PSI Recruitment Scam: ಸಿಎಂ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ಸಿದ್ದರಾಮಯ್ಯ, ಡಿಕೆಶಿ ಆಗ್ರಹ
ಕರ್ನಾಟಕದ ಆಡಳಿತಕ್ಕೆ ಇದು ಮಸಿಯನ್ನು ಬಳಿದಿದೆ. ಪ್ರಜಾಪ್ರಭುತ್ವವನ್ನು ಉಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ನಿನ್ನೆ ಕೋರ್ಟ್ ಆದೇಶ ಮೇರೆಗೆ ಇಬ್ಬರು ಅಧಿಕಾರಿಗಳ ಬಂಧನವಾಗಿದೆ.
ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ನಿನ್ನೆ ಎಡಿಜಿಪಿ ಅಮೃತ್ ಪಾಲ್ನ (Amruth Paul) ಬಂಧಿಸಲಾಗಿದೆ. ಈ ಬಗ್ಗೆ ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸುದ್ದಿಗೋಷ್ಠಿ ನಡೆಸಿದ್ದಾರೆ. ಮೊದಲು ಮಾತನಾಡಿದ ಡಿಕೆಶಿ, ಕರ್ನಾಟಕಕ್ಕೆ ಒಂದು ಕಪ್ಪು ಚುಕ್ಕೆ ಬಂದಿದೆ. ಕರ್ನಾಟಕದ ಆಡಳಿತಕ್ಕೆ ಇದು ಮಸಿಯನ್ನು ಬಳಿದಿದೆ. ಪ್ರಜಾಪ್ರಭುತ್ವವನ್ನು ಉಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ನಿನ್ನೆ ಕೋರ್ಟ್ ಆದೇಶ ಮೇರೆಗೆ ಇಬ್ಬರು ಅಧಿಕಾರಿಗಳ ಬಂಧನವಾಗಿದೆ. ಪ್ರಕರಣದಲ್ಲಿ ಸರ್ಕಾರವೇ ಸಂಪೂರ್ಣವಾಗಿ ಶಾಮೀಲಾಗಿದೆ ಎಂದರು.
ನಿನ್ನೆ ಒಬ್ಬ ಐಪಿಎಸ್ ಅಧಿಕಾರಿಯನ್ನ 2 ಗಂಟೆ ವಿಚಾರಣೆ ಮಾಡಿ ಬಂಧಿಸಿದ್ದೀರಿ. ಬಂಧಿಸಿ ಕೂಡಲೇ ಕೋರ್ಟ್ ಎದುರು ಹಾಜರುಪಡಿಸಿದ್ದೀರಿ. ಇದು ಕಣ್ಣೊರೆಸುವ ತಂತ್ರ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿರುವ ಡಿಕೆ ಶಿವಕುಮಾರ್, ರಾಹುಲ್ ಗಾಂಧಿಯವರನ್ನ ಗಂಟೆಗಟ್ಟಲೇ ವಿಚಾರಣೆ ಮಾಡುತ್ತೀರಿ. ಸುದೀರ್ಘ ವಿಚಾರಣೆ ಮಾಡದೇ ಮೆಡಿಕಲ್ ಟೆಸ್ಟ್ ಮಾಡಿಸಿದ್ದೀರಿ. ನಮಗೇನು ಗೊತ್ತಾಗಲ್ವಾ ಎಂದು ಆಕ್ರೋಶ ಹೊರಹಾಕಿದರು.
ನ್ಯಾಯಾಂಗ ತನಿಖೆಗೆ ವಹಿಸಬೇಕು: ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು. ಸಿಎಂ ಹಾಗೂ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ನೈತಿಕಹೊಣೆ ಹೊತ್ತು ಸಿಎಂ, ಗೃಹ ಸಚಿವರು ರಾಜೀನಾಮೆ ನೀಡಬೇಕು. ರಾಜ್ಯದ ಗೌರವ ಉಳಿಸಲು ರಾಜ್ಯಪಾಲರು ಸರ್ಕಾರ ವಜಾಗೊಳಿಸಬೇಕು ಎಂದರು.
ಪ್ರಭಾವಿಗಳ ರಕ್ಷಣೆ: ಸುದ್ದಿಗೋಷ್ಠಿ ಮುಂದುವರಿದು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಪರೀಕ್ಷಾ ಅಕ್ರಮದಲ್ಲಿ ಅಮೃತ್ ಪಾಲ್ರನ್ನ ನಿನ್ನೆ ಬಂಧಿಸಿದ್ದಾರೆ. ನಾವು ಇದನ್ನ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾಗ ಮೈಮೇಲೆಬಿದ್ರು. PSI ಪರೀಕ್ಷೆಯಲ್ಲಿ ಯಾವ ಅಕ್ರಮ ನಡೆದಿಲ್ಲ ಎಂದು ಹೇಳಿದರು. ಅಕ್ರಮ, ಅವ್ಯವಹಾರ ನಡೆದಿಲ್ಲ ಎಂದು ಗೃಹಸಚಿವರು ಹೇಳಿದರು. ಈಗ ಹಗರಣದಲ್ಲಿ ಅವರ ಇಲಾಖೆಯವರೇ ಅರೆಸ್ಟ್ ಆಗಿದ್ದಾರೆ. ಭ್ರಷ್ಟಾಚಾರ ಆಗಿಯೇ ಇಲ್ಲ ಎಂದು ಸಾರಾಸಗಟವಾಗಿ ಹೇಳಿದ್ರು. ಈಗ ಎಡಿಜಿಪಿಯನ್ನೇ ಬಂಧಿಸಿದ್ದೇವೆಂದು ಬೆನ್ನು ತಟ್ಟಿಕೊಳ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: Police Recruitment Scam: ಸಿಎಂ ಬೊಮ್ಮಾಯಿ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ
ಹಿಂದೆ ಹಲವು ಬಾರಿ ಗೃಹ ಸಚಿವರು ಅಸಂಬದ್ಧ ಹೇಳಿಕೆ ಕೊಟ್ಟಿದ್ದಾರೆ. ಸಿಎಂ ಇಂತಹ ಬೇಜವಾಬ್ದಾರಿ ಗೃಹ ಸಚಿವರನ್ನ ಇಟ್ಟುಕೊಂಡು ಸುಳ್ಳು ಹೇಳಿಕೆಗಳನ್ನ ಕೊಡಿಸುತ್ತಿದ್ದಾರೆ. ವಿಧಾನಸಭೆಯಲ್ಲೇ ನ್ಯಾಯಾಂಗ ತನಿಖೆಗೆ ವಹಿಸಲು ಆಗ್ರಹಿಸಿದ್ದೆ. ಮೇ 26ರಂದು ನ್ಯಾಯಾಂಗ ತನಿಖೆಗೆ ಕೋರಿ ಪತ್ರ ಬರೆದಿದ್ದೆ. ಹಗರಣದಲ್ಲಿ 30-80 ಲಕ್ಷದವರೆಗೆ ಹಣ ವಸೂಲಿ ಮಾಡಿದ್ದಾರೆ. ಹಣ ಯಾಱರಿಗೆ ಹೋಗಿದೆ ಎಂದು ಏನೂ ಹೇಳಿಲ್ಲ. ದುಡ್ಡು ಯಾಱರ ಜೇಬಿಗೆ ಹೋಗಿದೆ ಎಂದು ಹೇಳಿಲ್ಲ. ದುಡ್ಡು ರಕ್ಷಣೆ ಮಾಡುತ್ತಿರುವವರು ಯಾರು? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಪ್ರಭಾವಿಗಳನ್ನ ರಕ್ಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಿಜಯೇಂದ್ರ, ಸಚಿವ ಅಶ್ವತ್ಥ್ ವಿರುದ್ಧವೂ ಆರೋಪಗಳಿವೆ: IAS ಅಧಿಕಾರಿ ಮಂಜುನಾಥ್ ಬಂಧನ ಕೇಸ್ನಲ್ಲಿ ಹೆದರಿಸುವ ಯತ್ನ ನಡೆಯುತ್ತಿದೆ. ನ್ಯಾಯಾಧೀಶರನ್ನೇ ಹೆದರಿಸಲು ಯತ್ನ, ಜಡ್ಜ್ಗೆ ಹೀಗಾದರೆ ಹೇಗೆ? ಆದರೆ ಇವರ ಬೆದರಿಕೆಗೆ ಜಡ್ಜ್ ಹೆದರಿಲ್ಲ. ಎಸಿಬಿ ಅಂದ್ರೆ ಕಲೆಕ್ಷನ್ ಬ್ಯುರೋ. ಪರೀಕ್ಷಾ ಅಕ್ರಮದಲ್ಲಿ ಬಿ.ವೈ.ವಿಜಯೇಂದ್ರ ಮೇಲೂ ಕೂಡ ಆರೋಪಿಗಳಿವೆ. ವಿಜಯೇಂದ್ರ, ಸಚಿವ ಅಶ್ವತ್ಥ್ ವಿರುದ್ಧವೂ ಆರೋಪಗಳಿವೆ. ಇವರಿಗೆಲ್ಲ ರಕ್ಷಣೆ ನೀಡುತ್ತಿರುವ ಸಿಎಂ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಸಿದ್ದರಮಾಯ್ಯ ಒತ್ತಾಯಿಸಿದ್ದಾರೆ.
Published On - 12:19 pm, Tue, 5 July 22