ಚಿಕ್ಕಮಗಳೂರು: ಲೋ.. ನಂಗ್ ಎಲ್ಡ್ ಎತ್ಕೊಡೋ.. ಎತ್ಕಬಾ, ಎತ್ಕಬಾ.. ಇದು ಕೊರೊನಾ ಪೀಡಿತರ ಆಸ್ಪತ್ರೆಯಲ್ಲೆಲ್ಲೋ ಆಕ್ಸಿಜನ್ಗಾಗಿ ಜನ ಕೂಗಾಡುತ್ತಿರುವುದು ಎಂದು ಭಾವಿಸಿದರೆ ಅದು ತಪ್ಪು. ಏಕೆಂದರೆ, ಈ ಪರಿ ಕೂಗಾಡುತ್ತಿರುವವರು ಮದ್ಯಪ್ರಿಯರು. ಅದು ಕೂಡಾ ಬಿಟ್ಟಿ ಮದ್ಯಕ್ಕಾಗಿ. ಅರೆರೆ, ಈ ಕೊರೊನಾ ಗಲಾಟೆಯಲ್ಲಿ ಬಿಟ್ಟಿ ಮದ್ಯ ಎಲ್ಲಿ ಕೊಡ್ತಿದ್ದಾರೆ ಎಂದು ಆಶ್ಚರ್ಯವಾಯ್ತಾ? ಇದು ಉಚಿತ ವಿತರಣೆ ಏನಲ್ಲ. ಬದಲಾಗಿ, ಜನರೇ ಹೊತ್ತುಕೊಂಡು ಹೋಗುತ್ತಿರುವುದು.
ದೇಶದಲ್ಲಿ ನಿತ್ಯವೂ ನೂರಾರು ಕಡೆ ರಸ್ತೆ ಅಪಘಾತ ಸಂಭವಿಸುತ್ತಲೇ ಇರುತ್ತದೆ. ಇಂತಹ ಅಪಘಾತಗಳಲ್ಲಿ ನೂರಾರು ಜನ ಪ್ರಾಣವನ್ನೂ ಕಳೆದುಕೊಳ್ಳುತ್ತಾರೆ. ಆದರೆ, ಕೆಲವರು ಮಾತ್ರ ಅಂತಹ ಅನಾಹುತದಲ್ಲೂ ತಮ್ಮ ಲಾಭವನ್ನು ಹುಡುಕುತ್ತಾರೆ. ಸರಕು ಸಾಗಣೆ ವಾಹನ ಪಲ್ಟಿಯಾದಾಗ ಅದರಲ್ಲಿದ್ದ ವಸ್ತುಗಳನ್ನೆಲ್ಲಾ ಬಾಚಿಕೊಂಡು ಹೋಗುವುದು,ಕೋಳಿ ವಾಹನ ಪಲ್ಟಿಯಾದರೆ ಮೂಟೆ ಮೂಟೆ ಕೋಳಿಯನ್ನೇ ಕದ್ದೊಯ್ಯುವುದು.. ಹೀಗೆ ಅಪಘಾತದಿಂದ ಯಾರಿಗೋ ನಷ್ಟವಾಗಿದ್ದರೆ ಇನ್ಯಾರೋ ಲಾಭ ಮಾಡಿಕೊಳ್ಳುತ್ತಾರೆ. ಇಂತಹದ್ದೇ ಒಂದು ಘಟನೆ ಚಿಕ್ಕಮಗಳೂರಿನ ತರೀಕೆರೆಯ ಎಂ.ಸಿ.ಹಳ್ಳಿ ಬಳಿ ನಡೆದಿದ್ದು, ಮದ್ಯ ಸಾಗಿಸುತ್ತಿದ್ದ ವಾಹನ ಪಲ್ಟಿಯಾದ ಪರಿಣಾಮ ಜನರು ಮದ್ಯಕ್ಕಾಗಿ ಮುಗಿಬಿದ್ದಿದ್ದಾರೆ.
ಚಿಕ್ಕಮಗಳೂರಿನ ತರೀಕೆರೆಯ ಎಂ.ಸಿ.ಹಳ್ಳಿ ಬಳಿ ಬೆಂಗಳೂರಿಂದ ಶಿವಮೊಗ್ಗಕ್ಕೆ ಮದ್ಯ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ಮದ್ಯದ ಬಾಟಲಿಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಅಪಘಾತ ನಡೆದ ಕೆಲವೇ ಕ್ಷಣದಲ್ಲಿ ಮಕರಂದ ಹೀರಲು ಬರುವ ದುಂಬಿಗಳಂತೆ ಗುಂಪುಗುಂಪಾಗಿ ಜನ ಬಂದಿದ್ದಾರೆ. ಆದರೆ, ಹಾಗೆ ಬಂದವರು ಅಪಘಾತಕ್ಕೆ ಮರುಗುವುದು ಬಿಟ್ಟು ಸಿಕ್ಕಿದ್ದೇ ಅವಕಾಶ ಎಂದು ಮದ್ಯಕ್ಕಾಗಿ ರಸ್ತೆ ಮಧ್ಯದಲ್ಲೇ ಮುಗಿಬಿದ್ದಿದ್ದಾರೆ.
ಕಿಂಗ್ ಫಿಷರ್ ಬಾಟಲಿಯನ್ನು ಕಂಡ ಜನ ಕೈಗೆ ಸಿಕ್ಕಷ್ಟನ್ನು ಬಾಚಿಕೊಂಡಿದ್ದಲ್ಲದೇ ನಂಗೊಂದು ಅವನಿಗೊಂದು ಎಂದು ತುಂಬಿಕೊಂಡು ಹೋಗಲಾರಂಭಿಸಿದ್ದಾರೆ. ಜನರ ನೂಕುನುಗ್ಗಲಿನಿಂದ ಹತ್ತಿರಕ್ಕೆ ಬರಲಾಗದವರು ದೂರದಲ್ಲೇ ನಿಂತು ಪರಿಚಯದವರ ಬಳಿ ಲೋ ನಂಗ್ ಎಲ್ಡ್ ಬಾಟ್ಲು ಎತ್ಕೋಬಾ ಎಂದು ಕೂಗೋಕೆ ಶುರುಮಾಡಿದ್ದಾರೆ. ಅಪಘಾತದ ಸ್ಥಳಕ್ಕೆ ಬಂದ ಪೊಲೀಸರಿಗೆ ಪರಿಸ್ಥಿತಿಯನ್ನು ನಿಯಂತ್ರಿಸುವುದೇ ಹರಸಾಹಸವಾಗಿ ಲಾಠಿ ಬೀಸಬೇಕಾದ ಸಂದರ್ಭ ಎದುರಾಗಿದೆ. ಅದೇನೇ ಆದರೂ ಅಪಘಾತದ ಸಂದರ್ಭದಲ್ಲಿ ಜನರು ಮದ್ಯದ ಬಾಟಲಿಯನ್ನು ಕಂಡೇ ನಶೆ ಏರಿದವರಂತೆ ವರ್ತಿಸಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.
ಇದನ್ನೂ ಓದಿ:
ಕೊರೊನಾಗೆ ಲಸಿಕೆ ಮದ್ದಲ್ಲ, ಒಂದು ಪೆಗ್ ಹೊಡೆದ್ರೆ ಸರಿಯಾಗುತ್ತೆ; ಮದ್ಯದಂಗಡಿ ಎದುರು ಕ್ಯೂ ನಿಂತ ಆಂಟಿ
Published On - 1:24 pm, Tue, 20 April 21