ಬೆಂಗಳೂರು: ಚಾಮರಾಜನಗರ ಆಸ್ಪತ್ರೆ ದುರಂತದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತಿದ್ದು, ಆಕ್ಸಿಜನ್ ಬಳಕೆ ಬಗ್ಗೆ ಮುನ್ನೆಚ್ಚರಿಕೆ ಕ್ರಮಕ್ಕೆ ಸಂಬಂಧಿಸಿ ಆದೇಶ ಹೊರಡಿಸಿದೆ. ಆಕ್ಸಿಜನ್ ರೀ ಫಿಲ್ಲಿಂಗ್ ಏಜೆನ್ಸಿಗಳು ಪ್ರತಿ ನಿತ್ಯ ಬೆಂಗಳೂರಿನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ, ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ತಮ್ಮ ಬಳಿ ಇರುವ ಆಕ್ಸಿಜನ್ ಪ್ರಮಾಣದ ಮಾಹಿತಿ ಸಲ್ಲಿಸಬೇಕು. ಪ್ರತಿದಿನ ಆಸ್ಪತ್ರೆಗಳಿಗೆ ಎಷ್ಟು ಪ್ರಮಾಣದ ಆಕ್ಸಿಜನ್ ಪೂರೈಕೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಸಲ್ಲಿಸಬೇಕು. ಬಿಬಿಎಂಪಿ ವ್ಯಾಪ್ತಿ ಮತ್ತು ಜಿಲ್ಲೆಗಳಲ್ಲಿ ತಹಶೀಲ್ದಾರ್ ಮಟ್ಟಕ್ಕಿಂತ ಕೆಳಗಿನ ಅಧಿಕಾರಿಗಳನ್ನು ಪ್ರತಿ ರೀ ಫಿಲ್ಲಿಂಗ್ ಏಜೆನ್ಸಿ ಗಳಿಗೆ ಕ್ಯಾಂಪ್ ಆಫೀಸರ್ ಆಗಿ ನೇಮಿಸಬೇಕು. ಅಪರ ಜಿಲ್ಲಾಧಿಕಾರಿಗಳು ಮತ್ತು ಬಿಬಿಎಂಪಿ ವಿಶೇಷ ಆಯುಕ್ತರು ಆಕ್ಸಿಜನ್ ನೋಡಲ್ ಅಧಿಕಾರಿಗಳಾಗಿ ನಿಯೋಜಿಸಲ್ಪಡಬೇಕು. ಆಕ್ಸಿಜನ್ ಪೂರೈಕೆ ಮತ್ತು ವಿತರಣೆಯ ಮಾಹಿತಿಯನ್ನು ಪ್ರತಿದಿನವೂ ಸಾರ್ವಜನಿಕ ವೇದಿಕೆಯಲ್ಲಿ ಎಲ್ಲರಿಗೂ ಲಭ್ಯವಾಗುವಂತೆ ಒದಗಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಮಧ್ಯರಾತ್ರಿ ಮನಕಲಕುವ ದೃಶ್ಯಗಳು ಕಂಡು ಬಂದಿವೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಸಂಜೆ ಆಕ್ಸಿಜನ್ ಖಾಲಿ ಆಗಿದ್ರಿಂದ 24 ಗಂಟೆಯಲ್ಲಿ 22 ಕೊವಿಡ್, ನಾನ್ ಕೊವಿಡ್ ರೋಗಿಗಳು ಆಕ್ಸಿಜನ್ ಸಿಗದೇ ಮೃತಪಟ್ಟಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 350 ಆಕ್ಸಿಜನ್ ಸಿಲಿಂಡರ್ಗಳಿವೆ. 6KL ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಕೂಡ ಇದೆ. ಸುಮಾರು 120 ರೋಗಿಗಳಿಗೆ ಇದ್ರಿಂದ ಆಕ್ಸಿಜನ್ ಪೂರೈಕೆ ಮಾಡ್ತಿದ್ದಾರೆ. ಮೈಸೂರಿನ ಸದರನ್ ಮತ್ತು ಪರ್ಕಿ ಏಜೆನ್ಸಿಗಳಿಂದ ಪ್ರತಿನಿತ್ಯ 350 ಆಕ್ಸಿಜನ್ ಸಿಲಿಂಡರ್ ಪೂರೈಕೆಯಾಗ್ತಿತ್ತು. ಆಕ್ಸಿಜನ್ ಪ್ಲಾಂಟ್ಗೆ ಬಳ್ಳಾರಿಯಿಂದ ಟ್ಯಾಂಕರ್ ಮೂಲಕ ಆಕ್ಸಿಜನ್ ಪೂರೈಕೆಯಾಗುತ್ತಿತ್ತು. ಕಳೆದೆರಡು ದಿನಗಳಿಂದ ಕೇವಲ 30 ಆಕ್ಸಿಜನ್ ಸಿಲಿಂಡರ್ ಪೂರೈಕೆಯಾಗಿವೆ. ಕಳೆದ ಭಾನುವಾರದಿಂದ ಬಳ್ಳಾರಿಯಿಂದ ಬರ್ತಿದ್ದ ಆಕ್ಸಿಜನ್ ಟ್ಯಾಂಕರ್ ಕೂಡ ಬಂದಿಲ್ಲ. ಹೀಗಾಗಿ ಭಾನುವಾರ 9 ಗಂಟೆಯಿಂದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿದೆ.
ರಾತ್ರಿ 8ಗಂಟೆಗೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿದೆ. ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ರೆ ನಾಟ್ ರೀಚಬಲ್ ಆಗಿದೆ. ವೈದ್ಯರನ್ನ ವಿಚಾರಿಸಿದ್ರೆ ಅಸಹಾಯಕರಾಗಿ ಉತ್ತರಿಸ್ತಿದ್ರಂತೆ. ಹೀಗಾಗಿ ನಾವು ಯಾರನ್ನ ಕೇಳಬೇಕು ಅಂತಾ ಪ್ರಶ್ನೆ ಮಾಡ್ತಿದ್ರು.
ಮೈಸೂರಿನಿಂದ ಬರ್ತಿದ್ದ ಆಕ್ಸಿಜನ್ ಸ್ಥಗಿತಗೊಳಿಸಿರೋದು ಇದಕ್ಕೆಲ್ಲಾ ಕಾರಣವಂತೆ. ಮೈಸೂರು ಜಿಲ್ಲಾಧಿಕಾರಿ ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗೆ ಪೂರೈಕೆ ಆಗ್ತಿರೋ ಆಕ್ಸಿಜನ್ ಸ್ಥಗಿತಗೊಳಿಸಲು ಮೌಖಿಕ ಆದೇಶ ನೀಡಿರೋದ್ರಿಂದ ಆಕ್ಸಿಜನ್ ಪೂರೈಸಲು ಏಜೆನ್ಸಿಗಳು ಮೀನಮೇಷ ಎಣಿಸ್ತಿವೆಯಂತೆ. ಹೀಗಾಗಿ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಆಕ್ಸಿಜನ್ ಸಮಸ್ಯೆ ನೀಗಿಸಲಿ ಅಂತಾ ಸಾರ್ವಜನಿಕರು ಆಗ್ರಹಿಸ್ತಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತ: ಐಎಎಸ್ ಅಧಿಕಾರಿ ಶಿವಯೋಗಿ ಕಳಸದ್ ಮೂಲಕ ತನಿಖೆಗೆ ಸರಕಾರ ಆದೇಶ
ಆಕ್ಸಿಜನ್ ವ್ಯತ್ಯಯ: 24 ಜನರೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿಲ್ಲ ಎಂದ ಸಚಿವ ಸುರೇಶ್ ಕುಮಾರ್
(after chamarajanagar oxygen disaster karnataka govt made significant order on oxygen supply)
Published On - 3:08 pm, Mon, 3 May 21