ಕಾಂಗ್ರೆಸ್ ಗೃಹಜ್ಯೋತಿ ಯೋಜನೆ; 200 ಯೂನಿಟ್ ಉಚಿತ ವಿದ್ಯುತ್ ಭರವಸೆ ಬಗ್ಗೆ ತಿಳಿಯಲೇಬೇಕಾದ ಮಾಹಿತಿ

|

Updated on: May 15, 2023 | 3:49 PM

ಕಾಂಗ್ರೆಸ್​​ನ ಮೊದಲ ಗ್ಯಾರಂಟಿ ‘ಗೃಹ ಜ್ಯೋತಿ' ಯೋಜನೆ. ಇದರಡಿ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಬೇಕಾಗುತ್ತದೆ. ಈ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

ಕಾಂಗ್ರೆಸ್ ಗೃಹಜ್ಯೋತಿ ಯೋಜನೆ; 200 ಯೂನಿಟ್ ಉಚಿತ ವಿದ್ಯುತ್ ಭರವಸೆ ಬಗ್ಗೆ ತಿಳಿಯಲೇಬೇಕಾದ ಮಾಹಿತಿ
ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಸಂದರ್ಭದ ಚಿತ್ರ
Follow us on

ಪಕ್ಷವು ಘೋಷಿಸಿದ ಐದು ‘ಗ್ಯಾರಂಟಿ’ಗಳು ನಮ್ಮ ಪರವಾಗಿ ಕೆಲಸ ಮಾಡಿವೆ ಮತ್ತು ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಪಡೆಯಲು ಸಹಾಯ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಈ ಮಧ್ಯೆ, ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಎಲ್ಲ ಐದು ಭರವಸೆಗಳನ್ನು ಜಾರಿಗೊಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದಾರೆ. ಈ ವರ್ಷದ ಜನವರಿಯಲ್ಲಿ ಪಕ್ಷವು ಘೋಷಿಸಿದ ಮೊದಲ ಗ್ಯಾರಂಟಿ ‘ಗೃಹ ಜ್ಯೋತಿ’ ಯೋಜನೆ. ಇದರಡಿ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಬೇಕಾಗುತ್ತದೆ. ಈ ಯೋಜನೆ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

ಯಾರಿಗೆಲ್ಲ ಉಚಿತ ವಿದ್ಯುತ್?

ಈ ವರ್ಷದ ಜನವರಿಯಲ್ಲಿ ಕಾಂಗ್ರೆಸ್ ‘ಪ್ರಜಾಧ್ವನಿ ಯಾತ್ರೆ’ಯ ಆರಂಭಿಸಿದಾಗ, ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಿಸಿತ್ತು. ಇದು ಕಾಂಗ್ರೆಸ್​ನ ಮೊದಲ ಗ್ಯಾರಂಟಿಯಾಗಿತ್ತು. ನಮ್ಮ ಮೊದಲ ಗ್ಯಾರಂಟಿ ಗೃಹ ಜ್ಯೋತಿ ಯೋಜನೆಯಿಂದ ಪ್ರತಿ ಮನೆಯನ್ನು ಬೆಳಕಿನಿಂದ ಬೆಳಗಿಸಲು ಬಯಸುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಈಚೆಗೆ ಬೆಳಗಾವಿಯಲ್ಲಿ ಹೇಳಿದ್ದರು.

ಇದನ್ನೂ ಓದಿ: ವಿದ್ಯುತ್ ಬಿಲ್ ಪಾವತಿಗೆ ಗ್ರಾಮಸ್ಥರ ನಿರಾಕರಣೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯಲ್ಲ ಎಂದ ಜನ, ವಿಡಿಯೋ ವೈರಲ್

ಉಚಿತ ವಿದ್ಯುತ್ ದಲಿತರು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರಿಗೆ ಸೀಮಿತವಾಗಿರದೆ ಎಲ್ಲರಿಗೂ ನೀಡಲಾಗುವುದು. ಯಾವುದೇ ಬೆಲೆ ತೆತ್ತಾದರೂ ಭರವಸೆ ಈಡೇರಿಸುತ್ತೇವೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಹೇಳಿದ್ದಾರೆ.

ಆದರೆ, 200 ಯೂನಿಟ್ ಮೇಲ್ಪಟ್ಟು ವಿದ್ಯುತ್ ಬಳಸಿದಲ್ಲಿ ಹೆಚ್ಚಿನ ಯೂನಿಟ್​ಗೆ ಮಾತ್ರ ದರ ವಿಧಿಸುತ್ತಾರೆಯೇ ಅಥವಾ 200ಕ್ಕಿಂತ ಕಡಿಮೆ ಬಳಸಿದವರಿಗೆ ಮಾತ್ರ ಉಚಿತ ಭರವಸೆ ಅನ್ವಯವಾಗುತ್ತದೆಯೇ ಎಂಬುದನ್ನು ಪಕ್ಷ ಇನ್ನೂ ಸ್ಪಷ್ಟಪಡಿಸಿಲ್ಲ.

ಇದನ್ನೂ ಓದಿ: Electricity Price Hike: ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ, ಎಷ್ಟು ಗೊತ್ತಾ?

ಉಚಿತ ವಿದ್ಯುತ್ ಯೋಜನೆ ಇದೇ ಮೊದಲಲ್ಲ

ಉಚಿತ ವಿದ್ಯುತ್ ಯೋಜನೆ ಘೋಷಣೆ ಇದೇ ಮೊದಲೇನಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಉಚಿತ ವಿದ್ಯುತ್ ಯೋಜನೆ ಘೋಷಿಸಿ ಅನುಷ್ಠಾನಗೊಳಿಸಿದ್ದರು. ದೆಹಲಿ ಸರ್ಕಾರವು ಪ್ರತಿ ಮನೆಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಮತ್ತು 201 ರಿಂದ 400 ಯೂನಿಟ್‌ಗಳಿಗೆ 50 ಪ್ರತಿಶತ ಸಬ್ಸಿಡಿಯನ್ನು ಪರಿಚಯಿಸಿತ್ತು. ಆದರೆ ಕಳೆದ ವರ್ಷ ಕೇಜ್ರಿವಾಲ್ ಅವರು ಅರ್ಜಿ ಸಲ್ಲಿಸುವ ಜನರಿಗೆ ಮಾತ್ರ ಸಬ್ಸಿಡಿ ಸಿಗುತ್ತದೆ ಎಂದು ಘೋಷಿಸಿದ್ದರು. ಸಬ್ಸಿಡಿಯನ್ನು ಬಿಟ್ಟುಕೊಡಲು ಅನುಕೂಲಕರ ಸ್ಥಿತಿಯಲ್ಲಿರುವ ಕುಟುಂಬಗಳನ್ನು ಮನವೊಲಿಸಲು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿತ್ತು.

ಎರಡು ದಿನ ಹಿಂದಷ್ಟೇ ವಿದ್ಯುತ್ ದರ ಹೆಚ್ಚಳ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರವನ್ನು ಪ್ರತಿ ಯೂನಿಟ್​ಗೆ ಸರಾಸರಿ 70 ಪೈಸೆ ಹೆಚ್ಚಳ ಮಾಡಲು ಮೇ 12ರಂದು ಅನುಮೋದನೆ ನೀಡಿತ್ತು. ಪರಿಷ್ಕೃತ ದರ ಏಪ್ರಿಲ್​ ತಿಂಗಳಿಂದ ಪೂರ್ವಾನ್ವಯವಾಗಲಿದೆ.

Published On - 3:40 pm, Mon, 15 May 23