ಮೈಸೂರು: ಕೊರೊನಾ ಮಹಾಮಾರಿ ಮತ್ತೊಮ್ಮೆ ತನ್ನ ಆರ್ಭಟ ಮುಂದುವರಿಸಿದೆ. ಅದು ಸಾಂಸ್ಕೃತಿಕ ನಗರಿ ಮೈಸೂರನ್ನೂ ಬಿಟ್ಟಿಲ್ಲ. ವಾಸ್ತವವಾಗಿ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಕಾಟ ತುಸು ಹೆಚ್ಚೇ ಎಂಬಂತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಕಟ್ಟುನಿಟ್ಟಿನ ಕ್ರಮಗಳನ್ನೂ ಕೈಗೊಂಡಿದೆ. ಪ್ರವಾಸೀ ಕೇಂದ್ರಗಳಿಗೆ ಬೀಗ ಹಾಕಿರುವ ಜಿಲ್ಲಾಡಳಿತ, ಯಾವುದೇ ಜನಜಂಗುಳಿಗೂ ಅವಕಾಶ ನೀಡಿಲ್ಲ. ಆದರೆ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶ ನೀಡಿದೆ. ಆದರೆ ರಾಜ್ಯದ ಜನತೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಸ್ವಯಂ ನಿರ್ಬಂಧ ಹೇರಿಕೊಂಡು ಗುಂಪುಗೂಡುವ ಸ್ಥಳಗಳಿಂದ ದೂರವೇ ಉಳಿದಿದ್ದಾರೆ.
ಜಿಲ್ಲೆಯ ನಂಜುಡೇಶ್ವರನ ದರ್ಶನಕ್ಕೆ ಸ್ಥಳೀಯ ಆಡಳಿತ ಅವಕಾಶ ನೀಡಿಲ್ಲ. ಹಾಗಾಗಿ ಜನ ಅತ್ತ ಸುಳಿಯುತ್ತಿಲ್ಲ. ಇನ್ನು, ಇತ್ತ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶವಿದ್ದರೂ ಸಹ ಜನರು ಬರುತ್ತಿಲ್ಲ. ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ ಇಂದು ಬೆಟ್ಟದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ಇದ್ದಾರೆ. ಜನರು ಸ್ವಯಂ ಲಾಕ್ ಡೌನ್ ಮಾಡಿಕೊಂಡಿದ್ದಾರೆ.
ಇದಲ್ಲದೆ, ವೀಕೆಂಡ್ ಸಮಯದಲ್ಲಿ ಜನಜಂಗುಳಿ ಇರುತ್ತಿದ್ದ ಜಾಗಗಳಲ್ಲಿಯೂ ಜನ ಸೇರುತ್ತಿಲ್ಲ. ಎಲ್ಲಾ ಪ್ರವಾಸಿ ತಾಣಗಳಲ್ಲೂ ಖಾಲಿ ಖಾಲಿ ದೃಶ್ಯಗಳು ಕಾಣುತ್ತಿವೆ.
ಕೊರೋನಾ ಎರಡನೇ ಅಲೆಯ ಭೀಕರತೆ ಹಿನ್ನೆಲೆ ನೆರೆಯ ಮಂಡ್ಯ ಜಿಲ್ಲೆಯ ದೇವಸ್ಥಾನಗಳು ಒಂದು ತಿಂಗಳ ಕಾಲ ಬಂದ್ ಆಗಿವೆ. ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ, ನಿಮಿಷಾಂಭ ಹಾಗೂ ಮೇಲುಕೋಟೆ ಚೆಲುವನಾರಾಯಣಸ್ವಾಮಿ ಮತ್ತು ಇತರೆ ದೇವಸ್ಥಾನಗಳು ಮೇ 15 ರವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಚಾಮುಂಡೇಶ್ವರಿ ದರ್ಶನ ಮಾಡಿದ ಸಚಿವ ವಿ.ಸೋಮಣ್ಣಸಚಿವ ವಿ.ಸೋಮಣ್ಣ ಅವರು ಪತ್ನಿ ಜೊತೆ ತೆರಳಿ ಚಾಮುಂಡಿ ತಾಯಿಯ ದರ್ಶನ ಪಡೆದರು. ಚಾಮುಂಡೇಶ್ವರಿಗೆ ಸಚಿವ ಸೋಮಣ್ಣ ವಿಶೇಷ ಪೂಜೆ ಸಲ್ಲಿಸಿದರು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿರುವ ಸಚಿವ ಸೋಮಣ್ಣ ಅವರು ನಾಡಿನ ಅಧಿದೇವತೆಯ ದರ್ಶನ ಪಡೆದರು.
Published On - 11:33 am, Sat, 17 April 21