ಪಿಎಸ್‌ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ: ಸಿಐಡಿ ವಿಚಾರಣೆಗೆ ಐವರು ಅಭ್ಯರ್ಥಿಗಳು ಗೈರು
ಪ್ರತಿಯೊಬ್ಬರನ್ನೂ ಸಿಐಡಿಯ ವಿಚಾರಣಾ ಕೊಠಡಿಗೆ ಕರೆಸಿ ದಾಖಲೆ ಪರಿಶೀಲಿಸಲಾಯಿತು. ಪ್ರತಿ ಅಭ್ಯರ್ಥಿಯಿಂದ ಹೇಳಿಕೆ ಬರೆಸಿಕೊಳ್ಳುವುದರ ಜೊತೆಗೆ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಯಿತು.
ಬೆಂಗಳೂರು: ಪಿಎಸ್‌ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಿಚಾರಣೆ ಚುರುಕಾಗಿ ನಡೆಯುತ್ತಿದೆ. ಈ ಸಂಬಂಧ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿರುವ ಐವರಿಗೆ ನೊಟೀಸ್ ಜಾರಿದ್ದರೂ, ಅವರು ವಿಚಾರಣೆಗೆ ಹಾಜರಾಗಿಲ್ಲ. ಒಟ್ಟು 50 ಅಭ್ಯರ್ಥಿಗಳಿಗೆ ನೊಟೀಸ್ ಜಾರಿ ಮಾಡಿದ್ದ ಸಿಐಡಿ ತಂಡವು ವಿಚಾರಣೆಗೆ ಹಾಜರಾಗುವಾಗ ಹಾಲ್ಟಿಕೆಟ್, ಒಎಂಆರ್ ಶೀಟ್ನ ಕಾರ್ಬನ್ ಪ್ರತಿ ತರಬೇಕು ಎಂದು ಸೂಚಿಸಿತ್ತು. ಅದರಂತೆ 45 ಅಭ್ಯರ್ಥಿಗಳು ವಿಚಾರಣೆಗೆ ಹಾಜರಾದರು. ಆದರೆ ಐವರು ಗೈರಾಗಿದ್ದರು. ಸಿಐಡಿ ಡಿವೈಎಸ್ಪಿಗಳಾದ ನರಸಿಂಹಮೂರ್ತಿ ಮತ್ತು ಪಿ.ಪ್ರಕಾಶ್ ರಾಥೋಡ್ ನೇತೃತ್ವದ ತಂಡವು ಸತತ ಮೂರು ಗಂಟೆಗಳ ಕಾಲ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿತು. ಪ್ರತಿಯೊಬ್ಬರನ್ನೂ ಸಿಐಡಿಯ ವಿಚಾರಣಾ ಕೊಠಡಿಗೆ ಕರೆಸಿ ದಾಖಲೆ ಪರಿಶೀಲಿಸಲಾಯಿತು. ಪ್ರತಿ ಅಭ್ಯರ್ಥಿಯಿಂದ ಹೇಳಿಕೆ ಬರೆಸಿಕೊಳ್ಳುವುದರ ಜೊತೆಗೆ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಯಿತು. ಇಂದು ಸಂಜೆಯವರೆಗೂ ಅಭ್ಯರ್ಥಿಗಳ ವಿಚಾರಣೆ ಮುಂದುವರಿಯುವ ಸಾಧ್ಯತೆಯಿದೆ. ವಿಚಾರಣೆ ನಡೆಸಲು ಸಾಧ್ಯವಾಗದವರಿಗೆ ಮತ್ತೆ ನಾಳೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.
ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದನ್ನು ಖಂಡಿಸಿ ಧಾರವಾಡದಲ್ಲಿ ನೂರಾರು ಅಭ್ಯರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು. ಧಾರವಾಡ ನಗರದಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಸಿದ ಅಭ್ಯರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿ, ಸಮಗ್ರ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಹಗರಣಗಳ ಸರ್ಕಾರ: ಬಿ.ಆರ್.ಪಾಟೀಲ
ಕಲಬುರಗಿ: 545 ಪಿಎಸ್‌ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಬಿ.ಆರ್.ಪಾಟೀಲ, ಬಿಜೆಪಿಯ ಅನೇಕ ಮುಖಂಡರು ದಿವ್ಯಾ ಮನೆಗೆ ಹೋಗಿದ್ದಾರೆ. ಆದರೆ ಈಗ ದಿವ್ಯಾ ಹಾಗರಗಿ ಬಿಜೆಪಿಗೆ ಸಂಬಂಧಪಡದವರು ಎನ್ನುವ ಮೂಲಕ ಅಂತರ ಕಾಪಾಡಿಕೊಳ್ಳಲು ಮುಂದಾಗಿದ್ದಾರೆ. ಕಲಬುರಗಿಗೆ ನಾಳೆ ಸಿಎಂ ಬೊಮ್ಮಾಯಿ ಬರುತ್ತಿದ್ದಾರೆ. ಅಷ್ಟರೊಳಗೆ ದಿವ್ಯಾ ಬಂಧನವಾಗಬೇಕು. ಪ್ರಕರಣವನ್ನು ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ದಿವ್ಯಾ ಬಂಧನವಾಗದಿದ್ದರೆ, ಈ ಹಗರಣಕ್ಕೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಸಹಕಾರವಿದೆ ಎಂದೇ ತಿಳಿಯಬೇಕಾಗುತ್ತದೆ. ದಿವ್ಯಾ ಹಾಗರಗಿ ಅವರಿಗೆ ಮೊದಲಿನಿಂದಲು ರಾಜಕೀಯ ನಂಟಿದೆ. ಹೀಗಾಗಿ ದಿವ್ಯಾ ಹಾಗರಗಿ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೋಗಿ ಸತ್ಕಾರ ಮಾಡಿಸಿಕೊಂಡಿದ್ದಾರೆ. ಸಿಐಡಿಯಿಂದ ಸತ್ಯ ಹೊರಬರಲಾರದು ಎಂದು ಅಭಿಪ್ರಾಯಪಟ್ಟರು.
ದಿಂಗಾಲೇಶ್ವರ ಸ್ವಾಮೀಜಿ ರಾಜ್ಯ ಸರ್ಕಾರದ ಕಮಿಷನ್ ದಂದೆ ಬಗ್ಗೆ ಮಾತನಾಡಿದ್ದಾರೆ. ಕೆಲ ಸಚಿವರು ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮಾಡಿದವರು ಹಣ ಪಡೆದಿದ್ದರ ಬಗ್ಗೆ ರಸೀದಿ ನೀಡ್ತಾರಾ? ಮಠಮಾನ್ಯಗಳಿಂದ ಕಮಿಷನ್ ಹೊಡೆದ ಕೀರ್ತಿ ಈ ಸರ್ಕಾರಕ್ಕೆ ಇದೆ ಎಂದು ದೂರಿದರು.
ಕಣ್ಣೊರೆಸುವ ತನಿಖೆ: ಈಶ್ವರ ಖಂಡ್ರೆ
ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕುರಿತು ರಾಯಚೂರು ನಗರದಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ತಾತ್ಕಾಲಿಕ ಪಟ್ಟಿ ಬಿಡುಗಡೆ ಬಳಿಕ ಬಳಿಕ ಅಕ್ರಮ ಬಯಲಾಗಿದೆ. ಪಿಎಸ್‌ಐ ನೇಮಕಾತಿಯ ಅಕ್ರಮದ ತನಿಖೆ ವಿಳಂಬ ಮಾಡಿದ್ದರು. ಇದೀಗ ಜನರ ಕಣ್ಣೋರೆಸಲು ಸಿಓಡಿ ಮೂಲಕ ತನಿಖೆ ನಡೆಸುತ್ತಿದ್ದಾರೆ. ಈ ಹಗರಣದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು, ಇತರ ಕೆಲ ಉನ್ನತ ಅಧಿಕಾರಿಗಳು ಭಾಗಿಯಾಗಿರುವ ಶಂಕೆಯಿದೆ ಎಂದರು. ಗುತ್ತಿಗೆದಾರರಿಂದ ಶೇ 40ರ ಕಮಿಷನ್ ಕುರಿತು ಪ್ರತಿಕ್ರಿಯಿಸಿದ ಅವರು, ಬೇಕುಬೇಕಾದವರಿಗೆ ಮಾತ್ರವೇ ಟೆಂಡರ್ ಕೊಡುತ್ತಿದ್ದಾರೆ. ಪ್ರತಿ ಹಂತದಲ್ಲಿಯೂ ಕಮಿಷನ್ ಕೇಳುತ್ತಾರೆ. ಮಠಗಳಿಗೆ ಮಂಜೂರಾಗುವ ಅನುದಾನ ಬಿಡುಗಡೆಗೂ ಕಮಿಷನ್ ಕೇಳುತ್ತಾರೆಂದು ಸ್ವಾಮೀಜಿಯೊಬ್ಬರು ದೂರಿದ್ದರು. ಇಂಥ ನಾಚಿಕೆಗೇಡುತನದ ಸರ್ಕಾರ ಇರಬೇಕೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಕಲಬುರಗಿಯಲ್ಲಿ 545 ಪಿಎಸ್‌ಐಗಳ ನೇಮಕಾತಿಯಲ್ಲಿ ಭಾರೀ ಅಕ್ರಮ; 8 ಜನ ಅರೆಸ್ಟ್, ಎಸ್ಕೇಪ್ ಆದವರಿಗಾಗಿ ತಲಾಶ್
ಇದನ್ನೂ ಓದಿ: ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಮನೆಯಲ್ಲಿ ಸಿಐಡಿ ತಂಡ ಪರಿಶೀಲನೆ; ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರೋ ಶಂಕೆ