ಬೆಂಗಳೂರಿನ ರಸ್ತೆಗಳಲ್ಲಿ AI ಕ್ಯಾಮರಾ ಕಣ್ಣು: ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಫಿಕ್ಸ್​

ಬೆಂಗಳೂರು ನಗರದ ಬಹುತೇಕ ರಸ್ತೆಗಳಲ್ಲಿ AI ಕ್ಯಾಮರಾಗಳನ್ನ ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಬೀಳೋದು ಪಕ್ಕಾ. 2025ರ ಜವರಿಯಿಂದ ಜುಲೈವರೆಗೆ ದಾಖಲಾಗಿರುವ ಒಟ್ಟು ಪ್ರಕರಣಗಳ ಪೈಕಿ ಶೇ. 87ರಷ್ಟು ಈ ಕ್ಯಾಮರಾಗಳಿಂದಲೇ ಆಗಿದ್ದು, ವಿಡಿಯೋ ಮತ್ತು ಫೋಟೋ ದಾಖಲಾಗುವ ಕಾರಣ ವಾಹನಗಳ ಮಾಲಕರು ನಾವು ಸಂಚಾರ ನಿಯಮ ಉಲ್ಲಂಘಿಸಿಲ್ಲ ಎಂದು ಹೇಳುವಂತೆಯೂ ಇಲ್ಲ.

ಬೆಂಗಳೂರಿನ ರಸ್ತೆಗಳಲ್ಲಿ AI ಕ್ಯಾಮರಾ ಕಣ್ಣು: ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಫಿಕ್ಸ್​
ಸಾಂದರ್ಭಿಕ ಚಿತ್ರ

Updated on: Oct 14, 2025 | 2:39 PM

ಬೆಂಗಳೂರು, ಅಕ್ಟೋಬರ್​ 14: ಟ್ರಾಫಿಕ್​ ಪೊಲೀಸರು ಇರಲ್ಲ ಎಂದುಕೊಂಡು ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಆರಾಮಾಗಿ ಓಡಾಡಿಕೊಂಡಿದ್ದವರಿಗೆ ಪೊಲೀಸ್​ ಇಲಾಖೆ ಶಾಕ್​ ಕೊಟ್ಟಿದೆ. ಬೆಂಗಳೂರು ನಗರದ ಬಹುತೇಕ ರಸ್ತೆಗಳಲ್ಲಿ AI ಕ್ಯಾಮರಾಗಳನ್ನ ಅಳವಡಿಸಲಾಗಿದ್ದು, ಸಂಚಾರ ನಿಯಮ (Traffic Rules) ಉಲ್ಲಂಘನೆಯನ್ನು ಇವು ದಾಖಲಿಸಲಿವೆ. 2025ರ ಜವರಿಯಿಂದ ಜುಲೈವರೆಗೆ ದಾಖಲಾಗಿರುವ ಒಟ್ಟು ಪ್ರಕರಣಗಳ ಪೈಕಿ ಶೇ. 87ರಷ್ಟು ಈ ಕ್ಯಾಮರಾಗಳಿಂದಲೇ ಆಗಿವೆ. ಈ ರೀತಿಯ ಕ್ಯಾಮರಾಗಳ ಬಳಕೆಯಿಂದಾಗಿ ಪೊಲೀಸರು ವಾಹನಗಳನ್ನ ತಡೆದು ದಂಡ ವಿಧಿಸಬೇಕಾದ ಅನಿವಾರ್ಯತೆ ಇರಲ್ಲ. ವಿಡಿಯೋ, ಫೋಟೋ ದಾಖಲಾಗುವ ಕಾರಣ ವಾಹನಗಳ ಮಾಲಕರು ನಾವು ಸಂಚಾರ ನಿಯಮ ಉಲ್ಲಂಘಿಸಿಲ್ಲ ಎಂದು ಹೇಳುವಂತೆಯೂ ಇಲ್ಲ.

ಹೆಲ್ಮೆಟ್​ ಇಲ್ಲದೆ ವಾಹನ ಚಾಲನೆ, ಹಿಂಬದಿ ಸವಾರರು ಹೆಲ್ಮೆಟ್​ ಧರಸಿದೇ ಇರುವುದು, ಸೀಟ್​ ಬೆಲ್ಟ್​ ಧರಿಸದೆ ಇರುವುದು ಮತ್ತು ಸಿಗ್ನಲ್​ ಜಂಪ್​ನಂತಹ ಪ್ರಕರಣಗಳನ್ನ ಈ AI ಕ್ಯಾಮರಾಗಳು ಪತ್ತೆ ಮಾಡಲಿವೆ. 2025ರ ಜವರಿಯಿಂದ ಜುಲೈವರೆಗೆ ಒಟ್ಟು 30 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ಪ್ರತಿದಿನ 11,800 ಕೇಸ್​ ಗಳು ಈ AI ಕ್ಯಾಮರಾಗಳಿಂದಲೇ ವರದಿಯಾಗಿವೆ. ಕೇವಲ 1,500 ಪ್ರಕರಣಗಳಷ್ಟೇ ಪೊಲೀಸರಿಂದ ದಾಖಲಾಗಿವೆ. ಇವುಗಳಲ್ಲಿ ನೋ ಎಂಟ್ರಿಯಲ್ಲಿ ವಾಹನ ಚಾಲನೆ, ನಿಷೇಧಿತ ಪ್ರದೇಶದಲ್ಲಿ ವಾಹನಗಳ ಪಾರ್ಕಿಂಗ್​ನಂತಹ ಕೇಸ್​ಗಳೇ ಹೆಚ್ಚಿವೆ.

ಇದನ್ನೂ ಓದಿ: ಮ್ಯಾಪಲ್ಸ್ ಆ್ಯಪ್​ನಲ್ಲಿ ಸಿಗುತ್ತೆ ಬೆಂಗಳೂರು ಟ್ರಾಫಿಕ್ ಸಿಗ್ನಲ್ ಟೈಮಿಂಗ್ಸ್ ಲೈವ್ ಮಾಹಿತಿ! ದೇಶದಲ್ಲೇ ಮೊದಲು

AI ಕ್ಯಾಮರಾಗಳ ಅಳವಡಿಕೆಯಿಂದಾಗಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಜನರಿಗೂ ಈ ಬಗ್ಗೆ ಜಾಗೃತಿ ಮೂಡಿದೆ. ನಗರದಾದ್ಯಂತ ಸುಮಾರು 75 ಈ ರೀತಿಯ ಕ್ಯಾಮರಾಗಳನ್ನ ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘಟನೆ ಕೇಸ್​ಗಳ ಮಾಹಿತಿ ತಿಳಿಯಲು ಸಾರ್ವಜನಿಕರ ಅನುಕೂಲಕ್ಕೆ ASTraM ಆ್ಯಪ್​ ಕೂಡ ಇದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್​ ಆಯುಕ್ತ ಕಾರ್ತಿಕ್​ ರೆಡ್ಡಿ ತಿಳಿಸಿರೋದಾಗಿ ಹಿಂದೂಸ್ತಾನ್​ ಟೈಮ್ಸ್​ ವರದಿ ಮಾಡಿದೆ. ಇಲ್ಲಿಯವರೆಗೆ ಸಂಚಾರಿ ಪೊಲೀಸರು 44 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ್ದು, ಈ ಮೂಲಕ ದಾಖಲಾದ ಪ್ರಕರಣಗಳ ದಂಡದ ಅರ್ಧದಷ್ಟು ಹಣ ಪಾವತಿಯಾದಂತಾಗಿದೆ. AI ಕ್ಯಾಮರಾಗಳ ಅಳವಡಿಕೆ ಬಳಿಕವೂ ಪಾರ್ಕಿಂಗ್​ ನಿಯಮ ಮತ್ತು ಏಕ ಮುಖ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ತಡೆ ಸಂಚಾರ ಪೊಲೀಸರಿಗೆ ಸವಾಲಾಗಿಯೇ ಉಳಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.