ಕೊಡಗಿನಲ್ಲಿ ಭಾರಿ ಮಳೆ; ಭಾಗಮಂಡಲ-ತಲಕಾವೇರಿ ರಸ್ತೆ ಮೇಲೆ ಉರುಳಿ ಬಿದ್ದ ಬಂಡೆ
ಭಾಗಮಂಡಲದಿಂದ ನಾಲ್ಕು ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ. ಶೀಘ್ರವೇ ಬಂಡೆ ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಕೊಡಗು: ಜಿಲ್ಲೆಯಲ್ಲಿ ಧಾರಕಾರ ಮಳೆಯಿಂದಾಗಿ (Heavy Rain) ಅವಾಂತರ ಸೃಷ್ಟಿಯಾಗಿದ್ದು, ಭಾಗಮಂಡಲ-ತಲಕಾವೇರಿ ರಸ್ತೆ ಮೇಲೆ ಬಂಡೆ ಉರುಳಿ ಬಿದ್ದಿದೆ. ಭಾಗಮಂಡಲದಿಂದ ನಾಲ್ಕು ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ. ಶೀಘ್ರವೇ ಬಂಡೆ ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಮಳೆ ಗಾಳಿಗೆ ಮರ, ವಿದ್ಯುತ್ ಕಂಬಗಳು ಉರುಳಿ ಬಿದ್ದ ಹಿನ್ನೆಲೆ ಮಡಿಕೇರಿಯಲ್ಲಿ ಕಳೆದ ರಾತ್ರಿಯಿಂದಲೇ ವಿದ್ಯುತ್ (Power) ವ್ಯತ್ಯಯವಾಗಿದೆ. 2ನೇ ಮೊಣ್ಣಂಗೇರಿ-ರಾಮಕೊಲ್ಲಿ ಸಂಪರ್ಕ ಕಲ್ಪಿಸುವ ಸೇತುವೆ ಬಿರುಕು ಬಿಟ್ಟಿದೆ. 2018 ರಲ್ಲಿ ಸೇತುವೆ ತಡೆಗೋಡೆ ಕೊಚ್ಚಿ ಹೋಗಿತ್ತು. ಗ್ರಾಮಸ್ಥರೇ ಕಿರು ಸೇತುವೆಯನ್ನು ದುರಸ್ಥಿ ಕಾರ್ಯ ಮಾಡಿದ್ದರು. ಈ ಬಾರಿ ಮತ್ತೆ ಭಾರಿ ಮಳೆಗೆ ಬಿರುಕು ಬಿಟ್ಟಿದೆ. ಹೀಗಾಗಿ ಸೇತುವೆ ದುರಸ್ಥಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರಿ ಮಳೆ ಮುಂದುವರಿದಿದೆ. ಈ ಹಿನ್ನೆಲೆ ಇಂದು ಶಾಲೆ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಡಾ.ಕೆ.ವಿರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಅಂಗನವಾಡಿಯಿಂದ ಡಿಗ್ರಿ ಕಾಲೇಜಿನವರೆಗೆ ರಜೆ ನೀಡಿದ್ದಾರೆ. ಇಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಕೂಡಾ ಘೋಷಣೆಯಾಗಿದೆ. ಇನ್ನು ಮಳೆ ನೀರು ವರ್ಕ್ ಶಾಪ್ಗೆ ನುಗ್ಗಿರುವ ಘಟನೆ ಮಂಗಳೂರು ನಗರದ ಹೊರವಲಯದ ಕುಲಶೇಖರದಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯಲ್ಲೂ ಧಾರಕಾರ ಮಳೆಯಿಂದ ಜಿಲ್ಲಾಧಿಕಾರಿ ಕುರ್ಮಾರಾವ್ ಶಾಲಾ-ಕಾಲೇಜುಗಳಿಗೆ ಇಂದು ರಜೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಶಾಲಾ-ಕಾಲೇಜು, ಅಂಗನವಾಡಿಗಳಿಗೆ ರಜೆ ನೀಡಲಾಗಿದೆ. ಮಳೆ ಮುಂದುವರಿದರೆ ರಜೆ ವಿಸ್ತರಣೆ ಮಾಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರಿನಲ್ಲಿ ನಿರಂತರ ಮಳೆಯಾಗುತ್ತಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ. ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್ ರಸ್ತೆಯ ಬದಿಯಲ್ಲಿ ಎತ್ತರದಿಂದ ನೀರು ಹರಿದು ಬರುತ್ತಿದೆ.
ಧರೆಗೆ ಕುಸಿದ ಮನೆಗಳು: ಮಳೆಯ ಅಬ್ಬರಕ್ಕೆ ಶಿರಸಿಯಲ್ಲಿ ಮನೆಗಳು ಧರೆಗೆ ಉರುಳಿವೆ. ಶಿರಸಿಯ ಒಣಕೇರಿ ಗ್ರಾಮದ ದೇವತೆಮನೆಯ ಗಣಪತಿ ಭಟ್ ಎಂಬುವವರ ಮನೆ ಕುಸಿದು ಬಿದ್ದಿದೆ.
Published On - 8:35 am, Tue, 5 July 22