ಮುಖ್ಯಮಂತ್ರಿ ಇಲ್ಲದೇ ಸರ್ವಪಕ್ಷ ಸಭೆ ನಡೆಸಿದರೆ ಗಂಭೀರತೆ ಇರುವುದಿಲ್ಲ, ಅವರು ಬಂದ ಮೇಲೆಯೇ ಸಭೆ: ಸೋಮಣ್ಣ
ಮುಖ್ಯಮಂತ್ರಿಗಳು ಇನ್ನು ಮೂರ್ನಾಲ್ಕು ದಿನಗಳಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬರುವ ವಿಶ್ವಾಸವಿದೆ. ಅವರು ಬಂದ ಬಳಿಕೆ ಸರ್ವಪಕ್ಷ ನಾಯಕರ ಜತೆ ಚರ್ಚೆ ನಡೆಸಲಾಗುವುದು: ವಿ.ಸೋಮಣ್ಣ
ಮೈಸೂರು: ಕೊರೊನಾ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ ಹೆಣಗಾಡುತ್ತಿದ್ದು, ಕಠಿಣ ನಿಯಮಾವಳಿಗಳ ಮೊರೆ ಹೋಗಬೇಕೋ? ಬೇಡವೋ? ಎಂಬುದನ್ನು ಸರ್ವಪಕ್ಷ ಸಭೆ ಬಳಿಕ ನಿರ್ಧರಿಸುವುದಾಗಿ ಈಗಾಗಲೇ ತಿಳಿಸಿದೆ. ಆದರೆ, ಈಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಸಭೆ ಮುಂದೂಡಲ್ಪಟ್ಟಿದೆ. ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ವಸತಿ ಸಚಿವ ವಿ.ಸೋಮಣ್ಣ, ಮುಖ್ಯಮಂತ್ರಿ ಇಲ್ಲದೇ ಸರ್ವಪಕ್ಷ ಸಭೆ ನಡೆಸಿದರೆ ಅದಕ್ಕೆ ಗಂಭೀರತೆ ಇರುವುದಿಲ್ಲ. ಆದ್ದರಿಂದ ಅವರು ಗುಣಮುಖರಾಗಿ ಬಂದ ಬಳಿಕೆ ಸಭೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಯವರು ಇನ್ನು ಮೂರ್ನಾಲ್ಕು ದಿನಗಳಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬರುವ ವಿಶ್ವಾಸವಿದೆ. ಅವರು ಬಂದ ಬಳಿಕೆ ಸರ್ವಪಕ್ಷ ನಾಯಕರ ಜತೆ ಚರ್ಚೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಕೊರೊನಾ ನಿಯಂತ್ರಣದ ಬಗ್ಗೆ ಮಾತನಾಡಿ, ಕೊರೊನಾ ಸೋಂಕು ಹಬ್ಬದಂತೆ ತಡೆಯಲು ಕೆಲ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುವುದು ಅನಿವಾರ್ಯ. ಸದ್ಯ ನನ್ನ ಕ್ಷೇತ್ರ ಸೇರಿದಂತೆ ಎಲ್ಲೂ ಆಸ್ಪತ್ರೆಗಳ ಸಮಸ್ಯೆ ಇಲ್ಲ. ಸೋಂಕಿತರ ಶವಸಂಸ್ಕಾರ ವಿಚಾರದಲ್ಲಿ ಒಂದೆರಡು ನ್ಯೂನತೆಗಳಿತ್ತು ಅದನ್ನು ನಿನ್ನೆ ಸಭೆ ನಡೆಸಿ ಸರಿಪಡಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ತಾಂತ್ರಿಕ ಸಲಹಾ ಸಮಿತಿಯಿಂದ ಆತಂಕಕಾರಿ ವರದಿ ಏತನ್ಮಧ್ಯೆ, ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಆತಂಕಕಾರಿ ವರದಿಯೊಂದನ್ನು ಸಲ್ಲಿಸಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸದೆ ಇದ್ದರೆ ರಾಜ್ಯದಲ್ಲಿ ಕೊವಿಡ್ 19 ಸಂಖ್ಯೆ 3 ಪಟ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಮೇ ತಿಂಗಳ ಹೊತ್ತಿಗೆ ಬೆಂಗಳೂರಿನಲ್ಲೇ ಪ್ರತಿದಿನ 20,000 ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಕೊವಿಡ್ ತಾಂತ್ರಿಕ ಸಲಹಾ ಸಮಿತಿ ವರದಿಯಲ್ಲಿ ತಿಳಿಸಿದೆ. ಅಲ್ಲದೆ, ಕೊರೊನಾ ಮರಣದ ಪ್ರಮಾಣವೂ 2 ಪಟ್ಟು ಹೆಚ್ಚಲಿದ್ದು, ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಐಸಿಯು ಕೊರತೆ ಆಗಬಹುದು. ಚಿತಾಗಾರಗಳಲ್ಲಿ ಜಾಗದ ಸಮಸ್ಯೆ ಉಂಟಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಹೀಗೆ ಬಿಟ್ಟರೆ ಕೊರೊನಾ ಸೋಂಕು ಹಳ್ಳಿಗಳಿಗೂ ಹರಡಬಹುದು. ಓರ್ವ ಸೋಂಕಿತನಿಂದ ಮನೆಮಂದಿಗೆಲ್ಲ ಕೊರೊನಾ ತಗುಲುತ್ತದೆ. ಮಾರುಕಟ್ಟೆಗಳು ಸೇರಿ ಇನ್ನಿತರ ಜನನಿಬಿಡ ಸ್ಥಳಗಳಲ್ಲಿ ಕೊರೊನಾ ಸೋಂಕು ಉಲ್ಬಣ ಆಗಬಹುದು. ಹಾಗಾಗಿ ಶೀಘ್ರವೇ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಕೊವಿಡ್ ತಾಂತ್ರಿಕ ಸಮಿತಿ ತಿಳಿಸಿದೆ.
ಇದನ್ನೂ ಓದಿ: ಕೊವಿಡ್ 19 ತಾಂತ್ರಿಕ ಸಲಹಾ ಸಮಿತಿ ನೀಡಿದ ಆತಂಕಕಾರಿ ವರದಿ ಇದು..; ಕಠಿಣ ನಿಯಮ ಜಾರಿಗೊಳಿಸದೆ ಇದ್ರೆ ಅಪಾಯ ತಪ್ಪಿದ್ದಲ್ಲ
ಸಿಎಂ ಯಡಿಯೂರಪ್ಪ ಮೊಮ್ಮಗಳು-ಅಳಿಯಗೆ ಕೊರೊನಾ ಪಾಸಿಟಿವ್; ಮೂವರಿಗೂ ಅಕ್ಕಪಕ್ಕದ ಬೆಡ್ಗಳಲ್ಲಿಯೇ ಚಿಕಿತ್ಸೆ