ಎಂದು ಈ ಸೂಚ್ಯಂಕವು ತಿಳಿಸಿದೆ. ಕರಾಚಿಯ ಸ್ಕೋರ್ 51.8. ಆಫ್ರಿಕಾದಲ್ಲಿ ಅತಿಹೆಚ್ಚು ಜನಸಂದಣಿ ಇರುವ ನಗರ ಎನಿಸಿರುವ ನೈಜೀರಿಯಾದ ಲಾಗೊಸ್ ಸುಗಮವಾಗಿ ಬದುಕಲು ಅವಕಾಶವಿರುವ ನಗರಗಳ ಪಟ್ಟಿಯಲ್ಲಿ ಕೊನೆಯಿಂದ ಮೂರನೇ ಸ್ಥಾನದಲ್ಲಿದೆ. ಆದರೆ ಮೂಲಸೌಕರ್ಯಗಳ ವಿಚಾರದಲ್ಲಿ ಬೆಂಗಳೂರಿಗಿಂತಲೂ ಇದು ಉತ್ತಮ ನಗರ ಎನಿಸಿಕೊಂಡಿದೆ.
ಜಾಗತಿಕ ಸುಗಮ ಜೀವನ ಸೂಚ್ಯಂಕ
‘ಎಕಾನಾಮಿಕ್ ಇಂಟೆಲಿಜೆನ್ಸ್ ಯೂನಿಟ್’ ಪ್ರಕಟಿಸಿರುವ ವಾರ್ಷಿಕ ಸುಗಮ ಜೀವನ ಸೂಚ್ಯಂಕದಲ್ಲಿ ಐದು ಅಂಶಗಳನ್ನು ಮುಖ್ಯವಾಗಿ ಗಮನಿಸಲಾಗಿತ್ತು. ಸ್ಥಿರತೆ (ಶೇ 25), ಸಂಸ್ಕೃತಿ ಮತ್ತು ಪರಿಸರ (ಶೇ 25), ಆರೋಗ್ಯ (ಶೇ 20), ಮೂಲಸೌಕರ್ಯ (ಶೇ 20) ಮತ್ತು ಶಿಕ್ಷಣ (ಶೇ 10) ವಿಷಯಗಳನ್ನು ಗಮನಿಸಿ ಈ ಸೂಚ್ಯಂಕದಲ್ಲಿ ವಿವಿಧ ಸ್ಥಾನಗಳನ್ನು ನೀಡಲಾಗಿದೆ. ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ವಿಶ್ವದ ಅತ್ಯಂಥ ಸುಗಮ ಜೀವನ ನಡೆಸಲು ಅವಕಾಶವಿರುವ ನಗರ ಎಂದು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಸಿರಿಯಾ ರಾಜಧಾನಿ ಡಮಾಸ್ಕಸ್ ಬದುಕಲು ಅತ್ಯಂತ ಕಷ್ಟಪಡಬೇಕಾದ ನಗರ ಎಂದು ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.