ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿ ಸಮೀಕ್ಷೆಗೆ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ, ಜಾತಿ ಜನ ಗಣತಿ ವರದಿ ಬಿಡುಗಡೆಗೆ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ಮೂಲಕ ಸಂಫಟನೆಯ ವಿರೋಧವನ್ನು ತಿಳಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಬಿ ಎಸ್ ಸಚ್ಚಿದಾನಂದ ಮೂರ್ತಿ, ಈ ಸಮೀಕ್ಷೆ ವೈಜ್ಞಾನಿಕವಾಗಿಲ್ಲ. ಪಾರದರ್ಶಕವಾಗಿಲ್ಲ, ಸಮಗ್ರವಾಗಿಲ್ಲ. ವೀರಶೈವ-ಲಿಂಗಾಯತರಿಂದ ಉಪಜಾತಿಗಳನ್ನು ಉದ್ದೇಶಪೂರ್ವಕವಾಗಿ ಬೇರ್ಪಡಿಸಲಾಗಿದೆ ಎಂಬ ಅನುಮಾನಗಳಿವೆ. ವರದಿಯಿಂದ ವೀರಶೈವ-ಲಿಂಗಾಯತರಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಹಿಂದುಳಿದವರಿಗೆ ಅನ್ಯಾಯವಾಗಲಿದೆ. ವೀರಶೈವ-ಲಿಂಗಾಯತರಲ್ಲೂ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಗುಳೆ ಹೋಗುವವರು, ಚಿಕ್ಕಮಗಳೂರು ಮತ್ತು ಕೊಡಗಿನ ಕಾಫಿ ತೋಟಗಳಲ್ಲಿ ಕೂಲಿ ಕೆಲಸ ದುಡಿಯುವವರು, ಮುಂಬೈ, ಮಂಗಳೂರು ಮತ್ತು ಕಾರ್ಮಿಕರಾಗಿ ದುಡಿಯುವವರು ವೀರಶೈವ-ಲಿಂಗಾಯತರಲ್ಲಿದ್ದಾರೆ. ಇತಿಹಾಸದಲ್ಲಿ ಆಗಿರಬಹುದಾದ ತಪ್ಪನ್ನು ವರ್ತಮಾನದಲ್ಲಿ ಮತ್ತೊಂದು ತಪ್ಪಿನ ಮೂಲಕ ಸರಿಪಡಿಸಲು ಸಾಧ್ಯವಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಿಳಿಸಿದೆ.
ಇನ್ನೂ ಮುಂದುವರೆದು ತಮ್ಮ ಪ್ರತಿಕ್ರಿಯೆಯನ್ನು ತಿಳಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾ, ‘ನಮ್ಮ ಲಕ್ಷಾಂತರ ನಿರುದ್ಯೋಗಿ ಯುವಕರಿಗೆ, ವಂಚಿತರಿಗೆ ಮತ್ತು ಕಟ್ಟಕಡೆಯ ಜನರಿಗೆ ಅನ್ಯಾಯವಾಗುತ್ತದೆ. ಜಾತಿ ಜನಗಣತಿ ಬಿಡುಗಡೆ ಮಾಡಿದರೆ ಇದೇ ಮತ್ತೊಂದು ಸಾಮಾಜಿಕ ಸಮಸ್ಯೆಯಾಗುತ್ತದೆ. ಈ ಸಮೀಕ್ಷೆಯ ಅಂಶಗಳು ಸೋರಿಕೆಯಾಗಿವೆ. ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಬದಲು ಕೇವಲ ಜಾತಿವಾರು ಸಂಖ್ಯೆಯನ್ನು ವ್ಯವಸ್ಥಿತವಾಗಿ ಸೋರಿಕೆ ಮಾಡಿ ಗೊಂದಲ ಮೂಡಿಸಲಾಗಿದೆ. ಈ ಸಮೀಕ್ಷೆಯ ಹಿಂದೆ ರಾಜಕೀಯ ದುರುದ್ದೇಶವಿದೆ. ಜಾತಿ ಆಧಾರದ ಮೇಲೆ ಸಮಾಜವನ್ನು ಒಡೆಯುವ ಹುನ್ನಾರವಿದೆ. ನಮ್ಮ ಆಂತರಿಕ ಮಾಹಿತಿ ಪ್ರಕಾರ ಗಣತಿದಾರರು ಸುಮಾರು ಶೇ 50 ರಷ್ಟು ವೀರಶೈವ-ಲಿಂಗಾಯತರ ಮನೆಗಳಿಗೆ ಭೇಟಿ ನೀಡಿಲ್ಲ. ಆದ್ದರಿಂದ ಈ ವರದಿ ಸಮಗ್ರವಾಗಿಲ್ಲ. ಮತ್ತು ವೈಜ್ಞಾನಿಕವಾಗಿಲ್ಲ. ಪಾರದರ್ಶಕವಾಗಿಲ್ಲ ಎಂಬ ಅನುಮಾನಕ್ಕೆ ಕಾರಣವಾಗಿದೆ. ಈ ವರದಿಯನ್ನು ತಕ್ಷಣ ತಿರಸ್ಕರಿಸಬೇಕು ಹಲವು ಲೋಪ-ದೋಷಗಳಿಂದ ಕೂಡಿರಬಹುದು ಎಂಬ ಸಂಶಯವಿದೆ. ಇದಕ್ಕೆ ಕೋಟ್ಯಾಂತರ ರೂಪಾಯಿ ಸರ್ಕಾರದ ಹಣ ವೆಚ್ಚವಾಗಿದೆ. ಇದರ ಹೊಣೆಯನ್ನು ವರದಿಗೆ ಕಾರಣರಾಗಿರಬಹುದಾದ ವ್ಯಕ್ತಿಗಳೇ ವಹಿಸಿಕೊಳ್ಳಬೇಕು. ಹಿಂದುಳಿದ ವರ್ಗಗಳನ್ನು ಗುರುತಿಸುವ ಗಣತಿಗೆ ಮಹಾಸಭಾದ ವಿರೋಧವಿಲ್ಲ. ಆದರೆ ಅದು ವೀರಶೈವ ಲಿಂಗಾಯತರಲ್ಲಿರುವ ಹಿಂದುಳಿದವರನ್ನೂ ಪರಿಗಣಿಸಬೇಕು. ಡಿಜಿಟಲ್ ಗಣತಿ ನಡೆಯಬೇಕು. ಮೊಬೈಲ್ ಅಪ್ಲಿಕೇಶನ್ ಮೂಲಕ ವಿವರಗಳನ್ನು ಸಂಗ್ರಹಿಸಬೇಕು. ಆಧಾರ್ ಸಂಖ್ಯೆ ಜೋಡಣೆಯಾಗಬೇಕು. ಕುಟುಂಬವನ್ನು ಒಂದು ಘಟಕವಾಗಿ ಪರಿಗಣಿಸಬೇಕು. ಗಣತಿ ಕುರಿತು ಒಂದು ಪೋರ್ಟಲ್ ವೆಬ್‌ಸೈಟ್‌ನಲ್ಲಿ ಸ್ವಯಂ ವಿವರಗಳನ್ನು ದಾಖಲಿಸುವ ವ್ಯವಸ್ಥೆಯಿರಬೇಕು. ಪ್ರತಿ ಕುಟುಂಬಕ್ಕೆ ಆ ಪೋರ್ಟಲ್‌ನಲ್ಲಿ ಗುರುತಿನ ಸಂಖ್ಯೆಯನ್ನು ಸೃಷ್ಟಿಸಬೇಕು. ಗಣತಿದಾರರು ಮನೆ ಮನೆಗೆ ಭೇಟಿ ನೀಡಿದಾಗ ಆ ಸ್ವಯಂ ವಿವರಗಳನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದೆ.
ಜಾತಿವಾರು ಸ್ಥಿತಿಗತಿ ವಿವರಗಳ ವರ್ಗಿಕರಣಕ್ಕೆ ಡಾಟಾ ಸೈನ್ಸ್ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತ ಸಾಧನಗಳನ್ನು (Tools) ಬಳಸಬೇಕು. ಸುಮಾರು ಐದು ವರ್ಷಗಳಷ್ಟು ಹಳೆಯದಾದ ಮತ್ತು ಅನೇಕ ಲೋಪದೋಷಗಳಿಂದ ಕೂಡಿರಬಹುದಾದ ಶ್ರೀ ಕಾಂತರಾಜು ಆಯೋಗದ ಪ್ರಸ್ತುತ ವರದಿಯನ್ನು ತಿರಸ್ಕರಿಸಬೇಕು. ಈ ಅಪೂರ್ಣವಾದ ವರದಿಗೆ ಸಮಿತಿಯ ಮೂರು ಸದಸ್ಯರು ಸಹಿ ಮಾಡಿಲ್ಲ ಎಂಬ ಮಾಹಿತಿಯೂ ಇದೆ. ಹಿಂದುಳಿದ ವರ್ಗಗಳ ಪಟ್ಟಿಯನ್ನು ಮಾಡುವ ಅಧಿಕಾರವನ್ನು ಇತ್ತೀಚಿನ ಸಂವಿಧಾನ ತಿದ್ದುಪಡಿಯಲ್ಲಿ ರಾಜ್ಯಗಳಿಗೆ ನೀಡಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿಯೂ ಜಾತಿಗಣತಿಗೆ ಒತ್ತಾಯ ಹೆಚ್ಚುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಕಾದು ನೋಡಿ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಮನವಿ ಮಾಡಿದೆ.
ಇದನ್ನೂ ಓದಿ:
ಪ್ರತ್ಯೇಕ ಲಿಂಗಾಯತ ಧರ್ಮ: ಮತ್ತೆ ಧ್ವನಿ ಎತ್ತಿದ ಎಂಬಿ ಪಾಟೀಲ್ಗೆ ಶಾಮನೂರು ಶಿವಶಂಕರಪ್ಪ ಗುದ್ದು
ಪಂಚಮಸಾಲಿ, ಕುರುಬ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ಪರಾಮರ್ಶನೆಗೆ ಉನ್ನತ ಮಟ್ಟದ ಸಮಿತಿ ರಚನೆ
(Akhila Bharatha Veerashaiva Mahasabha opposes release of Karnataka caste census report)