ಹೊಸಪೇಟೆ: ಕ್ರೂಸರ್ ಪಲ್ಟಿಯಾಗಿ ಐವರು ಮೃತಪಟ್ಟು, 9 ಜನರು ಗಾಯಗೊಂಡಿರುವ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ನಡೆದಿದೆ. ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು. ಆಸ್ಪತ್ರೆಗೆ ಸಾಗಿಸುವಾಗ ಮೂವರು ಮೃತಪಟ್ಟಿದ್ದಾರೆ. ಸಿದ್ದಯ್ಯ ಕಾಳಗಿ (42), ಕಲ್ಲವ್ವ (60), ಕುಂತವ್ವ ಮಸಳಿ (50), ನೀಲಮ್ಮ (54), ಲಕ್ಷ್ಮೀಬಾಯಿ (60) ಮೃತರು. ಇವರೆಲ್ಲರೂ ವಿಜಯಪುರ ಜಿಲ್ಲೆಯ ನಿಡಗುಂದಿ ಗ್ರಾಮದವರು. ತಮಿಳುನಾಡಿನ ರಾಮೇಶ್ವರಕ್ಕೆ ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಂದಿಗೆ ಗುದ್ದಿ ಪಲ್ಟಿಯಾದ ಕಾರು: ಇಬ್ಬರು ಸಾವು
ಚಿತ್ರದುರ್ಗ: ರಸ್ತೆಯಲ್ಲಿ ಅಡ್ಡಬಂದ ಹಂದಿಗೆ ಕಾರು ಗುದ್ದಿ ಪಲ್ಟಿಯಾದ ಘಟನೆ ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿ ನಡೆದಿದೆ. ತಾಯಿ, ಮಗ ಸ್ಥಳದಲ್ಲೇ ನಿಧನರಾಗಿದ್ದಾರೆ. ರವಿಚಂದ್ರ (40), ತಾಯಿ ಯಲ್ಲಮ್ಮ (65) ಮೃತರು. ಗಾಯಾಳುಗಳಿಗೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಯಲ್ಲಿ ಅಂತ್ಯವಾಯ್ತು ನೀರಿನ ಪಾಕೆಟ್ ಗಲಾಟೆ
ಕೋಲಾರ: ಕುಡಿಯುವ ನೀರಿನ ಪಾಕೆಟ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಕೋಲಾರದ ಟೇಕಲ್ ಸರ್ಕಲ್ನ ಚಾಲುಕ್ಯ ಬಾರ್ನಲ್ಲಿ ನಡೆದಿದೆ. ಬಾರ್ ಕ್ಯಾಶಿಯರ್ ಮೋಹನ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಆರೋಪಿಗಳಾದ ನವೀದ್ ಬೇಗ್, ಆರೀಫ್ ಖಾನ್ ಅವರನ್ನು ಕೋಲಾರ ನಗರ ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಕೋಲಾರ ಠಾಣಾ ಪೊಲೀಸರು ಭೇಟಿ ನಿಡಿದ್ದರು. ಬಾರ್ ಎದುರು ನಡೆದ ಗಲಾಟೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೊಲೆಯಾದ 30 ವರ್ಷಗಳ ಬಳಿಕ ಆರೋಪಿ ಬಂಧನ
ಶಿರಾ: ಕೊಲೆ ನಡೆದು 30 ವರ್ಷಗಳ ಬಳಿಕ ಆರೋಪಿಯು ಪೊಲೀಸರ ಬಲೆಗೆ ಬಿದ್ದಿದ್ದಾನೆ. 1991ರಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ಗಂಗಮ್ಮ ಎಂಬಾಕೆಯನ್ನು ಹತ್ಯೆ ಮಾಡಿದ್ದ. ಈ ಸಂಬಂಧ ಪಟ್ಟನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ರಾಜ ಎಂಬಾತನನ್ನು ಪೊಲೀಸರು ಬಂಧಿಸಿದ್ದರು, ಮತ್ತೋರ್ವ ಆರೋಪಿ ಶಂಕರಪ್ಪ ತಲೆಮರಿಸಿಕೊಂಡಿದ್ದ. 30 ವರ್ಷಗಳ ಬಳಿಕ ಆಂಧ್ರ ಪ್ರದೇಶದಲ್ಲಿ ಶಂಕರಪ್ಪ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.
ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಯತ್ನ
ಬೆಂಗಳೂರು: ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಘಟನೆ ನಗರದ ಜೀವನ್ಬಿಮಾ ನಗರದಲ್ಲಿ ನಡೆದಿದೆ. ತಡರಾತ್ರಿ ಒಂದೂವರೆ ಗಂಟೆಯಲ್ಲಿ ರಸ್ತೆ ಬದಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಶವ ಪತ್ತೆಯಾದ ಸ್ಥಳದಲ್ಲಿ ರಕ್ತ ಚೆಲ್ಲಿ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಮೃತನನ್ನು ದೂಪನಹಳ್ಳಿ ಮಂಜುನಾಥ್ ಎಂದು ಗುರುತಿಸಲಾಗಿದ್ದು, ಇದು ಕೊಲೆ ಎಂಬುದು ಬೆಳಕಿಗೆ ಬಂದಿತ್ತು. ಕೊಲೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೀವ ಉಳಿಸಿಕೊಳ್ಳಲು ಬೇಡಿಕೊಂಡು ಮಂಜುನಾಥ್ ಬೇಡಿಕೊಳ್ಳುತ್ತಾ ಓಡಿ ಹೋಗಿದ್ದ. ಅವನನ್ನು ಬೆನ್ನಟ್ಟಿದ್ದ ಆರೋಪಿಗಳಾದ ಮಧುಸೂದನ್ (29) ಹಾಗೂ ಯತೀಶ್ ಗೌಡ (25) ಕಲ್ಲು, ಇಟ್ಟಿಗೆ, ಟ್ಯೂಬ್ಲೈಟ್ನಿಂದ ಹೊಡೆದು ಕೊಲೆ ಮಾಡಿದ್ದರು.
ಶ್ರೀಗಂಧ ಕಳ್ಳತನ: ಐದು ವರ್ಷ ಜೈಲು
ತಿಪಟೂರು: ಶ್ರೀಗಂಧ ಕಳ್ಳತನಕ್ಕೆ ಯತ್ನಿಸಿದ್ದ ನಾಲ್ವರಲ್ಲಿ ಮೂವರು ಅಪರಾಧಿಗಳಿಗೆ ನ್ಯಾಯಾಲಯವು ಐದು ವರ್ಷ ಜೈಲು ಮತ್ತು ₹ 50 ಸಾವಿರ ದಂಢ ವಿಧಿಸಿ ತಿಪಟೂರು ಸೆಷೆನ್ಸ್ ನ್ಯಾಯಾಲಯ ಆದೇಶ ನೀಡಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. 2017ರ ಜುಲೈ ತಿಂಗಳಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಬಳಿ ಘಟನೆ ನಡೆದಿತ್ತು. ಗ್ರಾಮದ ಹಳ್ಳದಲ್ಲಿ ಶ್ರೀಗಂಧದ ಮರ ಕಡಿಯುವಾಗ ಆರೋಪಿಗಳಾದ ಸಿದ್ದರಾಜು, ರಾಜಣ್ಣ, ಕಾರಕಟ್ಟಿ ರಂಗ, ಮಂಜುನಾಥ್ ಸಿಕ್ಕಿಬಿದ್ದಿದ್ದರು.
ಸಫಾರಿ ವಾಹನ ಅಟ್ಟಿಸಿಕೊಂಡು ಬಂದ ಆನೆ
ಚಾಮರಾಜನಗರ: ಆನೆಯೊಂದು ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದ ಘಟನೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಚಾಲಕ ಮಹಾದೇವ, ಪ್ರವಾಸಿ ಮಾರ್ಗದರ್ಶಿ ಗಿರೀಶ್ ಅವರ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ. ಆನೆ ಅಟ್ಟಿಸಿಕೊಂಡು ಬರುತ್ತಿದ್ದಂತೆ ಅದೇ ಮಾರ್ಗದಲ್ಲಿ ವಾಹನವನ್ನು ರಿವರ್ಸ್ ತೆಗೆಯಲಾಯಿತು. ವಾಹನ ಹಿಂದೆ ಹೋಗುತ್ತಿದ್ದಂತೆ ಆನೆ ನಿಂತುಕೊಂಡಿದೆ. ಇಡೀ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Crime News: ಕೈ ಕಾಲು ಕಟ್ಟಿ ಹಾಕಿ ನೇಣು ಬಿಗಿದು ಆರ್.ಟಿ.ಓ ಕಛೇರಿ ಮುಂಭಾಗ ವ್ಯಕ್ತಿಯ ಕೊಲೆ
ಇದನ್ನೂ ಓದಿ: Crime News: ಡೀಸೆಲ್ ಕಳ್ಳನ ಮೇಲೆ ಗುಂಡು ಹಾರಿಸಿದ ಪೊಲೀಸರು, ತೆಂಗಿನ ಮರಗಳ ಬುಡಕ್ಕೆ ವಿಷ ಇಟ್ಟ ದುಷ್ಕರ್ಮಿಗಳು