ಬೆಂಗಳೂರು: ಅವ್ಯವಹಾರ ಆರೋಪ ಸಾಬೀತು ಹಿನ್ನೆಲೆ ವಿಧಾನಸಭೆ ಕಾರ್ಯದರ್ಶಿ S.ಮೂರ್ತಿಗೆ ಹಿಂಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. ಬೆಳಗಾವಿ ಸುವರ್ಣಸೌಧದಲ್ಲಿ 2016, 2017ನೇ ಸಾಲಿನಲ್ಲಿ ಅಧಿವೇಶನದ ಸಿದ್ಧತೆ ಹೆಸರಲ್ಲಿ ಅವ್ಯವಹಾರ ನಡೆದಿತ್ತು. ಈ ಹಿನ್ನೆಲೆ ಕಳೆದ ಮೂರು ವರ್ಷದ ಹಿಂದೆ ಅಮಾನತುಗೊಳಿಸಲಾಗಿತ್ತು. ಈಗ ವಿಧಾನಸಭೆ ಅಮಾನತಿನಲ್ಲಿರುವ ಕಾರ್ಯದರ್ಶಿ ಎಸ್. ಮೂರ್ತಿ ಮೇಲಿನ ಆರೋಪಗಳು ಸಾಬೀತಾಗಿವೆ. ಹೀಗಾಗಿ ಕಾರ್ಯದರ್ಶಿ S.ಮೂರ್ತಿಗೆ ಹಿಂಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.
ಇನ್ನು ಮುಂದೆ ಅತಿ ಕಿರಿಯ ಅಧೀನ ಕಾರ್ಯದರ್ಶಿಯಾಗಿ ಮೂರ್ತಿ ಅವರು ಸೇವೆಗೆ ಹಾಜರಾಗಬಹುದು. ಕಳೆದ ಮೂರೂವರೆ ವರ್ಷದಿಂದ ಅಮಾನತಿನಲ್ಲಿದ್ದ ಅವಧಿಯನ್ನು ಅಮಾನತು ಎಂದೇ ಪರಿಗಣಿಸಬೇಕು. ಅಮಾನತು ಅವಧಿಯನ್ನು ಸೇವಾ ಹಿರಿತನ ಸೇರಿದಂತೆ ಯಾವುದಕ್ಕೂ ಪರಿಗಣಿಸಬಾರದು ಎಂದು ವಿಧಾನಸಭೆ ಶಿಸ್ತು ಪ್ರಾಧಿಕಾರ ಆದೇಶ ಹೊರಡಿಸಿದೆ. ಅಧೀನ ಕಾರ್ಯದರ್ಶಿ ಹುದ್ದೆ ನೀಡಿ ಕರ್ತವ್ಯಕ್ಕೆ ಹಾಜರಾಗಲು ವಿಧಾನಸಭೆ ಶಿಸ್ತು ಪ್ರಾಧಿಕಾರದ ವಿಶೇಷ ಮಂಡಳಿ ಆದೇಶ ನೀಡಿದೆ. ಹಿಂಬಡ್ತಿ ನೀಡಿ, ಮೂರನೆ ದರ್ಜೆಯ ಅಧೀನ ಕಾರ್ಯದರ್ಶಿ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದೆ. ಅಧೀನ ಕಾರ್ಯದರ್ಶಿ ಹುದ್ದೆಯ ಕೊನೆಯ ಶ್ರೇಣಿಯಲ್ಲಿ ಕರ್ತವ್ಯ ನಿರ್ವಹಿಸುವುದು ಹಾಗೂ ಅಧೀನ ಕಾರ್ಯದರ್ಶಿ ಹುದ್ದೆಯ ವೇತನ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.