ರೈತರಿಗೆ ಸಂತಸ ಮೂಡಿಸುವ ವರದಿ: ಅಡಿಕೆ ಕ್ಯಾನ್ಸರ್​ ಕಾರಕವಲ್ಲ ವಿಜ್ಞಾನಿಗಳ ವರದಿಯಲ್ಲಿ ಬಹಿರಂಗ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 18, 2023 | 12:15 PM

ಅಡಿಕೆ ಬೆಳೆ ಮಲೆನಾಡು ಭಾಗದ ಲಕ್ಷಾಂತರ ರೈತರ ಬದುಕಿಗೆ ಬೆನ್ನೆಲುಬಾಗಿರುವ ವಾಣಿಜ್ಯ ಬೆಳೆ. ಆದರೆ ಈ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಎಂಬ ಗೊಂದಲ ಹಾಗೂ ವಿದೇಶದಿಂದ ಅಡಿಕೆ ಆಮದಾಗುತ್ತಿದ್ದರಿಂದ ಬೆಳೆಗಾರರು ಕಂಗೆಟ್ಟಿದ್ದರು. ಆದರೆ ಇದೆರಡು ಸಮಸ್ಯೆಗೂ ಇದೀಗ ತಾತ್ಕಲಿಕ ರಿಲೀಫ್ ಸಿಕ್ಕಿದ್ದು ರಾಜ್ಯ ಅಡಿಕೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

ರೈತರಿಗೆ ಸಂತಸ ಮೂಡಿಸುವ ವರದಿ: ಅಡಿಕೆ ಕ್ಯಾನ್ಸರ್​ ಕಾರಕವಲ್ಲ ವಿಜ್ಞಾನಿಗಳ ವರದಿಯಲ್ಲಿ ಬಹಿರಂಗ
ಅಡಿಕೆ (ಸಾಂಧರ್ಬಿಕ ಚಿತ್ರ)
Follow us on

ಅಡಿಕೆ (Nut) ಬೆಳೆ ಮಲೆನಾಡು ಭಾಗದ ಲಕ್ಷಾಂತರ ರೈತರ ಬದುಕಿಗೆ ಬೆನ್ನೆಲುಬಾಗಿರುವ ವಾಣಿಜ್ಯ ಬೆಳೆ. ಆದರೆ ಈ ಅಡಿಕೆಯಲ್ಲಿ ಕ್ಯಾನ್ಸರ್ (Cancer) ಕಾರಕ ಅಂಶ ಇದೆ ಎಂಬ ಗೊಂದಲ ಹಾಗೂ ವಿದೇಶದಿಂದ ಅಡಿಕೆ ಆಮದಾಗುತ್ತಿದ್ದರಿಂದ ಬೆಳೆಗಾರರು ಕಂಗೆಟ್ಟಿದ್ದರು. ಆದರೆ ಇದೆರಡು ಸಮಸ್ಯೆಗೂ ಇದೀಗ ತಾತ್ಕಲಿಕ ರಿಲೀಫ್ ಸಿಕ್ಕಿದ್ದು ರಾಜ್ಯ ಅಡಿಕೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ರಾಜ್ಯ ಸರ್ಕಾರ ಈ ಬಗ್ಗೆ ಸಂಶೋಧನೆ ವರದಿ ಸಲ್ಲಿಸುವಂತೆ ಎಂ.ಎಸ್ ರಾಮಯ್ಯ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳಿಗೆ ತಿಳಿಸಿತ್ತು. ಸದ್ಯ ವಿಜ್ಞಾನಿಗಳು ವರದಿ ಸಲ್ಲಿಸಿದ್ದು, ಅಡಿಕೆಯಲ್ಲಿ ಕ್ಯಾನ್ಸರ್​ ಕಾರಕ ಅಂಶ ಇಲ್ಲ ಎಂದಿದೆ. ಈ ಮೂಲಕ ರೈತರು ನಿಟ್ಟುಸಿರು ಬಿಟ್ಟಿದದ್ದಾರೆ. ​

ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ, ವಿಜ್ಞಾನಿಗಳಿಂದ ಬಂತು ಸಂಶೋಧನಾ ವರದಿ

ವಿಶ್ವದಲ್ಲೇ ಅತಿ ಹೆಚ್ಚು ಅಡಿಕೆಯನ್ನು ಉತ್ಪಾದಿಸುವ ಭಾರತದಲ್ಲಿ, ಅಡಿಕೆಗೆ ಒಂದಲ್ಲ ಒಂದು ಸಂಚಕಾರ ಎದುರಾಗುತಿತ್ತು. ಅದರಲ್ಲೂ ನಮ್ಮ ರಾಜ್ಯದ ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ, ಉತ್ತರಕನ್ನಡ, ಹಾಸನ, ಕೊಡಗು ಸೇರಿದಂತೆ ಹೆಚ್ಚಾಗಿ ಅಡಿಕೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. ಆದರೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಕೆಯಾಗಿದ್ದರಿಂದ ಅಡಿಕೆ ಬೆಳೆ ಮೇಲೆ ನಿಷೇಧದ ತೂಗುಗತ್ತಿ ಇತ್ತು. ಇದಕ್ಕಾಗಿ ರಾಜ್ಯದಿಂದ ಅಡಿಕೆ ಬಗ್ಗೆ ಅಧ್ಯಯನ ಮಾಡಿ ಸಂಶೋಧನಾ ವರದಿ ಸಲ್ಲಿಸೋದಕ್ಕೆ ಎಂ.ಎಸ್ ರಾಮಯ್ಯ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳಿಗೆ ಸರ್ಕಾರ ವಹಿಸಿತ್ತು. ಇದೀಗ ಈ ಸಂಶೋಧನಾ ವರದಿ ಬಂದಿದ್ದು ಇದರಲ್ಲಿ ಅಡಿಕೆ ಹಾನಿಕಾರಕವಲ್ಲ ಮತ್ತು ಕಾನ್ಯಾಸರ್​ಗೆ ಕಾರಣವಲ್ಲ, ಬದಲಾಗಿ ಔಷಧೀಯ ಗುಣವಿರುವ ಸಾಂಪ್ರದಾಯಿಕ ಬೆಳೆ ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ಪರಿಷತ್‌ನಲ್ಲಿ ಅಡಿಕೆ ಕಾರ್ಯಪಡೆಯ ಅಧ್ಯಕ್ಷ, ಗೃಹಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದು ಅಡಿಕೆ ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ.

ಕನಿಷ್ಟ ಬೆಲೆಯನ್ನು ಹೆಚ್ಚಿಸಿದ ಕೇಂದ್ರ ಸರ್ಕಾರ, ಆಮದಿಗೆ ಬೀಳಲಿದೆ ಕೊಂಚ ಬ್ರೇಕ್

ಒಂದು ಕಡೆಯಿಂದ ರೈತರಿಗೆ ಅಡಿಕೆ ಬೆಳೆ ನಿಷೇಧವಾಗುವ ಭೀತಿಯಿದರೆ, ಇನ್ನೊಂದು ಕಡೆ ಬೆಲೆ ಏರುಪೇರು ರೈತರನ್ನು ನಿದ್ದೆಗೆಡಿಸಿದೆ. ಇದರ ವಿರುದ್ಧ ಕ್ಯಾಂಪ್ಕೋ ಸೇರಿದಂತೆ ಅಡಿಕೆ ಮಾರಾಟ ಮಹಾ ಮಂಡಳಿ ಕಾನೂನು ಹೋರಾಟ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿತ್ತು. ಪ್ರಮುಖವಾಗಿ ಇಂಡೋನೇಷ್ಯಾ, ಮಾಯನ್ಮಾರ್, ಮಲೇಷ್ಯಾ, ಸಿಂಗಾಪುರ, ನೇಪಾಳದಿಂದ ಕಡಿಮೆ ಬೆಲೆಗೆ ಅಡಿಕೆ ಆಮದಾಗುತ್ತಿದ್ದರಿಂದ ದೇಶಿ ಅಡಿಕೆ ಬೆಲೆ ಕುಸಿತವಾಗುತಿತ್ತು. ಇದರ ಜೊತೆ ಬರ್ಮಾದಿಂದ ಕಳ್ಳ ಸಾಗಾಣಿಕೆ ಮೂಲಕ ದೇಶಕ್ಕೆ ಅಡಿಕೆ ಬರುತ್ತಿತ್ತು. ಈ ಬೆಳವಣಿಗೆಗಳೆಲ್ಲವೂ ದೇಶಿ ಅಡಿಕೆಯ ಬೆಲೆ ಕುಸಿತಕ್ಕೆ ಕಾರಣವಾಗಿತ್ತು. ಆದರೆ ಇದೀಗ ಇದಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ಅಡಿಕೆಯ ಕನಿಷ್ಟ ಆಮದು ಬೆಲೆಯನ್ನು ಕೆ.ಜಿಗೆ 251 ರೂಗಳಿಂದ 351 ರೂಗೆ ಹೆಚ್ಚಿಸುವ ಮೂಲಕ ಹೆಚ್ಚಿನ ಆಮದಿಗೆ ಕಡಿವಾಣ ಹಾಕುವುದಕ್ಕೆ ಮುಂದಾಗಿದೆ. ಹೀಗಾಗಿ ವಿದೇಶದ ಕಳಪೆ ಗುಣಮಟ್ಟದ ಅಡಿಕೆ ಆಮದು ಕಡಿಮೆಯಾಗಿ ದೇಶಿ ಅಡಿಕೆಗೆ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ.

ಸದ್ಯ ಅಡಿಕೆ ಹಾನಿಕಾರಕವಲ್ಲವೆಂದು ಎಂದಿರುವ ವಿಜ್ಞಾನಿಗಳ ಸಂಶೋಧನಾ ವರದಿಯನ್ನು, ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್‌‌ಗೆ ಸಲ್ಲಿಸೋದಕ್ಕೆ ಮುಂದಾಗಿದೆ. ಈ ಮೂಲಕ ಅಡಿಕೆ ನಿಷೇಧವಾಗದಂತೆ ಕಾನೂನು ಹೋರಾಟ ನಡೆಸುವುದಕ್ಕೆ ಬಲ ಸಿಕ್ಕಿದಂತಾಗಿದೆ. ಒಟ್ಟಿನಲ್ಲಿ ಅಡಿಕೆ ಹಾನಿಕಾರಕವಲ್ಲ ಎಂಬ ವರದಿ ಹಾಗೂ ಆಮದು ಕನಿಷ್ಟ ಬೆಲೆ ಹೆಚ್ಚಳದ ಕೇಂದ್ರದ ನಿರ್ಧಾರದಿಂದ ಅಡಿಕೆ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಅಶೋಕ್ ಟಿ.ವಿ 9 ಮಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:03 am, Fri, 17 February 23