ಕಲಬುರಗಿ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲೇ ಭಾರೀ ಗೋಲ್ಮಾಲ್ ನಡೆದಿರೋ ಆರೋಪ ಕೇಳಿಬಂದಿದೆ. ಅದೇ ಗೋಲ್ಮಾಲ್ ರಹಸ್ಯ ಕೆದಕೋಕೆ ಸಿಐಡಿ ಟೀಂ ಫೀಲ್ಡ್‌ಗೆ ಇಳಿಯುತ್ತಿದ್ದಂತೆ ದೊಡ್ಡ ದೊಡ್ಡ ಕುಳಗಳೇ ಬಲೆ ಬೀಳ್ತಿವೆ. ಅದ್ರಲ್ಲೂ ಅಕ್ರಮದಲ್ಲಿ ಬಿಜೆಪಿ ನಾಯಕಿಯ ಹೆಸರು ಕೇಳಿ ಬಂದಿದೆ. ಪ್ರಕರಣ ಹೊರಬರ್ತಿದ್ದಂತೆ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮತ್ತು ಆಕೆಯ ಸ್ನೇಹಿತರು ಎಸ್ಕೇಪ್ ಆಗಿದ್ದಾರೆ.
ರಾಜ್ಯದಲ್ಲಿ 545 ಪಿಎಸ್‌ಐಗಳ ನೇಮಕಾತಿಯಲ್ಲಿ ಭಾರೀ ಅಕ್ರಮವಾಗಿದೆ ಅನ್ನೋ ಆರೋಪ ಕೇಳಿ ಬರ್ತಿದ್ದಂತೆ ಸರ್ಕಾರ ಪ್ರಕರಣವನ್ನ ಸಿಐಡಿಗೆ ವಹಿಸಿದೆ. ಕೇಸ್ ದಾಖಲಿಸಿಕೊಂಡು ಅಖಾಡಕ್ಕಿಳಿದ ಸಿಐಡಿ ತಂಡ, ಈ ಅಕ್ರಮದ ಕೇಂದ್ರ ಬಿಂದು ಕಲಬುರಗಿ ಅನ್ನೋದನ್ನ ಕನ್‌ಫರ್ಮ್ ಮಾಡಿಕೊಂಡಿತ್ತು. ಆ ಬಳಿಕ ಪರೀಕ್ಷಾ ಅಕ್ರಮ ಎಸಗಿದ್ದ ನಾಲ್ವರು ಹಾಗೂ ಮೂವರು ಪರೀಕ್ಷಾ ಮೇಲ್ವಿಚಾರಕಿಯರು ಸೇರಿದಂತೆ 8 ಮಂದಿಯನ್ನ ಅರೆಸ್ಟ್ ಮಾಡಿತ್ತು. ಇದ್ರ ನಡುವೆ ಪಿಎಸ್‌ಐ ಪರೀಕ್ಷಾ ಅಕ್ರಮ ನಡೆದಿರೋದು ಕಲಬುರಗಿ ನಗರದ ಗೋಕುಲ ನಗರದಲ್ಲಿರೋ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯಲ್ಲಿ ಅನ್ನೋದು ಗೊತ್ತಾಗಿದೆ. ಹೀಗಾಗಿ ಬಂಧಿತರನ್ನ ಇವತ್ತು ಜ್ಞಾನಜ್ಯೋತಿ ಶಾಲೆಗೆ ಕರೆದುಕೊಂಡು ಬಂದು ಸ್ಥಳ ಮಹಜರು ಮಾಡಲಾಯ್ತು. ಶಾಲೆಗೆ ಆಗಮಿಸಿದ ಸಿಐಡಿ ತಂಡ, ಶಾಲೆಯಲ್ಲಿನ ಕಂಪ್ಯೂಟರ್, ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿತು. ಜೊತೆಗೆ ಸಿಸಿಟಿವಿಯ ಡಿವಿಆರ್‌ನ್ನ ಕೂಡಾ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಬೊಮ್ಮಾಯಿ,ಸಿಐಡಿ ವರದಿ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.
ಅಕ್ರಮ ನಡೆದಿರುವ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆ, ಬಿಜೆಪಿ ಮುಖಂಡೆ, ದಿವ್ಯಾ ಹಾಗರಗಿಗೆ ಸೇರಿದೆ. ಈ ಅಕ್ರಮದಲ್ಲಿ ದಿವ್ಯಾ ಹಾಗರಗಿ ಕೈವಾಡದ ಶಂಕೆ ಕೂಡಾ ಇದೆ. ಹೀಗಾಗಿ ಈ ಹಿಂದೆ ದಿವ್ಯಾ ಅವರ ವಿಚಾರಣೆಯೂ ನಡೆದಿತ್ತು. ಈ ವೇಳೆ ತನಿಖೆಗೆ ಸಹಕರಿಸ್ತೀನಿ ಅಂತಾ ಹೇಳಿದ್ದ ದಿವ್ಯಾ, ಯಾವಾಗ ತಮ್ಮದೇ ಶಾಲೆಯ ಮೇಲ್ವಿಚಾರಕಿಯರು ಅರೆಸ್ಟ್ ಆಗ್ತಿದ್ದಂತೆ ನಾಪತ್ತೆಯಾಗಿದ್ದಾರೆ. ಇದೇ ಶಾಲೆಯ ಹೆಡ್ ಮಾಸ್ಟರ್ ಕಾಶಿನಾಥ್ ಹಾಗೂ ಇನ್ನಿಬ್ಬರು ಸಿಬ್ಬಂದಿ ಕೂಡಾ ಎಸ್ಕೇಪ್ ಆಗಿದ್ದಾರೆ.
ಜ್ಞಾನ ಜ್ಯೋತಿ ಪರೀಕ್ಷಾ ಕೇಂದ್ರವೇ ಅಕ್ರಮದ ಅಡ್ಡೆ ಪಿಎಸ್ಐ ಪರೀಕ್ಷಾರ್ಥಿಗಳ ಜತೆಗೆ ದಿವ್ಯಾ ಹಾಗರಗಿ ಲಕ್ಷ-ಲಕ್ಷ ಡೀಲ್ ಮಾಡಿಕೊಂಡಿದ್ದಾರಂತೆ. ಓರ್ವ ಕ್ಯಾಂಡಿಡೇಟ್ ಗೆ 20 ರಿಂದ 40-50/ ಲಕ್ಷಗಳ ವರೆಗೆ ಡೀಲ್ ನಡೆದಿದೆ. ದಿವ್ಯಾ ಅಂಡ್ ಟೀಂ ಪರೀಕ್ಷೆಗೆ ಮೊದಲೇ ಡೀಲ್ ನಡೆಸಿ ಕ್ಯಾಂಡಿಡೇಟ್ ಪೈನಲ್ ಮಾಡಿಕೊಳ್ತಿದ್ದರು. ಪರೀಕ್ಷಾ ಸಂದರ್ಭದಲ್ಲಿ ಇರ್ತಿದ್ದ ಶಾಲೆ ಸಿಬ್ಬಂದಿಗಳು ಅಕ್ರಮದಲ್ಲಿ ಭಾಗಿಯಾಗ್ತಿದ್ರು. ದಿವ್ಯಾ ಹಾಗರಗಿ ಸೇರಿದಂತೆ ಇನ್ನೂ ಹಲವರು ಪರೀಕ್ಷೆ ಅಕ್ರಮಕ್ಕೆ ಸಾತ್ ನೀಡಿರುವುದು ಪತ್ತೆಯಾಗಿದೆ. ಸಿಐಡಿ ತನಿಖೆ ವೇಳೆ ಪರೀಕ್ಷಾ ಅಕ್ರಮದ ಕುರಿತು ಮಹತ್ವದ ಮಾಹಿತಿ ಸಂಗ್ರಹ ಮಾಡಲಾಗಿದೆ.
ಕಲಬುರಗಿಯಲ್ಲಿ ಬಿಜೆಪಿ, ಹಿಂದುತ್ವದ ಯಾವುದೇ ಕಾರ್ಯಕ್ರಮ ನಡೆದ್ರೂ ಅಲ್ಲಿ ದಿವ್ಯಾ ಅವರ ದಿವ್ಯ ಸಾನಿಧ್ಯ ಎದ್ದು ಕಾಣ್ತಿತ್ತು. ದಿಶಾ ಸಮಿತಿ ಸಭೆಯ ಸದಸ್ಯೆ ಸೇರಿದಂತೆ ಹಲವು ಹುದ್ದೆಯನ್ನ ಬಿಜೆಪಿ ಸರ್ಕಾರವೇ ನೀಡಿದೆ. ಸ್ವತಃ ಗೃಹ ಸಚಿವರೆ ಅವರ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿ ಬಂದಿದ್ರು. ಇಷ್ಟೆಲ್ಲಾ ಕಣ್ತುಂದೆ ಕಾಣ್ತಿದೆ. ಆದ್ರೆ ದಿವ್ಯಾ ವಿರುದ್ಧ ಅಕ್ರಮದ ಆರೋಪ ಕೇಳಿ ಬರ್ತಿದ್ದಂತೆ ಆಕೆ ಬಿಜೆಪಿ ನಾಯಕಿ ಅಲ್ಲ ಅಂತಾ ಬಿಜೆಪಿ ಪ್ರಕಟಣೆ ಹೊರಡಿಸಿದೆ. ಈ ಬಗ್ಗೆ ಮಾತನಾಡಿರೋ ಗೃಹ ಸಚಿವರು, ದಿವ್ಯಾ ಹಾಗರಗಿ ಒಳ್ಳೆಯವರು ಅಂತ ನಮ್ಮ ಶಾಸಕರು ಹೇಳಿದ್ರಿಂದ ಕಲಬುರಗಿಗೆ ಹೋದಾಗ ಅವರ ಮನೆಗೆ ಹೋಗಿದ್ದೆ ಅಂತಾ ಸ್ಪಷ್ಟನೆ ಕೊಟ್ಟಿದ್ದಾರೆ. ಆದ್ರೆ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲಾ ಅಂತ ಗುಡುಗಿದ್ದಾರೆ.
ಪೋಲಿಸರ ತನಿಖೆ ವೇಳೆ ಬಯಲಾಯ್ತು ಅಕ್ರಮ ಪರೀಕ್ಷೆ ಅವ್ಯವಹಾರ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಂದ್ಲೆ ಅಕ್ರಮ ಪಿಎಸ್ಐ ಪರೀಕ್ಷೆಯಲ್ಲಿ ಭಾಗಿ. ಪರೀಕ್ಷಾರ್ಥಿಗಳಿಗೆ ಪರೀಕ್ಷೆ ವೇಳೆ ನೀಡ್ತಿದ್ದ OMR ನಕಲು ಪ್ರತಿ ಪಡೆಯುತ್ತಿದ್ದ ಸಿಬ್ಬಂದಿ ಇದೇ ಅನುಮಾನದ ಹಿನ್ನಲೆ ಸೂಕ್ಷ್ಮ ವಾಗಿ ಗಮನಿಸಿದ್ದವರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇದೇ ಮಾಹಿತಿ ಆಧರಿಸಿ ಆರೋಪಿಗಳಿಗೆ ಗ್ರಿಲ್ ಮಾಡಲಾಗಿದ್ದು ಸಿಐಡಿ ಪೊಲೀಸರು ತಲಾಶ್ ಮುಂದುವರೆಸಿದ್ದಾರೆ.
ಇನ್ನು ಪರೀಕ್ಷೆ ಪ್ರಾರಂಭಕ್ಕೂ 15-20 ನಿಮಿಷಗಳಲ್ಲಿ ಉತ್ತರಗಳು ಲಭ್ಯವಾಗುತ್ತಿದ್ದವು. ಲಕ್ಷ-ಲಕ್ಷ ಹಣ ನೀಡಿದವರಿಗೆ ಪ್ರಶ್ನೆಗಳಿಗೆ ಉತ್ತರಗಳನ್ನು ದಿವ್ಯಾ ಗ್ಯಾಂಗ್ ನೀಡ್ತಿತ್ತು. ಪರೀಕ್ಷೆ ವೇಳೆ ಚಲನ ವಲನ ಗಮನಿಸಿ ಅನುಮಾನಗೊಂಡಿದ್ದ ಸ್ಥಳೀಯ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದ ಮಾಹಿತಿ ಆಧರಿಸಿ ಓರ್ವನನ್ನು ವಶಕ್ಕೆ ಪಡೆದು ಪ್ರಕರಣ ಆಳಕ್ಕೆ ಇಳಿಯುತ್ತಿದ್ದಂತೆ ಕಳ್ಳಾಟ ರಿವೀಲ್ ಆಗಿದೆ. ಪರೀಕ್ಷಾ ಮೇಲ್ವಿಚಾರಕರು ಅಕ್ರಮದಲ್ಲಿ ಭಾಗಿಯಾಗಿದ್ದು ಪರೀಕ್ಷಾರ್ಥಿಗಳಿಂದ OMR ಶೀಟ್ ಕಲೆಕ್ಟ್ ಮಾಡ್ತಿದ್ದರು. ಆ ಬಳಿಕ ಮೇಲ್ವಿಚಾರಕರೇ ಉತ್ತರಗಳನ್ನ OMR ಶೀಟ್ ಗೆ ಎಂಟ್ರಿಮಾಡ್ತಿದ್ದಾಗಿ ಮಾಹಿತಿ ಸಿಕ್ಕಿದೆ. ಇದಕ್ಕೆ ಪರೀಕ್ಷಾರ್ಥಿಗಳು ಲಕ್ಷ-ಲಕ್ಷ ಹಣ ನೀಡಿದ್ದ ಬಗ್ಗೆ ಬಯಲಾಗಿದೆ.
ಅಕ್ರಮದ ಕಿಂಗ್ಪಿನ್ಗಳನ್ನು ವೀರೇಶ್ಗೆ ಪರಿಚಯಿಸಿದ್ದ ಸ್ನೇಹಿತ 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಹಣಕಾಸಿನ ವಿಚಾರದಿಂದ ಪರೀಕ್ಷೆ ಅಕ್ರಮ ಬಯಲಿಗೆ ಬಂದಿದೆ. ಪ್ರಕರಣದ ಆರೋಪಿ ವೀರೇಶ್ ಸ್ನೇಹಿತನಿಂದ ಅಕ್ರಮ ಬಯಲಾಗಿದೆ. ವೀರೇಶ್, ಆತನ ಸ್ನೇಹಿತ ಪಿಎಸ್ಐ ಪರೀಕ್ಷೆ ಬರೆದಿದ್ದರು. ಅಕ್ರಮದ ಕಿಂಗ್ಪಿನ್ಗಳನ್ನು ವೀರೇಶ್ಗೆ ಆತನ ಸ್ನೇಹಿತ ಪರಿಚಯಿಸಿದ್ದ. ಆದರೆ ವೀರೇಶ್ ನೇಮಕವಾಗಿ, ಸ್ನೇಹಿತ ನೇಮಕ ಆಗಿರಲಿಲ್ಲ. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ವೀರೇಶ್ ಹೆಸರು ಬಂದಿತ್ತು. ಆಗ ತಕ್ಷಣ 5 ಲಕ್ಷ ರೂಪಾಯಿಗೆ ಸ್ನೇಹಿತ ಡಿಮ್ಯಾಂಡ್ ಮಾಡಿದ್ದ. ಆದ್ರೆ ವೀರೇಶ್ ಹಣ ನೀಡದೇ ಇದ್ದಾಗ OMR ಶೀಟ್ ಹರಿಬಿಟ್ಟಿದ್ದ. OMR ಶೀಟ್ ಫೋಟೋ ತೆಗೆದು ಅನೇಕ ಕಡೆ ಹರಿಬಿಟ್ಟಿದ್ದ. ಇದನ್ನೇ ಇಟ್ಟುಕೊಂಡು ಸರ್ಕಾರಕ್ಕೆ ಅಭ್ಯರ್ಥಿಗಳು ದೂರು ನೀಡಿದ್ದಾರೆ. ಅಭ್ಯರ್ಥಿಗಳ ದೂರು ಆಧರಿಸಿ ಸಿಐಡಿ ವೀರೇಶ್ನನ್ನು ಬಂಧಿಸಿದ್ದಾರೆ.
ವರದಿ: ಸಂಜಯ್, ಟಿವಿ9 ಕಲಬುರಗಿ
ಇದನ್ನೂ ಓದಿ: ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಯ್ದುಕೊಳ್ಳಲು ದೇಹಕ್ಕೆ ನಿಯಮಿತ ವರ್ಕ್ಔಟ್ ಬಹಳ ಮುಖ್ಯ: ಡಾ ಸೌಜನ್ಯ ವಶಿಷ್ಠ
545 ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ; ಬಿಜೆಪಿಯ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ ಬಂಧನ