Karnataka By-Election 2021 Voting Day: ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಮುಕ್ತಾಯ
Belagavi Maski Basavakalyan Bypoll 2021 LIVE: ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು ಸಂಜೆ 7 ಗಂಟೆಯ ತನಕವೂ ಮತದಾನ ನಡೆಯಲಿದೆ. ಮೂರು ಕ್ಷೇತ್ರಗಳ ಉಪಚುನಾವಣೆ ಕುರಿತಾದ ಬೆಳವಣಿಗೆಗಳಿಗೆ ಸಂಬಂಧಿಸಿದ ಪ್ರತಿಯೊಂದು ಸುದ್ದಿಯೂ ಈ ಲೈವ್ಬ್ಲಾಗ್ನಲ್ಲಿ ಸಿಗಲಿದೆ.
ಕರ್ನಾಟಕದಲ್ಲಿ ಉಪಚುನಾವಣೆ ಕಾವು ಜೋರಾಗಿದೆ. ಬೆಳಗಾವಿಯ ಲೋಕಸಭಾ ಕ್ಷೇತ್ರ ಹಾಗೂ ಮಸ್ಕಿ, ಬಸವಕಲ್ಯಾಣದ ವಿಧಾನಸಭಾ ಕ್ಷೇತ್ರಗಳಿಗಾಗಿ ನಡೆಯುತ್ತಿರುವ ಉಪಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಕೊರೊನಾ ಎರಡನೇ ಅಲೆ ಆತಂಕದ ನಡುವೆಯೂ ಜನರು ಮತಗಟ್ಟೆಗಳಿಗೆ ಬಂದು ಮತ ಚಲಾವಣೆ ಮಾಡುತ್ತಿದ್ದಾರೆ. ಮತಗಟ್ಟೆಗಳ ಬಳಿ ಕೊರೊನಾ ನಿಯಮ ಪಾಲನೆಯಾಗುವಂತೆ ನಿಗಾ ವಹಿಸಲಾಗುತ್ತಿದೆಯಾದರೂ ಕೆಲವೆಡೆ ಜನರು ನಿರ್ಲಕ್ಷ್ಯ ತೋರಿ, ಕೊವಿಡ್ ನಿಯಮಾವಳಿಗಳನ್ನು ಸಂಪೂರ್ಣ ಗಾಳಿಗೆ ತೂರುತ್ತಿರುವ ಬಗ್ಗೆ ವರದಿ ಬಂದಿದೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಗೋಕಾಕದ ನ್ಯೂ ಇಂಗ್ಲೀಷ್ ಶಾಲೆಯ ಮತಗಟ್ಟೆಗೆ ಆಗಮಿಸಿದ ಜಯಶ್ರೀ ಜಾರಕಿಹೊಳಿ ಮತ ಚಲಾಯಿಸಿದ್ದಾರೆ.
ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳ ಉಪಚುನಾವಣೆ ಸಂಜೆ 7ಕ್ಕೆ ಮುಕ್ತಾಯಗೊಂಡಿದೆ. ಇವಿಎಂ, ವಿವಿ ಪ್ಯಾಟ್ಗಳನ್ನು ಸಿಬ್ಬಂದಿ ಸ್ಟ್ರಾಂಗ್ ರೂಮ್‌ಗೆ ಶಿಫ್ಟ್ ಮಾಡಿದರು.
LIVE NEWS & UPDATES
-
ಮಸ್ಕಿ ಕ್ಷೇತ್ರದ ಮತದಾನ ವಿವರ
ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶೇ 70.30ರಷ್ಟು ಮತದಾನವಾಗಿದೆ.
-
ಬೆಳಗಾವಿಯಲ್ಲಿ ಮತದಾನ ನೀರಸ
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಂಜೆ 5 ಗಂಟೆಯವರೆಗೆ ಶೇ 46.70ರಷ್ಟು ಮತದಾನ ನಡೆದಿದೆ.
-
ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮತದಾನ
ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಯಿಂದ ಗೋಕಾಕ್ನ ಮತಗಟ್ಟೆ ಸಂಖ್ಯೆ 162ರಲ್ಲಿ ಮತದಾನದ ಹಕ್ಕು ಚಲಾಯಿಸಿದರು.
ಬೆಳಗಾವಿ, ಬಸವಕಲ್ಯಾಣಕ್ಕೆ ಹೋಲಿಸಿದರೆ ಮಸ್ಕಿಯಲ್ಲಿ ಉತ್ತಮ ಮತದಾನ
ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಶನಿವಾರ ಮತದಾನ ನಡೆಯುತ್ತಿದೆ. ಸಂಜೆ 4 ಗಂಟೆಯವರೆಗೆ ಶೇ 62.67ರಷ್ಟು ಮತದಾನ ನಡೆದಿದೆ.
ಮಸ್ಕಿಯಲ್ಲಿ ನೀರಸ ಮತದಾನ
ರಾಯಚೂರು: ಮಸ್ಕಿ ಕ್ಷೇತ್ರದ ಉಪ ಚುನಾವಣೆಯ ಮತದಾನ ಮುಕ್ತಾಯವಾಗಲು ಕೇವಲ ಒಂದು ಗಂಟೆ ಬಾಕಿಯಿದೆ. ಸಂಜೆ 7 ಗಂಟೆಗೆ ಮತದಾನ ಮುಕ್ತಾಯವಾಗಲಿದೆ. ಕೆಲ ಮತಗಟ್ಟೆಗಳತ್ತ ಜನರು ಸುಳಿಯುತ್ತಿಲ್ಲ.
ಬಸವಕಲ್ಯಾಣ: ಸಂಜೆ 5ರವರೆಗೆ ಶೇ 52.40 ಮತದಾನ
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಂಜೆ 5 ಗಂಟೆಯವರೆಗೆ ಶೇ 52.40ರಷ್ಟು ಮತದಾನವಾಗಿದೆ.
ಮಸ್ಕಿಯಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಶೇ 52.56 ಮತದಾನ
ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಉಪಚುನಾವಣೆಗೆ ಮಧ್ಯಾಹ್ನ 3 ಗಂಟೆಯವರೆಗೆ ಶೇ 52.56ರಷ್ಟು ಮತದಾನವಾಗಿದೆ. ಬೆಳಗಾವಿ ಮತ್ತು ಬಸವಕಲ್ಯಾಣಕ್ಕೆ ಹೋಲಿಸಿದರೆ ಮಸ್ಕಿಯಲ್ಲಿ ಉತ್ತಮ ಮತದಾನವಾಗಿದೆ.
ಮಸ್ಕಿ: ಮತದಾನ ಕೇಂದ್ರದಲ್ಲಿ ಮೊಬೈಲ್ ಬಳಕೆ ವಿವಾದ
ಮಸ್ಕಿ: ತಾಲ್ಲೂಕಿನ ವಟಗಲ್ ಗ್ರಾಮದ ಮತಗಟ್ಟೆ 8ರಲ್ಲಿ ಉಪಚುನಾವಣೆ ಮತದಾನ ವೇಳೆ ಮೊಬೈಲ್ ಬಳಕೆ ಮಾಡಿರುವ ಮತದಾರ, ಮತ ಹಾಕಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ನಡೆದಿದೆ. ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬಸವರಾಜ ಮತ ಹಾಕಿದ ವಿಡಿಯೊ ವೈರಲ್ ಆಗಿದೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳಗೆ ಮತ ಹಾಕಿ ವಿಡಿಯೊ ಮಾಡಿಕೊಂಡಿದ್ದಾನೆ.
ಬೆಳಗಾವಿ: ಮಧ್ಯಾಹ್ನ 3 ಗಂಟೆವರೆಗೆ ಶೇ 35.55 ಮತದಾನ
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಮಧ್ಯಾಹ್ನ 3 ಗಂಟೆವರೆಗೆ ಶೇ 35.55ರಷ್ಟು ಮತದಾನ.
ಬಸವಕಲ್ಯಾಣ ಕ್ಷೇತ್ರ: 3 ಗಂಟೆಗೆ ಶೇ 37.73 ಮತದಾನ
ಬೀದರ್ ಜಿಲ್ಲೆ ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ 37.73ರಷ್ಟು ಮತದಾನವಾಗಿದೆ.
ಎಂಇಎಸ್ ಅಭ್ಯರ್ಥಿ ಮತ ಹಾಕುವ ವಿಡಿಯೋ ವೈರಲ್
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿ ಮತ ಹಾಕುವ ವಿಡಿಯೋ ವೈರಲ್ ಆಗಿದೆ. ಮತದಾನ ಪ್ರಕ್ರಿಯೆಯ ಗೌಪ್ಯತೆ ಕಾಪಾಡುವ ಬದಲು ಮತ ಚಲಾಯಿಸುವುದನ್ನು ವಿಡಿಯೋ ಮಾಡಿ ಹರಿಬಿಡಲಾಗಿದೆ.
ಅಂಚೆ ಮತದ ಮೂಲಕ ರಮೇಶ್ ಜಾರಕಿಹೊಳಿ ಮತದಾನ
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಂಚೆ ಮತದ ಮೂಲಕ ಹಕ್ಕು ಚಲಾಯಿಸಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ರಮೇಶ್ ಜಾರಕಿಹೊಳಿ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಕೊರೊನಾ ಸೋಂಕಿತರಾಗಿರುವ ಹಿನ್ನೆಲೆ ಅಂಚೆ ಮತದಾನ ಮಾಡಿದ್ದಾರೆ ಎಂದು ಹೇಳಲಾಗಿದೆ.
ರಮೇಶ್ ಜಾರಕಿಹೊಳಿ ಪತ್ನಿ ಜಯಶ್ರೀ ಜಾರಕಿಹೊಳಿ ಮತದಾನ
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಆಗಮಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪತ್ನಿ ಜಯಶ್ರೀ ಜಾರಕಿಹೊಳಿ, ಗೋಕಾಕ್ನ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ಮತ ಚಲಾಯಿಸಿದರು.
JDS ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ ಮತದಾನ
ಬಸವಕಲ್ಯಾಣ ಕ್ಷೇತ್ರದ JDS ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ, ತಮ್ಮ ತಾಯಿ ಜತೆಗೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಬಸವಕಲ್ಯಾಣದ ಮತಗಟ್ಟೆ ಸಂಖ್ಯೆ 97ರಲ್ಲಿ ಹಕ್ಕು ಚಲಾವಣೆ ಮಾಡಿದ್ದಾರೆ.
ಪತಿ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ
ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ ನಾರಾಯಣರಾವ್ ಮತದಾನಕ್ಕೂ ಮುಂಚೆ ಪತಿ ನಾರಾಯಣರಾವ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಪುತ್ರ ಗೌತಮ್ ಜತೆ ಮತಗಟ್ಟೆಗೆ ಆಗಮಿಸಿದ ಮಲ್ಲಮ್ಮ, ಬಸವಕಲ್ಯಾಣದ ತ್ರಿಪುರಾಂತ ಮತಗಟ್ಟೆ 115ರಲ್ಲಿ ಹಕ್ಕು ಚಲಾಯಿಸಿದ್ದಾರೆ.
ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆಯಲ್ಲಿ ಬೆಳಗ್ಗೆ 9ರವರೆಗೆ ಶೇಕಡಾ 7.46ರಷ್ಟು ಮತದಾನ
ಬೀದರ್ ಜಿಲ್ಲೆ ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆಯಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 7.46ರಷ್ಟು ಮತದಾನವಾಗಿದೆ.
ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ಎರಡು ಗ್ರಾಮಗಳ ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ. ರಾಮದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಾದ ಚಿಕ್ಕತಡಸಿ ಹಾಗೂ ಹೀರೆತಡಸಿ ಗ್ರಾಮಗಳು ಮಲಪ್ರಭಾ ನದಿ ತಟದಲ್ಲಿದ್ದು, ನೆರೆ ಪ್ರವಾಹದಿಂದ ತತ್ತರಿಸಿ ಹೋಗಿವೆ. ಈ ಕಾರಣಕ್ಕಾಗಿ ಎರಡೂ ಗ್ರಾಮಗಳನ್ನು ಸ್ಥಳಾಂತರಿಸುವಂತೆ ಹಾಗೂ ಇನ್ನಿತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಗ್ರಾಮಸ್ಥರು ಹಲವು ವರ್ಷಗಳಿಂದ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಸರ್ಕಾರ ಈವರೆಗೆ ಸ್ಪಂದಿಸದ ಕಾರಣ ಇಂದು ನಡೆಯುತ್ತಿರುವ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಮಸ್ಕಿಯಲ್ಲಿ ಬೆಳಗ್ಗೆ 9ರವರೆಗೆ ಶೇಕಡಾ 5.12ರಷ್ಟು ಮತದಾನ
ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭೆ ಉಪಚುನಾವಣೆಯಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 5.12ರಷ್ಟು ಮತದಾನವಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಕೇವಲ ಶೇ.5.47ರಷ್ಟು ಮತದಾನ ಆಗಿದೆ. ಮುಂಜಾನೆ ವೇಳೆಯಲ್ಲಿ ಹೆಚ್ಚು ಪ್ರಮಾಣದ ಮತದಾನ ಆಗಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ ಕೊರೊನಾ ಕಾರಣದಿಂದ ಜನರು ಮತಗಟ್ಟೆಯತ್ತ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿಯ ಕುಟುಂಬಸ್ಥರಿಂದ ಮತದಾನ
ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರ ಮೂವರು ಪುತ್ರರು ಮತದಾನಕ್ಕೂ ಮುನ್ನ ಆಂಜನೇಯ ದೇಗುಲಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಪುತ್ರರಾದ ವಿನಾಯಕ ಪಾಟೀಲ್, ಪ್ರಸನ್ನ ಪಾಟೀಲ್, ಚೇತನ ಪಾಟೀಲ್ ಮತ್ತು ಸೊಸೆಯರಾದ ವರ್ಷ ಪಾಟೀಲ್ ಹಾಗೂ ರಾಜೇಶ್ವರಿ ಪಾಟೀಲ್ ಮತ ಚಲಾಯಿಸಿದ್ದಾರೆ.
ಬೆಳಗಾವಿಯಲ್ಲಿ ಪಕ್ಷ, ವೈಯಕ್ತಿಕ ಎರಡೂ ಫ್ಯಾಕ್ಟರ್ ಇವೆ: ಸತೀಶ್ ಜಾರಕಿಹೊಳಿ
ಬೆಳಗಾವಿಯ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸತೀಶ್ ಜಾರಕಿಹೊಳಿ, ಚುನಾವಣೆಯಲ್ಲಿ ತಮ್ಮ ಪರವಾಗಿ ವಾತಾವರಣ ಇರುವುದಾಗಿ ಹೇಳಿದ್ದಾರೆ. ಕನಸಗೇರಿಯಲ್ಲಿ ಈ ಬಗ್ಗೆ ಟಿವಿ9 ಜತೆ ಮಾತನಾಡಿದ ಸತೀಶ್ ಜಾರಕಿಹೊಳಿ, ಬೆಳಗಾವಿಯಲ್ಲಿ ಪಕ್ಷ, ವೈಯಕ್ತಿಕ ಎರಡೂ ಫ್ಯಾಕ್ಟರ್‌ಗಳಿವೆ. ಕೊನೆಯ ಹಂತದಲ್ಲಿ ನಮ್ಮ ಕಾರ್ಯಕರ್ತರು ಮತದಾರರಿಗೆ ಮನವಿಗೆ ಮಾಡುತ್ತಿದ್ದಾರೆ. ಇಲ್ಲಿ ನನ್ನ ಪರವಾಗಿ ವಾತಾವರಣವಿದೆ. ನಮಗೆ ಬೆಳಗಾವಿಯಷ್ಟೇ ಮಸ್ಕಿ ಕ್ಷೇತ್ರದ ಚುನಾವಣೆ ಮುಖ್ಯ, ಹೀಗಾಗಿ ನಾನು ಮಸ್ಕಿ ಕ್ಷೇತ್ರದಲ್ಲಿಯೂ ಪ್ರಚಾರ ಮಾಡಿದ್ದೆ ಎಂದು ತಿಳಿಸಿದ್ದಾರೆ.
ಸೋಂಕಿನ ಬಗ್ಗೆ ಭಯ ಬೇಡ ಧೈರ್ಯದಿಂದ ಬಂದು ಮತ ಚಲಾಯಿಸಿ ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನವಿ
ಕೊರೊನಾ ಸೋಂಕಿನ ಬಗ್ಗೆ ಯಾರೂ ಆತಂಕ ಪಡಬೇಡಿ ಮತಗಟ್ಟೆಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಧೈರ್ಯವಾಗಿ ಬಂದು ನಿಮ್ಮ ಹಕ್ಕು ಚಲಾವಣೆ ಮಾಡಿ ಎಂದು ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಅಂಗಡಿಯಲ್ಲಿ ಕುಳಿತು ಜನರೊಂದಿಗೆ ಮಾತುಕತೆಯಲ್ಲಿ ತೊಡಗಿರುವ ಸತೀಶ್ ಜಾರಕಿಹೊಳಿ
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸತೀಶ್ ಜಾರಕಿಹೊಳಿ ಬೆಳಗ್ಗೆಯಿಂದಲೂ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದು,ಅಂಗಡಿಯಲ್ಲಿ ಜನರೊಂದಿಗೆ ಕುಳಿತು ಮಾತುಕತೆ ನಡೆಸುತ್ತಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸುವಂತೆ ಟ್ವೀಟ್ ಮೂಲಕ ಮನವಿ ಮಾಡಿದ ಬಿ.ಎಸ್.ಯಡಿಯೂರಪ್ಪ
ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಜನರು ಹೆ್ಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಆತ್ಮೀಯ ಮತದಾರ ಬಂಧುಗಳೇ, ಇಂದು ತಪ್ಪದೇ ಮತ ಚಲಾಯಿಸಿ. ಪ್ರಜಾಪ್ರಭುತ್ವದ ಆಧಾರವೇ ಮತದಾನ, ಅದು ನಮ್ಮ ಹಕ್ಕೂ ಹೌದು, ಕರ್ತವ್ಯವೂ ಹೌದು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ನಿಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿ, ಪ್ರಜಾತಂತ್ರವನ್ನು ಬಲಪಡಿಸಿ.
— B.S. Yediyurappa (@BSYBJP) April 17, 2021
ಕೊರೊನಾ ನಿಯಮಾವಳಿಗಳನ್ನು ಪಾಲಿಸಿ ಮತ ಚಲಾಯಿಸಿ
ಕೊರೊನಾ ಹೆಚ್ಚಳ ಹಿನ್ನೆಲೆ ಮತಗಟ್ಟೆಗಳ ಬಳಿಕೊರೊನಾ ನಿಯಮ ಪಾಲನೆ ಕಡ್ಡಾಯವಾಗಿದ್ದು,ಮತದಾರರು ಮಾಸ್ಕ್ ಧರಿಸಿಯೇ ಮತದಾನ ಮಾಡಬೇಕು. ಅಲ್ಲದೇ ಮತಗಟ್ಟೆಗಳ ಬಳಿ ಬಾಕ್ಸ್ ಹಾಕಲಾಗಿದ್ದು, ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗುತ್ತಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಒಟ್ಟು 2,566 ಮತಗಟ್ಟೆಗಳಲ್ಲಿ ಮತದಾನ
ಬೆಳಗಾವಿ ಲೋಕಸಭಾ ಉಪಚುನಾವಣಾ ಕ್ಷೇತ್ರದಲ್ಲಿ ಮತದಾನಕ್ಕೆ ಅನುವು ಮಾಡಿ ಒಟ್ಟು 2,566 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಅದರಲ್ಲಿ 118 ಸೂಕ್ಷ್ಮ, 587ಅತಿ ಸೂಕ್ಷ್ಮ ಹಾಗೂ 16ಸಖಿ ಮತಗಟ್ಟೆಗಳು ಸೇರಿದ್ದು, ಕ್ಷೇತ್ರದಲ್ಲಿ ಒಟ್ಟು 18,07,250 ಮತದಾರರು ಇದ್ದಾರೆ. ಈ ಪೈಕಿ 9,08,103 ಪುರುಷ ಮತದಾರರು, 8,99,091 ಮಹಿಳಾ ಮತದಾರು ಹಾಗೂ 22 ಇತರೆ ಮತದಾರರು ಇದ್ದಾರೆ.
ಬಸವಕಲ್ಯಾಣ ಕ್ಷೇತ್ರದ ಒಟ್ಟು 326 ಮತಗಟ್ಟೆಗಳಲ್ಲಿ ಮತದಾನ
ಕೊರೊನಾ ಹೆಚ್ಚಳ ಹಿನ್ನೆಲೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ 62 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಒಟ್ಟಾರೆ 326 ಮತಗಟ್ಟೆ ಪೈಕಿ 95 ಸೂಕ್ಷ್ಮ, 23 ಸಾಮಾನ್ಯ ಮತಗಟ್ಟೆ ಇವೆ. ಕ್ಷೇತ್ರದಲ್ಲಿನ ಒಟ್ಟು 2,39,782 ಮತದಾರರಿದ್ದು, ಆ ಪೈಕಿ 1,14,794 ಮಹಿಳಾ ಮತದಾರರು, 1,24,984 ಪುರುಷ ಮತದಾರರು ಹಾಗೂ 4 ಇತರೆ ಮತದಾರರು ಇದ್ದಾರೆ.
ಮಸ್ಕಿ ಕ್ಷೇತ್ರದ ಒಟ್ಟು 305 ಮತಗಟ್ಟೆಗಳಲ್ಲಿ ಮತದಾನ
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಚಲಾವಣಾ ಪ್ರಕ್ರಿಯೆ ಆರಂಭವಾಗಿದ್ದು ಒಟ್ಟು 305 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಕೊವಿಡ್ ಹಿನ್ನೆಲೆ ಮಸ್ಕಿ ಕ್ಷೇತ್ರದಲ್ಲಿ 74 ಮತಗಟ್ಟೆಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲಾಗಿದ್ದು, 62 ಸೂಕ್ಷ್ಮ, 7 ಅತಿ ಸೂಕ್ಷ್ಮ, 2 ಸಖಿ, 153 ವೆಬ್ ಕ್ಯಾಸ್ಟಿಂಗ್ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಕ್ಷೇತ್ರದಲ್ಲಿ ಒಟ್ಟು 2,06,429 ಮತದಾರರಿಂದ ಹಕ್ಕುಚಲಾವಣೆ ಆಗಲಿದ್ದು, ಅದರಲ್ಲಿ 1,01,340 ಪುರುಷರು, 1,05,076 ಮಹಿಳಾ ಮತದಾರರು ಇದ್ದಾರೆ. ಚುನಾವಣೆಯಲ್ಲಿ ಕೊರೊನಾ ಪೀಡಿತರು, ಸಂಪರ್ಕಕ್ಕೆ ಬಂದವರಿಗೂ ಅವಕಾಶ ನೀಡಲಾಗಿದ್ದು ಸಂಜೆ 6 ಗಂಟೆ ನಂತರ ಅವರು ಮತಚಲಾಯಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿಗೂ ಕೊರೊನಾ ಸೋಂಕು ದೃಢವಾದ ಹಿನ್ನೆಲೆ ಅವರು ಸಹ ಸಂಜೆ 6 ಗಂಟೆಗೆ ಮತ ಚಲಾಯಿಸಲಿದ್ದಾರೆ.
ಮೂರು ಕ್ಷೇತ್ರಗಳಲ್ಲೂ ಆರಂಭವಾದ ಮತದಾನ ಪ್ರಕ್ರಿಯೆ
ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತ ಚಲಾಯಿಸಲು ಮತದಾರರು ಆಗಮಿಸುತ್ತಿದ್ದು, ಕೊರೊನಾ ನಿಯಮಾವಳಿಗಳು ಪಾಲನೆ ಮಾಡುವಂತೆ ಸೂಚನೆ ನೀಡಲಾಗುತ್ತಿದೆ.
Published On - Apr 17,2021 8:58 PM