ಬೆಂಗಳೂರು: ರಾಜ್ಯದ 4 ಜಿಲ್ಲೆಗಳಲ್ಲಿ ಅಪಘಾತಗಳು ಸಂಭವಿಸಿದ್ದು ಸಾಕಷ್ಟು ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ.
ಒಂದೆಡೆ, ಹೆದ್ದಾರಿ ಪಕ್ಕದ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಬಸ್ ಡಿಪೋ ಬಳಿ ನಡೆದಿದೆ. ಬೈಕ್ ಸವಾರನ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ.
ಸಿಂಧನೂರ ಮೂಲದ ವೀರೇಶ್ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಲಿಂಗಸುಗೂರು ಠಾಣೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದರು.
ಇತ್ತ, ಕಾರು, ಟಾಟಾ ಏಸ್ ಮುಖಾಮುಖಿ ಡಿಕ್ಕಿಯಾಗಿ ಓರ್ವ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಧಾರವಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಟಾಟಾ ಏಸ್ ಚಾಲಕ ಪಡಿಯಪ್ಪ ತಲವಾರ(35) ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ.
ಇನ್ನು, ಅಪಘಾತದಲ್ಲಿ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಣ್ಣಿಗೇರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಅತ್ತ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಸರ್ಕಾರಿ ಬಸ್ ಡಿಕ್ಕಿಯಾಗಿ ಸ್ಕೂಟಿಯಲ್ಲಿದ್ದ ತಂದೆ, ಮಗ ಸಾವನ್ನಪ್ಪಿರುವ ಘಟನೆ ನಡೆದಿದೆ. ಸ್ಥಳದಲ್ಲೇ ತಂದೆ ಹನುಮೇಶ್(30) ಹಾಗೂ ಅವರ ಪುತ್ರ ಪವನ್(7) ಕೊನೆಯುಸಿರೆಳೆದಿದ್ದಾರೆ. ಹನುಮೇಶ್ ಜಿಲ್ಲೆಯ ಗಂಗಾವತಿಯ ಜಯನಗರದ ನಿವಾಸಿ.
ಇದಲ್ಲದೆ, ಬೈಕ್ ಮತ್ತು ತೂಫಾನ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಮೂವರಿಗೆ ಗಾಯಗಳಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತಗ್ಗಳ್ಳೂರು ಗೇಟ್ ಬಳಿ ಘಟನೆ ನಡೆದಿದೆ.
ಸಿದ್ದಮಲ್ಲಪ್ಪ, ಅಮಾಸಮ್ಮ ಮೃತ ದುರ್ದೈವಿಗಳು. ಸಿದ್ದಮಲ್ಲಪ್ಪ ಗುಂಡ್ಲುಪೇಟೆ ತಾಲೂಕಿನ ಬೆಟ್ಟದ ಮಾದಳ್ಳಿ ಗ್ರಾಮದ ನಿವಾಸಿ. ಅಮಾಸಮ್ಮ ತಮಿಳುನಾಡಿನ ಊಟಿಯವರು. ಮೃತರು ಮೈಸೂರಿನಿಂದ ಊಟಿಗೆ ಮರಳುವಾಗ ಅವಘಡ ಸಂಭವಿಸಿದೆ. ಗಾಯಾಳುಗಳನ್ನ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.