ಗಾಂಧಿಯನ್ನೇ ಕೊಂದವರು ನನ್ನನ್ನು ಬಿಡ್ತಾರಾ: ಜೀವಭಯ ತೋಡಿಕೊಂಡ ಸಿದ್ದರಾಮಯ್ಯ, ಮೊಟ್ಟೆ ಎಸೆತ ಖಂಡಿಸಿದ ಬೊಮ್ಮಾಯಿ
ಬಿಜೆಪಿಯ ಮುಂಚೂಣಿ ನಾಯಕರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್.ಯಡಿಯೂರಪ್ಪ ಸಹ ಮೊಟ್ಟೆ ಎಸೆತ ಖಂಡಿಸಿದ್ದಾರೆ.
ಚಿಕ್ಕಮಗಳೂರು: ಮಹಾತ್ಮಾ ಗಾಂಧೀಜಿಯನ್ನೇ ಕೊಂದವರು ನನ್ನನ್ನು ಬಿಡುತ್ತಾರಾ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramiah) ಪ್ರಶ್ನಿಸಿದರು. ಚಿಕ್ಕಮಗಳೂರು ತಾಲೂಕಿನ ಬಾಸಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ನಾನು ಸತ್ಯ ಹೇಳುವುದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸಾವರ್ಕರ್ ಕ್ಷಮಾಪಣೆ ಪತ್ರ ಬರೆದುಕೊಟ್ಟು ಜೈಲಿನಿಂದ ಹೊರಬಂದವರು. ಅವರ ಫೋಟೋ ಹಿಡಿದುಕೊಂಡು ವೀರ ಸಾವರ್ಕರ್ ಎನ್ನುವವರು ಇವರು ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ನಡೆದಿದ್ದನ್ನು ಕಾಂಗ್ರೆಸ್ ಪಕ್ಷವು ಖಂಡಿಸಿದೆ. ‘ಗೃಹಸಚಿವರು ಹೊತ್ತಿರುವ ಜವಾಬ್ದಾರಿ ಕಾನೂನು ಸುವ್ಯವಸ್ಥೆ ಕಾಪಾಡುವುದೋ ಅಥವಾ ಗೂಂಡಾ ಪೋಷಣೆ ಮಾಡುವುದೋ? ಗೂಂಡಾಪಡೆಯು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಎರಡೆರಡು ಬಾರಿ ಮೊಟ್ಟೆ ಎಸೆಯಲು ಪೊಲೀಸರು ಅವಕಾಶ ಕೊಡುತ್ತಾರೆ ಎಂದರೆ ಇದು ಸರ್ಕಾರಿ ಪ್ರಾಯೋಜಿತ ದಾಳಿಯಲ್ಲವೇ? ಗುಪ್ತಚರ ಇಲಾಖೆ ಐಸಿಯುನಲ್ಲಿದೆ, ಸರ್ಕಾರ ಸತ್ತಿದೆ’ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಖಂಡಿಸಿದೆ.
ಮೊಟ್ಟೆ ಎಸೆತ ಖಂಡಿಸಿ ಸಿದ್ದರಾಮಯ್ಯ ಸಹ ಟ್ವೀಟ್ ಮಾಡಿದ್ದು, ‘ರಾಜ್ಯ ಪೊಲೀಸ್ ಇಲಾಖೆ ಸಂಘಪರಿವಾರದ ಕೈಗೊಂಬೆಯಾಗಿದೆ. ಪಕ್ಷದ ಪುಂಡರ ಗೂಂಡಾಗಿರಿಗೆ ಅವಕಾಶ ನೀಡಿ, ಕೈಕಟ್ಟಿಕೊಂಡು ತಮಾಷೆ ನೋಡುವ ಪೊಲೀಸರ ಕರ್ತವ್ಯ ಲೋಪ ಖಂಡಿಸಿ ಈ ತಿಂಗಳ 26 ರಂದು ಕೊಡಗಿನ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಬಿಜೆಪಿಯ ಗೂಂಡಾಗಿರಿಗೆ ಹೋರಾಟದ ಮೂಲಕವೇ ತಕ್ಕ ಉತ್ತರ ಕೊಡುತ್ತೇವೆ’ ಎಂದು ಘೋಷಿಸಿದ್ದಾರೆ.
ಸಿದ್ದರಾಮಯ್ಯ ಅವರ ಮಗ, ಕಾಂಗ್ರೆಸ್ ನಾಯಕ ಡಾ ಯತೀಂದ್ರ ಸಹ ಈ ಕೃತ್ಯವನ್ನು ಖಂಡಿಸಿದ್ದಾರೆ. ‘ಮೊಟ್ಟೆ ಎಸೆತ ನಡೆಯುವಾಗ ಪೊಲೀಸರು ಅಲ್ಲಿಯೇ ಇದ್ದರು. ಕನಿಷ್ಠ ಪಕ್ಷ ತಡೆಯುವ ಪ್ರಯತ್ನವನ್ನೂ ಮಾಡಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾನ್ಯ @siddaramaiah ಅವರು, ವಿರೋಧ ಪಕ್ಷದ ನಾಯಕರಾಗಿದ್ದು, ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ತನ್ನದೇ ಆದ ಗೌರವ ಇರುತ್ತದೆ. ಯಾವುದೇ ವಿಷಯದ ಬಗ್ಗೆ ಬಿನ್ನಾಭಿಪ್ರಾಯವಿದ್ದರೆ ಅದನ್ನು ಬಲವಾದ ಅಭಿಪ್ರಾಯಗಳೊಂದಿಗೆ ವಿರೋಧಿಸಬೇಕು. ಯಾವುದೇ ದೈಹಿಕ ಕಾರ್ಯದಿಂದಲ್ಲ. ಇದನ್ನು ಎಲ್ಲರೂ ಪಾಲಿಸಬೇಕು.
— Basavaraj S Bommai (@BSBommai) August 18, 2022
ಬಿಜೆಪಿಯ ಮುಂಚೂಣಿ ನಾಯಕರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್.ಯಡಿಯೂರಪ್ಪ ಸಹ ಮೊಟ್ಟೆ ಎಸೆತ ಖಂಡಿಸಿದ್ದಾರೆ.
‘ಮಾನ್ಯ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದು, ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ತನ್ನದೇ ಆದ ಗೌರವ ಇರುತ್ತದೆ. ಯಾವುದೇ ವಿಷಯದ ಬಗ್ಗೆ ಬಿನ್ನಾಭಿಪ್ರಾಯವಿದ್ದರೆ ಅದನ್ನು ಬಲವಾದ ಅಭಿಪ್ರಾಯಗಳೊಂದಿಗೆ ವಿರೋಧಿಸಬೇಕು. ಯಾವುದೇ ದೈಹಿಕ ಕಾರ್ಯದಿಂದಲ್ಲ. ಇದನ್ನು ಎಲ್ಲರೂ ಪಾಲಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ಮಾಡಿದ್ದಾರೆ.
‘ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದನ್ನು ಒಪ್ಪಲು ಸಾಧ್ಯವಿಲ್ಲ. ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಸಮರ್ಪಕವಾಗಿ ಪ್ರಸ್ತಾಪಿಸಬೇಕು. ರಾಜಕೀಯವಾಗಿ ಎದುರಿಸಬೇಕು. ಆದರೆ ಕಾನೂನು ವಿರೋಧಿ ಕ್ರಮಗಳನ್ನು ಅನುಸರಿಸಬಾರದು’ ಎಂದು ಬಿ.ಎಸ್.ಯಡಿಯೂರಪ್ಪ ಬಿಜೆಪಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.