ಬೆಂಗಳೂರು: ಐಎಂಎ ವಂಚನೆ ಪ್ರಕರಣದ ಉರುಳು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ (Zameer Ahmed Khan) ಕೊರಳಿನ ಸುತ್ತ ತಿರುಗುತ್ತಿದ್ದು, ಇಂದು ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರದ ದಳ(ACB)ದ ಅಧಿಕಾರಿಗಳು ಜಮೀರ್ ಮನೆಗೆ ದಾಳಿ(Raid) ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಕಂಟೋನ್ಮೆಂಟ್ನಲ್ಲಿರುವ ಜಮೀರ್ ಅಹಮದ್ ಖಾನ್ ಅವರ ನಿವಾಸ, ಸಿಲ್ವರ್ ಓಕ್ ಅಪಾರ್ಟ್ಮೆಂಟ್ನಲ್ಲಿರುವ ಫ್ಲಾಟ್, ಸದಾಶಿವನಗರದಲ್ಲಿರುವ ಗೆಸ್ಟ್ ಹೌಸ್, ಬನಶಂಕರಿಯಲ್ಲಿರುವ ಜಿ.ಕೆ ಅಸೋಸಿಯೇಟ್ಸ್ ಕಚೇರಿ, ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ಏಕಕಾದಲ್ಲಿ 40 ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ಇದೀಗ ಸದಾಶಿವನಗರದಲ್ಲಿರುವ ಫ್ಲ್ಯಾಟ್ ಮೇಲಿನ ದಾಳಿಯನ್ನು ಅಧಿಕಾರಿಗಳು ಮುಕ್ತಾಯಗೊಳಿಸಿದ್ದಾರೆ. ಫ್ಲ್ಯಾಟ್ನಲ್ಲಿನ ವಸ್ತುಗಳ ವ್ಯಾಲ್ಯುಯೇಷನ್ ಮಾಡಿ ಫ್ಲ್ಯಾಟ್ನಲ್ಲಿನ ವಸ್ತು ಹಾಗೂ ದಾಖಲೆಗಳ ವ್ಯಾಲ್ಯುಯೇಷನ್ ಮಾಡಿ ಅದರ ಕಾಪಿಯನ್ನು ಫ್ಲ್ಯಾಟ್ ನೋಡಿಕೊಳ್ಳುವ ಯುವಕನಿಗೆ ನೀಡಿದ್ದಾರೆ. ವ್ಯಾಲ್ಯುಯೇಷನ್ ಮೊತ್ತ ಇನ್ನಷ್ಟೆ ಲೆಕ್ಕ ಹಾಕಬೇಕಿದ್ದು, ಗೆಸ್ಟ್ ಹೌಸ್ ದಾಳಿಯಲ್ಲಿ ಮಹತ್ವದ ದಾಖಲೆಗಳು ಸಿಕ್ಕಿಲ್ಲಾ ಎನ್ನಲಾಗುತ್ತಿದೆ.
ಐಎಂಎ ಪ್ರಕರಣ ಸಂಬಂಧ ಜಮೀರ್ ನಿವಾಸದ ಮೇಲೆ ಇಡಿ ದಾಳಿ ನಡೆದಿತ್ತು. ಈ ವೇಳೆ ಆದಾಯ ಮೀರಿದ ಆಸ್ತಿಗಳಿಕೆ ಮಾಡಿರುವುದು ಬೆಳಕಿಗೆ ಬಂದ ಹಿನ್ನೆಲೆ ಇಡಿ ನಿರ್ದೇಶನದಂತೆ ಅಕ್ರಮ ಆಸ್ತಿಗಳಿಕೆ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ಶಾಸಕ ಜಮೀರ್ ಮನೆ, ಕಚೇರಿ ಸೇರಿ 5 ಕಡೆಗಳಲ್ಲಿ ಶೋಧಕಾರ್ಯ ಮುಂದುವರೆಸಿದ್ದಾರೆ. 5 ವಾಹನಗಳಲ್ಲಿ ಒಬ್ಬರು ಡಿವೈಎಸ್ಪಿ, ಇಬ್ಬರು ಇನ್ಸ್ಪೆಕ್ಟರ್ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಕಳೆದ 30 ನಿಮಿಷಗಳಿಂದ ಲಭ್ಯವಾದ ಕಡತಗಳ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೆ ಶಾಸಕ ಜಮೀರ್ ಅಹ್ಮದ್ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಎದುರು ಸ್ಥಳೀಯ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಎಚ್ಡಿಕೆಗೆ ನೀಡಿದ್ದ ಫ್ಲ್ಯಾಟ್ ಮೇಲೆ ದಾಳಿ
ಸದಾಶಿವನಗರದಲ್ಲಿನ ರಂಕ ಎನ್ಕ್ಲೇವ್ನಲ್ಲಿರುವ ಜಮೀರ್ ಅವರ ಫ್ಲ್ಯಾಟ್ ಮೇಲೆ ಎಸಿಬಿ ಡಿವೈಎಸ್ಪಿ ವಿಜಯ್ ಹಡಗಲಿ ಮತ್ತು ತಂಡ ದಾಳಿ ನಡೆಸಿ ಪರಿಶೀಲನೆಯಲ್ಲಿ ತೊಡಗಿದೆ. ಈ ಫ್ಲ್ಯಾಟ್ ಅನ್ನು ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೊಟ್ಟಿದ್ದರು. ಸಂಬಂಧ ಹಳಸಿದ ನಂತರ ಕುಮಾರಸ್ವಾಮಿ ಅವರಿಂದ ಜಮೀರ್ ಫ್ಲ್ಯಾಟ್ ಅನ್ನು ವಾಪಸ್ ಪಡೆದುಕೊಂಡಿದ್ದರು.
ಶಾಸಕರನ್ನು ಎಸಿಬಿ ಮುಟ್ಟಬಹುದೇ?
ಪ್ರತಿಯೊಂದ ತನಿಖಾ ಸಂಸ್ಥೆಗೆ ಅದರದ್ದೇ ಆದ ಬೇರೆಬೇರೆ ಕೆಲಸ ಇರುತ್ತದೆ. ಇಡಿ ಕಾಯ್ದೆ ಬೇರೆಯದ್ದೇ ಇರಲಿದೆ, ಎಸಿಬಿ ಆ್ಯಕ್ಟ್ ಬೇರೆಯದ್ದೇ ಇರಲಿದೆ. ಜಮೀರ್ ಅಹಮ್ಮದ್ ಶಾಸಕ ಆದ ನಂತರ ಇಷ್ಟು ಆಸ್ತಿ ಗಳಿಸಿದ್ದಾರೆ. ಇವರು ಸಾರ್ವಜನಿಕರ ಪ್ರತಿನಿಧಿಯೂ ಆಗಿರುವುದರಿಂದ ಎಸಿಬಿ ದಾಳಿ ನಡೆಸಬಹುದು. ಖಾಸಗಿ ವ್ಯಕ್ತಿಯಾದರೆ ದಾಳಿ ನಡೆಸುವಂತಿಲ್ಲ. ಐಎಂಎ ಪ್ರಕರಣದ ತನಿಖೆ ನಡೆಸಿದ್ದ ಇಡಿ, ತನಿಖೆಯಿಂದ ಅಕ್ರಮ ಆಸ್ತಿ ಗಳಿಸಿರುವ ಬಗ್ಗೆ ಎಸಿಬಿಗೆ ವರದಿ ನೀಡಿ ನಿಮ್ಮ ಪ್ರಕಾರ ಕ್ರಮ ಕೈಗೊಳ್ಳಿ ಎಂದು ಸೂಚಿಸಿತ್ತು. ಈ ಹಿನ್ನೆಲೆ ಎಸಿಬಿ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿದೆ.
ನಿವಾಸದ ಬಳಿ ಆಗಮಿಸಿದ ಕೆಎಸ್ಆರ್ಪಿ ತುಕಡಿ
ಶಾಸಕ ಜಮೀರ್ ನಿವಾಸಕ್ಕೆ ಎಸಿಬಿ ಎಸ್ಪಿ ಹರೀಶ್ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದಂಡು ರೈಲ್ವೆ ನಿಲ್ದಾಣ ಬಳಿಯ ನಿವಾಸಕ್ಕೆ ಯಲಹಂಕ ಉಪವಿಭಾಗ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇನ್ನೊಂದೆಡೆ ಜಮೀರ್ ಕಂಟೋನ್ಮೆಂಟ್ ನಿವಾಸಕ್ಕೆ ಮತ್ತೋರ್ವ ಎಸಿಬಿ ಎಸ್ಪಿ ಯತೀಶ್ ಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಎಸಿಬಿ ದಾಳಿಯಾಗುತ್ತಿದ್ದಂತೆ ಜಮೀರ್ ನಿವಾಸದ ಬಳಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆ ನಿವಾಸದ ಬಳಿ ಅಹಿತಕರ ಘಟನೆ ನಡೆಯದಂತೆ ಕೆಎಸ್ಆರ್ಪಿ ತುಕಡಿಯನ್ನು ಸ್ಥಳಕ್ಕೆ ಕರೆದು ಭದ್ರತೆಗೆ ನಿಯೋಜಿಸಲಾಗಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.
ಅಕ್ಕಸಾಲಿಗರನ್ನು ಕರೆಸಿಕೊಂಡ ಎಸಿಬಿ
ಬೆಂಗಳೂರಿನಲ್ಲಿ ಜಮೀರ್ ಅಹಮದ್ ಖಾನ್ ಮನೆಯಲ್ಲಿ ಚಿನ್ನಾಭರಣಗಳು ಪತ್ತೆಯಾಗಿದ್ದು, ಈ ನಿಟ್ಟಿನಲ್ಲಿ ಎಸಿಬಿ ಅಧಿಕಾರಿಗಳು ಅಕ್ಕಸಾಲಿಗರನ್ನು ಕರೆಸಿಕೊಂಡಿದ್ದಾರೆ. ಅದರಂತೆ ಚಿನ್ನ, ಬೆಳ್ಳಿ ತೂಕದ ಯಂತ್ರದ ಜೊತೆಗೆ ಜಮೀರ್ ಅಹಮದ್ ಖಾನ್ ಅವರ ನಿವಾಸಕ್ಕೆ ಅಕ್ಕಸಾಲಿಗ ಆಗಮಿಸಿದ್ದಾರೆ.