Police Recruitment Scam: ಸಿಎಂ ಬೊಮ್ಮಾಯಿ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ
ಸಮರ್ಪಕ ತನಿಖೆ ನಡೆಯಬೇಕೆಂದರೆ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.
ದೆಹಲಿ: ಪೊಲೀಸ್ ಸಬ್ಇನ್ಸ್ಪೆಕ್ಟರ್ ನೇಮಕಾತಿ ಹಗರಣದ (PSI Recruitment Scam) ಹೊಣೆಹೊತ್ತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸ್ ತನಿಖೆ ಕಟ್ಟುನಿಟ್ಟಾಗಿ ನಡೆಯಬೇಕು. ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ರಾಜೀನಾಮೆ ನೀಡಿದರೆ ಮಾತ್ರ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯ ಎಂದು ಅವರು ಹೇಳಿದ್ದಾರೆ.
‘ನಾನು (ಲಂಚ) ತಿನ್ನುವುದಿಲ್ಲ, ತಿನ್ನಲು ಬಿಡುವುದೂ ಇಲ್ಲ’ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಪ್ರಸ್ತಾಪಿಸಿರುವ ಅವರು, ‘ಇಷ್ಟು ದೊಡ್ಡ ಹಗರಣವಾಗಿದ್ದರೂ ಬೊಮ್ಮಾಯಿ ವಿರುದ್ಧ ಏಕೆ ಕ್ರಮ ಜರುಗಿಸಿಲ್ಲ’ ಎಂದು ಪ್ರಶ್ನಿಸಿದ್ದಾರೆ. ‘ಬಿಜೆಪಿಯು ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಉದ್ಯೋಗಗಳನ್ನು ಮಾರಾಟ ಮಾಡಿರುವುದು ಕರ್ನಾಟಕದ ಸಾವಿರಾರು ಯುವಕರ ಕನಸು ಮಣ್ಣುಗೂಡಿಸಿದೆ. ಇಂದು ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಈ ಹಗರಣ ನಡೆದಾಗ ಗೃಹ ಸಚಿವರಾಗಿದ್ದರು. ಸಮರ್ಪಕ ತನಿಖೆ ನಡೆಯಬೇಕೆಂದರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾ ಮಾಡಬೇಕು’ ಎಂದು ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.
‘ಈ ಘಟನೆ ಬಗ್ಗೆ ಪ್ರಧಾನಿ ಈವರೆಗೆ ಏಕೆ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಪ್ರಶ್ನಿಸಿರುವ ಅವರು, ‘ಎಲ್ಲರೂ (ಲಂಚ) ತಿನ್ನೋಣ, ಎಲ್ಲರಿಗೂ ತಿನ್ನಿಸೋಣ’ ಎನ್ನುವುದು ಬಿಜೆಪಿಯ ಈ ಕ್ಷಣದ ಧೋರಣೆ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ ಪಿಎಸ್ಐ ನೇಮಕಾತಿ ಹಗರಣ ಇದೀಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಪ್ರಕರಣ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ಅಮ್ರಿತ್ ಪಾಲ್ ಅವರನ್ನು ಸಿಐಡಿ ಬಂಧಿಸಿದೆ. ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
BJP’s brazen corruption & “Sale of Jobs” destroyed the dreams of thousands of youth in Karnataka.
The CM, who was then HM, must be sacked for any fair investigation.
Why hasn’t the PM taken ANY ACTION?
Is this the BJP govt’s “Sab Khaenge, Sabko Khilaenge” moment? pic.twitter.com/h8zrwt0ZZj
— Rahul Gandhi (@RahulGandhi) July 4, 2022
ಈ ಕುರಿತು ನಿನ್ನೆ (ಜುಲೈ 4) ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಪ್ರಕರಣದ ತನಿಖೆಗಾಗಿ ಸಿಐಡಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಹೇಳಿದ್ದರು. ಸಿಐಡಿ ಈ ಪ್ರಕರಣದ ತನಿಖೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದು, ಹಲವು ಅಭ್ಯರ್ಥಿಗಳನ್ನೂ ಬಂಧಿಸಿದೆ. ಐಪಿಎಸ್ ಅಧಿಕಾರಿ ಬಂಧನ ಕುರಿತು ಪ್ರತಿಕ್ರಿಯಿಸಿದ್ದ ಬೊಮ್ಮಾಯಿ, ‘ಹಗರಣದ ತನಿಖೆ ವಿಚಾರದಲ್ಲಿ ಸರ್ಕಾರದ ನಿಲುವನ್ನು ನಾನು ಮೊದಲೇ ಸ್ಪಷ್ಟಪಡಿಸಿದ್ದೆ. ನಮ್ಮ ಸರ್ಕಾರ ಸಿಐಡಿಗೆ ಸ್ವಾತಂತ್ರ್ಯ ನೀಡಿರುವ ಕಾರಣದಿಂದಲೇ ಈ ಬಂಧನ ಸಾಧ್ಯವಾಯಿತು ಎಂದು ಹೇಳಿದ್ದರು.
ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಹಿರಿಯ ನಾಯಕ ರಣದೀಪ್ ಸುರ್ಜೆವಾಲಾ ಸಹ ಬೊಮ್ಮಾಯಿ ಅವರನ್ನು ಟೀಕಿಸಿದ್ದಾರೆ. ‘ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಬಿಜೆಪಿಯ ಹಿರಿಯ ನಾಯಕರ ಅನುಮೋದನೆ ಇಲ್ಲದೆ ಇಂಥ ಹಗರಣ ನಡೆಯಲು ಸಾಧ್ಯವೇ? ಹಗರಣ ನಡೆದಾಗ ಗೃಹ ಸಚಿವರಾಗಿದ್ದವರು ಯಾರು’ ಉತ್ತರ ಹೇಳಿ ಬಸವರಾಜ ಬೊಮ್ಮಾಯಿ ಎಂದು ಪ್ರಶ್ನಿಸಿದ್ದಾರೆ
ಪಿಎಸ್ಐ ಹಗರಣದ ಮೂಲವು ಅಂದಿನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಮನೆ ಬಾಗಿಲಿನಲ್ಲಿದೆ. ಇದಕ್ಕಿಂತ ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ. ಎಡಿಜಿಪಿ ಅವರ ಬಂಧನದಿಂದ ಸಾಧಿಸಿದ್ದು ಎನೂ ಇಲ್ಲ. ಬೊಮ್ಮಾಯಿ ರಾಜೀನಾಮೆ ನಂತರವೇ ಸಮರ್ಪಕ ತನಿಖೆ ನಡೆಯಲು ಸಾಧ್ಯ ಎಂದು ಸುರ್ಜೆವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 9:03 am, Tue, 5 July 22