ಬೆಂಗಳೂರು: ಕೆಪಿಎಸ್ಸಿ, ಕೆಇಸಿ ಮತ್ತು ಕೆಎಸ್ಪಿ ನೇಮಕಾತಿಯಲ್ಲಿನ ಅಕ್ರಮ, ಭ್ರಷ್ಟಾಚಾರ, ವಿಳಂಬ ನೀತಿ ವಿರೋಧಿಸಿ ಕರ್ನಾಟಕ ಸ್ಫರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳ ಒಕ್ಕೂಟದಿಂದ ಪ್ರತಿಭಟನಾ ರ್ಯಾಲಿಗೆ ಮುಂದಾಗಿದ್ದು, ಅಭ್ಯರ್ಥಿಗಳನ್ನು ಪೊಲೀಸರು ತಡೆದಿದ್ದಾರೆ. ನೋಂದ ಯುವಜನತೆಯ ನಡೆ ರಾಜಭವನದ ಕಡೆ ಅಂತಾ ಅಭ್ಯರ್ಥಿಗಳು ರ್ಯಾಲಿ ನಡೆಸಲು ಸಿದ್ಧತೆ ನಡೆಸಲಾಗಿದ್ದು, ವಿಜಯಗರದಲ್ಲಿರುವ ಹಂಪಿನಗರದ ಗ್ರಂಥಾಲಯದಿಂದ ರಾಜಭವನದವರೆಗೂ ರ್ಯಾಲಿಗೆ ಸಾಗಲಿತ್ತು. ಆದರೆ ಪೊಲೀಸರು ಮಧ್ಯಪ್ರವೇಶಿಸಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಜಮಾಯಿಸಿದ ನೂರಾರು ಅಭ್ಯರ್ಥಿಗಳನ್ನು ತಡೆದರು.
ರ್ಯಾಲಿ ನಡೆಸದಿರಲು ನ್ಯಾಯಾಲಯದ ಸೂಚನೆ ಇದೆ ಎಂದು ಹೇಳಿದ ಪೊಲೀಸರು ಅಭ್ಯರ್ಥಿಗಳನ್ನು ತಡೆದಿದ್ದಾರೆ. ಆ ಮೂಲಕ ಹಂಪಿನಗರದ ಮುಂದೆ ಪ್ರತಿಭಟನಾ ನಡೆಗೆ ಬಂದ ಅಭ್ಯರ್ಥಿಗಳನ್ನ ಪೊಲೀಸರು ವಶಕ್ಕೆ ಪಡೆದರು. ಅಷ್ಟೇ ಅಲ್ಲದೆ ಅಭ್ಯರ್ಥಿಗಳು ಹಂಪಿನಗರದ ಗ್ರಂಥಾಲಯದ ಬಳಿ ಅಭ್ಯರ್ಥಿಗಳು ಬರದಂತೆ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳಿಂದ ಸರ್ಪಗಾವಲು ನಡೆಸಲಾಗಿದೆ. ಇದರ ಜೊತೆಗೆ ಪ್ರತಿಭಟನೆಗೆ ಬರುವ ಅಭ್ಯರ್ಥಿಗಳನ್ನ ವಶಕ್ಕೆ ಪಡೆಯಲು ಎರಡು ಬಿಎಂಟಿಸಿ ಬಸ್ ಕೂಡ ಪೊಲೀಸರು ತಂದಿದ್ದಾರೆ. ಇಲ್ಲಿಂದ ಪ್ರತಿಭಟನಾ ರ್ಯಾಲಿಗೆ ಯಾವುದೇ ಅವಕಾಶ ಇಲ್ಲ ಎಂದು ಪೊಲೀಸರು ಅಭ್ಯರ್ಥಿಗಳಿಗೆ ಮನವರಿಕೆ ಮಾಡಿದ್ದಾರೆ.
ಕಾಂಗ್ರೆಸ್ ವಕ್ತಾರೆ ಪೊಲೀಸರ ವಶಕ್ಕೆ
ಕೆಪಿಎಸ್ಸಿ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ಕಾಂಗ್ರೆಸ್ ವಕ್ತಾರೆ ಭವ್ಯಾನರಸಿಂಹಮೂರ್ತಿ ಅವರನ್ನು ಬೆಂಗಳೂರಿನ ವಿಜಯನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. KPSCಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಸಂಬಂಧ ಸರ್ಕಾರದ ವಿರುದ್ಧ ಭವ್ಯಾ ಅವರು ವಿಜಯನಗರದಲ್ಲಿ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿದ್ದರು. ಪೊಲೀಸರ ಅನುಮತಿ ಪಡೆಯದೆ 2 ಸಾವಿರ ಅಭ್ಯರ್ಥಿಗಳನ್ನ ಸೇರಿಸಿಕೊಂಡು ಇಂದು ಪ್ರತಿಭಟನಾ ಜಾಥಾ ನಡೆಸಲು ಮುಂದಾಗಿದ್ದರು. ಅನುಮತಿ ಪಡೆಯದೆ ಪ್ರತಿಭಟನೆಗೆ ಮುಂದಾದ ಹಿನ್ನೆಲೆ ಪೊಲೀಸರು ಭವ್ಯಾ ಅವರನ್ನು ವಶಕ್ಕೆ ಪಡೆದು ವಿಜಯನಗರ ಠಾಣೆಯಿಂದ ಜ್ಞಾನಭಾರತಿ ಠಾಣೆಗೆ ಸ್ಥಳಾಂತರಿಸಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:26 am, Fri, 19 August 22