ಚಿಕ್ಕಬಳ್ಳಾಪುರ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ನೊಂದವರ ನೆರವಿಗಾಗಿ ದಿನಂಪ್ರತಿ ನೂರಾರು ಜನ ಸಹಾಯ ಹಸ್ತ ನೀಡುತ್ತಿದ್ದಾರೆ. ಹೀಗಿರುವಾಗಲೇ ಚಿಕ್ಕಬಳ್ಳಾಪುರದ ಸೋಂಕಿತರ ನೆರವಿಗೆ ನಿಂತ ಆದಿಚುಂಚನಗಿರಿ ಮಠ, ಪ್ರೌಢಶಾಲೆಯನ್ನು ಕೊವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದೆ. ಅಲ್ಲದೇ ಈ ಶಾಲೆಯ ಮತ್ತು ಕಾಲೇಜಿನ ಬಸ್ಗಳನ್ನು ಕೊರೊನಾ ನಿರ್ವಹಣೆಯ ದೃಷ್ಟಿಯಿಂದ ನೀಡಿದ್ದು, ಆ ಮೂಲಕ ಮಾನವೀಯತೆ ಮರೆರದಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಕೊರೊನಾ ಮಹಾಮಾರಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದಕ್ಕೆ ಕಾರಣ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕಿತರು ಮನೆಯಿಂದ ದೂರ ಇರುವ ಕೊವಿಡ್ ಕೇರ್ ಸೆಂಟರ್ಗೆ ತೆರಳದೆ ಮನೆಯಲ್ಲಿ ಇರುವುದೇ ಆಗಿದ್ದು, ಇದರಿಂದಾಗಿ ದಿನೇ ದಿನೇ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಇದನ್ನರಿತ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ್ ಸ್ವಾಮೀಜಿ, ಮಂಚನಬಲೆ ಗ್ರಾಮದಲ್ಲಿರುವ ಸುಸಜ್ಜಿತವಾದ ಪ್ರೌಢಶಾಲೆಯನ್ನೆ ನೂರು ಬೆಡ್ಗಳ ಕೊವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಕಾರಣದಿಂದಾಗಿ ಇಂದು ಮಂಚನಬಲೆ ಗ್ರಾಮಕ್ಕೆ ನಿರ್ಮಲಾನಂದನಾಥ್ ಶ್ರೀಗಳು ಭೇಟಿ ನೀಡಿ, ತಮ್ಮ ಸಂಸ್ಥೆಯ ಪ್ರೌಢ ಶಾಲೆಯಲ್ಲಿ ತೆರೆದಿರುವ ಕೊವಿಡ್ ಕೇರ್ ಸೆಂಟರ್ಗೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.
ಇನ್ನು ಮಂಚನಬಲೆ ಪ್ರೌಢ ಶಾಲೆಯಲ್ಲಿ ನೂರು ಬೆಡ್ಗಳ ವ್ಯವಸ್ಥೆಯಿದ್ದು, ಸದ್ಯ 60 ಬೆಡ್ಗಳು ಸಿದ್ಧವಿದೆ, ಅಗತ್ಯಕ್ಕೆ ತಕ್ಕಂತೆ ಬೆಡ್ ವ್ಯವಸ್ಥೆಯನ್ನು ಶ್ರೀ ಮಠ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಸಹಯೋಗದೊಂದಿಗೆ ಮಾಡುತ್ತಿದೆ. ಕೊರೊನಾ ಸೋಂಕಿತರಿಗೆ ಮಠದಿಂದಲೇ ಸ್ಯಾನಿಟೈಜರ್, ಕೊರೊನಾ ನಿಗ್ರಹಕ್ಕೆ ಮಾತ್ರೆಗಳು, ಮಾಸ್ಕ್ ಸೇರಿದಂತೆ ಕಿಟ್ವೊಂದನ್ನು ರೆಡಿ ಮಾಡಿಸಿದ್ದು, ಕೊರೊನಾ ಪಾಸಿಟಿವ್ ಬಂದವರಿಗೆ ವಿತರಣೆ ಮಾಡುತ್ತಿದ್ದಾರೆ.
ಜಿಲ್ಲಾಡಳಿತದ ಸಹಕಾರದೊಂದಿಗೆ ಕೊವಿಡ್ ಕೇರ್ನಲ್ಲಿ ನುರಿತ ವೈದ್ಯರು ದಾದಿಯರ ನೇಮಕವಾಗಿದೆ. ಮಠದ ಸಮಾಜಮುಖಿ ಕಾರ್ಯದಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಮತ್ತಷ್ಟು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಲತಾ ಆರ್ ತಿಳಿಸಿದ್ದಾರೆ.
ಕೊರೊನಾ ಸೋಂಕು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದ್ದು, ಜನರು ಭಯ ಭೀತಿ ಪಡದೆ ಧೈರ್ಯವಾಗಿ ಚಿಕಿತ್ಸೆ ಪಡೆಯಿರಿ, ಪ್ರತಿಯೊಬ್ಬರು ಕೊರೊನಾ ಹರಡದಂತೆ ಸೂಕ್ತ ಮುಂಜಾಗೃತೆ ಕೈಗೊಳ್ಳಿ, ಸರ್ಕಾರದ ನಿಯಮಗಳನ್ನು ಪಾಲಿಸಿ, ಎಲ್ಲರೂ ವ್ಯಾಕ್ಸಿನ್ ಪಡೆದು ಮೂರನೇ ಅಲೆ ಹರಡದಂತೆ ಮುಂಜಾಗೃತೆ ವಹಿಸಿ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ್ ಸ್ವಾಮೀಜಿ ತಿಳಿಸಿದ್ದಾರೆ.
ಇದನ್ನೂ ಓದಿ:
ಲಸಿಕೆ ಹಾಕಿಸಿಕೊಂಡರೆ ಕೊರೊನಾ ಸೋಂಕು ತಗುಲುವ ಅಪಾಯ ಕಡಿಮೆ, ಬಾಗಲಕೋಟೆಯಲ್ಲಿ ತಜ್ಞರ ಅಧ್ಯಯನ
ದಾವಣಗೆರೆ: ಕೊವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿ ಸೋಂಕಿತರಿಗೆ ಧೈರ್ಯ ತುಂಬಿದ ಶಾಸಕ ರೇಣುಕಾಚಾರ್ಯ