545 ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ; ಮುನ್ನಾಭಾಯಿ MBBS ಸ್ಟೈಲ್ನಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು
ಏಪ್ರಿಲ್ 21ರಂದು ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಗನ್ಮ್ಯಾನ್ ಹಯ್ಯಾಳಿ ದೇಸಾಯಿಯನ್ನು CID ಬಂಧಿಸಿತ್ತು. ಹಯ್ಯಾಳಿ ದೇಸಾಯಿ ಕೂಡ ಮುನ್ನಾಭಾಯಿ MBBS ಸ್ಟೈಲ್ನಲ್ಲಿ ಹೊರಗಿನವರ ನೆರವು ಪಡೆದು ಪರೀಕ್ಷೆ ಬರೆದಿದ್ದರು.
ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಬಗೆದಷ್ಟು ಪಿಎಸ್ಐ ಪರೀಕ್ಷಾ ಅಕ್ರಮಗಳು ಹೊರಬರುತ್ತಿವೆ. ಸಿಐಡಿ ತನಿಖೆ ವೇಳೆ ಮತ್ತೊಂದು ರೀತಿಯ ಪರೀಕ್ಷಾ ಅಕ್ರಮ ಪತ್ತೆಯಾಗಿದೆ. ಮುನ್ನಾಭಾಯಿ MBBS ಸ್ಟೈಲ್ನಲ್ಲಿ ಹಲವರು ಪರೀಕ್ಷೆ ಬರೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೆಲ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆದಿದ್ದಾರೆ.
ಏಪ್ರಿಲ್ 21ರಂದು ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಗನ್ಮ್ಯಾನ್ ಹಯ್ಯಾಳಿ ದೇಸಾಯಿಯನ್ನು CID ಬಂಧಿಸಿತ್ತು. ಹಯ್ಯಾಳಿ ದೇಸಾಯಿ ಕೂಡ ಮುನ್ನಾಭಾಯಿ MBBS ಸ್ಟೈಲ್ನಲ್ಲಿ ಹೊರಗಿನವರ ನೆರವು ಪಡೆದು ಪರೀಕ್ಷೆ ಬರೆದಿದ್ದರು. ಅಕ್ರಮದಲ್ಲಿ ಕಲಬುರಗಿಯ ಮತ್ತೋರ್ವ ಪ್ರಭಾವಿ ಮುಖಂಡ ಭಾಗಿಯಾಗಿರುವುದು ಪತ್ತೆಯಾಗಿದೆ. ಹಯ್ಯಾಳಿ ದೇಸಾಯಿ ಮಾಹಿತಿ ಮೇರೆಗೆ ಕಿಂಗ್ಪಿನ್ಗಾಗಿ ಹುಡುಕಾಟ ನಡೆಯುತ್ತಿದೆ. ಪರೀಕ್ಷಾ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಶೋಧ ಆರಂಭಿಸಿದೆ. ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮವೆಸಗಿರುವ ಕಿಂಗ್ಪಿನ್, ವಾಮಮಾರ್ಗದಲ್ಲಿ ಹಲವರಿಗೆ ಉದ್ಯೋಗ ಕೊಡಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಸ್ಪರ್ಧಿಸಲು ಈ ಕಿಂಗ್ಪಿನ್ ಸಿದ್ಧತೆ ನಡೆಸಿದ್ದಾರೆ. ಸದ್ಯ ಕಿಂಗ್ಪಿನ್ ಬಂಧಿಸಲು ಸಿಐಡಿ ತಂಡ ಮಾಹಿತಿ ಸಂಗ್ರಹಿಸುತ್ತಿದೆ.
ಇನ್ನು ಮತ್ತೊಂದು ಕಡೆ ಸಿಐಡಿ ಪೊಲೀಸರು ಪ್ರಮುಖ ಆರೋಪಿಗಳನ್ನು ಇನ್ನೂ ಪತ್ತೆಹಚ್ಚಿಲ್ಲ. ತಲೆಮರೆಸಿಕೊಂಡಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ & ಗ್ಯಾಂಗ್ ಇನ್ನೂ ಪತ್ತೆ ಮಾಡಿಲ್ಲ. ದಿವ್ಯಾ ಹಾಗರಗಿ ಒಡೆತನದ ಕಲಬುರಗಿ ನಗರದ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯಲ್ಲಿ ಪರೀಕ್ಷಾ ಅಕ್ರಮ ನಡೆದಿತ್ತು. ಹೆಚ್ಎಂ ಕಾಶಿನಾಥ್, ಮತ್ತಿಬ್ಬರು ಕೊಠಡಿ ಮೇಲ್ವಿಚಾರಕಿಯರು ನಾಪತ್ತೆಯಾಗಿದ್ದಾರೆ. ನೀರಾವರಿ ಇಲಾಖೆ ಇಂಜಿನಿಯರ್ ಮಂಜುನಾಥ್ ಕೂಡ ನಾಪತ್ತೆಯಾಗಿದ್ದು ಐವರು ಆರೋಪಿಗಳಿಗಾಗಿ ಸಿಐಡಿ ಟೀಂ ಹುಡುಕಾಟ ನಡೆಸುತ್ತಿದೆ.
ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆದಿದ್ದ ವಿಶಾಲ್ ವಶಕ್ಕೆ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಸಿಐಡಿ ವಿಚಾರಣೆ ನಡೆಸುತ್ತಿದೆ. ಕಲಬುರಗಿಯ ಅಭ್ಯರ್ಥಿ ವಿಶಾಲ್ ಶಿರೂರ್ ಸಿಐಡಿ ವಶಕ್ಕೆ ಪಡೆದಿದ್ದಾರೆ. ವಿಶಾಲ್ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆದಿದ್ದ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ವಿಶಾಲ್ ಹೆಸರು ಪ್ರಕಟವಾಗಿತ್ತು. ವಿಶಾಲ್ ಶಿರೂರ್ 200 ಅಂಕಗಳಿಗೆ 147 ಅಂಕ ಪಡೆದಿದ್ದು ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಆಯ್ಕೆಯಾಗಿದ್ದಾನೆ. ಈವರೆಗೆ ಸಿಐಡಿ ಅಧಿಕಾರಿಗಳು 10 ಜನರನ್ನು ಬಂಧಿಸಿದ್ದಾರೆ.
ಪೊಲೀಸ್ ಆಗಲು ಪ್ರತಿಭೆ ಪ್ರಾಮಾಣಿಕತೆ ದಕ್ಷತೆ ಬೇಕು ಇನ್ನು ಈ ಅಕ್ರಮ ಸಂಬಂಧ ಮೈಸೂರಿನಲ್ಲಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ನಿಜಕ್ಕೂ ದುರಂತ ವಿಚಾರ ಕೇಳಿ ನನಗೆ ಶಾಕ್ ಆಯ್ತು. ಪೊಲೀಸ್ ಆಗಲು ಪ್ರತಿಭೆ ಪ್ರಾಮಾಣಿಕತೆ ದಕ್ಷತೆ ಬೇಕು. ದುಡ್ಡಿನಿಂದ ಬಂದರೆ ಹೇಗೆ? ಪ್ರಾಮಾಣಿಕವಾಗಿ ಕೆಲಸ ಮಾಡಲು ಆಗುತ್ತದಾ? ಜನ ಸಾಮಾನ್ಯರಿಗೆ ಹೇಗೆ ನ್ಯಾಯ ಸಿಗುತ್ತದೆ? ನಾನು ಪೊಲೀಸ್ ಪರೀಕ್ಷೆ ಬರೆದಾಗ ಈ ರೀತಿ ಇರಲಿಲ್ಲ. ಯಾರು ಶಾಮೀಲಾಗಿದ್ದಾರೆ ಅವರ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಯಾರು ಅಕ್ರಮ ಎಸಗಿದ್ದಾರೆ ಎಂದು ಸಮಗ್ರ ತನಿಖೆ ನಡೆಸುತ್ತೇವೆ 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಪ್ರಾಥಮಿಕ ಮಾಹಿತಿ ಬಂದ ನಂತರ ಒಂದು ವಿಚಾರಣೆ ನಡೆಸಿದ್ದೆವು. ಸಾಕ್ಷ್ಯಾಧಾರ ಸಿಕ್ಕ ತಕ್ಷಣ ಎಫ್ಐಆರ್ ದಾಖಲು ಮಾಡಿದ್ದೆವು. ಯಾರು ಅಕ್ರಮ ಎಸಗಿದ್ದಾರೆ ಎಂದು ಸಮಗ್ರ ತನಿಖೆ ನಡೆಸುತ್ತೇವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿದ್ದವರನ್ನು ಈಗಾಗಲೇ ಬಂಧಿಸಿದ್ದೇವೆ. ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ. ತಪ್ಪಿತಸ್ಥರನ್ನು ಜೀವನ ಪರ್ಯಂತ ಅನರ್ಹಗೊಳಿಸುತ್ತೇವೆ. ಪ್ರಕರಣದಲ್ಲಿ ಭಾಗಿಯಾದ ಯಾರೊಬ್ಬರನ್ನೂ ಬಿಡುವುದಿಲ್ಲ. ಪ್ರತಿಯೊಂದು ಆನ್ಸರ್ಶೀಟ್ 3 ಬಾರಿ ಚೆಕ್ ಮಾಡುತ್ತಿದ್ದೇವೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಯಾವುದೇ ಸಮಸ್ಯೆಯಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದರು.
ದಿವ್ಯಾ ಹಾಗರಗಿ ಬೆಂಬಲಕ್ಕೆ ನಿಲ್ಲದಂತೆ ಶಾಸಕರಿಗೆ ಸಿಎಂ ಸೂಚನೆ ಕಲಬುರಗಿ ಜಿಲ್ಲೆಯ ಶಾಸಕರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಪಿಎಸ್ಐ ಪರೀಕ್ಷೆಯ ಅಕ್ರಮದ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ದಿವ್ಯಾ ಹಾಗರಗಿ ಬೆಂಬಲಕ್ಕೆ ನಿಲ್ಲದಂತೆ ಶಾಸಕರಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ದಿವ್ಯಾ ಹಾಗರಗಿಯಿಂದ ಬಿಜೆಪಿಗೆ ಸಾಕಷ್ಟು ಡ್ಯಾಮೇಜ್ ಆಗಿದೆ. ದಿವ್ಯಾ ಹಾಗರಗಿಯಿಂದ ದೂರ ಇರುವಂತೆ ಶಾಸಕರಿಗೆ ಸೂಚಿಸಿದ್ದಾರೆ. ಆದಷ್ಟು ಬೇಗ ದಿವ್ಯಾ ಬಂಧನಕ್ಕೆ ಶಾಸಕರಿಂದ ಸಿಎಂಗೆ ಒತ್ತಾಯ ಕೇಳಿ ಬಂದಿದೆ. ದಿವ್ಯಾ ಹಾಗರಗಿಯಿಂದ ಪಕ್ಷ, ನಮಗೆ ಸಾಕಷ್ಟು ಮುಜುಗರವಾಗಿದೆ. ಹೀಗಾಗಿ ದಿವ್ಯಾ ಹಾಗರಗಿ ಬಂಧಿಸುವಂತೆ ಸಿಎಂಗೆ ಶಾಸಕರು ಆಗ್ರಹಿಸಿದ್ದು ಈ ಮೂಲಕ ಯಾರನ್ನೂ ರಕ್ಷಿಸುವುದಿಲ್ಲ ಎನ್ನುವ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ಇಂದಿನಿಂದ “ಮನೆ ಮನೆ ರಾಮ” ಜಾಗೃತಿ ಅಭಿಯಾನ; ಲೌಡ್ ಸ್ಪೀಕರ್ ತೆರವಿಗೆ ಒತ್ತಾಯ
ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ: ಸಿಐಡಿ ವಿಚಾರಣೆಗೆ ಐವರು ಅಭ್ಯರ್ಥಿಗಳು ಗೈರು
Published On - 8:16 am, Fri, 22 April 22